ಹಣದ ಮುಂದೆ ಯಾವ ಧರ್ಮವೂ ಇಲ್ಲ, ಜಾತಿಯೂ ಇಲ್ಲ ಎನ್ನುವ ಮಾತನ್ನು ಹಲವಾರು ವರ್ಷಗಳಿಂದ ನಾನು ಉಚ್ಛರಿಸಿಕೊಂಡು ಬರುತ್ತಿದ್ದೇನೆ. ಸಮಾಜದಲ್ಲಿನ ಆರ್ಥಿಕ ದುರ್ಬಲ ವರ್ಗ ಮಾತ್ರ ಈ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಹೊಡೆದಾಡಿಕೊಂಡು, ಬೇರ್ಪಡುತ್ತಾರೆ. ಉಳಿದಂತೆ ಹಣವನ್ನು ಬಿತ್ತಿ ಹಣವನ್ನು ಬೆಳೆಯುವ ವರ್ಗದ ಜನರಿಗೆ ಇದ್ಯಾವ ಭೇದವೂ ಇರುವುದಿಲ್ಲ. ಅವರ ಮೂಲಮಂತ್ರ ಸೂಜಿಯನ್ನು ಹಾಕಿ ದಬ್ಬಳವನ್ನು ತೆಗೆಯುವುದೇ ಆಗಿರುತ್ತದೆ. ಸರಳವಾಗಿ ಹೇಳಬೇಕೆಂದರೆ ಹೂಡಿಕೆ ಮಾಡಿದ ಹಣ ಎಷ್ಟು ಕಡಿಮೆ ಸಾಧ್ಯ ಅಷ್ಟು ಕಡಿಮೆ ಅವಧಿಯಲ್ಲಿ ದುಪಟ್ಟಾಗಬೇಕು. ಆ ಹಣವನ್ನು ಮತ್ತೊಂದು ಕಡೆ ಹೂಡಬೇಕು.
ಒಟ್ಟಾರೆ ಹಣ, ಹಣವನ್ನು ದುಡಿಯುತ್ತಿರಬೇಕು. ಹೀಗೆ ಸಂಗ್ರಹಿಸಿದ ಹಣದ ಮೂಲಕ ಅವರಿಗೆ ಜಗತ್ತಿನ ಮೇಲೆ ಇನ್ನಷ್ಟು ಹಿಡಿತ ಸಾಧಿಸಲು ಅನುಕೊಲವಾಗುತ್ತದೆ. ಹಣ ಮತ್ತು ಅಧಿಕಾರ ಎನ್ನುವುದು ಅವರಿಗೊಂದು ನಶೆ. ಅವರ ಈ ನಶೆಯ ಕಾರಣ ಜಗತ್ತಿನ ಹಲವು ದೇಶಗಳ ಆರ್ಥಿಕತೆಗೆ ಪೆಟ್ಟು ಬೀಳುತ್ತದೆ ಎಂದ ಮೇಲೆ ಅಲ್ಲಿ ವಾಸಿಸುವ ಹತ್ತಾರು ಕೋಟಿ ಜನರ ಬದುಕು ಮೂರಾಬಟ್ಟೆಯಾಗುತ್ತದೆ. ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಅಮೇರಿಕಾ ಎನ್ನುವ ದೇಶ ಮತ್ತು ಪಾಕಿಸ್ತಾನ ಎರಡನ್ನೂ ಆಳುತ್ತಿರುವವರ ಮನಸ್ಥಿತಿ ಒಂದೇ! ಇವರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎರಡೂ ದೇಶದ ಜನ ಸಾಮಾನ್ಯನ ಬದುಕನ್ನು ಅಲ್ಲಿನ ರಾಜಕಾರಿಣಿಗಳು ಇನ್ನಿಲ್ಲದಂತೆ ಕುಸಿಯುವಂತೆ ಮಾಡಿದ್ದಾರೆ.
