ನವದೆಹಲಿ: ಆಸ್ಟ್ಕೇಲಿಯಾ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ಮತ್ತು ಮುರಳಿ ವಿಜಯ್ ರನ್ನು ಕಿತ್ತುಹಾಕಿ ಉದಯೋನ್ಮುಖ ಆಟಗಾರ ಶುಭ್ ಮನ್ ಗಿಲ್ ಗೆ ಅವಕಾಶ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ.
ಇಂತಹುದೊಂದು ಒತ್ತಡಕ್ಕೆ ಕಾರಣವಾಗಿದ್ದು ರಣಜಿ ಕ್ರಿಕೆಟ್ ನಲ್ಲಿ ಗಿಲ್ ತೋರುತ್ತಿರುವ ಅದ್ಬುತ ಪ್ರದರ್ಶನ. ಹೌದು ತಮಿಳುನಾಡು ವಿರುದ್ದದ ಪಂದ್ಯದಲ್ಲಿ ಪಂಜಾಬ್ ಪರ ಆಡುತ್ತಿರುವ ಶುಭ್ ಮನ್ ಗಿಲ್ 199 ರನ್ ಗಳ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ತಮಿಳುನಾಡು ತಂಡ 215 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿತ್ತು. ಇದಕ್ಕೆ ಉತ್ತರವಾಗಿ ಆಡಿದ ಪಂಜಾಬ್ ತಂಡ 2ನೇ ದಿನದಾಟ ಮುಕ್ತಾಯದ ವೇಳೆಗೆ ಕೇವಲ 2 ವಿಕೆಟ್ ಕಳೆದುಕೊಂಡು 308 ರನ್ ಪೇರಿಸಿದೆ. ಈ ಮೊತ್ತದಲ್ಲಿ ಶುಭ್ ಮನ್ ಗಿಲ್ ಅವರೇ 199ರನ್ ಪೇರಿಸುವ ಮೂಲಕ ಟೀಂ ಇಂಡಿಯಾ ಬಾಗಿಲು ತಟ್ಟುತ್ತಿದ್ದಾರೆ.
ಇನ್ನು ಆಸ್ಚ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಓಪನರ್ ಗಳಾದ ಮುರಳಿ ವಿಜಯ್ ಮತ್ತು ಕೆಎಲ್ ರಾಹುಲ್ ವೈಫಲ್ಯ ಮುಂದುವರೆದಿರುವಂತೆಯೇ ಇತ್ತ ರಣಜಿಯಲ್ಲಿ ಉದಯೋನ್ಮುಖ ಆಟಗಾರರಾದ ಮಾಯಂಕ್ ಅಗರ್ವಾಲ್, ಶುಭ್ ಮನ್ ಗಿಲ್ ರಂತಹ ಆಟಗಾರರು ಮಿಂಚುತ್ತಿರುವುದು ರಾಷ್ಟ್ರೀಯ ತಂಡದ ಆಟಗಾರರ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics