ಕ್ರಿಕೆಟ್

ಅದ್ಭುತ ಬೌಲಿಂಗ್; 36 ವರ್ಷದ ಹಳೆಯ ದಾಖಲೆ ಪುಡಿ, ಒಂದೇ ಇನ್ನಿಂಗ್ಸ್ ನಲ್ಲಿ 3 ವಿಶ್ವ ದಾಖಲೆ ನಿರ್ಮಿಸಿದ ಕಿವೀಸ್ ಬೌಲರ್ ಎಜಾಜ್ ಪಟೇಲ್!

Srinivasamurthy VN

ಮುಂಬೈ: ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಎಲ್ಲ 10 ವಿಕೆಟ್ ಗಳನ್ನು ಪಡೆಯುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿರುವ ಕಿವೀಸ್ ಬೌಲರ್ ಎಜಾಜ್ ಪಟೇಲ್ ತಮ್ಮ ಒಂದೇ ಒಂದು ಅದ್ಭುತ ಇನ್ನಿಂಗ್ಸ್ ಮೂಲಕ ಸರಣಿ ದಾಖಲೆಗಳನ್ನು ನಿರ್ಮಾಣ ಮಾಡಿದ್ದಾರೆ.

ಹೌದು.. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವರ್ಸಸ್ ನ್ಯೂಜಿಲೆಂಡ್ ನಡುವಿನ 2ನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮಯಾಂಕ್ ಅಗರ್ವಾಲ್ ಅವರ ಅಮೋಘ ಶತಕ, ಅಕ್ಸರ್ ಪಟೇಲ್ ಸಮಯೋಚಿತ ಅರ್ಧಶತಗಳ ನೆರವಿನ ಹೊರತಾಗಿಯೂ 325 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಈ ಪತನದಲ್ಲಿ ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್ ರ ಅಬ್ಬರದ ಬೌಲಿಂಗ್ ಇತ್ತು. ಪಟೇಲ್ ಕೇವಲ 119 ರನ್ ನೀಡಿ ಭಾರತ ಎಲ್ಲ 10 ವಿಕೆಟ್ ಗಳನ್ನು ಕಬಳಿಸಿದರು. ಆ ಮೂಲಕ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಈ ಹಿಂದೆ ಇದೇ ರೀತಿಯ ಸಾಧನೆಯನ್ನು ಇಂಗ್ಲೆಂಡ್ ತಂಡದ ಬೌಲರ್ ಜಿಮ್ ಲೇಕರ್ (ಜೇಮ್ಸ್ ಚಾರ್ಲ್ಸ್ ಲೇಕರ್) ಮತ್ತು ಭಾರತದ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಮಾಡಿದ್ದರು. ಆ ಬಳಿಕ ಈ ಪಟ್ಟಿಗೆ ಸೇರಿದ ಮೂರನೇ ಬೌಲರ್ ಎಂಬ ಕೀರ್ತಿಗೆ ಎಜಾಜ್ ಪಟೇಲ್ ಭಾಜನರಾಗಿದ್ದಾರೆ. ಕುಂಬ್ಳೆ ದೆಹಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ 1999ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಆ ಬಳಿಕ ಬರೊಬ್ಬರಿ 22 ವರ್ಷಗಳ ಬಳಿಕ ನ್ಯೂಜಿಲೆಂಡ್ ಎಜಾಜ್ ಪಟೇಲ್ ಈ ಸಾಧನೆ ಮಾಡಿದ್ದಾರೆ.

3 ವಿಶ್ವ ದಾಖಲೆ ನಿರ್ಮಾಣ
ಇನ್ನು ಈ ಅಮೋಘ ದಾಖಲೆ ಮೂಲಕ ಎಜಾಜ್ ಪಟೇಲ್ 3 ವಿಶ್ವ ದಾಖಲೆ ನಿರ್ಮಾಣ ಮಾಡಿದ್ದಾರೆ.

