ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: ಮನತಣಿಸಿದ ಬೆಳದಿಂಗಳ ಸಂಗೀತ

Vishwanath S
Updated On : 2 Apr 2013, 11:00 am

ಧಾರವಾಡ:  ಬಂಗಾಲದಲ್ಲಿ ಜನಪ್ರಿಯವಾದ ರವೀಂದ್ರ ಸಂಗೀತದಂತೆ ಕನ್ನಡದಲ್ಲಿ ಬೇಂದ್ರೆ ಸಂಗೀತ ಪ್ರಕಾರವೊಂದು ಜೀವ ಪಡೆಯಬೇಕಿದೆ ಎಂದು ಸಾಹಿತಿ ಡಾ. ಕೆ.ಎಸ್. ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ಸಂಜೆ ಬೇಂದ್ರೆ ಭವನದಲ್ಲಿ ಏರ್ಪಡಿಸಿದ್ದ ವರಕವಿ ಅಂಬಿಕಾತನಯದತ್ತರ ಶಾಸ್ತ್ರೀಯ ರಾಗಗಳಾಧಾರಿತ ಭಾವಗೀತ ಗಾಯನದ 'ಬೆಳದಿಂಗಳ ನೋಡ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಅಂಬಿಕಾತನಯದತ್ತರ ಸಾವಿರದ ಕಾವ್ಯ ರಾಶಿಯಲ್ಲಿ ಶಾಸ್ತ್ರೀಯ ಸಂಗೀತಕ್ಕೊಳಪಡುವ ನೂರಾರು ಹಾಡುಗಳು ನಮ್ಮೆದುರಿಗಿವೆ. ಪಂ. ಕೃಷ್ಣಾಜಿ ಕುರ್ತಕೋಟಿಯವರಂಥ ಹಿರಿಯರು ಈಗಾಗಲೇ ಅನೇಕ ಬೇಂದ್ರೆ ಪದ್ಯಗಳನ್ನು ಇಂಥದೊಂದು ಪ್ರಯೋಗಕ್ಕೊಳಪಡಿಸಿದ್ದು, ಅವು ಅತ್ಯಂತ ಶುಶ್ರ್ಯಾವ್ಯ ಗೀತಗಳೆನಿಸಿವೆ ಎಂದರು. ಹಿಂದುಸ್ತಾನಿ ಪದ್ಧತಿಯ ಗೌಡ ಮಲ್ಹಾರ ರಾಗದ ಶ್ರಾವಣಾ ಬಂತು, ಭೂಪ ರಾಗದ ಬಾರೋ ಬಾ ಸಂಗಾಟ ಬಾ, ನಟ ಭೈರವದ ನಿಗಿ ನಿಗಿ ಮುಗಿಲು, ಭಟಿಯಾರ ರಾಗದ ನಮಚಿತ್ತ ಹೋಗತಾವ ಬಹುದೂರ, ಹಂಸಧ್ವನಿ ರಾಗದ ಟೊಂಕದ ಮ್ಯಾಲ ಕೈ ಇಟ್ಟಾನ, ಮೇಘರಾಗದ ಏನು ಹಸಿರು, ಏನು ಹಳದಿ, ಮತ್ತು ಭೈರವಿ ರಾಗದಲ್ಲಿಯ ಯಾವ ಹುಲ್ಲಿಗೆ ಎಂಥ ಹೂವಿದು ಎಂಬ ಅಂಬಿಕಾತನಯದತ್ತರ ರಚನೆಗಳನ್ನು ಶ್ರೀಕಂಠ ಕುರ್ತಕೋಟಿ, ವಿದ್ಯಾ ದೀಕ್ಷಿತ, ಶ್ರೀದೇವಿ ಶಿರೋಳ, ಅಪೂರ್ವಾ ಮತ್ತು ಮಾನಸಾ ಗ್ರಾಮಪುರೋಹಿತ, ಮೂಕಾಂಬಿಕಾ ಭಟ್ಟ, ಆಶಾ ಭಟ್ಟ ಪ್ರಸ್ತುತ ಪಡಿಸಿದರು.
ಸತ್ಕಾರ: ಬೇಂದ್ರೆ ರತ್ನ ಪ್ರಶಸ್ತಿ ಪುರಸ್ಕೃತ, ಸಂಗೀತ ತಜ್ಞ ಪಂ. ಕೃಷ್ಣಾಜಿ ಕುರ್ತಕೋಟಿಯವರನ್ನು ಸತ್ಕರಿಸಲಾಯಿತು. ಶ್ರೀ ಕೃಷ್ಣಾಜಿ ಮಾತನಾಡಿ, ಸಂಗೀತದ ಆರಾಧಕನಾದ ನಾನು ಬೇಂದ್ರೆಯವರ ಕಾವ್ಯದ ಧಾತುವನ್ನು ಸಾಹಿತ್ಯಿಕವಾಗಿ ಅನುಭವಿಸಿ, ಜ್ಞಾನ ಪಡೆದಿದ್ದೇನೆ. ಈ ಜ್ಞಾನವನ್ನು ಅವರ ಕವಿತೆಗಳಿಗೆ ಶಾಸ್ತ್ರೀಯ ಪದ್ಧತಿಯ ರಾಗಗಳನ್ನು ಅಳವಡಿಸಿ ಆನಂದ ಪಟ್ಟಿದ್ದೇನೆ. ಬೇಂದ್ರೆ ಕಾವ್ಯ ಅನೇಕ ಆಯಾಮಗಳಿಂದ ಪ್ರಸ್ತುತವಾದಷ್ಟೂ ಅದರ ಹಿರಿಮೆ ಕೇಳುಗರಿಗೆ ತಟ್ಟುತ್ತದೆ. ಕೇಳಿದವರ ಧನ್ಯತೆಯೇ ನನಗೆ ಸಿಕ್ಕ ಸನ್ಮಾನ ಎಂದರು. ಪ್ರೊ. ಕೆ. ರಾಘವೇಂದ್ರರಾವ, ಪ್ರಭಾ ರಾಘವೇಂದ್ರರಾವ, ಪ್ರೊ. ಎ.ಜಿ. ಸಬರದ, ಪ್ರೊ. ಸಾಲಿಮಠ, ಜಿ.ಬಿ. ಹೊಂಬಳ, ಶ್ರೀನಿವಾಸ ವಾಡಪ್ಪಿ ಎಂ.ವಿ. ಹೊಸಮನಿ ಇದ್ದರು. ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement