ಹೀಗೂ ಉಂಟೆ?; ಕ್ರಿಕೆಟ್ ಇತಿಹಾಸದಲ್ಲೇ ಮೊದಲು, Free Hit ಅಲ್ಲ... Free Ballಗೆ ವಿಚಿತ್ರವಾಗಿ ಬ್ಯಾಟರ್ ಔಟ್, Video
ಮೆಲ್ಬರ್ನ್‌ನ ಜಂಕ್ಷನ್ ಓವಲ್‌ನಲ್ಲಿ ನಡೆದ ಮೆಲ್ಬರ್ನ್ ರೆನೆಗೇಡ್ಸ್ ಮತ್ತು ಬ್ರಿಸ್ಬೇನ್ ಹೀಟ್ ನಡುವಿನ ಪಂದ್ಯದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಬ್ರಿಸ್ಬೇನ್ ಹೀಟ್ ನೀಡಿದ್ದ 138 ರನ್‌ಗಳ ಗುರಿ ಬೆನ್ನಟ್ಟಿದ ರೆನೆಗೇಡ್ಸ್ ತಂಡ..
ಮೆಲ್ಬರ್ನ್: ಕ್ರಿಕೆಟ್ ನಲ್ಲಿ ಕೆಲವೊಮ್ಮೆ ನಂಬಲೂ ಕೂಡ ಸಾಧ್ಯವಿಲ್ಲ ಎನ್ನುವಂತಹ ಘಟನೆಗಳು ನಡೆಯುತ್ತವೆ. ಇದಕ್ಕೆ ಹೊಸದೊಂದು ಸೇರ್ಪಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕ್ರಿಕೆಟ್‌ನಲ್ಲಿ ಹಲವು ರೀತಿಯ ವಿಚಿತ್ರ ಔಟ್‌ಗಳನ್ನು ನೋಡಿದ್ದೇವೆ. ಆದರೆ ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL) ಪಂದ್ಯದಲ್ಲಿ ನಡೆದ ಘಟನೆ ಮಾತ್ರ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಸ್ವಯಂಕೃತ ಅಪರಾಧದಿಂದಾಗಿ ಮಹಿಳಾ ಬ್ಯಾಟರ್ ವಿಚಿತ್ರವಾಗಿ ಔಟಾಗಿದ್ದು ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಬ್ಯಾಟಿಂಗ್‌ಗೆ ತಡವಾಗಿ ಬಂದ ಕಾರಣ ವೆಸ್ಟ್ ಇಂಡೀಸ್‌ನ ಡಿಯಾಂಡ್ರಾ ಡಾಟಿನ್‌ಗೆ ಬೌಲರ್ ಬೌಲ್ ಮಾಡುವಾಗ ವಿಕೆಟ್ ಕಾಯುವ ಅವಕಾಶವೇ ಇರಲಿಲ್ಲ. ಪರಿಣಾಮ, ಅವರು 'ಫ್ರೀ ಬಾಲ್'ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್‌ಗೆ ಮರಳಿದರು.
ಆಗಿದ್ದೇನು?
ಮೆಲ್ಬರ್ನ್‌ನ ಜಂಕ್ಷನ್ ಓವಲ್‌ನಲ್ಲಿ ನಡೆದ ಮೆಲ್ಬರ್ನ್ ರೆನೆಗೇಡ್ಸ್ ಮತ್ತು ಬ್ರಿಸ್ಬೇನ್ ಹೀಟ್ ನಡುವಿನ ಪಂದ್ಯದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಬ್ರಿಸ್ಬೇನ್ ಹೀಟ್ ನೀಡಿದ್ದ 138 ರನ್‌ಗಳ ಗುರಿ ಬೆನ್ನಟ್ಟಿದ ರೆನೆಗೇಡ್ಸ್ ತಂಡ 15ನೇ ಓವರ್‌ನಲ್ಲಿ 97 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.
ಈ ವೇಳೆ ಬ್ಯಾಟಿಂಗ್‌ಗೆ ಇಳಿಯಬೇಕಿದ್ದ ಡಿಯಾಂಡ್ರಾ ಡಾಟಿನ್ ಕ್ರೀಸ್‌ಗೆ ಬರಲು ತಡವಾಯಿತು. ಇದರಿಂದ ಫೀಲ್ಡ್ ಅಂಪೈರ್ ನಿಯಮದ ಪ್ರಕಾರ ಅವರನ್ನು ವಿಕೆಟ್ ನಿಂದ ದೂರ ನಿಲ್ಲಿಸಿ ಬೌಲಿಂಗ್ ಮಾಡಲೂ ಬೌಲರ್ ಗೆ ಸೂಚಿಸಿದರು. ಈ ವೇಳೆ ಬೌಲರ್ ಚೆಂಡನ್ನು ನೇರವಾಗಿ ಕ್ಲೀನ್ ಬೋಲ್ಡ್ ಮಾಡಿದರು.
ಏನಿದು ವಿಚಿತ್ರ ನಿಯಮ?
WBBLನ ನಿಯಮದ ಪ್ರಕಾರ, ವಿಕೆಟ್ ಬಿದ್ದ ಅಥವಾ ಬ್ಯಾಟರ್ ನಿವೃತ್ತಿ ಘೋಷಿಸಿದ 75 ಸೆಕೆಂಡುಗಳ ಒಳಗೆ ಹೊಸ ಬ್ಯಾಟರ್ ಮುಂದಿನ ಎಸೆತ ಎದುರಿಸಲು ಸಿದ್ಧರಾಗಿರಬೇಕು.
ಒಂದು ವೇಳೆ ನಿಗದಿತ ಸಮಯದೊಳಗೆ ಬ್ಯಾಟರ್ ಸಿದ್ಧರಾಗದಿದ್ದರೆ, ಅವರು ಬ್ಯಾಟಿಂಗ್ ಆರಂಭದ ಮೊದಲ ಎಸೆತಕ್ಕೆ ವಿಕೆಟ್‌ನಿಂದ ಕನಿಷ್ಠ ಐದು ಮೀಟರ್ ದೂರದಲ್ಲಿ, ಲೆಗ್‌ಸೈಡ್‌ನತ್ತ ನಿಲ್ಲಬೇಕು. ಈ ವೇಳೆ ಬೌಲರ್ ನೇರವಾಗಿ ಎಸೆತ ಹಾಕಲು ಅವಕಾಶವಿರುತ್ತದೆ.
ಫ್ರೀಬಾಲ್ ಗೆ ವಿಕೆಟ್ ಒಪ್ಪಿಸಿದ ಡಾಟಿನ್!
ನಿಯಮದಂತೆ ಡಾಟಿನ್ ವಿಕೆಟ್‌ನಿಂದ ದೂರದಲ್ಲಿ ಸ್ಕ್ವೇರ್ ಲೆಗ್ ಬಳಿ ನಿಂತಿದ್ದರು. ಈ ಅವಕಾಶವನ್ನು ಬಳಸಿಕೊಂಡ ಬ್ರಿಸ್ಬೇನ್ ಹೀಟ್ ಬೌಲರ್ ಸಾರಾ ಗ್ಲೆನ್, ಮುಂದಿನ ಎಸೆತದಲ್ಲೇ ಬ್ಯಾಟರ್ ಇಲ್ಲದ ವಿಕೆಟ್‌ಗೆ ಚೆಂಡು ಬಡಿಸಿದರು. ಹೀಗಾಗಿ ಡಾಟಿನ್ ಶೂನ್ಯ ರನ್‌ಗೆ ಬೌಲ್ಡ್ ಆದರು.
ಈ ಎಸೆತವನ್ನು 'ಫ್ರೀ ಬಾಲ್' ಎಂದು ಕರೆಯಲಾಗಿದ್ದು, ಅದು ಓವರ್‌ನ ಒಂದು ಎಸೆತವಾಗಿಯೂ ಪರಿಗಣಿಸಲಾಯಿತು. 2021-22ರ ಋತುವಿಗೂ ಮುನ್ನ WBBLನಲ್ಲಿ ಜಾರಿಗೆ ತಂದಿದ್ದ ಟೈಮ್ಡ್ ಔಟ್ ನಿಯಮದ ಮಾರ್ಪಡಿತ ರೂಪದ ಅನ್ವಯ ಈ ಘಟನೆ ನಡೆದಿದೆ.
ಆದರೆ, ಡಾಟಿನ್ ವಿಕೆಟ್ ಕಳೆದುಕೊಂಡರೂ ಮೆಲ್ಬರ್ನ್ ರೆನೆಗೇಡ್ಸ್ ತಂಡದ ಗೆಲುವಿನ ಓಟಕ್ಕೆ ಇದರಿಂದ ತಡೆಯಾಗಲಿಲ್ಲ. ಪಂದ್ಯದ ಕೊನೆಯ ಎಸೆತದಲ್ಲಿ ಗುರಿ ತಲುಪಿ ತಂಡ ಗೆಲುವು ದಾಖಲಿಸಿತು.
'ಕ್ರಿಕೆಟ್‌ನಲ್ಲಿ ಇಂತಹ ಘಟನೆ ನೋಡಿರಲಿಲ್ಲ'
ಪಂದ್ಯದ ಬಳಿಕ ಮಾತನಾಡಿದ ರೆನೆಗೇಡ್ಸ್ ನಾಯಕಿ ಹಾಗೂ ಪಂದ್ಯಶ್ರೇಷ್ಠೆ ಸೋಫಿ ಮೊಲಿನ್ಯೂಕ್ಸ್, ಈ ಘಟನೆ ಕ್ರಿಕೆಟ್‌ನಲ್ಲಿ ತಾವು ಹಿಂದೆಂದೂ ನೋಡಿರಲಿಲ್ಲ ಎಂದು ಹೇಳಿದ್ದಾರೆ.
"ಕ್ರಿಕೆಟ್‌ನಲ್ಲಿ ಇಂತಹ ಘಟನೆಯನ್ನು ನಾನು ಹಿಂದೆಂದೂ ನೋಡಿರಲಿಲ್ಲ. ಸಾರಾ ಗ್ಲೆನ್ ಅದನ್ನು ಅತ್ಯುತ್ತಮವಾಗಿ ಕಾರ್ಯಗತಗೊಳಿಸಿದ್ದಾರೆ. ಡಾಟಿನ್ ಬ್ಯಾಟಿಂಗ್‌ಗೆ ಸಿದ್ಧರಾಗಲು ನಾವು ಸ್ವಲ್ಪ ತಡವಾಗಿ ಸೂಚನೆ ನೀಡಿದ್ದೆವು. ಮತ್ತೆ ಅವಕಾಶ ಸಿಕ್ಕರೆ ಬೇಗ ನಿರ್ಧಾರ ತೆಗೆದುಕೊಳ್ಳುತ್ತಿದ್ದೆವು.
ಈ ಘಟನೆ ನಮಗೂ, ಪಂದ್ಯ ವೀಕ್ಷಿಸಿದ ಇತರ ತಂಡಗಳಿಗೂ ಉತ್ತಮ ಪಾಠವಾಗಿದೆ. ಮುಂದಿನ ಹತ್ತು ವರ್ಷಗಳಲ್ಲೂ ಇಂತಹ ಘಟನೆ ನಡೆಯದಿರಬಹುದು" ಎಂದು ಅವರು ಹೇಳಿದ್ದಾರೆ.