ಭಾರತದಲ್ಲಿ ವಿದೇಶಿ ಸ್ಪಿನ್ನರ್ ನಿಂದ ಅತ್ಯುತ್ತಮ ಪ್ರದರ್ಶನ
ಭಾರತದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ ಗಳ ಪಟ್ಟಿಯಲ್ಲಿ ಎಜಾಜ್ ಅಗ್ರ ಸ್ಥಾನಕ್ಕೇರಿದ್ದಾರೆ. ಈ ಹಿಂದೆ 2017ರಲ್ಲಿ ಆಸ್ಟ್ರೇಲಿಯಾದ ನಾಥನ್ ಲೈಆನ್ 50 ರನ್ ನೀಡಿ 8 ವಿಕೆಟ್ ಕಬಳಿಸಿದ್ದರು. ಇದು ಭಾರತದಲ್ಲಿ ವಿದೇಶಿ ಸ್ಪಿನ್ನರ್ ರ 2ನೇ ಉತ್ತಮ ಪ್ರದರ್ಶನವಾಗಿದೆ.

ಭಾರತದ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ
ಇನ್ನು ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬೌಲರ್ ಒಬ್ಬರು ತೋರಿದ ಅತ್ಯುತ್ತಮ ಪ್ರದರ್ಶನ ಕೂಡ ಇದಾಗಿದ್ದು, ಈ ಹಿಂದೆ 1971ರಲ್ಲಿ ವೆಸ್ಟ್ ಇಂಡೀಸ್ ನ ಬೌಲರ್ ಜಾಕ್ ನರೇಗ 95 ರನ್ ನೀಡಿ 9 ವಿಕೆಟ್ ಪಡೆದಿದ್ದರು. ಇದು ಭಾರತದ ವಿರುದ್ಧ ಬೌಲರ್ ಒಬ್ಬರ ಅತ್ಯುತ್ತಮ ಪ್ರದರ್ಶನವಾಗಿತ್ತು. ಈ ಸಾಧನೆಯನ್ನು ಎಜಾಜ್ ಪಟೇಲ್ 119 ರನ್ ಗಳಿಗೆ 10 ವಿಕೆಟ್ ಕಬಳಿಸಿ ಹಿಂದಿಕ್ಕಿದ್ದಾರೆ.

ನ್ಯೂಜಿಲೆಂಡ್ ಬೌಲರ್ ಒಬ್ಬರ ಅತ್ಯುತ್ತಮ ಪ್ರದರ್ಶನ
ಅಂತೆಯೇ ಕೇವಲ ಭಾರತದ ವಿರುದ್ಧ ಮಾತ್ರವಲ್ಲದೇ ನ್ಯೂಜಿಲೆಂಡ್ ತಂಡ ಬೌಲರ್ ಒಬ್ಬರ ಅತ್ಯುತ್ತಮ ಪ್ರದರ್ಶನ ಕೂಡ ಇದಾಗಿದ್ದು, ಈ ಹಿಂದೆ ಅಂದರೆ 1985ರಲ್ಲಿ ನ್ಯೂಜಿಲೆಂಡ್ ನ ರಿಚರ್ಡ್ ಹ್ಯಾಡ್ಲಿ ಆಸ್ಚ್ರೇಲಿಯಾ ವಿರುದ್ಧ 52 ರನ್ ನೀಡಿ 9 ವಿಕೆಟ್ ಪಡೆದಿದ್ದರು. ಇದು ಈ ವರೆಗಿನ ನ್ಯೂಜಿಲೆಂಡ್ ಬೌಲರ್ ಒಬ್ಬರ ಅತ್ಯುತ್ತಮ ಪ್ರದರ್ಶನವಾಗಿ ದಾಖಲಾಗಿತ್ತು. ಆದರೆ ಇಂದಿನ ಪ್ರದರ್ಶನದ ಮೂಲಕ ಎಜಾಜ್ ಪಟೇಲ್ ಅವರು 36 ವರ್ಷದ ಹಳೆಯ ದಾಖಲೆಯನ್ನೂ ಮುರಿದಿದ್ದಾರೆ.

ಏಕೈಕ ಆಟಗಾರ
ಅಂತೆಯೇ ಮೊದಲ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದು, ಬ್ಯಾಟಿಂಗ್ ವೇಳೆ ಅಜೇಯರಾಗಿ ಉಳಿದ ಜಗತ್ತಿನ ಏಕೈಕ ಕ್ರಿಕೆಟಿಗ ಎಂಬ ಕೀರ್ತಿಗೂ ಏಜಾಜ್ ಪಟೇಲ್ ಭಾಜನರಾಗಿದ್ದಾರೆ.
 

SCROLL FOR NEXT