ಮಾರ್ಚ್ 14, 2025ರಂದು ಅಂದರೆ ಕೇವಲ ಎರಡು ತಿಂಗಳ ಹಿಂದೆ ಪಾಕಿಸ್ತಾನ್ ಕ್ರಿಪ್ಟೋ ಕೌನ್ಸಿಲ್ ಎನ್ನುವ ಒಂದು ರೇಗುಲೇಟರಿ ಬಾಡಿಯನ್ನು ಹುಟ್ಟುಹಾಕಲಾಗುತ್ತದೆ. ಪಾಕಿಸ್ತಾನದಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲಾ ಹಣಕಾಸು ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸುವುದು, ಡಿಜಿಟಲ್ ಅಸೆಟ್ ಸೃಷ್ಟಿಸುವುದು ಮತ್ತು ಒಟ್ಟಾರೆ ಪಾಕಿಸ್ತಾನದ ಆರ್ಥಿಕತೆಯನ್ನು ಡಿಜಿಟಲೀಕರಣಗೊಳಿಸುವುದು ಇದರ ಉದ್ದೇಶ, ಮತ್ತು ಇಂತಹ ಕ್ರಿಯೆಯಲ್ಲಿ ಯಾವುದೇ ಅವ್ಯವಹಾರಗಳು ನಡೆಯದಂತೆ ಮುಂದೆ ನಿಂತು ಇವುಗಳ ಮೇಲೆ ನಿಯಂತ್ರಣ ಹೊಂದುವುದು ಇದರ ವ್ಯಾಪ್ತಿಯಲ್ಲಿ ಬರುತ್ತದೆ. ಇದನ್ನು ಪಾಕಿಸ್ತಾನ ಸರಕಾರ ನಿಯಂತ್ರಿಸುತ್ತದೆ. ಅಂದರೆ ಇದೊಂದು ಸರಕಾರಿ ವ್ಯಾಪ್ತಿಗೆ ಬರುವ ಸಂಸ್ಥೆ.
ಪಾಕಿಸ್ತಾನ್ ಕ್ರಿಪ್ಟೋ ಕೌನ್ಸಿಲ್ ಹುಟ್ಟುವ ಕೇವಲ ಆರು ತಿಂಗಳು ಮುಂಚೆ ಅಂದರೆ ಸೆಪ್ಟೆಂಬರ್ 2024 ರಲ್ಲಿ ಅಮೇರಿಕಾದಲ್ಲಿ ಒಂದು ಫಿನ್ ಟೆಕ್ ಸ್ಟಾರ್ಟ್ ಅಪ್ ಹುಟ್ಟುಕಾಲಾಗುತ್ತದೆ. ಆ ಸಂಸ್ಥೆಯ ಮೌಲ್ಯ ಸರಿಸುಮಾರು 3 ಮಿಲಿಯನ್ ಡಾಲರ್ ಆಗಿರುತ್ತದೆ. ಇದಕ್ಕೆ ವರ್ಲ್ಡ್ ಲಿಬರ್ಟಿ ಫೈನಾನ್ಸಿಯಲ್ ಎನ್ನುವ ನಾಮಕರಣ ಕೂಡ ಮಾಡಲಾಗಿರುತ್ತದೆ. ಇದೊಂದು ಡಿಸೆಂಟ್ರಲೈಜ್ಡ್ ಫೈನಾನ್ಸಿಂಗ್ ಮತ್ತು ಕ್ರಿಪ್ಟೋ ಕರೆನ್ಸಿ ಸಂಸ್ಥೆಯಾಗಿರುತ್ತದೆ. ಟ್ರಂಪ್ ಎಲೆಕ್ಷನ್ ಗೆದ್ದು ಅಧಿಕಾರ ಹಿಡಿಯುತ್ತಿದ್ದಂತೆ ಟ್ರಂಪ್ ಇಬ್ಬರು ಮಕ್ಕಳು ಮತ್ತು ಟ್ರಂಪ್ ಸೋದರ ಮಾವ ಈ ಸಂಸ್ಥೆಯಲ್ಲಿ ಹಣವನ್ನು ಹೂಡುತ್ತಾರೆ. ಈ ಮೂವರ ಮಧ್ಯೆ ಸಂಸ್ಥೆಯ 75 ಪ್ರತಿಶತ ನಿಯಂತ್ರಣವಿದೆ.
