ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗ್ರಾಪಂ ತಿಕ್ಕಾಟ: ಸೂರಿಗಾಗಿ ಬಡವರ ಪರದಾಟ

Vishwanath S
Updated On : 6 Apr 2013, 11:59 am

ಕನ್ನಡಪ್ರಭ ವಾರ್ತೆ, ಕುಂದಗೋಳ, ಏ. 5
ಚುನಾವಣೆ ಬಂದರೆ ಎಲ್ಲ ರಾಜಕೀಯ ಪಕ್ಷಗಳು ಗ್ರಾಮೀಣ ಪ್ರದೇಶಗಳಿಗೆ ದಿನವಿಡೀ ವಿದ್ಯುತ್, ರಸ್ತೆ ನಿರ್ಮಾಣ, ಕುಡಿಯುವ ನೀರು ಹೀಗೆ ಬಣ್ಣಬಣ್ಣದ ಭರವಸೆ ನೀಡುತ್ತ ಬಂದಿವೆ. ಇದೇ ರೀತಿ 65 ವರ್ಷ ಗತಿಸಿದರೂ ಗ್ರಾಮೀಣ ಪ್ರದೇಶದ ಚಿತ್ರಣ ಇನ್ನೂ ಬದಲಾಗಿಲ್ಲ. ಅದರಲ್ಲೂ ವಿಶೇಷವಾಗಿ ಬಡವರಿಗೆ ಸಿಗಬೇಕಾದ ಸೂರು ಇನ್ನೂ ತಿರಕನ ಕನಸಾಗಿ ಉಳಿದಿದೆ.
ತಾಲೂಕಿನ ರೊಟ್ಟಿಗವಾಡ ಗ್ರಾಪಂ ವ್ಯಾಪ್ತಿಯ ಬರದ್ವಾಡ ಗ್ರಾಮದ ಈರಪ್ಪ ರಿತ್ತಿಗೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ. ಸುಮಾರು 20 ವರ್ಷಗಳ ಹಿಂದೆ ಅವರ ಮನೆ ಕುಸಿದು ಬಿದ್ದಿದ್ದು ತನ್ನ ಮನೆ ನಿರ್ಮಿಸಿಕೊಳ್ಳಲಾಗಿಲ್ಲ. ಗೋಣಿ ಚೀಲಗಳಿಂದ ನಿರ್ಮಿಸಿದ ಗುಡಿಸಲಿನಲ್ಲಿ ತನ್ನ ಕುಟುಂಬ ಜೀವನ ಸಾಗಿಸುರುವುದನ್ನು ಕಂಡು ಅದೆಷ್ಟೋ ಜನರ ಮನ ಕಲುಕಿದೆ.
ರೊಟ್ಟಿಗವಾಡ ಗ್ರಾಪಂಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. 3 ವರ್ಷಗಳ ಹಿಂದೆ ಬಸವ ಯೋಜನೆ ಅಡಿಯಲ್ಲಿ ಇವರ ಪತ್ನಿ ಫಲಾನುಭವಿಯಾಗಿದ್ದು, ತಾಲೂಕಿನ ಸಬ್ ರಿಜಿಸ್ಟ್ರಾರ್‌ನಲ್ಲಿ ನೋಂದಣಿ ಆಗಿದೆ. ಮನೆ ನಿರ್ಮಿಸಿಕೊಳ್ಳಲು ಇವರ ಕೈಲ್ಲಿ ಬಿಡಿಗಾಸೂ ಇಲ್ಲ. ಅದೇ ಬರದ್ವಾಡದ ಅನೇಕ ಫಲಾನುಭವಿಗಳು ಈ ಯೋಜನೆಯಲ್ಲಿ ಆಯ್ಕೆಯಾಗಿದ್ದು, ಕೆಲವರು ಸಾಲ ಮಾಡಿ ಮನೆ ನಿರ್ಮಿಸಿಕೊಂಡಿದ್ದಾರೆ. ಇಲ್ಲಿವರೆಗೆ ಗ್ರಾಪಂ ಕಾರಣಗಳನ್ನೊಡ್ಡಿ ಹಣ ನೀಡದೇ ಸತಾಯಿಸುತ್ತಿದೆ.ಕಸ್ತೂರೆವ್ವ ನಿಂಗೂಲಿ, ಬಸವಣ್ಣೆವ್ವ ರಿತ್ತಿ ಸೇಕಿದಂತೆ ಅನೇಕ ಫಲಾನುಭವಿಗಳು ಮನೆ ನಿರ್ಮಿಸಿಕೊಂಡು ಹಣಕ್ಕಾಗಿ ಗ್ರಾಪಂಗೆ ಅಲೆದು ಹೈರಾಣಾಗಿದ್ದಾರೆ.
ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಸಂದರ್ಭದಲ್ಲಿ ಸದಸ್ಯರಲ್ಲಿ ಎರಡು ಗುಂಪಾಗಿದ್ದು, ಎರಡೂ ಗುಂಪುಗಳಲ್ಲಿ ಹೊಂದಾಣಿಕೆ ಇಲ್ಲದಿರುವುದು ಯಾವ ಅಭಿವೃದ್ಧಿ ಕೆಲಗಳೂ ಆಗುತ್ತಿಲ್ಲ. ಫಲಾನುಭವಿಗಳಿಗೂ ಹಣ ತಲುಪುತ್ತಿಲ್ಲ. ಹೀಗಾಗಿ, ಬಡವರ ಸೂರಿನ ಕನಸಿಗೆ ಕಲ್ಲುಬಿದ್ದಂತಾಗಿದೆ.
ನಾಲ್ಕು ವರ್ಷದ ಹಿಂದೆ ಗ್ರಾಮದ ಮುದುಕಪ್ಪ ದುರಗಪ್ಪ ಮಾದರ ಎಂಬುವವರ ಮನೆ ಬಿದ್ದು ಒಂದು ಸಾವು ಸಂಭವಿಸಿತ್ತು. ಆಗ ಭೇಟಿ ನೀಡಿದ್ದ  ತಹಸೀಲ್ದಾರ್ ಹಾಗೂ ಶಾಸಕರು ನೆರವು ನೀಡಿ ಮನೆಯನ್ನೂ ಮಂಜೂರು ಮಾಡಿದ್ದರು. ಆದರೆ, ಇತರರಿಗೆ ಹಣ ನೀಡದ್ದರಿಂದ ಹೆದರಿ ಮುದುಕಪ್ಪ ಮನೆ ನಿರ್ಮಿಸಿಕೊಳ್ಳುತ್ತಿಲ್ಲ. ಇದರಿಂದ ಇವನ ಕುಟುಂಬವೇ ಬೀದಿಗೆ ಬಿದ್ದಿದೆ.

-ಶೀತಲ ಎಸ್. ಮುರಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement