ಸ್ವರ್ಗ, ಪರಮಸೌಖ್ಯಲೋಕ, ಪರಮಸೌಖ್ಯದ ತೋಟ, ಪರಿವೀಕ್ಷಣೀಯ ಬ್ರಹ್ಮಾಂಡ (ಸಾಂದರ್ಭಿಕ ಚಿತ್ರಗಳು) 
ಅಂಕಣಗಳು

ಸ್ವರ್ಗಕ್ಕೆ ಬ್ರಹ್ಮಾಂಡದಲ್ಲಿ ವಿಳಾಸವಿದೆಯೇ? ವಿಜ್ಞಾನ ಮತ್ತು ನಂಬಿಕೆಯ ನಡುವಿನ ಸಂಘರ್ಷ! (ವಿಜ್ಞಾನ ವಿಶೇಷ)

ಸ್ವರ್ಗ ಎಂಬ ಪರಿಕಲ್ಪನೆ ತತ್ವಶಾಸ್ತ್ರದಲ್ಲಿ ಮಾನವನ ನೈತಿಕ ಜೀವನ, ಧರ್ಮಾಚರಣೆ ಮತ್ತು ಸತ್ಸಂಗತಿಗಳ ಪರಮಫಲವಾಗಿ ಕಾಣಲ್ಪಡುತ್ತದೆ.

ಸ್ವರ್ಗವನ್ನು ಆಧ್ಯಾತ್ಮಿಕ-ಅಂತರ್ಮುಖ ಮತ್ತು ಸಾಹಿತ್ಯಿಕ-ಕಾವ್ಯಾತ್ಮಕ ಹಾಗೂ ತತ್ವಚಿಂತನಾ-ಭಾವನಾತ್ಮಕ ಶೈಲಿಯಲ್ಲಿ ಕ್ರಮವಾಗಿ; ಪರಮಧಾಮ, ದಿವ್ಯಾನಂದ ಲೋಕ, ದೇವರಾಜ್ಯ, ಪರಮೇಶ್ವರನ ರಾಜ್ಯ, ದೈವಿಕ ಲೋಕಮಂಡಲ, ಶಾಶ್ವತ ಪರಲೋಕ, ಪರಮ ದಿವ್ಯಾಕಾಶ, ಪುಣ್ಯಾತ್ಮರ ಪರಮಾನಂದ ಲೋಕ, ದೈವ ವಾಗ್ದಾನದ ಪವಿತ್ರ ಭೂಮಿ ಮತ್ತು ನಭಮಂಡಲದ ಅನಂತ ವಿಸ್ತಾರ, ನಭೋಗುಂಬಜ, ತಾರಾಗಣದ ದಿವ್ಯಗೋಳ, ಅತೀತ ಅನಂತ ಲೋಕ, ಊರ್ಧ್ವ ದಿವ್ಯಭೂಮಿ ಹಾಗೂ ಪರಮಾನಂದ ಸ್ಥಿತಿ, ಆತ್ಮಾನಂದ ಸ್ಥಿತಿ, ಆದರ್ಶ ಸಮನ್ವಿತ ಲೋಕ, ಆದಿಮ ನಿರ್ಮಲ ತೋಟ, ಮೋಕ್ಷಾನಂದ ಸ್ಥಿತಿ, ಅತಿಪರಮಾನಂದದ ಪರಾಕಾಷ್ಠೆ ಎಂದು ಹೆಸರಿಸಿದ್ದಾರೆ. ಹೀಗಾಗಿ ಸ್ವರ್ಗಕ್ಕೆ ವಿವಿಧ ಬಗೆಯ ನಾಮಗಳು!

