ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧಾನಾ ಅವರ ತಂದೆಗೆ ಹಠಾತ್ ಅನಾರೋಗ್ಯ ಕಾಡಿ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಜೊತೆ ಅವರ ವಿವಾಹ ಮುಂದೂಡಲ್ಪಟ್ಟಿದ್ದು ಭಾರೀ ಸುದ್ದಿಯಾಯಿತು.
ಈಗ, ಸೋಷಿಯಲ್ ಮೀಡಿಯಾದಲ್ಲಿ ಹೊಸ ಊಹಾಪೋಹಗಳು ಹರಡುತ್ತಿದ್ದು, ಜೋಡಿ ಡಿಸೆಂಬರ್ 7 ರಂದು ವಿವಾಹವಾಗಲಿದ್ದಾರೆ ಎಂಬ ವದಂತಿ ಹಬ್ಬಿದೆ. ಕುಟುಂಬವು ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡುವ ಮೊದಲೇ ಈ ವದಂತಿ ವೇಗವಾಗಿ ಹರಡಿತು.
ಇದಕ್ಕೆ ಸ್ಮೃತಿ ಮಂಧಾನಾ ಅವರ ಸಹೋದರ ಶ್ರವಣ್ ಮಂಧಾನಾ ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ವದಂತಿಗಳ ಬಗ್ಗೆ ನನಗೆ ಮಾಹಿತಿಯಿಲ್ಲ. ಸದ್ಯಕ್ಕೆ ಮದುವೆ ಮುಂದೂಡಲ್ಪಟ್ಟಿದೆ ಎಂದು ಹೇಳಿದ್ದಾರೆ.
ಸಾಂಗ್ಲಿಯಲ್ಲಿ ನಡೆಯಬೇಕಿದ್ದ ಮೂಲ ಸಮಾರಂಭ, ಈ ಮೊದಲೇ ನಿಗದಿಪಡಿಸಿದಂತೆ ನವೆಂಬರ್ 23 ರಂದು ನಡೆಯಬೇಕಿತ್ತು. ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನಾ ಅವರು ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಆಸ್ಪತ್ರೆಗೆ ದಾಖಲಾದ ನಂತರ ವಿವಾಹ ನಡೆಯಬೇಕಿದ್ದ ಬೆಳಿಗ್ಗೆಯೇ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ನಂತರ ಸ್ಮೃತಿ ಅವರ ಭಾವಿ ಪತಿ ಪಲಾಶ್ ಮುಚ್ಚಲ್ ಕೂಡ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ವರದಿಯ ಪ್ರಕಾರ, ಪರಿಸ್ಥಿತಿಯಿಂದ ಉಂಟಾದ ಒತ್ತಡ ಮತ್ತು ಆಘಾತದಿಂದಾಗಿ ಅವರು ಅಸೌಖ್ಯಕ್ಕೀಡಾದರು ಎನ್ನಲಾಗುತ್ತಿದೆ.
ಎರಡೂ ಕುಟುಂಬ ಒಂದರ ನಂತರ ಒಂದರಂತೆ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾಗ, ಸೋಷಿಯಲ್ ಮೀಡಿಯಾದಲ್ಲಿ ಹಲವು ವದಂತಿಗಳು ಕೇಳಿಬಂದವು. ಪಲಾಶ್ ಮುಚ್ಚಲ್ ಸ್ಮೃತಿ ಮಂಧಾನಾಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಯಿತು.
ನಂತರ ಸ್ಮೃತಿ ಮಂಧಾನಾ ವಿವಾಹ ಪೂರ್ವ ಸಮಾರಂಭದ ಎಲ್ಲಾ ಫೋಟೋ-ವಿಡಿಯೊಗಳನ್ನು ಡಿಲೀಟ್ ಮಾಡಿದ್ದು ವದಂತಿಗಳಿಗೆ ಮತ್ತಷ್ಟು ಪುಷ್ಟಿ ಕೊಟ್ಟಿತು.
ಸ್ಮೃತಿ-ಪಲಾಶ್ ವಿವಾಹಕ್ಕೆ ಸಂಬಂಧಿಸಿದ ವದಂತಿ ಇನ್ನೂ ನಿಂತಿಲ್ಲ. ಅವರ ಬಗ್ಗೆ ಹಬ್ಬಿರುವ ಊಹಾಪೋಹಗಳನ್ನು ಎರಡೂ ಕುಟುಂಬಗಳು ದೃಢೀಕರಿಸಿಲ್ಲ ಅಥವಾ ನಿರಾಕರಿಸಿಲ್ಲ. ಆದರೆ, ಅಭಿಮಾನಿಗಳು ಸ್ಪಷ್ಟತೆಗಾಗಿ ಆಶಿಸುತ್ತಿದ್ದಾರೆ ಮತ್ತು ಇಬ್ಬರಿಗೂ ಶುಭ ಹಾರೈಸುತ್ತಿದ್ದಾರೆ.