ಪಕ್ಷಗಳಿಂದ ಬಡವರ, ಕಾರ್ಮಿಕರ ಕಡೆಗಣನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 1
ಸಮಾಜವಾದಿ ಸಿದ್ಧಾಂತದ ಮೇಲೆ ನಡೆದ ಚಳುವಳಿಗಳ ಲಾಭ ಇಂದು ಬಂಡವಾಳಶಾಹಿಗಳಿಗೆ ದಕ್ಕುತ್ತಿದೆ. ಸಮಾಜವಾದಿ ಸಿದ್ಧಾಂತದ ಮೇಲೆ ಅಧಿಕಾರಕ್ಕೆ ಬಂದ ಪಕ್ಷಗಳು ಆ ಸಿದ್ಧಾಂತ ಮೂಲವಾಗಿರುವ ಬಡವ, ಕಾರ್ಮಿಕರನ್ನು ರಾಜಕೀಯ ಪಕ್ಷಗಳು ಕಡೆಗಣಿಸುತ್ತಿವೆ ಎಂದು ಕಾರ್ಮಿಕ ಮುಖಂಡ ಪ್ರೊ. ಕೆ.ಎಸ್. ಶರ್ಮಾ ಹೇಳಿದರು.
ಸೋಮವಾರ ಇಲ್ಲಿನ ಮುಧೋಳ ಭವನದಲ್ಲಿ ಆಯೋಜಿಸಿದ್ದ ಎ.ಜೆ. ಮುಧೋಳರ 13ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು ರೈತ ಮತ್ತು ಕಾರ್ಮಿಕ ವಿರೋಧಿ ತೀರ್ಮಾನಗಳನ್ನು ತೆಗೆದುಕೊಂಡು ಆ ಸಮುದಾಯಗಳಿಗೆ ದ್ರೋಹ ಬಗೆಯುತ್ತಿವೆ ಎಂದು ಆಪಾದಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಸೊಪ್ಪಿನ ಅವರು, ನರಗುಂದ ಮತ್ತು ನವಲಗುಂದ ಭಾಗದಲ್ಲಿ ಉಂಟಾದ ರೈತ ಜಾಗೃತಿ ಜನತಾ ಪರಿವಾರವನ್ನು ಅಧಿಕಾರಕ್ಕೆ ತಂದಿತು ಎನ್ನುವುದನ್ನು ಮರೆಯಬಾರದು.
ಇತ್ತೀಚೆಗೆ ಗಣಿ ಲೂಟಿ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡ 'ಬಳ್ಳಾರಿ ಚಲೋ' ಕೇವಲ ಕಾಂಗ್ರೆಸ್.ನ ಗೆಲವು ಅಲ್ಲ. ಅದು ಈ ನಾಡಿನ ಎಡಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳು ಮಾಡಿದ ಜನಜಾಗೃತಿಯ ಫಲ ಎಂದು ಹೇಳಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಾಲಚಂದ್ರ ಗಂಗೂರ ವಹಿಸಿದ್ದರು. ದೇವಾನಂದ ಜಗಾಪುರ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಬಿ.ಎ. ಮುಧೋಳ, ಎನ್.ಸಿ. ಶೇಖ್, ಪಾಲಿಕೆ ಮಾಜಿ ಸದಸ್ಯರಾದ ಚಂದ್ರಶೇಖರ ಅಳಗುಂಡಗಿ, ಮಹೇಂದ್ರ ಸಿಂಘಿ, ಆರ್.ಐ. ಸಿಕಂದರ್, ರಾಜಶೇಖರ ಮೆಣಸಿನಕಾಯಿ, ಎ.ಎಸ್. ಫಿರಜಾದೆ, ಅನ್ವರ್ ಮುಧೋಳ, ಪ್ರಭಾಕರ ಬಿಡ್ನಾಳ, ಗೀತಾ ಕಟಗಿ, ದಾದಾಫೀರ್ ಬೇಪಾರಿ ಇದ್ದರು. ಎನ್.ಎ. ಖಾಜಿ ವಂದಿಸಿದರು.