ಐಪಿಎಲ್ 2025ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಪರ ಆಡಿದ ಮೊಹಮ್ಮದ್ ಸಿರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬ್ಯಾಟಿಂಗ್ ಲೈನ್ ಅಪ್ ಅನ್ನು ಛಿದ್ರಗೊಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಿದ್ದಾರೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
2018 ರಿಂದ 2024 ರವರೆಗೆ ಆರ್‌ಸಿಬಿ ಪರ ಆಡಿದ್ದ ಮೊಹಮ್ಮದ್ ಸಿರಾಜ್ ಈ ಬಾರಿ ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಗುಜರಾತ್ ಪರ ಅದ್ಭುತ ಸ್ಪೆಲ್ ಹಾಕಿದ್ದು, 4 ಓವರ್‌ಗಳಲ್ಲಿ 19 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ.
ಮೊಹಮ್ಮದ್ ಸಿರಾಜ್ ಆರ್‌ಸಿಬಿ ವಿರುದ್ಧ ನಾಲ್ಕು ಓವರ್‌ಗಳಲ್ಲಿ 19 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದರು. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ದೇವದತ್ ಪಡಿಕ್ಕಲ್ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಆರ್‌ಸಿಬಿ ಬ್ಯಾಟಿಂಗ್ ಲೈನ್‌ಅಪ್ ಅನ್ನು ಕಟ್ಟಿಹಾಕಿದರು.
ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಔಟ್ ಮಾಡುವ ಮೂಲಕ ಮತ್ತಷ್ಟು ರನ್ ಸೋರಿಕೆಯಾಗದಂತೆ ಸಿರಾಜ್ ತಡೆದರು.
ತಮ್ಮ ಕಾಲದ ಅತ್ಯಂತ ವಿನಾಶಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸೆಹ್ವಾಗ್, ಚಾಂಪಿಯನ್ಸ್ ಟ್ರೋಫಿ ವೇಳೆ ಟೀಂ ಇಂಡಿಯಾದಲ್ಲಿ ಸಿರಾಜ್ ಅವರಿಗೆ ಅವಕಾಶ ನೀಡದಿದ್ದಕ್ಕಾಗಿ ಅವರು ನೊಂದಿದ್ದರು. ಹರ್ಷಿತ್ ರಾಣಾ ಅವರನ್ನು ಕಡೆಗಣಿಸಲಾಗಿತ್ತು. ಜಸ್ಪ್ರೀತ್ ಬುಮ್ರಾ ಅವರನ್ನು ಗಾಯದ ಕಾರಣ ಮೊದಲೇ ಹೊರಗಿಡಲಾಗಿತ್ತು ಎಂದರು.
'ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸ ಬಾಲ್‌ನಲ್ಲಿ ಅವರು (ಸಿರಾಜ್) ತಮ್ಮ ದಾಖಲೆಯನ್ನು ಉಳಿಸಿಕೊಂಡರು. ಅವರು ಮೊದಲ ಮೂರು ಓವರ್‌ಗಳಲ್ಲಿ ಕೇವಲ 12 ಅಥವಾ 13 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಅವರು ಬಹುಶಃ ನಾಲ್ಕನೇ ಓವರ್ ಅನ್ನು ಅದೇ ಸಮಯದಲ್ಲಿ ಪೂರ್ಣಗೊಳಿಸಬಹುದಿತ್ತು. ಆಗಲೂ ಅವರು ಇನ್ನೊಂದು ವಿಕೆಟ್ ಪಡೆದಿರಬಹುದಿತ್ತು. ಅವರು ಹೊಸ ಬಾಲ್ ಅನ್ನು ಸ್ವಿಂಗ್ ಮಾಡುತ್ತಾರೆ ಮತ್ತು ನಿನ್ನೆ, ಅವರು ವಿಕೆಟ್‌ನಿಂದ ಕೂಡ ಸಹಾಯ ಪಡೆದರು' ಎಂದು ಸೆಹ್ವಾಗ್ ಕ್ರಿಕ್‌ಬಜ್‌ಗೆ ತಿಳಿಸಿದರು.
