ಗೌತಮ್ ಗಂಭೀರ್-ಮೊಹಮ್ಮದ್ ಶಮಿ 
ಕ್ರಿಕೆಟ್

Cricket: 'ಶಮಿ ಟೆಸ್ಟ್ ಕ್ರಿಕೆಟ್‌ ನಿರ್ಗಮನ ನೋವು ತಂದಿದೆ, ಗೌರವಯುತ ವಿದಾಯ ಸಿಗಬೇಕಿತ್ತು'

ವಿಶ್ವದ ಹಲವು ಬಲಿಷ್ಠ ತಂಡಗಳ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಶಮಿ, ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿ ಮತ್ತೆ ಟೆಸ್ಟ್ ತಂಡಕ್ಕೆ ಮರಳಲು ಸಾಕಷ್ಟು ಪ್ರಯತ್ನಿಸಿದ್ದರು.

ನವದೆಹಲಿ: ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಬೆನ್ನಲ್ಲೇ, ಅವರಿಗೆ ಸಿಗಬೇಕಿದ್ದ ಗೌರವಯುತ ವಿದಾಯ ಸಿಗಲಿಲ್ಲ ಎಂದು ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶ್ವದ ಹಲವು ಬಲಿಷ್ಠ ತಂಡಗಳ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಶಮಿ, ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿ ಮತ್ತೆ ಟೆಸ್ಟ್ ತಂಡಕ್ಕೆ ಮರಳಲು ಸಾಕಷ್ಟು ಪ್ರಯತ್ನಿಸಿದ್ದರು. ದೇಶಿ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಆದರೂ ಅವರಿಗೆ ಮತ್ತೆ ಟೆಸ್ಟ್ ತಂಡದಲ್ಲಿ ಅವಕಾಶ ಸಿಗಲಿಲ್ಲ. ಇದು ಬೇಸರದ ಸಂಗತಿ ಎಂದು ವಾಸನ್ ಹೇಳಿದ್ದಾರೆ.

ನವೆಂಬರ್ 6ರಂದು ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ವಿಶೇಷವೆಂದರೆ, 2013ರ ನವೆಂಬರ್ 6ರಂದು ಇದೇ ದಿನ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದರೊಂದಿಗೆ 13 ವರ್ಷಗಳ ಟೆಸ್ಟ್ ಪಯಣಕ್ಕೆ ತೆರೆ ಬಿದ್ದಿದೆ.

ಶಮಿ ಭಾರತ ಪರ ಒಟ್ಟು 64 ಟೆಸ್ಟ್ ಪಂದ್ಯಗಳನ್ನಾಡಿದ್ದು, 122 ಇನ್ನಿಂಗ್ಸ್‌ಗಳಲ್ಲಿ 27.71ರ ಸರಾಸರಿಯಲ್ಲಿ 229 ವಿಕೆಟ್ ಕಬಳಿಸಿದ್ದಾರೆ. 3.30ರ ಎಕಾನಮಿ ಹೊಂದಿರುವ ಅವರು, 6 ವಿಕೆಟ್‌ಗೆ 56 ರನ್ ನೀಡಿರುವುದು ಟೆಸ್ಟ್‌ನಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಅಲ್ಲದೆ, 12 ಬಾರಿ ನಾಲ್ಕು ವಿಕೆಟ್ ಹಾಗೂ ಆರು ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಗೌರವಯುತ ವಿದಾಯ ಸಿಗಬೇಕಿತ್ತು

ಇನ್ನು ಇದೇ ವಿಚಾರವಾಗಿ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅತುಲ್ ವಾಸನ್, ಶಮಿ ಅವರ ಪ್ರತಿಭೆ, ಹೋರಾಟದ ಮನೋಭಾವ ಮತ್ತು ಗಾಯಗಳಿಂದ ಚೇತರಿಸಿಕೊಂಡು ಮತ್ತೆ ಕ್ರಿಕೆಟ್‌ಗೆ ಮರಳಿದ ರೀತಿಯನ್ನು ಶ್ಲಾಘಿಸಿದ್ದಾರೆ.

