ವೈಕಲ್ಯ ದೇಹಕ್ಕೆ ವಿನಃ ಬುದ್ಧಿಗೆ ಅಲ್ಲ
ಹುಬ್ಬಳ್ಳಿ: ವೈಕಲ್ಯ ಇರುವುದು ದೇಹಕ್ಕೆ ವಿನಃ ಮನಸ್ಸಿಗೆ ಅಲ್ಲ, ಬುದ್ಧಿಗಂತೂ ಇಲ್ಲವೇ ಇಲ್ಲ ಎನ್ನುವುದನ್ನು ಸಾಬೀತುಪಡಿಸಲು ಹೊರಟಿದ್ದಾರೆ ಈ ಬಾಲಕರು.
ಸೋಮವಾರ, ವಿವಿಧ ರೀತಿಯ ಅಂಗವೈಕಲ್ಯದಿಂದ ಬಳಲುತ್ತಿರುವ ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಶಿಕ್ಷಣ ಸೇವಾಶ್ರಮದ ಅಂಗವಿಕಲ ಮಕ್ಕಳು ತಮ್ಮ ಜೀವನದ ಪ್ರಥಮ ಪ್ರಮುಖ ಘಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿದ್ದಾರೆ. ಸಂಸ್ಥೆಯ ಒಟ್ಟು 11 ವಿದ್ಯಾರ್ಥಿಗಳು 2012ಟ 13ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದಾರೆ.
ಬಸವರಾಜ ಶಂಕ್ರಪ್ಪ ಕಳ್ಳಿ: ಕಾಲುಗಳ ಅಂಗವೈಕಲ್ಯದಿಂದ ಬಳಲುತ್ತಿರುವ ಈ ವಿದ್ಯಾರ್ಥಿ ಮಂಡಿ ಊರಿ ತೆವಳುತ್ತಾನೆ. ಅಂಗವೈಕಲ್ಯವಿದೆ. ಆದರೆ ಜೀವನದಲ್ಲಿ ಪರರಿಗೆ ಹೊರೆಯಾಗಬಾರದು ಎನ್ನುವ ಏಕೈಕ ಉದ್ದೇಶದಿಂದ ಶಿಕ್ಷಣ ಮುಂದುವರಿಸಿದ್ದೇನೆ ಎನ್ನುತ್ತಾನೆ. ಬಸವರಾಜನ ಭವಿಷ್ಯದ ಶಿಕ್ಷಣದ ಬಗ್ಗೆ ಆಸಕ್ತಿ ವಹಿಸಿರುವ ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಶಿಕ್ಷಣ ಸೇವಾಶ್ರಮ ಇದಕ್ಕೆ ತಕ್ಕುದಾದ ವ್ಯವಸ್ಥೆ ಮಾಡಿದೆ.
ಮಂಜುನಾಥ ರಾಮಪ್ಪ ಬಸಾಪುರ: ಕಾಲುಗಳ ಅಂಗವೈಕಲ್ಯ ಈ ವಿದ್ಯಾರ್ಥಿಯ ಸಾಧನೆಗೆ ಅಡ್ಡಿಯಾಗದು. ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಮಂಜುನಾಥನಿಗೆ ಸಂಸ್ಥೆಯ ವತಿಯಿಂದ ಶಿಕ್ಷಣಕ್ಕಾಗಿ ಅಗತ್ಯವಿರುವ ಎಲ್ಲ ಸೌಲಭ್ಯ ಮತ್ತು ಅವಕಾಶಗಳನ್ನು ಕಲ್ಪಿಸಿಕೊಡಲಾಗುತ್ತಿದ್ದು, ಸ್ವಾವಲಂಬಿ ಜೀವನ ನಡೆಸಲಿ ಎನ್ನುವುದು ಸಂಸ್ಥೆಯ ಉದ್ದೇಶ.
ಮಹೇಶ ಗಡಗಿ: ಸ್ಟ್ರೇಚ್ಚರ್.ಗಳ ನೆರವಿನಿಂದ ನಡೆದಾಡುವ ಮಹೇಶ ಪ್ರತಿಭಾವಂತ ವಿದ್ಯಾರ್ಥಿ. ಅಷ್ಟೇ ಅಲ್ಲ ಭವಿಷ್ಯದ ಜೀವನದ ಬಗ್ಗೆ ಅಪಾರ ಕನಸು ಕಂಡಿರುವ ಮಹೇಶನಿಗೆ ವಿಶ್ವಧರ್ಮ ಸೇವಾಶ್ರಮದಿಂದ ಉಚಿತ ಶಿಕ್ಷಣ ನೀಡಲಾಗುತ್ತಿದೆ.
ಅದೀಲ್ ವಜೀರ್.ಸಾಬ್ ನರೇಂದ್ರ: ಎಲ್ಲ ಸರಿಯಾಗಿದ್ದು ಏನೂ ಮಾಡದವರು ಹಲವರಿದ್ದಾರೆ. ಇನ್ನೂ ಒಂದು ಅಂಗ ಸರಿಯಾಗಿರದಿದ್ದರೆ ಕೊರಗುವರು ಇದ್ದಾರೆ. ಆದರೆ ಈ ಆದೀಲ್ ಇದಕ್ಕೆ ಅಪವಾದ. ಗೂನು ಬೆನ್ನು ಮತ್ತು ಮಡಚಲಿಕ್ಕಾಗದ ಒಂದು ಕಾಲಿನೊಂದಿಗೆ ಅಪಾರ ಜೀವನೋತ್ಸಾಹದೊಂದಿಗೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾನೆ.
