ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹೊತ್ತಲ್ಲಿ ಇಂತಹ ಸಮೀಕ್ಷೆ ನಡೆಸುವುದು ಬೇಕಿತ್ತಾ? ಕೈಯಲ್ಲಿದ್ದ ಕಾಂತರಾಜ ಆಯೋಗದ ವರದಿಯನ್ನೇ ಜಾರಿಗೊಳಿಸಲಿಲ್ಲ. ಹೀಗಿದ್ದಾಗ ಮತ್ತೊಂದು ಆಯೋಗದ ವರದಿಯನ್ನು ಜಾರಿಗೊಳಿಸಬಲ್ಲರೇ?
ಸಿದ್ದರಾಮಯ್ಯ ಸರಕಾರ ಇತ್ತೀಚೆಗಷ್ಟೇ ಒಳ ಮೀಸಲಾತಿ ವಿಚಾರದಲ್ಲಿ ಕೈಗೊಂಡ ನಿರ್ಧಾರವು ಅಸಮಾಧಾನಗಳನ್ನು ಸ್ಫೋಟಿಸಿವೆ. ಪ್ರತಿಭಟನೆಯ ಅಲೆಗಳನ್ನು ಎಬ್ಬಿಸಿವೆ. ಹೀಗಿರುವಾಗಲೇ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದಿಂದ ಎರಡನೇ ಸಮೀಕ್ಷೆ ನಡೆಸಲು ಹೊರಟಿರುವುದು ಕರ್ನಾಟಕದಲ್ಲಿ ಜಾತಿ ಜಂಜಾಟದ ಗೊಂದಲವನ್ನು ಮತ್ತೆ ಮುನ್ನೆಲೆಗೆ ತಂದಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯಲು ಸೆಪ್ಟೆಂಬರ್ 22 ರಿಂದ 15 ದಿನಗಳ ಸಮೀಕ್ಷೆ ಆರಂಭ ಆಗಲಿದೆ. ಇದಕ್ಕೆ ತಗಲುವ ವೆಚ್ಚ ಸುಮಾರು 420 ಕೋಟಿ ರೂಪಾಯಿ. ಸಮೀಕ್ಷೆ ದಿನ ಸಮೀಪಿಸುತ್ತಿರುವಂತೆ ಜಾತಿ, ಧರ್ಮದ ಹೆಸರನ್ನು ನಮೂದಿಸುವ ವಿಚಾರದಲ್ಲಿ ಜಾತಿಗಳಲ್ಲೇ ಭಿನ್ನಾಭಿಪ್ರಾಯಗಳು ಸ್ಫೋಟಿಸಿವೆ. ಯಾವ ಜಾತಿ, ಧರ್ಮದ ಹೆಸರನ್ನು ಹೇಗೆ ಬರೆಸಬೇಕು ಎಂಬ ಬಿಸಿಬಿಸಿ ಚರ್ಚೆ, ವಾಗ್ವಾದ. ಆರೋಪ-ಪ್ರತ್ಯಾರೋಪಗಳ ಕಿಡಿ. ಈ ಸಮೀಕ್ಷೆಯಿಂದ ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮದ ಚರ್ಚೆ ಮತ್ತೆ ಮುನ್ನೆಲೆಗೆ. ಅಲೆಅಲೆಯಾಗಿ ಎದ್ದಿರುವ ವಿವಾದದ ತರಂಗಗಳು.
ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ ನಡೆಸಿದ್ದರು. ಇದಕ್ಕೆ ಸುಮಾರು 165 ಕೋಟಿ ರೂಪಾಯಿ ವೆಚ್ಚವಾಯಿತು. ಎಚ್.ಕಾಂತರಾಜ ನೇತೃತ್ವದ ಆಯೋಗ ಸಮೀಕ್ಷೆ ನಡೆಸಿ ವರದಿ ಸಿದ್ದಪಡಿಸಿತು. ಆದರೆ, ಈ ವರದಿ ಸಲ್ಲಿಕೆಯಾಗಿದ್ದು ನಂತರ ಆಯೋಗದ ಅಧ್ಯಕ್ಷರಾಗಿ ನೇಮಕವಾದ ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಅವರಿಂದ. ವರದಿ ಸ್ವೀಕರಿಸಿದವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು.
ವರದಿಯ ಕೆಲವು ಅಂಶಗಳು ಬಹಿರಂಗವಾದವು. ಹಿಂದುಳಿದ ವರ್ಗಗಳ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನೀವು ಸಾಮಾಜಿಕ ನ್ಯಾಯದ ಪರವಾಗಿದ್ದೀರಿ. ನಿಮ್ಮಂಥ ನಾಯಕರೇ ವರದಿಯನ್ನು ಜಾರಿಗೊಳಿಸದಿದ್ದರೆ ಇನ್ಯಾರು ಜಾರಿಗೊಳಿಸುತ್ತಾರೆ. ಪಕ್ಷ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಜಾತಿ ಗಣತಿ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಹೀಗಾಗಿ, ವರದಿಯನ್ನು ಒಪ್ಪಬೇಕು ಎಂದು ಆಗ್ರಹಿಸಿದ್ದರು. ಸರಕಾರಕ್ಕೆ ಸಂಕಷ್ಟ ಬಂದರೂ ಪರವಾಗಿಲ್ಲ. ವರದಿ ಅಂಗೀಕರಿಸಿ ಜಾರಿಗೊಳಿಸಿ ಎಂದು ಹೇಳಿದ್ದೇವೆ ಎಂದಿದ್ದರು ಕಾಂಗ್ರೆಸ್ಸಿನ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್.
ಸಿದ್ದರಾಮಯ್ಯ ಈ ವರದಿ ಜಾರಿಗೆ ಮುಂದಾದರು. ಸಾಮಾಜಿಕ ನ್ಯಾಯದ ಬದ್ಧತೆಯ ಮಾತುಗಳನ್ನು ಆಡಿದರು. ಇದು ಕೇವಲ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಅಲ್ಲ. ರಾಜ್ಯದ ಏಳು ಕೋಟಿ ಕನ್ನಡಿಗರ ಸಮೀಕ್ಷೆ. ದೇಶದಲ್ಲಿ ಇಂತಹ ಸಮೀಕ್ಷೆ ನಡೆಸಿದ ಪ್ರಥಮ ರಾಜ್ಯ ಕರ್ನಾಟಕ ಅಂದರು. ವರದಿ ಜಾರಿಯ ಕಾಲ ಸನಿಹದಲ್ಲಿದೆ ಎಂಬ ವಾತಾವರಣವೂ ನಿರ್ಮಾಣವಾಯಿತು. ಆದರೆ, ವರದಿ ಜಾರಿಗೆ ಕಾಂಗ್ರೆಸ್ ನಲ್ಲೇ ಪ್ರಭಾವಿ ನಾಯಕರು ವಿರೋಧಿಸಿದರು. ಸಾರ್ವಜನಿಕ ವಲಯದಲ್ಲಿ ಪ್ರತಿಭಟನೆಯ ಕೂಗು ಎದ್ದಿತು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರಿಗೆ ತಾಕತ್ತು ಇದ್ದರೆ ವಿಧಾನಸಭೆ ವಿಸರ್ಜಿಸಿ ಜಾತಿ ಜನಗಣತಿಯನ್ನು ಮುಂದಿಟ್ಟುಕೊಂಡು ಮಧ್ಯಂತರ ಚುನಾವಣೆ ಎದುರಿಸಲಿ ಎಂದು ಸವಾಲು ಎಸೆದರು. ಸಿದ್ದರಾಮಯ್ಯ ಸಂಪುಟದಲ್ಲೇ ಭಿನ್ನಾಭಿಪ್ರಾಯಗಳು ತೀವ್ರಗೊಂಡವು.
ಕೊನೆಗೆ ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಪ್ರವೇಶಿಸಿತು. ವರದಿ ಜಾರಿಗೆ ಹಿಂದೆ ಸರಿಯಿತು. ಸಿದ್ದರಾಮಯ್ಯ ಕೈ ಕಟ್ಟಿ ನಿಂತರು. ಕಾಂತರಾಜ ಆಯೋಗದ ವರದಿಯ ದತ್ತಾಂಶಗಳು ಹತ್ತು ವರ್ಷ ಹಳೆಯವು. ಹೀಗಾಗಿ, ಮತ್ತೊಂದು ಸಮೀಕ್ಷೆ ಎಂದರು ಸಿದ್ದರಾಮಯ್ಯ. ತಳಸಮುದಾಯದವರು, ಹಿಂದುಳಿದ ವರ್ಗದವರು ಬೇಸತ್ತರು. ಇದು ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಹಿನ್ನಡೆ ತಂದಿತು. ಕಾಂತರಾಜ ಆಯೋಗದ ವರದಿ ಕಪಾಟು ಸೇರಿತು. ಕೈಯಲ್ಲಿದ್ದ ಕಾಂತರಾಜ ಆಯೋಗದ ವರದಿ ಜಾರಿಗೊಳಿಸದ ಸಿದ್ದರಾಮಯ್ಯ ಸರಕಾರ ಈಗ ಎರಡನೇ ಸಮೀಕ್ಷೆ ನಡೆಸಲು ಹೊರಟಿದೆ.