ಸ್ವರ್ಗ ಎಂಬ ಪರಿಕಲ್ಪನೆ ತತ್ವಶಾಸ್ತ್ರದಲ್ಲಿ ಮಾನವನ ನೈತಿಕ ಜೀವನ, ಧರ್ಮಾಚರಣೆ ಮತ್ತು ಸತ್ಸಂಗತಿಗಳ ಪರಮಫಲವಾಗಿ ಕಾಣಲ್ಪಡುತ್ತದೆ. ಅದು ಶಾಶ್ವತ ಸಂತೋಷ, ದುಃಖರಹಿತ ಸ್ಥಿತಿ ಹಾಗೂ ಆತ್ಮತೃಪ್ತಿಯ ಸಂಕೇತವಾಗಿದೆ. ಮಾನವನ ಒಳಜಗತ್ತಿನಲ್ಲಿ ನಿರ್ಮಾಣವಾಗುವ ಶಾಂತಿ ಮತ್ತು ಪರಿಪೂರ್ಣತೆಯ ಅನುಭವವೇ ಸ್ವರ್ಗವೆಂದು ತತ್ವಚಿಂತಕರು ವಿವರಿಸುತ್ತಾರೆ. ತತ್ವಮಿಮಾಂಸೆಯಲ್ಲಿ ಸ್ವರ್ಗವು ಆತ್ಮವು ಪರಮಸತ್ಯದೊಂದಿಗೆ ಏಕೀಭವಿಸುವ (Superposition, Coherence, or Unification) ದೇಹಾತೀತ ಅನುಭವ, ಅದನ್ನು, ಕಾಲ ಮತ್ತು ಸ್ಥಳದ (Space and Time) ಮಿತಿಗಳನ್ನು ಮೀರುವ ಸ್ಥಿತಿ ಎಂದು ವರ್ಣಿಸಲಾಗುತ್ತದೆ. ಹೀಗಾಗಿ, ಸ್ವರ್ಗವು ಕೇವಲ ಯಾವುದೋ ದೂರದ ಲೋಕವಲ್ಲ; ಅದು ಆತ್ಮೋನ್ನತಿಯ ಉನ್ನತ ಆಯಾಮ, ಚೇತನದ ಪರಿಪಾಕ ಮತ್ತು ಅಂತರಂಗದ ದಿವ್ಯ ಜ್ಯೋತಿಯ ರೂಪಕವಾಗಿದೆ. ಹೀಗೆ ಸ್ವರ್ಗ ಎಂಬ ಕಲ್ಪನೆಯನ್ನು ಹಲವಾರು ಆಯಾಮಗಳಲ್ಲಿ ವಿವರಿಸಿರುವುದನ್ನು ಕೇಳಿದ್ದೇವೆ. ತೀರ ಇತ್ತೀಚೆಗೆ ಸ್ವರ್ಗದ ಬಗ್ಗೆ ಒಂದು ಲೇಖನ ಪ್ರಕಟಗೊಂಡಿದೆ, ಅದರ ತಾತ್ಪರ್ಯವನ್ನು ಇಲ್ಲಿ ವಿವರಿಸಲಾಗಿದೆ.

ವೈಜ್ಞಾನಿಕ ಕ್ಷೇತ್ರದಲ್ಲಿ, Cosmic Horizon, ಎಂದರೆ ನಾವು ಇಂದಿನ ಕಾಲದಲ್ಲಿ ವೀಕ್ಷಿಸಬಹುದಾದ ಬ್ರಹ್ಮಾಂಡದ ಅತಿ ದೂರದ ಮಿತಿ. ಬೆಳಕು, ಒಂದು ನಿಗದಿತ ವೇಗದಲ್ಲಿ ಸಂಚರಿಸುವುದರಿಂದ, ಬ್ರಹ್ಮಾಂಡ ಹುಟ್ಟಿದ ಕಾಲದಿಂದ ಇಂದಿನವರೆಗೆ ಬೆಳಕು ನಮಗೆ ತಲುಪಿದ ಅತಿ ದೂರದ ಪ್ರದೇಶವೇ ಈ ಗಡಿ. ಬ್ರಹ್ಮಾಂಡವು ಸುಮಾರು 13.8 ಬಿಲಿಯನ್ ವರ್ಷಗಳ (ವಿಶ್ವಚಕ್ರದ ಮಹತ್ವವನ್ನು ಸೂಚಿಸುವ ಅತಿವಿಶಾಲ ಕಾಲಮಾನ) ಹಿಂದೆ ಉಂಟಾಯಿತು ಎಂಬುದನ್ನು ಮಹಾ ವಿಶ್ವಸ್ಫೋಟ (Big Bang) ಸಿದ್ಧಾಂತ ಹೇಳುತ್ತದೆ. ಆದ್ದರಿಂದ, ಆ ಆರಂಭದ ಕಾಲದಿಂದ ಇಂದಿನವರೆಗೆ ಬೆಳಕು ತಲುಪಿರುವ ವ್ಯಾಪ್ತಿಯ ಮಿತಿಯೇ Cosmic Horizon. ಇದಕ್ಕಿಂತ ಹೊರಗಿನ ಭಾಗಗಳು ಅಸ್ತಿತ್ವದಲ್ಲಿದ್ದರೂ, ಅವುಗಳಿಂದ ಬೆಳಕು ಇನ್ನೂ ನಮಗೆ ತಲುಪಿಲ್ಲ. ಆದ್ದರಿಂದ ಅವುಗಳನ್ನು ನಾವು ನೇರವಾಗಿ ವೀಕ್ಷಿಸಲು ಸಾಧ್ಯವಿಲ್ಲ. ಸರಳವಾಗಿ ಹೇಳುವುದಾದರೆ, ನಾವು ನೋಡಬಹುದಾದ ಬ್ರಹ್ಮಾಂಡದ ಕೊನೆಯ ಗಡಿಯೇ Cosmic Horizon.

2026ರ ಜನವರಿಯಲ್ಲಿ Fox News ನಲ್ಲಿ ಪ್ರಕಟವಾದ ಲೇಖನದಲ್ಲಿ, ಹಾರ್ವರ್ಡ್ ವಿಶ್ವವಿದ್ಯಾಲಯದ ಮಾಜಿ ಭೌತಶಾಸ್ತ್ರ ಉಪನ್ಯಾಸಕ ಮತ್ತು ವಿಜ್ಞಾನ ಸಂವಹಕರಾದ Michael Guillén ಅವರು ಚರ್ಚೆಗೆ ಕಾರಣವಾದ “ಸ್ವರ್ಗಕ್ಕೆ ಭೌತಿಕ ವಿಳಾಸ ಇರಬಹುದು”ಎಂಬ ಒಂದು ಹೇಳಿಕೆಯನ್ನು ನೀಡಿದ್ದಾರೆ. ಅವರು, ಆಧುನಿಕ ಬ್ರಹ್ಮಾಂಡ ಶಾಸ್ತ್ರದ(Cosmology) ಕೆಲವು ಮೂಲಭೂತ ಸಿದ್ಧಾಂತಗಳನ್ನು ಬಳಸಿಕೊಂಡು, ದೂರದಲ್ಲಿರುವ ಆಕಾಶಗಂಗೆಗಳು (Galaxies) ನಮ್ಮಿಂದ ವೇಗವಾಗಿ ದೂರವಾಗುತ್ತಿವೆ (Hubble’s Law), ಅಂದರೆ, ಬ್ರಹ್ಮಾಂಡ ವಿಸ್ತರಿಸುತ್ತಿದೆ ಎಂದು, ನಾವು ನೋಡಬಹುದಾದ ಬ್ರಹ್ಮಾಂಡಕ್ಕೆ (Cosmic Horizon) ಒಂದು ಮಿತಿ ಇರಬಹುದೇ? ಮತ್ತು ಅದಕ್ಕಿಂತ ದೂರದ ಬೆಳಕು ಇನ್ನೂ ನಮ್ಮವರೆಗೆ ಬಂದಿಲ್ಲ ಎಂಬ ವಿಚಾರಗಳನ್ನು ಆಧರಿಸಿ, ಹೇಳಿದ್ದಾರೆ. ನಾವು ನೋಡಬಹುದಾದ ಬ್ರಹ್ಮಾಂಡದ ಅಂಚಿನಾಚೆಗಿಂತ ಸುಮಾರು 273 ಬಿಲಿಯನ್ ಟ್ರಿಲಿಯನ್ ಮೈಲುಗಳ ದೂರದಲ್ಲಿ ಧಾರ್ಮಿಕ ಪರಂಪರೆಗಳಲ್ಲಿ “ಸ್ವರ್ಗ”ಎಂದು ಕರೆಯುವ ಸ್ಥಳ ಇರಬಹುದೆಂದು ಆಧುನಿಕ ವಿಜ್ಞಾನವನ್ನು ಬೈಬಲ್ ಕಲ್ಪನೆಗಳೊಂದಿಗೆ ಜೋಡಿಸಲು ಪ್ರಯತ್ನಿಸಿದ್ದಾರೆ.

ವಿಜ್ಞಾನಿಗಳ ಪ್ರತಿಕ್ರಿಯೆ

Guillén ಅವರ ಹೇಳಿಕೆಗೆ ತಕ್ಷಣವೇ ಹಲವಾರು ಖಗೋಳ ಶಾಸ್ತ್ರಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ: ಖಗೋಳ ಶಾಸ್ತ್ರದ ಉಪನ್ಯಾಸಕ Alex Gianninas ಅವರು Cosmic horizon ಅಂದ್ರೆ ಅದು ಯಾವ ಭೌತಿಕ ಗೋಡೆಯೂ ಅಲ್ಲ. ಅದು ಕೇವಲ ನಾವು ನೋಡಲಾಗದ ಮಿತಿ ಮಾತ್ರ. ಬ್ರಹ್ಮಾಂಡವು ಸುಮಾರು 13.8 ಬಿಲಿಯನ್ ವರ್ಷ ಹಳೆಯದು. ಬೆಳಕು ಒಂದು ಸೆಕೆಂಡಿಗೆ ಸುಮಾರು 3 ಲಕ್ಷ ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತದೆ. ಹೀಗಾಗಿ, ಕೆಲವು ದೂರದ ಪ್ರದೇಶಗಳ ಬೆಳಕು ಇನ್ನೂ ನಮಗೆ ತಲುಪಿಲ್ಲ. ಆದುದರಿಂದಲೇ ನಾವು ಅವುಗಳನ್ನು ನೋಡಲು ಸಾಧ್ಯವಿಲ್ಲ. ಅಂದರೆ, ಬ್ರಹ್ಮಾಂಡ ಅಲ್ಲಿಗೆ ಮುಗಿದಿದೆ ಎಂದರ್ಥವಲ್ಲ ಮತ್ತು ಅಲ್ಲಿ ದೇವರ ಲೋಕ ಪ್ರಾರಂಭವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದಿದ್ದಾರೆ. Cosmic horizon ನಂತರವೂ ಬ್ರಹ್ಮಾಂಡ ಮುಂದುವರಿಯುತ್ತದೆ. ಅಲ್ಲಿಯೂ ಸಹ ನಕ್ಷತ್ರಗಳು, ಗ್ರಹಗಳು ಇರಬಹುದು ಎಂದು Gianninas ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ರಹ್ಮಾಂಡೀಯ ವೇಗವರ್ಧಿತ ವಿಸ್ತರಣೆ (Cosmic Inflation)

ಬ್ರಹ್ಮಾಂಡ ಹುಟ್ಟಿದ ಕ್ಷಣದ ನಂತರ ಒಂದು ಕ್ಷುಲ್ಲಕ ಸಮಯದಲ್ಲಿ (Big Bang ನಂತರ), Cosmic Inflation ಎಂಬ ವೇಗದ ವಿಸ್ತರಣೆ ನಡೆದಿದೆ. ಆ ಸಮಯದಲ್ಲಿ: ಅಂತರಿಕ್ಷವು ಬೆಳಕಿನ ವೇಗಕ್ಕಿಂತಲೂ ವೇಗವಾಗಿ ವಿಸ್ತರಿಸಿತು, ಕೆಲವು ಭಾಗಗಳು ಎಂದಿಗೂ ಪರಸ್ಪರ ಸಂಪರ್ಕದಲ್ಲಿರಲಾರದಷ್ಟು ದೂರ ಸರಿದವು. ಇದರಿಂದ ಬ್ರಹ್ಮಾಂಡದ ದೊಡ್ಡ ಮಟ್ಟದ ರಚನೆ ನಿರ್ಧಾರವಾಗಿದೆ ಎಂಬುದು ಸದ್ಯದ ವೈಜ್ಞಾನಿಕ ಕ್ಷೇತ್ರದಲ್ಲಿನ ಒಪ್ಪಿತ ವಾದ.

