ನರಸಂಬಂಧಿ ಸಮಸ್ಯೆ jcomp/pexels.com
ಅಂಕಣಗಳು

ಬಿಗಿಯಾದ ಪ್ಯಾಂಟ್, ಬೆಲ್ಟ್, ಒಳಉಡುಪು ಧರಿಸುವುದರಿಂದ ನರಸಂಬಂಧಿ ಸಮಸ್ಯೆ ಉಂಟಾಗುತ್ತದೆಯೇ?

ಮೆರಾಲ್ಜಿಯಾ ಪ್ಯಾರೆಸ್ಥೆಟಿಕಾ ಎಂಬುದು ತೊಡೆಯ ಹೊರಭಾಗದಲ್ಲಿ ನೋವು, ಉರಿ, ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆಯನ್ನು ಉಂಟುಮಾಡುವ ನರಸಂಬಂಧಿ ಸಮಸ್ಯೆಯಾಗಿದೆ.

ಮೆರಾಲ್ಜಿಯಾ ಪ್ಯಾರೆಸ್ಥೆಟಿಕಾ ಎಂಬುದು ತೊಡೆಯ ಹೊರಭಾಗದಲ್ಲಿ ನೋವು, ಉರಿ, ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆಯನ್ನು ಉಂಟುಮಾಡುವ ನರಸಂಬಂಧಿ ಸಮಸ್ಯೆಯಾಗಿದೆ. ತೊಡೆಯ ಚರ್ಮಕ್ಕೆ ಸಂವೇದನೆ ನೀಡುವ ಲ್ಯಾಟರಲ್ ಫಿಮೋರಲ್ ಕ್ಯೂಟೇನಿಯಸ್ ನರದ ಮೇಲೆ ಒತ್ತಡ ಉಂಟಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸೊಂಟದ ಮುಂಭಾಗದಲ್ಲಿ, ತೊಡೆಸಂದು ಸಮೀಪದಲ್ಲಿ ಈ ನರವು ಹಾದುಹೋಗುತ್ತದೆ. ಈ ಭಾಗದಲ್ಲಿ ನರದ ಮೇಲೆ ಒತ್ತಡ ಹೆಚ್ಚಾದಾಗ ಮೆರಾಲ್ಜಿಯಾ ಪ್ಯಾರೆಸ್ಥೆಟಿಕಾ ಸಮಸ್ಯೆ ಉಂಟಾಗಬಹುದು.

ಮೆರಾಲ್ಜಿಯಾ ಪ್ಯಾರೆಸ್ಥೆಟಿಕಾ ಸಮಸ್ಯೆಗೆ ಕಾರಣಗಳು

ಬಿಗಿಯಾದ ಪ್ಯಾಂಟ್, ಬೆಲ್ಟ್ ಅಥವಾ ಒಳಉಡುಪುಗಳನ್ನು ಧರಿಸುವುದು ಈ ಸಮಸ್ಯೆ ಉಂಟಾಗಲು ಪ್ರಮುಖ ಕಾರಣಗಳಲ್ಲೊಂದು. ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಾಗಿರುವುದು ಮತ್ತು ಅಧಿಕ ದೇಹತೂಕವೂ ನರದ ಮೇಲೆ ಒತ್ತಡವನ್ನು ಹೆಚ್ಚಿಸಬಹುದು. ಗರ್ಭಾವಸ್ಥೆಯಲ್ಲಿ ಹೊಟ್ಟೆಯ ಗಾತ್ರ ಹೆಚ್ಚಾಗುವುದರಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ದೀರ್ಘಕಾಲ ನಿಲ್ಲುವುದು, ಹೆಚ್ಚು ನಡೆಯುವುದು ಅಥವಾ ಸೊಂಟವನ್ನು ಪದೇಪದೇ ಮೈಯ್ಯನ್ನು ಬಾಗಿಸುವ ಚಟುವಟಿಕೆಗಳು ಕೆಲವರಲ್ಲಿ ಲಕ್ಷಣಗಳನ್ನು ಹೆಚ್ಚಿಸಬಹುದು. ಮಧುಮೇಹ ಇರುವವರಲ್ಲಿ ನರಗಳಿಗೆ ಹಾನಿಯಾಗುವ ಅಪಾಯ ಹೆಚ್ಚಿರುವುದರಿಂದ ಈ ಸಮಸ್ಯೆಯ ಸಾಧ್ಯತೆಯೂ ಹೆಚ್ಚಿರಬಹುದು. ಸೊಂಟದ ಭಾಗದಲ್ಲಿ ಶಸ್ತ್ರಚಿಕಿತ್ಸೆ, ಗಾಯ ಅಥವಾ ಅಪಘಾತವಾದ ನಂತರವೂ ಇದು ಕಾಣಿಸಿಕೊಳ್ಳಬಹುದು.

ಈ ಸಮಸ್ಯೆ ಯಾವುದೇ ವಯಸ್ಸಿನವರಿಗೂ ಬರಬಹುದು. ಆದರೆ ಮಧ್ಯವಯಸ್ಕರು, ಅಧಿಕ ತೂಕ ಹೊಂದಿರುವವರು, ಗರ್ಭಿಣಿಯರು, ಮಧುಮೇಹಿಗಳು ಮತ್ತು ಸೊಂಟದ ಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ಹೆಚ್ಚಿನ ಅಪಾಯಕ್ಕೆ ಒಳಗಾಗಬಹುದು. ಕೆಲವೊಮ್ಮೆ ಯಾವುದೇ ಸ್ಪಷ್ಟ ಕಾರಣವಿಲ್ಲದೆಯೂ ಈ ಸಮಸ್ಯೆ ಉಂಟಾಗಬಹುದು.

ಮೆರಾಲ್ಜಿಯಾ ಪ್ಯಾರೆಸ್ಥೆಟಿಕಾ ಸಮಸ್ಯೆಯ ಲಕ್ಷಣಗಳು

ಮೆರಾಲ್ಜಿಯಾ ಪ್ಯಾರೆಸ್ಥೆಟಿಕಾದ ಪ್ರಮುಖ ಲಕ್ಷಣವೆಂದರೆ ತೊಡೆಯ ಮುಂಭಾಗದ ಹೊರಭಾಗದಲ್ಲಿ ಉರಿ ಅಥವಾ ನೋವು ಕಾಣಿಸಿಕೊಳ್ಳುವುದು. ಚರ್ಮದ ಮೇಲೆ ಇರುವೆಗಳು ಹರಿದಾಡಿದಂತೆ ಜುಮ್ಮೆನಿಸುವಿಕೆ, ಒಂದು ಭಾಗ ಮರಗಟ್ಟಿದ ಅನುಭವ, ಚರ್ಮವನ್ನು ಮುಟ್ಟಿದಾಗ ಅತಿಯಾದ ಸಂವೇದನೆ ಮತ್ತು ಬಿಸಿ ದ್ರವ ಸುರಿದಂತೆ ಅನುಭವವಾಗುವುದು ಸಾಮಾನ್ಯ ಲಕ್ಷಣಗಳಾಗಿವೆ. ಕೆಲವರಿಗೆ ದೀರ್ಘಕಾಲ ನಿಂತಾಗ ಅಥವಾ ನಡೆದಾಗ ನೋವು ಹೆಚ್ಚಾಗಬಹುದು. ಸಾಮಾನ್ಯವಾಗಿ ಒಂದು ತೊಡೆಯಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಪರೂಪವಾಗಿ ಎರಡೂ ತೊಡೆಗಳ ಮೇಲೂ ಪರಿಣಾಮ ಬೀರಬಹುದು. ಕಾಲಿನಲ್ಲಿ ಸ್ನಾಯುಗಳ ದೌರ್ಬಲ್ಯ ಕಂಡುಬಂದರೆ ಅಥವಾ ನಡೆಯಲು ತೊಂದರೆಯಾದರೆ ಬೇರೆ ನರಸಂಬಂಧಿ ಸಮಸ್ಯೆಗಳ ಸಾಧ್ಯತೆಯನ್ನೂ ಪರಿಶೀಲಿಸಬೇಕು.