ಈಗ ಆಯೋಗದ ನೇತೃತ್ವ ವಹಿಸಿರುವವರು ಮಧುಸೂದನ್ ಆರ್. ನಾಯಕ್. ಕರ್ನಾಟಕದ ಎರಡು ಕೋಟಿ ಕುಟುಂಬಗಳ ಸಮೀಕ್ಷೆ ನಡೆಯಲಿದೆ. ರಾಜ್ಯದ ಎಲ್ಲ ವರ್ಗಗಳ, ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮಗ್ರ ಸಮೀಕ್ಷೆ ಮೂಲಕ ಅಂಕಿಅಂಶಗಳನ್ನು ಸಂಗ್ರಹಿಸಲಿದೆ. ಈ ಅಂಕಿಅಂಶಗಳ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಪೂರಕ ಕಾರ್ಯಕ್ರಮಗಳನ್ನು ರೂಪಿಸಬೇಕು.
ಸಮೀಕ್ಷೆಯ ದಿನ ಹತ್ತಿರವಾದಂತೆ ವೀರಶೈವ, ಲಿಂಗಾಯತರಲ್ಲಿ ಪ್ರತ್ಯೇಕ ಧರ್ಮದ ಪ್ರಶ್ನೆ ಮತ್ತೆ ಎದ್ದಿದೆ. ವೀರಶೈವ ಲಿಂಗಾಯತ ಸಮಾಜದಲ್ಲಿ ಗೊಂದಲಗಳು ಮೂಡಿವೆ. ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ನಮೂದಿಸಬೇಕು. ವೀರಶೈವ ಲಿಂಗಾಯತ ಹಾಗೂ ಹಿಂದೂಗಳು ನಮೂದಿಸಬಾರದು ಎಂದು ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹೇಳಿದೆ. ಲಿಂಗಾಯತ ಪ್ರತ್ಯೇಕ ಸ್ವತಂತ್ರ ಧರ್ಮ ಎಂಬುದು ಅವರ ವಾದ.
ಆದರೆ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘವು ಸಮೀಕ್ಷೆಯಲ್ಲಿ ಲಿಂಗಾಯತ ಪಂಚಮಸಾಲಿಗಳು ಧರ್ಮವನ್ನು ಹಿಂದೂ ಮತ್ತು ಜಾತಿಯನ್ನು ಲಿಂಗಾಯತ ಪಂಚಮಸಾಲಿ ಎಂದು ನಮೂದಿಸುವಂತೆ ಕರೆ ನೀಡಿದೆ. ಯಾವುದೇ ಉಪಜಾತಿ ದಾಖಲಿಸುವ ಅವಶ್ಯಕತೆ ಇಲ್ಲ ಎಂದಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಂಕರ ಬಿದರಿ ಅವರು, ಕಾನೂನು ಪ್ರಕಾರ ನಾವು ಹಿಂದೂಗಳು. ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಬೇಕೆಂಬುದು ನಮ್ಮ ನಿಲುವು. ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್ 19 ರಂದು ನಡೆಯುವ ವೀರಶೈವ ಲಿಂಗಾಯತ ಏಕತಾ ಸಮಾವೇಶದ ನಿರ್ಣಯವನ್ನು ಕಾದು ನೋಡೋಣ ಎನ್ನುತ್ತಾರೆ.