ಬಹುಆಯಾಮಿಕ ಕಲ್ಪನೆ (Hyper-dimensional)

Nevada ವಿಶ್ವವಿದ್ಯಾಲಯದ ಭೌತಶಾಸ್ತ್ರಜ್ಞ Michael Pravica ಅವರು ಸ್ವರ್ಗದ ವಿಚಾರವನ್ನು ಬೇರೆ ರೀತಿಯಲ್ಲಿ ನೋಡುತ್ತಾರೆ. ಅವರ ಪ್ರಕಾರ; ಸ್ವರ್ಗವನ್ನು ಬ್ರಹ್ಮಾಂಡದ ಹೊರಗೆ ಇರುವ ಸ್ಥಳ ಎಂದು ಕಲ್ಪಿಸುವುದು ಸರಿಯಾದ ರೀತಿಯಲ್ಲ. ಬದಲಿಗೆ, ನಮಗೆ ಗೊತ್ತಿರುವ 3 ಆಯಾಮಗಳ (Length, Width, Height) ಹೊರತಾಗಿ ಇನ್ನಷ್ಟು ಆಯಾಮಗಳು ಇದ್ದರೆ?, ಸ್ವರ್ಗವು ಆ “ಹೆಚ್ಚುವರಿ ಆಯಾಮ”ಗಳಲ್ಲಿ ಇರಬಹುದೇ ಎಂಬ ಪ್ರಶ್ನೆಯೊಂದಿಗೆ ಇದನ್ನು ಅವರು ಅತಿಆಯಾಮಿಕ (Multidimensional) ಅಥವಾ ಸಂಕ್ರಮಣ (Liminal) ಎಂದು ವಿವರಿಸುತ್ತಾರೆ. ಇದು ವೈಜ್ಞಾನಿಕವಾಗಿ ಪರೀಕ್ಷಿಸಬಹುದಾದ ಮಾತಲ್ಲ. ಇದು ತತ್ವಮಿಮಾಂಸೆ (Metaphysics) ಕ್ಷೇತ್ರಕ್ಕೆ ಸೇರಿದೆ ಎಂಬುದನ್ನು ಅವರು ಸ್ಪಷ್ಟಪಡಿಸುತ್ತಾರೆ.

ವಿಜ್ಞಾನ ಮತ್ತು ತತ್ವಮಿಮಾಂಸೆ (Science and Metaphysics) ಚಿಂತನೆಯ ನಡುವಿನ ಗಡಿ Pravica ಅವರು ನಾವು ನಮ್ಮ “spacetime bubble” ಒಳಗೆ ಇದ್ದೇವೆ, ಅದರ ಹೊರಗಿನ ಶಕ್ತಿಯನ್ನು ಈಗಿನ ವಿಜ್ಞಾನದಿಂದ ಅಳೆಯಲು ಸಾಧ್ಯವಿಲ್ಲ, ಸ್ವರ್ಗ ಇದ್ದರೂ ಅದು ಸಾಮಾನ್ಯ ದ್ರವ್ಯ ಅಥವಾ ಶಕ್ತಿಯ ನಿಯಮಗಳಿಗೆ ಒಳಪಡುವುದಿಲ್ಲ ಎಂದಿದ್ದಾರೆ. Guillén ಅವರ ರ್ಚಾತ್ಮಕ ಹೇಳಿಕೆಗೆ ವಿರುದ್ಧವಾಗಿ Gianninas ಅವರು ವಿಜ್ಞಾನದಲ್ಲಿ ಯಾವುದೇ ಹೇಳಿಕೆ ಮಾಡಲು, ಅದು ಪರಿಶೀಲಿಸಬಹುದಾದ ಪ್ರಮಾಣ ಮತ್ತು ಸಾಕ್ಷ್ಯ ಹೊಂದಿರಬೇಕು, ಇಲ್ಲದಿದ್ದರೆ ಅದು ವಿಜ್ಞಾನ ಚರ್ಚೆಯ ಭಾಗವಾಗಲಾರದು ಎಂದು ತಿಳಿಸಿ, “Extraordinary claims require extraordinary proof” ಎಂಬ ನಿಯಮವನ್ನು ಒತ್ತಿ ಹೇಳಿದ್ದಾರೆ.