'ಶಮಿ ಅದ್ಭುತ ಬೌಲರ್. ಎಲ್ಲಿಂದ ಬಂದವರು ಎಂಬುದನ್ನು ಗಮನಿಸಿದರೆ ಅವರ ಸಾಧನೆ ನಿಜಕ್ಕೂ ದೊಡ್ಡದು. ಮೊಣಕಾಲಿನ ಸಮಸ್ಯೆ ಸೇರಿದಂತೆ ಹಲವು ಸವಾಲುಗಳ ನಡುವೆಯೂ ವಿಶ್ವದಾದ್ಯಂತ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಅಪರೂಪದ ಪ್ರತಿಭೆ. ಇಂತಹ ಆಟಗಾರ ಟೆಸ್ಟ್ ಕ್ರಿಕೆಟ್‌ನಿಂದ ಈ ರೀತಿ ನಿರ್ಗಮಿಸಿರುವುದನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ' ಎಂದು ಹೇಳಿದ್ದಾರೆ.

'ಶಮಿ ಮತ್ತೆ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿದ್ದರು. ರಣಜಿ ಟ್ರೋಫಿಯಲ್ಲೂ ಆಡುತ್ತಾ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಭುವನೇಶ್ವರ್ ಕುಮಾರ್ ಅವರಂತೆ ತಮ್ಮ ವೃತ್ತಿಜೀವನಕ್ಕೂ ಸುಂದರವಾದ ಅಂತ್ಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು' ಎಂದು ವಾಸನ್ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ಆಟಗಾರರ ವಯಸ್ಸಿಗೆ ಹೆಚ್ಚಿನ ಮಹತ್ವ ನೀಡುವ ಪ್ರವೃತ್ತಿ ಇದೆ. ಶಮಿ ಗಾಯದಿಂದ ಚೇತರಿಸಿಕೊಂಡು ಮತ್ತೆ ಉತ್ತಮ ಪ್ರದರ್ಶನ ನೀಡುತ್ತಿದ್ದ ಕಾರಣ ಅವರಿಗೆ ಇನ್ನೂ ಒಂದೆರಡು ವರ್ಷ ಅವಕಾಶ ನೀಡಬಹುದಿತ್ತು. ಗೌರವಯುತವಾಗಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಅವಕಾಶ ಕಲ್ಪಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೌರವ ನೀಡುವ ಸಂಸ್ಕೃತಿ ಭಾರತೀಯ ಕ್ರಿಕೆಟ್‌ನಲ್ಲಿ ಕಡಿಮೆಯಾಗುತ್ತಿದೆ

ಹಿರಿಯ ಆಟಗಾರರು ದೇಶಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ ಗೌರವ ನೀಡುವ ಸಂಸ್ಕೃತಿ ಭಾರತೀಯ ಕ್ರಿಕೆಟ್‌ನಲ್ಲಿ ಕಡಿಮೆಯಾಗುತ್ತಿದೆ. ಗೌತಮ್ ಗಂಭೀರ್ ಕೋಚ್ ಆಗಿರುವ ಸಂದರ್ಭದಲ್ಲಿ ಶಮಿ ಮತ್ತೆ ಟೆಸ್ಟ್ ತಂಡಕ್ಕೆ ಮರಳುವುದು ಕಷ್ಟ ಎಂಬುದು ಸ್ಪಷ್ಟವಾಗಿತ್ತು. ಅವರು ತಮ್ಮ ಕಡೆಯಿಂದ ಎಲ್ಲ ಪ್ರಯತ್ನಗಳನ್ನೂ ಮಾಡಿದರು. ಆದರೆ ವಯಸ್ಸು ಮತ್ತು ಗಾಯಗಳು ಆಟಗಾರನ ಮೇಲೆ ಪರಿಣಾಮ ಬೀರುತ್ತವೆ ಎಂದು ವಾಸನ್ ಹೇಳಿದ್ದಾರೆ.

