ಚಿರಾಗ್ ಪಾಸ್ವಾನ್-ಮೋದಿ (ಸಂಗ್ರಹ ಚಿತ್ರ) online desk
ಅಂಕಣಗಳು

ಬಿಹಾರದಲ್ಲಿ ನರೇಂದ್ರ ಮೋದಿಯ ಹನುಮಾನ್‌ ಚಿರಾಗ್‌ ಪಾಸ್ವಾನ್‌ (ನೇರ ನೋಟ)

ಚಿರಾಗ್‌ ಪಾಸ್ವಾನ್‌ ಅವರು ನರೇಂದ್ರ ಮೋದಿ ಅವರ ಭಾಷಣಗಳು, ವಿಚಾರಗಳನ್ನು ಅತ್ಯಂತ ಆಸಕ್ತಿಯಿಂದ ಆಲಿಸುತ್ತಿದ್ದರು. ನರೇಂದ್ರ ಮೋದಿ ಅವರ ವಿಚಾರಧಾರೆ ಚಿರಾಗ್‌ ಪಾಸ್ವಾನ್‌ ಅವರ ಮೇಲೆ ಗಾಢವಾದ ಪ್ರಭಾವ ಬೀರಿತು.

ಬಿಹಾರ ವಿಧಾನಸಭಾ ಚುನಾವಣೆಯ ಅಖಾಡದಲ್ಲಿ ಈ ಬಾರಿ ಹಲವು ಅಚ್ಚರಿಗಳಿವೆ. ಎನ್‌ಡಿಎನಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಸಚಿವ ಚಿರಾಗ್‌ ಪಾಸ್ವಾನ್‌ ನೇತೃತ್ವದ ಲೋಕಜನಶಕ್ತಿ ಪಕ್ಷ (ರಾಮ್‌ ವಿಲಾಸ್‌)ಕ್ಕೆ 29 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿರುವುದು ಇಂತಹ ಒಂದು ಅಚ್ಚರಿಯೇ ಸರಿ. ಇದು ಎನ್‌ಡಿಎನಲ್ಲಿ ಚಿರಾಗ್‌ ಪಾಸ್ವಾನ್‌ ಅವರಿಗೆ ದೊರೆತಿರುವ ಹೆಚ್ಚಿನ ಪ್ರಾಮುಖ್ಯತೆಗೆ ಸಾಕ್ಷಿ. ಬಿಹಾರದ ರಾಜಕಾರಣದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರಿಗೆ ಚೆಕ್‌ ಮೇಟ್‌ ಮಾಡಲು ಬಿಜೆಪಿಗೆ ಚಿರಾಗ್‌ ಪಾಸ್ವಾನ್‌ ದಾಳ ಇದ್ದಂತೆ!

ಎಲ್‌ಜೆಪಿ ಈ ಬಾರಿ ಎನ್‌ಡಿಎ ಮೈತ್ರಿಕೂಟದಲ್ಲಿ 29 ಕ್ಷೇತ್ರಗಳನ್ನು ದಕ್ಕಿಸಿಕೊಂಡಿದೆ. ಇದರ ಹಿಂದೆ ಬಿಜೆಪಿ ವರಿಷ್ಠರ ಆಶೀರ್ವಾದವಿದೆ. ಬಿಹಾರ ರಾಜಕಾರಣದಲ್ಲಿ ಯುವ ನಾಯಕ, ದಲಿತ ಸಮುದಾಯದ ಚಿರಾಗ್‌ ಪಾಸ್ವಾನ್‌ ಅವರು ನೆಲೆ ವಿಸ್ತರಿಸಿಕೊಳ್ಳುವುದು ಬಿಜೆಪಿಗೆ ಬೇಕಿದೆ. ಏಕೆಂದರೆ, ಅಷ್ಟರಮಟ್ಟಿಗೆ ನಿತೀಶ್‌ ಕುಮಾರ್ ಅವರ ಪ್ರಾಬಲ್ಯವನ್ನು ಕುಗ್ಗಿಸಬಹುದು ಎಂಬ ಲೆಕ್ಕಾಚಾರ. ನಿತೀಶ್‌ಕುಮಾರ್ ಅವರೂ ಅಷ್ಟೇ. ಕಳೆದ 20 ವರ್ಷಗಳಲ್ಲಿ ಐದು ಬಾರಿ ಮೈತ್ರಿಕೂಟಗಳನ್ನು ಬದಲಿಸಿ ಪಲ್ಟುರಾಮ್‌ ಎಂದೇ ಗೇಲಿಗೆ ಒಳಗಾಗಿದ್ದಾರೆ.

ಬಿಜೆಪಿ ಈಗಾಗಲೇ ನಿತೀಶ್ ಕುಮಾರ್ ಅವರ ಜೆಡಿಯುನ ಬಿಗ್‌ ಬ್ರದರ್‌ ಪಾತ್ರಕ್ಕೆ ಕಡಿವಾಣ ಹಾಕಿದೆ. ಹೇಗೆಂದರೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಯು-ಬಿಜೆಪಿ ಸರಿಸಮಾನವಾಗಿ 101 ಸೀಟುಗಳನ್ನು ಹಂಚಿಕೊಂಡಿವೆ. ಉಳಿದ ಸೀಟುಗಳು ಮೈತ್ರಿಕೂಟದ ಅಂಗಪಕ್ಷಗಳಿಗೆ.

ಬಿಹಾರದಲ್ಲಿ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) 2020 ವಿಧಾನಸಭಾ ಚುನಾವಣೆಯಲ್ಲಿ 137 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಆದರೆ, ಗೆದ್ದಿದ್ದು ಕೇವಲ ಒಂದು ಕ್ಷೇತ್ರ. ಒಂಬತ್ತು ಕ್ಷೇತ್ರಗಳಲ್ಲಿ ದ್ವಿತೀಯ ಸ್ಥಾನ. ಆದರೆ, ಸುಮಾರು 35 ಕ್ಷೇತ್ರಗಳಲ್ಲಿ ಜೆಡಿಯು ಸೋಲಿಗೆ ಕಾರಣ. ಜೆಡಿಯು 2015ರಲ್ಲಿ 71 ಕ್ಷೇತ್ರಗಳಲ್ಲಿ ಗೆದ್ದಿತ್ತು. 2020ರಲ್ಲಿ ಇದು 43ಕ್ಕೆ ಕುಸಿಯಿತು. ಎಲ್‌ಜೆಪಿ ಪರೋಕ್ಷವಾಗಿ ಆರ್‌ ಜೆಡಿ ಗೆಲುವಿಗೆ ನೆರವಾಗಿದ್ದು ಈಗ ಇತಿಹಾಸ.

ಎಲ್‌ಜೆಪಿ ಆಗ ಕೇಂದ್ರದಲ್ಲಿ ಎನ್‌ಡಿಎ ಜೊತೆಗಿತ್ತು. ಆದರೂ ಬಿಹಾರದ ರಾಜಕಾರಣದಲ್ಲಿ ತಮ್ಮ ಮೈತ್ರಿಕೂಟದ ಅಂಗಪಕ್ಷ ಜೆಡಿಯುನ ನಿತೀಶರ ಆಡಳಿತದ ವೈಫಲ್ಯ ಖಂಡಿಸಿತ್ತು. ಆ ಸಮಯದಲ್ಲಿ ನಿತೀಶರ ಕಟುಟೀಕಾಕಾರರಾಗಿದ್ದರು ಚಿರಾಗ್‌ ಪಾಸ್ವಾನ್. ಇದೇ ವೇಳೆ ತಾವು ಪ್ರಧಾನಿ ನರೇಂದ್ರ ಮೋದಿ ಅವರ ಹನುಮಾನ್‌. ನನ್ನ ಹೃದಯದಲ್ಲಿ ನರೇಂದ್ರ ಮೋದಿ ಅವರಿದ್ದಾರೆ ಅಂತ ಚಿರಾಗ್‌ ಪಾಸ್ವಾನ್‌ ಮತಯಾಚಿಸಿದ್ದರು.

ಈ ಚುನಾವಣೆಯಲ್ಲಿ ಆರ್‌ಜೆಡಿಯ ತೇಜಸ್ವಿ ಯಾದವ್ ಅವರನ್ನು ಮಹಾಘಟಬಂಧನ್‌ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಿದೆ. ಇದು ಆಂತರಿಕವಾಗಿ ಬಿಜೆಪಿಯ ಕೆಲವು ಬೆಳವಣಿಗೆಗಳಿಗೆ ಕಾರಣವಾಗಿದೆ. ತೇಜಸ್ವಿ ಯಾದವ್‌ ಅವರು ಯಾದವ ಸಮುದಾಯದವರು. ಬಿಜೆಪಿಯು ಕೆಲವು ವರ್ಷಗಳಿಂದ ತನ್ನ ಪಕ್ಷದಲ್ಲಿ ಯಾದವ ಸಮುದಾಯದ ನಾಯಕತ್ವವನ್ನು ಬೆಳೆಸಲು ಪ್ರಯತ್ನಿಸಿತು. ಯಾದವ ಸಮಾಜದ ಅನೇಕರಿಗೆ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಟಿಕೆಟ್ ನೀಡಿತು. ಆದರೂ, ಯಾದವ ಸಮುದಾಯ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾದಳದ ಲಾಲೂಪ್ರಸಾದ ಯಾದವ್ ಹಾಗೂ ಅವರ ಪುತ್ರ ತೇಜಸ್ವಿ ಯಾದವ್‌ ಅವರ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿರುವುದನ್ನು ಹೆಚ್ಚು ಕದಲಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ.

ಈ ಚುನಾವಣೆಯಲ್ಲಿ ಯಾದವ ಸಮಾಜದ ಅನೇಕ ಹಾಲಿ ಶಾಸಕರು, ಮುಖಂಡರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದೆ. ವಿಧಾನಸಭೆಯ ಸ್ಪೀಕರ್‌ ನಂದಕಿಶೋರ ಯಾದವ್ ಅವರಿಗೆ ಬಿಜೆಪಿ ಟಿಕೆಟ್‌ ತಪ್ಪಿದೆ. ಯಾದವ ಸಮಾಜಕ್ಕೆ ತಾನು ಟಿಕೆಟ್‌ ನೀಡುತ್ತಿದ್ದ ಕೆಲವು ಕ್ಷೇತ್ರಗಳನ್ನು ಬಿಜೆಪಿಯು ಚಿರಾಗ್‌ ಪಾಸ್ವಾನ್ ಅವರ ಎಲ್‌ ಜೆಪಿಗೆ ಬಿಟ್ಟುಕೊಟ್ಟಿದೆ. ಬಿಜೆಪಿ 2015ರಲ್ಲಿ 22 ಮಂದಿ ಯಾದವ ಸಮುದಾಯದವರಿಗೆ ಟಿಕೆಟ್‌ ನೀಡಿತ್ತು. ಇದು 2020ರಲ್ಲಿ 15ಕ್ಕೆ ಇಳಿಯಿತು. 2025ರ ಚುನಾವಣೆಗೆ ಈ ಸಂಖ್ಯೆ 6ಕ್ಕೆ ಕುಸಿದಿದೆ. ಬಿಹಾರದಲ್ಲಿ ಯಾದವ ಸಮುದಾಯ ಸುಮಾರು ಶೇ.14ರಷ್ಟು ಇದ್ದಾರೆ.

ಬಿಹಾರದ ರಾಜಕಾರಣದಲ್ಲಿ ನಿತೀಶ್‌ಕುಮಾರ್ ಹಾಗೂ ಚಿರಾಗ್‌ ಪಾಸ್ವಾನ್‌ ಅವರ ಮಧ್ಯೆ ಆಗಾಗ್ಗೆ ವಾಕ್ಸಮರಗಳು ನಡೆದಿವೆ. ಎನ್‌ಡಿಎ ಅಂಗಪಕ್ಷದಲ್ಲಿ ಇಬ್ಬರು ಇದ್ದರೂ ಭಿನ್ನಾಭಿಪ್ರಾಯಗಳಿವೆ. ಈಗ ಚುನಾವಣೆ ಹೊತ್ತಲ್ಲಿ ಇಬ್ಬರೂ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಸಿಎಂ ನಿತೀಶ್‌ಕುಮಾರ್ ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ನಿತೀಶ್‌ಕುಮಾರ್ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಚಿರಾಗ್‌ ಪಾಸ್ವಾನ್‌ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಇದೇ ಚಿರಾಗ್‌ ಪಾಸ್ವಾನ್ ಮೂರು ತಿಂಗಳ ಹಿಂದೆ ನಿತೀಶ್‌ ಕುಮಾರ್ ಆಡಳಿತವನ್ನು ಕಟುವಾಗಿ ಟೀಕಿಸಿದ್ದರು. ಬಿಹಾರದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಕ್ರಿಮಿನಲ್‌ ಗಳನ್ನು ನಿಯಂತ್ರಿಸಲು ವಿಫಲರಾಗಿರುವ ಸರಕಾರವನ್ನು ಬೆಂಬಲಿಸುತ್ತಿರುವುದಕ್ಕೆ ನಾಚಿಕೆಯಾಗುತ್ತಿದೆ. ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಪರಿಣಾಮಗಳು ಗಂಭೀರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದ್ದರು. ಇದಾದ ಎರಡು ದಿನಗಳಲ್ಲೇ ಚಿರಾಗ್‌ ಉಲ್ಟಾ ಹೊಡೆದು ಟೀಕೆಗೆ ಗುರಿಯಾಗಿದ್ದರು.

ಸುಮಾರು ಎರಡು ವರ್ಷಗಳ ಹಿಂದಿನ ಮಾತು. ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಚಿರಾಗ್‌ ಪಾಸ್ವಾನ್‌ ತಮಿಳುನಾಡಿಗೆ ತೆರಳಿ ಬಿಹಾರದ ವಲಸೆ ಕಾರ್ಮಿಕರ ಜೊತೆ ಮಾತಾಡಿ ಧೈರ್ಯ ತುಂಬಿದ್ದರು. ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಬಿಹಾರದ ಅಭಿವೃದ್ಧಿಗೆ ಸರಿಯಾಗಿ ಕೆಲಸ ಮಾಡಿದ್ದರೆ ಬಿಹಾರದವರು ಏಕೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿ ದುಡಿಯುವ ಸ್ಥಿತಿ ಬರುತ್ತಿತ್ತು ಎಂದು ಚಿರಾಗ್‌ ಪಾಸ್ವಾನ್‌ ಆಗ ಪ್ರಶ್ನಿಸಿದ್ದರು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಡಳಿತವನ್ನು ಮೆಚ್ಚಿ ನಿತೀಶ್‌ ಕುಮಾರ್ ಅವರ ಕಾಲೆಳೆದಿದ್ದರು.

ಬಿಹಾರದ ಒಟ್ಟು ಜನಸಂಖ್ಯೆ ಸುಮಾರು 13.1 ಕೋಟಿ. ಬಿಹಾರದ ಎರಡೂವರೆ ಕೋಟಿ ಜನರು ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಅಂದಾಜಿದೆ. ಇದರಲ್ಲಿ ಸುಮಾರು 90 ಲಕ್ಷ ಮಂದಿ ಪ್ರತಿ ವರ್ಷ ಬಿಹಾರದಿಂದ ಹೊರಗೆ ದುಡಿಯಲು ಹೋಗುವ ವಲಸೆ ಕಾರ್ಮಿಕರು. ಬಿಹಾರದ ಈ ಚುನಾವಣಾ ಕಣದಲ್ಲಿ ವಲಸೆ ಕಾರ್ಮಿಕರ ಸ್ಥಿತಿಗತಿಗಳು, ಕಾರ್ಮಿಕರ ವಲಸೆಗೆ ಕಾರಣಗಳು, ಉದ್ಯೋಗಸೃಷ್ಟಿಯ ಚರ್ಚೆಗಳು ನಡೆದಿವೆ.

ಚಿರಾಗ್ ಪಾಸ್ವಾನ್‌ ಬಿಹಾರದ ಮಹತ್ವಾಕಾಂಕ್ಷಿ ರಾಜಕಾರಣಿ. ಬಿಹಾರ ಫಸ್ಟ್‌, ಬಿಹಾರಿ ಫಸ್ಟ್‌ ಎಂಬುದು ಅವರ ಫೇಮಸ್‌ ಸ್ಲೋಗನ್‌. ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಜೂನ್‌ ನಲ್ಲಿ ಹೇಳಿದ್ದರು. ನಿತೀಶ್‌ಕುಮಾರ್‌ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಸಮಾವೇಶಗಳನ್ನೂ ನಡೆಸಿದ್ದರು. ಜೆಡಿಯು ಎನ್ ಡಿಎ ಅಂಗಪಕ್ಷವಾಗಿದ್ದರೂ ಚಿರಾಗ್‌ ಹೀಗೆ ಮಾಡಿದ್ದರು. ಬಿಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ತಾವು ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ, ಚಿರಾಗ್‌ ಈಗ ಅಭ್ಯರ್ಥಿಯಾಗಿಲ್ಲ.

ಚಿರಾಗ್‌ ಪಾಸ್ವಾನ್‌ ಲೋಕಸಭೆಯಲ್ಲಿ ಬಿಹಾರದ ಹಾಜಿಪುರ (ಮೀಸಲು) ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಡೈನಾಮಿಕ್‌ ರಾಜಕಾರಣಿ. ಚಿರಾಗ್‌ ಕಾ ರೋಜ್ಗಾರ್‌ ಎಂಬ ಎನ್‌ಜಿಒ ಹುಟ್ಟು ಹಾಕಿದ್ದಾರೆ. ಯುವಕರಿಗೆ ಉದ್ಯೋಗ ನೀಡುವುದು ಇದರ ಉದ್ದೇಶ.

ಬಿಹಾರ ಮುಖ್ಯಮಂತ್ರಿಯಾಗಬೇಕೆಂದು ನಾನೇನು ಬೆನ್ನು ಹತ್ತುವುದಿಲ್ಲ. ನಾನು ನನ್ನ ಕೆಲಸ ಮಾಡ್ತೀನಿ. ಬಿಹಾರದ ಬಗ್ಗೆ ನಮಗೆ ದೂರದೃಷ್ಟಿ ಇರಬೇಕು. ವಲಸೆ ಹೋದವರನ್ನು ವಾಪಸ್‌ ಕರೆತರಬೇಕು. ಬಿಹಾರ ಸಮಗ್ರವಾಗಿ ಅಭಿವೃದ್ಧಿಯಾಗಬೇಕು ಎನ್ನುತ್ತಾರೆ 43 ವರ್ಷದ ಚಿರಾಗ್‌ ಪಾಸ್ವಾನ್.

ಚಿರಾಗ್‌ ಪಾಸ್ವಾನ್‌ ರಾಜಕಾರಣಕ್ಕೆ ಪ್ರವೇಶಿದ್ದು 2013ರಲ್ಲಿ. ಆಗ ಅವರ ತಂದೆ ರಾಮ ವಿಲಾಸ್‌ ಪಾಸ್ವಾನ್‌ ಅವರು ಎನ್‌ಡಿಎ ಮೈತ್ರಿಕೂಟದಲ್ಲಿ ಇರಲಿಲ್ಲ. ಎನ್‌ಡಿಎ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಗುಜರಾತಿನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಬಿಂಬಿತವಾಗಿದ್ದರು. ಚಿರಾಗ್‌ ಪಾಸ್ವಾನ್‌ ಅವರು ನರೇಂದ್ರ ಮೋದಿ ಅವರ ಭಾಷಣಗಳು, ವಿಚಾರಗಳನ್ನು ಅತ್ಯಂತ ಆಸಕ್ತಿಯಿಂದ ಆಲಿಸುತ್ತಿದ್ದರು. ನರೇಂದ್ರ ಮೋದಿ ಅವರ ವಿಚಾರಧಾರೆ ಚಿರಾಗ್‌ ಪಾಸ್ವಾನ್‌ ಅವರ ಮೇಲೆ ಗಾಢವಾದ ಪ್ರಭಾವ ಬೀರಿತು. ತಮ್ಮ ತಂದೆ ರಾಮ ವಿಲಾಸ್‌ ಪಾಸ್ವಾನ್‌ ಎನ್‌ಡಿಎ ಕೂಟಕ್ಕೆ ಸೇರಿದ್ದರಲ್ಲಿ ಚಿರಾಗ್‌ ಪಾಸ್ವಾನ್‌ ಪಾತ್ರ ದೊಡ್ಡದು.

ಬಿಹಾರದ ಈ ಚುನಾವಣೆಯಲ್ಲಿ ಚಿರಾಗ್‌ ಪಾಸ್ವಾನ್‌ ಅವರ ಎಲ್‌ಜೆಪಿ ಮೋಡಿ ಮಾಡುತ್ತದೆಯೇ?

ಉತ್ತರಕ್ಕೆ ನವೆಂಬರ್‌ 14ರ ವರೆಗೆ ಕಾಯಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಾತಿ ಗಣತಿ: ಮನೆ ಮನೆ ಸಮೀಕ್ಷೆ ಮುಕ್ತಾಯ; ರಾಜ್ಯದ ಒಟ್ಟು ಜನಸಂಖ್ಯೆ ಎಷ್ಟು ಗೊತ್ತಾ?

ದೇಶದ ಮೊದಲ 'ಕಡುಬಡತನ ಮುಕ್ತ' ರಾಜ್ಯ: ಘೋಷಣೆಗೆ ಕೇರಳ ಸಜ್ಜು, ಆರ್ಥಿಕ ತಜ್ಞರ ಆಕ್ಷೇಪವೇನು?

ಸಿಎಂ ಆಗಿ ಡಿಕೆಶಿ ನವೆಂಬರ್ 21ಕ್ಕೆ ಪ್ರಮಾಣ ವಚನ: ವರದಿಗಾರರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಸಿಡಿಮಿಡಿ!

ಕುಡಚಿ ಕಾಂಗ್ರೆಸ್ MLA​ ಪುತ್ರನಿಗೆ ಡಿಕೆ ಶಿವಕುಮಾರ್ ಹೆಸರು ನಾಮಕರಣ! ವಿಶೇಷ ಏನು ಗೊತ್ತಾ?

ಬೆಂಗಳೂರು: ಲವರ್ ಜೊತೆ ಸೇರಿ 'ತಾಯಿಯನ್ನೇ ಕೊಂದು' ಆತ್ಮಹತ್ಯೆಯ ನಾಟಕವಾಡಿದ್ದ ಮಗಳು! ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?

SCROLL FOR NEXT