ಈ ಕಥೆ ಇಷ್ಟಕ್ಕೆ ನಿಲ್ಲುವುದಿಲ್ಲ. ಅಬುಧಾಬಿ ದೇಶದ ನಿಯಂತ್ರಣದಲ್ಲಿರುವ ಒಂದು ಸಂಸ್ಥೆ ವರ್ಲ್ಡ್ ಲಿಬರ್ಟಿ ಫೈನಾನ್ಸ್ ಸಂಸ್ಥೆಯಲ್ಲಿ ಎರಡು ಬಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡುತ್ತಾರೆ. ನೆನಪಿಡಿ ಇವೆಲ್ಲವೂ ಟ್ರಂಪ್ ಅಧಿಕಾರಕ್ಕೆ ಬಂದು ಕೆಲವು ವಾರಗಳಲ್ಲಿ ಆಗುವ ಘಟನೆಗಳು. ಮಾರ್ಚ್ 2025ರಲ್ಲಿ ತಿಂಗಳಲ್ಲಿ ಟ್ರಂಪ್ ಮಕ್ಕಳು ಮತ್ತು ಸೋದರ ಮಾವ ಸ್ಟೇಬೆಲ್ ಕಾಯಿನ್ ಎನ್ನುವ ಹೊಸ ಕ್ರಿಪ್ಟೋ ಕರೆನ್ಸಿಯನ್ನು ಬಿಡುಗಡೆ ಮಾಡುತ್ತಾರೆ. ಇದು ಅಮೆರಿಕಾದ ಡಾಲರ್ ಗೆ ಅನುಗುಣವಾಗಿರುತ್ತದೆ ಮತ್ತು ಅಮೆರಿಕನ್ ಟ್ರೆಷರಿ ಬ್ಯಾಕ್ ಅಪ್ ಇರುತ್ತದೆ ಎಂದು ಘೋಷಿಸಲಾಗುತ್ತದೆ. ಇದರ ಬೆನ್ನಲ್ಲೇ ಅಂದರೆ ಮಾರ್ಚ್ನಲ್ಲಿ ಪಾಕಿಸ್ತಾನ್ ಕ್ರಿಪ್ಟೋ ಕೌನ್ಸಿಲ್ ಉಗಮವಾಗುತ್ತದೆ. ಇಲ್ಲಿಗೂ ಕಥೆ ನಿಲ್ಲುವುದಿಲ್ಲ. ಇವೆಲ್ಲವೂ ಒಂದಕ್ಕೊಂದು ಲಿಂಕ್ ಆಗುವುದು ಆರು ತಿಂಗಳ ವರ್ಲ್ಡ್ ಲಿಬರ್ಟಿ ಫೈನಾನ್ಸ್ ಸಂಸ್ಥೆ ಮಾರ್ಚ್ನಲ್ಲಿ ಹುಟ್ಟಿದ ಕೂಸು ಪಾಕಿಸ್ತಾನ್ ಕ್ರಿಪ್ಟೋ ಕೌನ್ಸಿಲ್ ಜೊತೆಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ ನಂತರವಷ್ಟೇ!
ಪೆಹಲ್ಗಾಮ್ ನಲ್ಲಿ 26 ಭಾರತೀಯರ ಹತ್ಯೆಯಾಗುತ್ತದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು ಖಂಡಿಸುತ್ತಾರೆ. ಯುದ್ಧವಾದರೆ ನಾನು ಮತ್ತು ಅಮೇರಿಕಾ ಭಾರತದ ಪರವಾಗಿ ನಿಲ್ಲುತ್ತೇವೆ ಎನ್ನುತ್ತಾರೆ. ಭಾರತ ಮಿತ್ರ ರಾಷ್ಟ್ರ ಎನ್ನುತ್ತಾರೆ. ಸಾಮಾನ್ಯ ಭಾರತೀಯ ಬಹಳ ಭಾವುಕ ಜೀವಿ. ಯುದ್ಧವಾದರೆ ಅಮೇರಿಕಾ ನಮ್ಮ ಬೆನ್ನಿಗೆ ನಿಲ್ಲುತ್ತದೆ ಎಂದು ನಂಬಿಕೊಂಡು ಅದಕ್ಕೆ ತಕ್ಕಂತೆ ಸೋಶಿಯಲ್ ಮೀಡಿಯಾದಲ್ಲಿ ಆರ್ಭಟ ಮಾಡುತ್ತಿರುತ್ತಾನೆ. ಅತ್ತ ಅದೇ ದಿನಗಳಲ್ಲಿ, ನೆನಪಿರಲಿ ಪೆಹಲ್ಗಾಮ್ ಅಟ್ಯಾಕ್ ಆದ ಎರಡು ದಿನದಲ್ಲಿ ಟ್ರಂಪ್ ಮಕ್ಕಳ ವರ್ಲ್ಡ್ ಲಿಬರ್ಟಿ ಸಂಸ್ಥೆ ಪಾಕಿಸ್ತಾನದ ಕ್ರಿಪ್ಟೋ ಕೌನ್ಸಿಲ್ ನೊಂದಿಗೆ ಬಹಳಷ್ಟು ವ್ಯಾಪಾರದ ಒಪ್ಪಂದಕ್ಕೆ ಸಹಿ ಹಾಕುತ್ತಾರೆ.
ಇದರಲ್ಲಿ ಹೊಸದಾಗಿ ಹೇಳುವುದಕ್ಕೆ ಏನಿದೆ? ಮೊದಲ ಸಾಲುಗಳಲ್ಲಿ ಹೇಳಿದಂತೆ ಅವರ ಹಣವನ್ನು ದುಪ್ಪಟ್ಟು ಮಾಡುವುದು, ಬೇನಾಮಿ ಹಣವನ್ನು ಕ್ರಿಪ್ಟೋ ರೂಪದಲ್ಲಿ ಅಡಗಿಸಿಡುವುದು. ಹೆಚ್ಚು ಹೆಚ್ಚು ಲಾಭ ಮಾಡಿಕೊಳ್ಳುವುದು ಉದ್ದೇಶ. ಈ ಉದ್ದೇಶಕ್ಕೆ ಪಾಕಿಸ್ತಾನಕ್ಕಿಂತ ಪರಮಪಾಪಿ ದೇಶ ಅಮೇರಿಕಾ ಅಧ್ಯಕ್ಷನಿಗೆ ಬೇರೆ ಯಾವುದು ಸಿಕ್ಕೀತು?