'ಸಿರಾಜ್ ಅವರಲ್ಲಿ ಆ ಉತ್ಸಾಹವಿದೆ. ಚಾಂಪಿಯನ್ಸ್ ಟ್ರೋಫಿ ತಂಡದ ಭಾಗವಾಗಿಲ್ಲದಿರುವುದು ಅವರಿಗೆ ನೋವಾಗಿದೆ ಎಂದು ನನಗೆ ಅನಿಸುತ್ತದೆ ಮತ್ತು ನಾನು ಆ ಉತ್ಸಾಹವನ್ನು ನೋಡಿದೆ. ಯುವ ವೇಗಿಯಿಂದ ನಾವು ನಿರೀಕ್ಷಿಸುವುದು ಅದನ್ನೇ. 'ಹೌದು, ನೀವು ನನ್ನನ್ನು ಆಯ್ಕೆ ಮಾಡಲಿಲ್ಲವೇ? ಈಗ ನಾನು ನಿಮಗೆ ತೋರಿಸುತ್ತೇನೆ' ಎನ್ನುವ ದಾಟಿಯಲ್ಲೇ ಅವರು ಆಡಿದರು ಮತ್ತು ಮತ್ತೆ ಭಾರತೀಯ ತಂಡಕ್ಕೆ ಮರಳುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದರು.
ಮೊಹಮ್ಮದ್ ಸಿರಾಜ್ ಅವರು ತಮ್ಮ ಅದ್ಭುತ ಸ್ಪೆಲ್‌ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಕಳೆದ ಏಳು ವರ್ಷಗಳಿಂದ ಆರ್‌ಸಿಬಿ ಭಾಗವಾಗಿದ್ದ ಅವರು ಈ ಬಾರಿ ಬೇರೆ ತಂಡದೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹಿಂತಿರುಗಿದಾಗ ಭಾವುಕರಾಗಿದ್ದಾಗಿ ತಿಳಿಸಿದರು.
'ನಾನು ಸ್ವಲ್ಪ ಭಾವುಕನಾಗಿದ್ದೆ, ಏಕೆಂದರೆ ನಾನು ಇಲ್ಲಿ ಏಳು ವರ್ಷ ಕೆಂಪು ಜೆರ್ಸಿಯಲ್ಲಿ ಆಡಿದ್ದೆ. ಈಗ ಅದು ಬೇರೆ ಬಣ್ಣದಲ್ಲಿದೆ. ನಾನು ಸ್ವಲ್ಪ ನರ್ವಸ್ ಆಗಿದ್ದೆ ಮತ್ತು ಸ್ವಲ್ಪ ಭಾವುಕನಾಗಿದ್ದೆ. ಆದರೆ, ನನ್ನ ಕೈಗೆ ಬಾಲ್ ಸಿಕ್ಕ ತಕ್ಷಣ, ನಾನು ಫುಲ್ ಆನ್ ಆಗಿದ್ದೆ' ಎಂದು ಸಿರಾಜ್ ಹೇಳಿದರು.
ಸಿರಾಜ್ ಸುಮಾರು ಒಂದು ದಶಕದ ಕಾಲ ವಿರಾಟ್ ಕೊಹ್ಲಿ ಅವರ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು ಮತ್ತು ಕಳೆದ ವರ್ಷ ತಂಡದಿಂದ ಬಿಡುಗಡೆಗೊಳ್ಳುವ ಮೊದಲು ಆರ್‌ಸಿಬಿ ಪರ 83 ವಿಕೆಟ್‌ಗಳನ್ನು ಕಬಳಿಸಿದ್ದರು. ನವೆಂಬರ್‌ನಲ್ಲಿ, ಜಿಟಿ ಅವರನ್ನು ಹರಾಜಿನಲ್ಲಿ 12.25 ಕೋಟಿ ರೂ.ಗೆ ಖರೀದಿಸಿತು.