ರವಿ ಕೆಂಪಣ್ಣ ಬನ್ನಟ್ಟಿ: ಶಿಕ್ಷಣಕ್ಕಾಗಿ ಬೆಳಗಾವಿ ಜಿಲ್ಲೆಯ ಗೋಕಾಕನಿಂದ ಹುಬ್ಬಳ್ಳಿಗೆ ಆಗಮಿಸಿರುವ ರವಿ ಕೆಂಪಣ್ಣ ಬನ್ನಟ್ಟಿ, ಈತನಿಗೆ ಇರುವ ಅಂಗವೈಕಲ್ಯ ಒಂದು ಕಾಲು ಇಲ್ಲ.
ಹಜರೇಸಾಬ್ ಬಾಬಾಜಾನ್ ಬಳ್ಳಾರಿ: ಒಂದು ಕಾಲು ಮತ್ತು ಒಂದು ಕೈ ಮೇಲೆ ನಿಯಂತ್ರಣವಿಲ್ಲದೇ ಜೀವನ ಸಾಗಿಸುತ್ತಿರುವ ಹಜರೇಸಾಬ್ ತನ್ನ ಭವಿಷ್ಯ ಶಿಕ್ಷಣದಲ್ಲಿದೆ ಎಂದು ಯೋಚಿಸುತ್ತಿದ್ದು, ಈ ನಿಟ್ಟಿನಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿಯ ಕನ್ನಡ ಪರೀಕ್ಷೆ ಎದುರಿಸಿದ್ದಾನೆ.
ರಸೂಲ್.ಅಹ್ಮದ್ ಬೇಟಗೇರಿ: ಕಾಲಿನ ಅಂಗವೈಕಲ್ಯ ಎದುರಿಸುತ್ತಿರವ ರಸೂಲ್ ಸದ್ಯ ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಸೇವಾಶ್ರಮದಡಿ ಶಿಕ್ಷಣ ಮುಂದುವರಿಸಿದ್ದಾನೆ. ಭವಿಷ್ಯದ ಈತನ ಶಿಕ್ಷಣ ಇಲ್ಲಿಯೇ ಮುಂದುವರಿಯಲಿದೆ ಎಂದು ಸಂಸ್ಥೆ ಹೇಳಿಕೊಂಡಿದ್ದು, ಆ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ.
ಮೈನುದ್ದೀನ್ ತಾಳಿಕೋಟಿ: ಒಂದು ಕಾಲಿಲ್ಲದಿದ್ದರೂ ಬತ್ತದ ಜೀವನೋತ್ಸಾಹದೊಂದಿಗೆ ತನ್ನ ಭವಿಷ್ಯದ ಸುಂದರ ಜೀವನ ಸೌಧ ನಿರ್ಮಾಣವಾಗುವುದೇ ಶಿಕ್ಷಣದಿಂದ ಎಂದು ಭಾವಿಸಿ ಅದಕ್ಕೆ ತಕ್ಕಂತೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾನೆ.
ವಿನಾಯಕ ಬಾಕಳೆ: ಈ ಬಾಲಕನನ್ನು ಗಣನೆಗೆ ತೆಗೆದುಕೊಂಡ ಮೇಲೆ ಚಲನೆಯೇ ಜೀವನ ಎನ್ನುವ ಮಾತಿಗೆ ಸಮ್ಮತಿಸಬೇಕಾಗುತ್ತದೆ. ಹುಟ್ಟಿನಿಂದಲೇ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ವಿನಾಯಕ ಇಲ್ಲಿಯವರೆಗೆ ತೆವಳಿಕೊಂಡು ಜೀವನದ ಜೊತೆಗೆ ಎಸ್ಸೆಸ್ಸೆಲ್ಸಿ ಹಂತಕ್ಕೂ ತಲುಪಿದ್ದಾನೆ.
ರಾಜು ಉಗ್ಗಿನಕೇರಿ: ಪಾದಗಳ ಅಂಗವೈಕಲ್ಯ ಈ ಬಾಲಕನಿಗೆ ಶಾಪವಾಗಿಲ್ಲ. ದೌರ್ಬಲ್ಯ ತನ್ನ ಸಾಮರ್ಥ್ಯವಾಗಿಸಬೇಕು ಎಂದು ಬಯಸುತ್ತಿರುವ ರಾಜು ವಿಶ್ವಧರ್ಮ ಸಂಸ್ಥೆಯ ನೆರಳಿನಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶ್ರೀಕಾರ ಹಾಕಿದ್ದಾನೆ.
ರಾಯಪ್ಪ ಅರಕೇರಿ: ಒಂದು ಕಾಲು ಮಡಚಲು ಬಾರದು. ಇನ್ನೊಂದು ಕಾಲು ಸ್ವಾಧೀನದಲ್ಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾಧನೆ ಮಾಡಲು ಹೊರಟಿರುವ ರಾಯಪ್ಪಗೆ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟ. ಆ ನಿಟ್ಟಿನಲ್ಲಿ ಸೋಮವಾರ ತನ್ನ ಮೊದಲ ಹೆಜ್ಜೆ ಇರಿಸಿದ್ದಾನೆ.