ಭಾರತ ಪಾಕಿಸ್ತಾನದ ಮೇಲೆ ಪ್ರತಿಕಾರದ ದಾಳಿ ಮಾಡುತ್ತದೆ. ಅಲ್ಲಿನ ಬಹಳಷ್ಟು ಉಗ್ರರ ನೆಲೆಗಳನ್ನು ನಾಶ ಪಡಿಸುತ್ತದೆ. ಅಲ್ಲಿನ ನ್ಯೂಕ್ಲಿಯರ್ ಸ್ಥಾವರದ ಬಾಗಿಲಿಗೂ ಪೆಟ್ಟು ಕೊಡುವವರೆಗೂ ಸುಮ್ಮನಿದ್ದ ಟ್ರಂಪ್ ನಿದ್ದೆಯಿಂದ ಎದ್ದವರಂತೆ ಯುದ್ಧ ನಿಲ್ಲಿಸುವಂತೆ, ಯುದ್ಧ ಬೇಡ ಎನ್ನುವಂತೆ ಮಾತನಾಡಲು ತೊಡಗುತ್ತಾರೆ. ಒಂದು ದಿನದ ನಂತರ ಯುದ್ಧ ನಾನೇ ನಿಲ್ಲಿಸಿದ್ದು ಎನ್ನುತ್ತಾರೆ. ಯುದ್ಧ ಬೇಡ ನಾವು ಟ್ರೇಡ್, ವ್ಯಾಪಾರ ಮಾಡೋಣ ಎನ್ನುತ್ತಾರೆ. ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಅವರು "ಟ್ರಂಪ್ ಮಾತು ಕೇಳುವ ಸ್ಥಿತಿ ನಮಗೆ ಬಂದಿಲ್ಲ. ಯುದ್ಧ ನಿಲ್ಲಲು ಅವರು ಕಾರಣರಲ್ಲ. ಪಾಕಿಸ್ತಾನದ ಜನರಲ್ ನಮ್ಮ ಜನರಲ್ ಗೆ ಕರೆ ಮಾಡಿ ಯುದ್ಧ ಬೇಡ ಎಂದು ಮನವಿ ಮಾಡಿದರೆ ಮಾತ್ರ ಯುದ್ಧ ನಿಲ್ಲಿಸುತ್ತೇವೆ ಎಂದಿದ್ದೆವು. ಅದು ಹಾಗೆ ಆಯ್ತು ಅಷ್ಟೇ, ಇದರಲ್ಲಿ ಟ್ರಂಪ್ ಪಾತ್ರವಿಲ್ಲ" ಎಂದು ಜಗತ್ತಿನ ಮುಂದೆ ಖಂಡಿತವಾಗಿ ಹೇಳಿದ ದಿನದಿಂದ ಟ್ರಂಪ್ ಪೂರ್ಣ ಭಾರತದ ವಿರುದ್ಧ ನಿಲುವನ್ನು ತಳೆದಿದ್ದಾರೆ. ಅವರಿಗೀಗ ಪಾಕಿಸ್ತಾನ ಪ್ರಿಯವಾಗಿದೆ. ಅವರ ಮಾತಿಗೆ ಜೀ ಹುಜೂರ್ ಎನ್ನದ ಭಾರತಕ್ಕಿಂತ ಎಲ್ಲಕ್ಕಿಂತ ಹುಕುಂ ಜಹಪಾನ ಎನ್ನುವ ಪಾಕಿಸ್ತಾನ ಅಪ್ಯಾಯಮಾನವಾಗಿದೆ. ಕಾಂಚಾಣದ ಮಹಿಮೆ ಅಂತಹದ್ದು!
ಟ್ರಂಪ್ ಇಲ್ಲಿಗೆ ನಿಲ್ಲದೆ, ಸೌದಿಯಲ್ಲಿ ಇಂದಿನ ಸಿರಿಯಾ ದೇಶದ ಪ್ರೆಸಿಡೆಂಟ್ ಅಹಮದ್ ಅಲ್ ಶರಾ ನನ್ನು ಭೇಟಿಯಾಗುತ್ತಾರೆ. ಈತ ಅಲ್ ಖೈದಾ ಜೊತೆಗೆ ಗುರುತಿಸಿಕೊಂಡಿದ್ದ ಉಗ್ರ. ಜಗತ್ತಿನ ಮಾತು ಬಿಡಿ, ಸತಃ ಅಮೇರಿಕಾ ಸರಕಾರ ಈತನ ತಲೆಗೆ ಮಿಲಿಯನ್ಗಟ್ಟಲೆ ಹಣವನ್ನು ಘೋಷಿಸಿತ್ತು. ಈತನನ್ನು ಡೆಡ್ ಆರ್ ಅಲೈವ್ ಹಿಡಿದುಕೊಟ್ಟರೆ ಸಾಕು 10 ಮಿಲಿಯನ್ ಡಾಲರ್ ಬಹುಮಾನ ಕೊಡುವುದಾಗಿ ಘೋಷಿಸಿತ್ತು. ಮೇ 13 ಇವರ ಭೇಟಿಯಾಗುತ್ತದೆ. ಸ್ವಲ್ಪವೂ ನಾಚಿಕೆಯಿಲ್ಲದೆ ಟ್ರಂಪ್, ಪ್ರೆಸಿಡೆಂಟ್ ಆಗಿ ಬದಲಾದ ಉಗ್ರನ ಕೈ ಕುಲುಕುತ್ತಾರೆ. ಅವನನ್ನು ಹಾಡಿ ಹೊಗಳುತ್ತಾರೆ. ಅವನು ಇದ್ದಕ್ಕಿದ್ದಂತೆ ಡೈನಮಿಕ್ ಲೀಡರ್ ಆಗಿಬಿಡುತ್ತಾನೆ. ಸಿರಿಯಾ ದೇಶದ ಮೇಲೆ ಅಮೇರಿಕಾ ಹಾಕಿದ್ದ ಎಲ್ಲಾ ಸ್ಯಾಂಕ್ಷನ್ಸ್ ರದ್ದಾಗುತ್ತದೆ.
ಅಮೇರಿಕಾ ಅಧ್ಯಕ್ಷರು ಇರುವುದು ಹೀಗೆ, ಬಹಳ ಹಿಂದಿನಿಂದ ನೋಡಿಕೊಂಡು ಬಂದರೆ ಅಲ್ಲಿ ಸಿಗುವುದು ಇಂತಹುದೇ ಕಥೆಗಳು. ಆದರೆ ಟ್ರಂಪ್ ಇವರೆಲ್ಲರನ್ನೂ ಮೀರಿಸಿ ಹತ್ತಾರು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಬುಷ್ ಪ್ರೆಸಿಡೆಂಟ್ ಆಗಿದ್ದ ಕಾಲದಲ್ಲಿ ಜಗತ್ತನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಯುದಕ್ಕೆ ದೂಡಿದರು. ಅವರ ಅಧಿಕಾರ ಅವಧಿ ಮುಗಿಯುವ ವೇಳೆಗೆ ಅಮೇರಿಕಾ ಬ್ಯಾಂಕುಗಳು ದಿವಾಳಿ ಎದ್ದವು. ಅವರ ಜನರೇ ಬಹಳ ಕಷ್ಟ ಅನುಭವಿಸಬೇಕಾಯ್ತು. ಇವೆಲ್ಲವುದರ ಫಲಿತಾಂಶ ಇಂದಿಗೆ ಅಮೆರಿಕನ್ ಡ್ರೀಮ್ ಕುಸಿತ ಕಂಡಿದೆ. ಅಲ್ಲಿ ಹೋಂ ಲೆಸ್ ಗಳ ಸಂಖ್ಯೆ ಅಧಿಕವಾಗಿದೆ.
ಸಾಮಾನ್ಯ ಅಮೆರಿಕನ್ ಕುಟುಂಬ ತಿಂಗಳ ಕೊನೆ ಕಾಣಲು ಪರದಾಡುವ ಸ್ಥಿತಿಗೆ ಬಂದಿದ್ದಾರೆ. ಟ್ರಂಪ್ ಮೊದಲ ಅವಧಿಯಲ್ಲಿ ಮತ್ತು ಈಗಿನ ಅವಧಿಯಲ್ಲಿ ನಾವು ಕಾಣಬಹುದಾದ ಅತಿ ದೊಡ್ಡ ವ್ಯತ್ಯಾಸ, ಈ ಬಾರಿ ಟ್ರಂಪ್ ಗೆ ಯಾರ ಭಯವೂ ಇಲ್ಲ ಎನ್ನವಂತಹ ಧೈರ್ಯ ಬಂದಿರುವುದು. ಇಲ್ಲಿಯ ತನಕ ಒಬ್ಬ ರಾಜಕಾರಿಣಿ ಆ ದೇಶವನ್ನು ಆಳುತ್ತಿದ್ದ ಎನ್ನುವಂತ್ತಿತ್ತು. ಇದೀಗ ವ್ಯಾಪಾರಿಯೊಬ್ಬ ದೇಶವನ್ನು ಆಳುತ್ತಿದ್ದಾನೆ. ವ್ಯಾಪಾರಿಗೆ ತನ್ನ ಸ್ವಲಾಭದ ಮುಂದೆ ಬೇರಾವುದೂ ಮುಖವಲ್ಲ. ಈ ನಿಟ್ಟಿನಲ್ಲಿ ನೋಡಿದಾಗ ಅಮೇರಿಕಾ ಮತ್ತು ಪಾಕಿಸ್ತಾನಕ್ಕೆ ನಡುವೆ ಯಾವುದೇ ವ್ಯತ್ಯಾಸವಿಲ್ಲ.
ಕೊನೆಮಾತು: ಜಗತ್ತು ನಿಧಾನವಾಗಿ ವ್ಯಾಪಾರಿಗಳ ಕೈಗೆ ಸಿಗುತ್ತಿದೆ. ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ inc ಅಮೆರಿಕಾವನ್ನು ಆಳುತ್ತಿದೆ. ಆ ದೇಶದ ಜನರ ಬಗ್ಗೆ ಅವರಿಗೆ ಯಾವ ಚಿಂತೆಯೂ ಇಲ್ಲ. ಅವರ ಜನರ ಬಗ್ಗೆಯೇ ಚಿಂತೆ ಇಲ್ಲದ ನಾಯಕರು ಬೇರೆ ದೇಶದ ಪ್ರಜೆಗಳ ಬಗ್ಗೆ ಚಿಂತೆ ಮಾಡುತ್ತಾರೆ ಎನ್ನುವ ಯಾವ ಗ್ಯಾರಂಟಿಯೂ ಇಲ್ಲ. ಅಮೇರಿಕಾದಲ್ಲಿ ಹತ್ತಾರು ವರ್ಷ ಕೆಲಸ ಮಾಡಿ ಅಲ್ಲಿರಲು ಆಗದೆ , ಇಲ್ಲಿಗೆ ಇಷ್ಟವಿಲ್ಲದ ಸಾವಿರಾರು ಭಾರತೀಯರು ನಿರ್ಧಾರ ಮಾಡಲು ಇದು ಸರಿಯಾದ ಸಮಯ.
ವಿಪರ್ಯಸವೆಂದರೆ ಜಗತ್ತಿನ ಎಲ್ಲಾ ದೇಶಗಳೂ ಇಂದಲ್ಲ ನಾಳೆ ವ್ಯಾಪಾರಿಗಳ ಕೈಗೆ ಸಿಲುಕಿ ನಲುಗಲಿವೆ. ನಾವು ಸಂಘಟಿತರಾದರೆ ಇದನ್ನು ತಡೆಯಲು ಸಾಧ್ಯ. ಆದರೆ ನಮಗೆ ಇವೆಲ್ಲವುಗಳ ಅರಿವು ಉಂಟಾಗುವುದಿಲ್ಲ. ಹಿಂದೂ -ಮುಸ್ಲಿಂ, ಜಾತಿ -ಉಪಜಾತಿ -ಭಾಷೆ ಹೆಸರಿನಲ್ಲಿ ಛಿದ್ರವಾಗುವುದರಲ್ಲಿ ನಮಗೆ ಖುಷಿ. ಹಣ -ಅಧಿಕಾರದ ಮೇಲೆ ಇನ್ನಷ್ಟು ನಿಯಂತ್ರಣ ಸಾಧಿಸಿ ನಮ್ಮ ಬದುಕನ್ನು ಇನ್ನಷ್ಟು ಅಸ್ಥಿರಗೊಳಿಸುವುದು ಅವರಿಗೆ ಖುಷಿ. ಎಲ್ಲರಿಗೂ ಬೇಕಿರುವುದು ಈ ಕ್ಷಣದ ಸುಖ, ಗೆಲುವು ಅಷ್ಟೇ!