ಈ ರೋಗದ ನಿರ್ಣಯಕ್ಕಾಗಿ ವೈದ್ಯರು ರೋಗಿಯ ಲಕ್ಷಣಗಳು, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುತ್ತಾರೆ. ಅಗತ್ಯವಿದ್ದರೆ ನರಗಳ ಕಾರ್ಯಕ್ಷಮತೆಯನ್ನು ತಿಳಿಯಲು ಹೆಚ್ಚುವರಿ ಪರೀಕ್ಷೆಗಳನ್ನು ಸೂಚಿಸಬಹುದು. ಈ ಸಮಸ್ಯೆಯ ಲಕ್ಷಣಗಳು ಕೆಲವೊಮ್ಮೆ ಸೊಂಟದ ನರದ ಒತ್ತಡ ಅಥವಾ ಬೆನ್ನುಮೂಳೆಯ ಸಮಸ್ಯೆಗಳನ್ನು ಹೋಲಬಹುದು. ಆದ್ದರಿಂದ ಸ್ವಯಂ ನಿರ್ಧಾರಕ್ಕೆ ಬರುವ ಬದಲು ತಜ್ಞರ ಸಲಹೆ ಪಡೆಯುವುದು ಸೂಕ್ತ. ನೋವು ಕಡಿಮೆಯಾಗುವವರೆಗೆ ನೋವನ್ನು ಹೆಚ್ಚಿಸುವ ಚಟುವಟಿಕೆಗಳನ್ನು ಮಿತಿಗೊಳಿಸಿ ವೈದ್ಯರ ಸೂಚನೆಗಳನ್ನು ಪಾಲಿಸುವುದು ಚೇತರಿಕೆಗೆ ನೆರವಾಗುತ್ತದೆ.

ಮೆರಾಲ್ಜಿಯಾ ಪ್ಯಾರೆಸ್ಥೆಟಿಕಾ ಸಮಸ್ಯೆಗೆ ಪರಿಹಾರ

ಈ ಸಮಸ್ಯೆಗೆ ಆರಂಭದಲ್ಲಿ ಜೀವನಶೈಲಿಯ ಬದಲಾವಣೆಗಳಿಂದಲೇ ಪರಿಹಾರ ದೊರೆಯಬಹುದು. ಸೊಂಟಕ್ಕೆ ಬಿಗಿಯಾಗಿರುವ ಬಟ್ಟೆ ಮತ್ತು ಬೆಲ್ಟ್ಗಳನ್ನು ಧರಿಸುವುದನ್ನು ಬಿಡಬೇಕು. ಸಡಿಲವಾದ ಹಾಗೂ ಆರಾಮದಾಯಕ ಹಗುರವಾದ ಉಡುಪುಗಳನ್ನು ಧರಿಸಬೇಕು. ಅಧಿಕ ತೂಕವಿದ್ದರೆ ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಕ್ರಮೇಣ ತೂಕ ಇಳಿಸಿಕೊಳ್ಳುವುದು ಸಹಾಯಕವಾಗಬಹುದು. ಇದರಿಂದ ನರದ ಮೇಲಿನ ಒತ್ತಡ ಕಡಿಮೆಯಾಗುವ ಸಾಧ್ಯತೆಯಿದೆ. ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ನಿಂತಿರುವುದನ್ನು ಬಿಟ್ಟು ಆಗಾಗ ಭಂಗಿ ಬದಲಾಯಿಸುವುದು ಉತ್ತಮ.

ನೋವು ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ಅಗತ್ಯಕ್ಕೆ ಅನುಗುಣವಾಗಿ ನೋವು ನಿವಾರಕ ಔಷಧಗಳು ಅಥವಾ ನರಸಂಬಂಧಿ ನೋವನ್ನು ಕಡಿಮೆ ಮಾಡುವ ಔಷಧಗಳನ್ನು ಸೂಚಿಸಬಹುದು. ಕೆಲವು ಸಂದರ್ಭಗಳಲ್ಲಿ ಫಿಸಿಯೋಥೆರಪಿ ಕೂಡ ಸಹಾಯಕವಾಗಬಹುದು. ಇತರ ಚಿಕಿತ್ಸೆಗಳ ನಂತರವೂ ತೀವ್ರ ನೋವು ಮುಂದುವರಿದರೆ ನರದ ಸಮೀಪ ಔಷಧದ ಚುಚ್ಚುಮದ್ದನ್ನು ನೀಡಬಹುದು. ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ನರದ ಮೇಲಿನ ಒತ್ತಡವನ್ನು ನಿವಾರಿಸಲು ಶಸ್ತ್ರಚಿಕಿತ್ಸೆಯ ಅಗತ್ಯ ಬರಬಹುದು. ಬಹುತೇಕ ಜನರಿಗೆ ಈ ಸಮಸ್ಯೆ ನಿವಾರಿಸಲು ಶಸ್ತ್ರಚಿಕಿತ್ಸೆ ಬೇಕಾಗುವುದಿಲ್ಲ.

ದೇಹದ ತೂಕವನ್ನು ನಿಯಂತ್ರಣದಲ್ಲಿಡುವುದು, ಅತಿಯಾಗಿ ಬಿಗಿಯಾಗಿರುವ ಬಟ್ಟೆಗಳನ್ನು ಧರಿಸದೇ ಇರುವುದು, ಸೊಂಟದ ಮೇಲೆ ಅತಿಯಾದ ಒತ್ತಡ ಬೀಳದಂತೆ ನೋಡಿಕೊಳ್ಳುವುದು ಮತ್ತು ಮಧುಮೇಹವಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಈ ಸಮಸ್ಯೆಯ ಪರಿಹಾರಗಳಲ್ಲಿ ಮುಖ್ಯವಾದವು. ತೊಡೆಯ ಹೊರಭಾಗದಲ್ಲಿ ನಿರಂತರ ಉರಿ, ನೋವು ಅಥವಾ ಮರಗಟ್ಟುವಿಕೆ ಕಂಡುಬಂದರೆ ವೈದ್ಯಕೀಯ ಸಲಹೆ ಪಡೆಯಬೇಕು. ಕಾಲಿನಲ್ಲಿ ತೀವ್ರ ದೌರ್ಬಲ್ಯ ಕಾಣಿಸಿಕೊಂಡರೆ ಅಥವಾ ಮೂತ್ರ ವಿಸರ್ಜನೆಯ ನಿಯಂತ್ರಣ ತಪ್ಪಿದರೆ ತುರ್ತಾಗಿ ವೈದ್ಯಕೀಯ ನೆರವು ಪಡೆಯಬೇಕು. ಸರಿಯಾದ ಸಮಯದಲ್ಲಿ ಸಮಸ್ಯೆಯನ್ನು ಗುರುತಿಸಿ ಚಿಕಿತ್ಸೆ ಪಡೆಯುವುದರಿಂದ ಬಹುತೇಕ ಜನರಲ್ಲಿ ಉತ್ತಮ ಚೇತರಿಕೆ ಸಾಧ್ಯ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ISRO ಮುಡಿಗೆ ಮತ್ತೊಂದು ಗರಿ: GSLV-F18 ರಾಕೆಟ್ ಮೂಲಕ NVS-03 ಉಪಗ್ರಹ ಯಶಸ್ವಿ ಉಡಾವಣೆ..!

Hormuzನಲ್ಲಿ ತೈಲ ಟ್ಯಾಂಕರ್‌ ಮೇಲೆ limpet ಮೈನ್ ದಾಳಿ: ನಾವಿಕರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ, 27 ಮಂದಿ ಭಾರತೀಯರು ಪ್ರಾಣಾಪಾಯದಿಂದ ಪಾರು..!

ನಂದಿನಿ ಗ್ರಾಹಕರ ಜೇಬಿಗೆ ಕತ್ತರಿ; ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವನ್ನೂ ಪರಿಷ್ಕರಿಸಿದ ಕೆಎಂಎಫ್, ಪ್ರತಿ ಲೀಟರ್‌ಗೆ 14 ರೂ. ಹೆಚ್ಚಳ..!

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಹವಾಮಾನ ಇಲಾಖೆ 'Yellow alert' ನಡುವೆಯೂ ಟೇಕಾಫ್, ನಿರ್ಲಕ್ಷ್ಯಕ್ಕೆ ಆರು ಜೀವಗಳು ಬಲಿ..!

ಕಬ್ಬು ಬೆಳೆಗಾರರ ನೆರವಿಗೆ ಧಾವಿಸಿ, , ರೈತರ ಹೋರಾಟಕ್ಕೆ ಅಂತ್ಯ ಹಾಡಿ: ಪ್ರಧಾನಿ ಮೋದಿಗೆ CM ಡಿಕೆಶಿ ಮನವಿ