ವಿಜ್ಞಾನದಲ್ಲಿ ಕಲ್ಪನೆಗಳ ಪಾತ್ರ

ನ್ಯೂಟನ್ ಅವರು ಗುರುತ್ವಾಕರ್ಷಣವನ್ನು ಪ್ರಸ್ತಾಪಿಸಿದಾಗ ಅದು ಕಾಣದ ಶಕ್ತಿಯ ಕಲ್ಪನೆಯಾಗಿತ್ತು, ಅತಿ ಸೂಕ್ಷ್ಮತಂತುಗಳ ಸಿದ್ದಾಂತ (String Theory) ಕೂಡ ಹೆಚ್ಚುವರಿ ಆಯಾಮಗಳನ್ನು ಊಹಿಸುತ್ತದೆ. ಆದರೆ, ಅವುಗಳನ್ನು ಇನ್ನೂ ಸಾಬೀತುಪಡಿಸಲಾಗಿಲ್ಲ. ಹಾಗೂ, ಅಣುಮಟ್ಟದ ಅತಿಸೂಕ್ಷ್ಮ ಸಂ/ಬಂಧಗಳು (Quantum entanglement) ಕೂಡ ಒಂದು ಕಾಲದಲ್ಲಿ ವಿಚಿತ್ರ ಕಲ್ಪನೆಯಂತೆ ಕಾಣುತ್ತಿತ್ತು ಎಂದು Pravica ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರು ಅತಿ ಆಯಾಮದ ಕಲ್ಪನೆ ಆರಂಭಿಕ ಹಂತವಾಗಿ ಯಾಕೆ ಅಸ್ವೀಕಾರಾರ್ಹ?” ಎಂದು ಪ್ರಶ್ನಿಸುತ್ತಾ, ಇದು ಈಗಿನ ಸ್ಥಿತಿಯಲ್ಲಿ ವೈಜ್ಞಾನಿಕ ಸತ್ಯವಲ್ಲ, ಬದಲಾಗಿ ಇದು ಪ್ರೇರಣೆಯ ಕಲ್ಪನೆ ಮಾತ್ರ ಎಂಬುದನ್ನು ಒಪ್ಪುವುದಾಗಿ ತಿಳಿಸಿದ್ದಾರೆ.

ವೈವಿದ್ಯಮಯ ದೃಷ್ಟಿಕೋನಗಳು

Guillén ಅವರು, ಸ್ವರ್ಗವನ್ನು ಬ್ರಹ್ಮಾಂಡದ ಅಂಚಿನಾಚೆ ಇರಬಹುದಾದ ಭೌತಿಕ ಸ್ಥಳವೆಂದು ಕಲ್ಪಿಸುತ್ತಾರೆ. ಅದು ವಿಜ್ಞಾನದ ವ್ಯಾಪ್ತಿಗೆ ಸೇರದ ಮಾತು, ಮತ್ತು ಅದಕ್ಕೆ ಸಾಕ್ಷ್ಯವಿಲ್ಲ ಎಂದು Gianninas ತಿರಸ್ಕರಿಸುತ್ತಾರೆ. Pravica ಅವರು ಸ್ವರ್ಗವನ್ನು ಬಹುಆಯಾಮಿಕ ವಾಸ್ತವವಾಗಿರಬಹುದು ಎಂದು ಹೇಳುತ್ತಾರೆ. ಆದರೆ, ಅದು ತತ್ವಮಿಮಾಂಸಾತ್ಮಕ ಚಿಂತನೆ (Metaphysical thought) ಮಾತ್ರ ಎಂದು ಸ್ಪಷ್ಟಪಡಿಸುತ್ತಾರೆ.

ಸರಳವಾಗಿ ಹೇಳುವುದಾದರೆ:

ವಿಜ್ಞಾನವು “ನಾವು ನೋಡಬಹುದಾದ, ಅಳೆಯಬಹುದಾದ ಮತ್ತು ಪರಿಶೀಲಿಸಬಹುದಾದ” ವಿಷಯಗಳ ಬಗ್ಗೆ ಮಾತನಾಡುತ್ತದೆ. ಸ್ವರ್ಗದ ಕಲ್ಪನೆ ಈ ಮಟ್ಟದಲ್ಲಿ ಪರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಅದು ವಿಜ್ಞಾನಕ್ಕಿಂತ ಹೆಚ್ಚು ತತ್ವಶಾಸ್ತ್ರ (philosophy) ಮತ್ತು ಭೌತಿಕ ಜಗತ್ತಿನಾಚೆಯ ಅಸ್ತಿತ್ವ (metaphysics) ಕ್ಷೇತ್ರಕ್ಕೆ ಸೇರಿದೆ. ಆದರೆ, ಈ ಚರ್ಚೆ ಒಂದು ಮಹತ್ವದ ಪ್ರಶ್ನೆಯನ್ನು ಹುಟ್ಟುಹಾಕಿದೆ: ವಿಜ್ಞಾನವು “ಹೇಗೆ?” ಎಂಬ ಪ್ರಶ್ನೆಗೆ ಉತ್ತರ ನೀಡುತ್ತದೆ.

ಆದರೆ “ಏಕೆ?” ಎಂಬ ಪ್ರಶ್ನೆಗೆ ಯಾರು ಉತ್ತರ ಕೊಡುತ್ತಾರೆ?

ಇದನ್ನೇ ಈ ಲೇಖನ ಒತ್ತಿ ಹೇಳುತ್ತದೆ!

ವಿಜ್ಞಾನ ಮತ್ತು ನಂಬಿಕೆ ನಡುವಿನ ಸಂವಾದ ಇನ್ನೂ ಮುಂದುವರಿಯುತ್ತಿದೆ...

ಪ್ರೊ. ಸತೀಶ್. ಎಲ್.ಎ

ಭೌತಶಾಸ್ತ್ರ ಪ್ರಾಧ್ಯಾಪಕರು

lasgayit@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಹ್ರೇನ್ ರಾಜ, ಸೌದಿ ಕ್ರೌನ್ ಪ್ರಿನ್ಸ್ ಜತೆ ಪ್ರಧಾನಿ ಮೋದಿ ಮಾತುಕತೆ; ಇರಾನ್ ದಾಳಿ ಖಂಡಿಸಿದ ಭಾರತ

ಈ ಮತಾಂಧರರ ನಿಯತ್ತು ಯಾರಿಗೆ... ಇಂತಹವರನ್ನು ಇರಾನ್ ಗೆ ಓಡಿಸಿ: ಪ್ರಧಾನಿ ಮೋದಿಗೆ Telugu ಆಂಕರ್ ರಶ್ಮಿ ಗೌತಮ್ ಒತ್ತಾಯ!

ಇರಾನ್ 'ಮಹಾ' ಎಡವಟ್ಟು: ಸುಮ್ಮನಿದ್ದ ದೇಶ ಇದೀಗ ಯುದ್ಧಕ್ಕೆ ಎಂಟ್ರಿ; ಇಸ್ರೇಲ್-ಅಮೆರಿಕಕ್ಕೆ ಫೈಟರ್ ಜೆಟ್ ರವಾನೆ!

ಅಮೆರಿಕದ ಮೂರು F-15 ಫೈಟರ್ ಜೆಟ್‌ಗಳನ್ನು ಕುವೈತ್ ಆಕಸ್ಮಿಕವಾಗಿ ಹೊಡೆದುರುಳಿಸಿದೆ: ಅಮೆರಿಕ ಸೇನೆ

News wrap 02-03-2026| ಮಧ್ಯಪ್ರಾಚ್ಯದಲ್ಲಿ ಯುದ್ಧ: ಕನ್ನಡಿಗರ ರಕ್ಷಣೆಗೆ ಆಗ್ರಹಿಸಿ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ, ಸಹಾಯವಾಣಿ ಆರಂಭ; ಕೊಡಗು: ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಸಾವು; 'ಶ್ರೀಮಂತರು ಗ್ಯಾರಂಟಿ ಯೋಜನೆ ಬಿಡಲಿ'-MBP

SCROLL FOR NEXT