ಇನ್ನೊಂದೆಡೆ, ಮುಂಬರುವ ವಿಶ್ವಕಪ್‌ ದೃಷ್ಟಿಯಿಂದ ಯುವ ವೇಗದ ಬೌಲರ್‌ಗಳಿಗೆ ಅವಕಾಶ ನೀಡಿ ಅವರನ್ನು ಸಿದ್ಧಪಡಿಸುವುದು ಆಯ್ಕೆ ಸಮಿತಿಯ ಜವಾಬ್ದಾರಿ ಎಂಬುದನ್ನೂ ವಾಸನ್ ಒಪ್ಪಿಕೊಂಡಿದ್ದಾರೆ.

ಭಾರತದ ಬಳಿ ಈಗ ಸಾಕಷ್ಟು ಯುವ ವೇಗದ ಬೌಲರ್‌ಗಳಿದ್ದಾರೆ. ಅವರಿಗೆ ಅವಕಾಶ ನೀಡಿ ಭವಿಷ್ಯಕ್ಕೆ ಸಿದ್ಧಪಡಿಸಬೇಕಿದೆ. ಆದರೆ ಮೊಹಮ್ಮದ್ ಶಮಿಯಂತಹ ಅನುಭವಿ ಆಟಗಾರರಿಗೆ ತಕ್ಕ ಗೌರವ ನೀಡಬೇಕು. ದೊಡ್ಡ ಟೂರ್ನಿಗಳು ಹತ್ತಿರ ಬಂದಾಗ ಅವರ ಅನುಭವದ ಅಗತ್ಯವೂ ಬೀಳಬಹುದು ಎಂದು ಅತುಲ್ ವಾಸನ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Bastarನಲ್ಲಿ ವೀರ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ: ನಕ್ಸಲ್ ಭಯೋತ್ಪಾದನೆಗೆ ಅಂತ್ಯ ಹಾಡಿದ ಭದ್ರತಾ ಪಡೆಗಳಿಗೆ ಸಲಾಂ, ನಕ್ಸಲ್ ಮುಕ್ತ ಭಾರತ ಘೋಷಣೆ..!

ಪ್ರಭಾವಿ ಶಾಸಕನ ಗನ್‌ಮ್ಯಾನ್ ನೇತೃತ್ವದಲ್ಲೇ ₹2.68 ಕೋಟಿ ದರೋಡೆಗೆ ಸ್ಕೆಚ್: ಬೆಳಗಾವಿಯಲ್ಲಿ ಖಾರದಪುಡಿ ಎರಚಿ ಪರಾರಿಯಾಗಲು ಯತ್ನಿಸಿದ ಗ್ಯಾಂಗ್ ಲಾಕ್; 7 ಜನರ ಬಂಧನ

ಹಿಂದೂ ಸಮುದಾಯ ಪಾಕಿಸ್ತಾನದ 'ಅವಿಭಾಜ್ಯ ಅಂಗ' ಎಂದ ಪ್ರಧಾನಿ ಶೆಹಬಾಜ್ ಷರೀಪ್! ದೀಪಾವಳಿ ಹಬ್ಬದ ಶುಭ ಹಾರೈಕೆ

ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: 483ಕ್ಕೆ ತಲುಪಿದ AQI, ವಿಷಾನಿಲದ ಹೊದಿಕೆಯಲ್ಲಿ ರಾಷ್ಟ್ರ ರಾಜಧಾನಿ..!

Cricket: ಅಕ್ಷರ್ ಪಟೇಲ್`ಗೆ ಬಡ್ತಿ, ಗಿಲ್, ಗಂಭೀರ್ ನಿರ್ಧಾರದಲ್ಲಿ ತಪ್ಪೇನಿಲ್ಲ; ಸುನಿಲ್ ಗವಾಸ್ಕರ್ ಸಮರ್ಥನೆ!