ವೀರಶೈವ-ಲಿಂಗಾಯತ ಸಮಾಜದಲ್ಲಿ ತಲೆದೋರಿರುವ ಈ ಭಿನ್ನಾಭಿಪ್ರಾಯಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತಲೇ ತಿರುಗುತ್ತಿವೆ. ವೀರಶೈವ- ಲಿಂಗಾಯತ ಸಮಾಜವನ್ನು ಒಡೆಯಲು ಸಿದ್ದರಾಮಯ್ಯ ಮತ್ತೆ ಹೊರಟಿದ್ದಾರೆ ಎಂದು ಆ ಸಮಾಜದ ಬಿಜೆಪಿ ಮುಖಂಡರು ದೂರಿದ್ದಾರೆ. ಈ ಹಿಂದೆ ಇಂತಹ ಪ್ರಯತ್ನ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿತು ಎಂದು ನೆನಪು ಮಾಡಿದ್ದಾರೆ.
ಈ ಮಧ್ಯೆ ಈ ಬಾರಿ ಸಮೀಕ್ಷೆಯಲ್ಲಿ ಜಾತಿಗಳಿಗೆ ಕ್ರಿಶ್ಚಿಯನ್ ಹೆಸರು ಸೇರಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ನಡೆದ ಆಯೋಗಗಳ ಸಮೀಕ್ಷೆಗಳಲ್ಲಿ ಇಂತಹ ಯಾವುದೇ ಜಾತಿಯ ಹೆಸರುಗಳು ಇರಲಿಲ್ಲ. ಎರಡು ತಿಂಗಳ ಹಿಂದೆ ನ್ಯಾ.ನಾಗಮೋಹನದಾಸ್ ಆಯೋಗದ ಸಮೀಕ್ಷೆಯಲ್ಲಿಯೂ ದಲಿತ ಕ್ರೈಸ್ತ ಜಾತಿಗಳು ಇರಲಿಲ್ಲ. ಆದರೆ, ಸೆ.22 ರಿಂದ ಆರಂಭವಾಗಲಿರುವ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಲ್ಲಿ ಈ ಜಾತಿಗಳು ಸೇರ್ಪಡೆಯಾಗಿದ್ದು ಹೇಗೆ? ಇದು ಗೊಂದಲ ಉಂಟು ಮಾಡುವುದಿಲ್ಲವೇ? ಆದರೆ, ಸಿಎಂ ಸಿದ್ದರಾಮಯ್ಯ ಇದನ್ನು ಸಮರ್ಥಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಈ ನಡೆ ಕಾಂಗ್ರೆಸ್ಸಿನ ಒಂದು ವರ್ಗದಲ್ಲೇ ಅಚ್ಚರಿ ಮೂಡಿಸಿದೆ.
ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಇತಿಹಾಸವೇ ಇದೆ. ಡಿ.ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ 8 ಆಗಸ್ಟ್ 1972ರಂದು ಮೊದಲ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದರು. ವಕೀಲರಾಗಿದ್ದ ಲಕ್ಷ್ಮಣ ಜಿ.ಹಾವನೂರು ಆಯೋಗದ ಅಧ್ಯಕ್ಷರಾದರು. ಹಾವನೂರು ಅವರು ಶೋಷಿತ ವರ್ಗಗಳ ಏಳಿಗೆಗಾಗಿ ಸದಾ ಹಂಬಲಿಸುತ್ತಿದ್ದವರು. ಆ ನಿಟ್ಟಿನಲ್ಲಿ ದುಡಿದವರು. ಹಾವನೂರು ಆಯೋಗ ಮೂರು ವರ್ಷಗಳಿಗೂ ಹೆಚ್ಚು ಕಾಲ ಸಮೀಕ್ಷೆ ನಡೆಸಿ ರಾಜ್ಯ ಸರಕಾರಕ್ಕೆ 19 ನವೆಂಬರ್ 1975 ರಂದು ವರದಿ ಸಲ್ಲಿಸಿತು. ಕೆಲವು ಸಮುದಾಯಗಳು ಈ ವರದಿಗೆ ಪ್ರತಿಭಟನೆ ನಡೆಸಿದವು. 1977ರಲ್ಲಿ ಮೀಸಲಾತಿ ಆದೇಶ ಹೊರಬಿತ್ತು. ದೇವರಾಜ ಅರಸರು ಹಿಂದುಳಿದ ವರ್ಗಗಳ ಹೃದಯ ಸಾಮ್ರಾಟರಾದರು. ಹಾವನೂರು ರಾಜ್ಯದಲ್ಲಿ ಮನೆಮಾತಾದರು.
ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com