Champions Trophy 2025: ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯ? ಗಿಲ್‌ಗೆ ಸಾರಥ್ಯ!
ಕಳೆದ ಭಾನುವಾರ (ಫೆಬ್ರುವರಿ 23) ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕ್ ಇನಿಂಗ್ಸ್ ವೇಳೆ ರೋಹಿತ್ ಶರ್ಮಾ ಅವರಿಗೆ ಮಂಡಿ ನೋವು ಉಂಟಾಗಿತ್ತು. ಬಳಿಕ ಬ್ಯಾಟಿಂಗ್‌ಗೆ ಬಂದಾಗಲೂ ಓಡಲು ಕಷ್ಟಪಡುತ್ತಿದ್ದರು.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ಮೊದಲೆರಡೂ ಪಂದ್ಯಗಳನ್ನು ಗೆದ್ದು ಈಗಾಗಲೇ ಸೆಮಿಫೈನಲ್ ತಲುಪಿರುವ ಭಾರತ ಭಾನುವಾರ ದುಬೈನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ಆಟಗಾರರು ಗುರುವಾರ ಅಭ್ಯಾಸ ಆರಂಭಿಸಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕಳೆದ ಭಾನುವಾರ (ಫೆಬ್ರುವರಿ 23) ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕ್ ಇನಿಂಗ್ಸ್ ವೇಳೆ ರೋಹಿತ್ ಶರ್ಮಾ ಅವರಿಗೆ ಮಂಡಿ ನೋವು ಉಂಟಾಗಿತ್ತು. ಬಳಿಕ ಬ್ಯಾಟಿಂಗ್‌ಗೆ ಬಂದಾಗಲೂ ಓಡಲು ಕಷ್ಟಪಡುತ್ತಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಇನ್ನೂ ಮೂರು ದಿನ ಬಾಕಿ ಇದ್ದು, ಅಷ್ಟರಲ್ಲಿ ಅವರು ಫಿಟ್ ಆಗುವ ವಿಶ್ವಾಸವಿದೆ.
ಪಾಕಿಸ್ತಾನದ ವಿರುದ್ಧ ಜಯಗಳಿಸಿದ ಎರಡು ದಿನಗಳ ನಂತರ ಬುಧವಾರ ದುಬೈನಲ್ಲಿ ನಡೆದ ಭಾರತದ ಮೊದಲ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದು, ನಾಯಕ ರೋಹಿತ್ ಶರ್ಮಾ ಅಭ್ಯಾಸದಲ್ಲಿ ಕಾಣಿಸಿಕೊಂಡಿಲ್ಲ.
ವರದಿಗಳ ಪ್ರಕಾರ, ಅಭ್ಯಾಸದ ಬದಲಿಗೆ ರೋಹಿತ್ ಶರ್ಮಾ, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು. ರೋಹಿತ್ ಗಾಯ ಅಷ್ಟೇನು ಗಂಭೀರವಾಗಿಲ್ಲದಿದ್ದರೂ, ಭಾರತದ ಸೆಮಿಫೈನಲ್ ಪಂದ್ಯ ಮಾರ್ಚ್ 4 ರಂದು ನಡೆಯಲಿರುವುದರಿಂದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ರೋಹಿತ್‌ಗೆ ವಿಶ್ರಾಂತಿ ನೀಡಬಹುದು ಎನ್ನಲಾಗಿದೆ.
ಭಾರತ ಮತ್ತು ನ್ಯೂಜಿಲೆಂಡ್ ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಕೊನೆಯ ಪಂದ್ಯ ಔಪಚಾರಿಕವಾಗಿರಲಿದೆ. ಎ ಗುಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಯಾರಿಗೆ ಎನ್ನುವುದನ್ನು ಈ ಪಂದ್ಯ ತೀರ್ಮಾನಿಸಲಿದೆ. ಮಾರ್ಚ್ 2ರಂದು ಭಾರತ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಸೆಮಿಫೈನಲ್ ತಲುಪುವ ವಿಶ್ವಾಸದಲ್ಲಿದೆ.
ಮಾರ್ಚ್ 4 ರಂದು ದುಬೈನಲ್ಲಿ ಟೀಂ ಇಂಡಿಯಾ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಲಿದೆ. ನಾಕೌಟ್ ಪಂದ್ಯದಲ್ಲಿ ತಮ್ಮ ಎದುರಾಳಿ ಯಾರೆಂದು ಇನ್ನೂ ತಿಳಿದಿಲ್ಲ. B ಗುಂಪಿನಲ್ಲಿರುವ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಪೈಕಿ ಯಾವ ತಂಡ ಬೇಕಾದರೂ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದು. ಶುಕ್ರವಾರ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಪಂದ್ಯದ ಮೇಲೆ ಇದು ಬಹಳಷ್ಟು ಅವಲಂಬಿತವಾಗಿದೆ.
ಶುಭಮನ್ ಗಿಲ್‌ಗೆ ಸಾರಥ್ಯ
ಸೆಮಿಫೈನಲ್ ಅನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲು ಭಾರತದ ಆಡಳಿತ ಮಂಡಳಿ ನಿರ್ಧರಿಸಿದರೆ, ಉಪನಾಯಕ ಶುಭಮನ್ ಗಿಲ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಅಲ್ಲದೆ, ರಿಷಬ್ ಪಂತ್ ಅಥವಾ ವಾಷಿಂಗ್ಟನ್ ಸುಂದರ್ ಅವರಿಗೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆಯಿದೆ.