ಡೆಟಾ ಮೈನಿಂಗ್ ಕಾರ್ಯಾಗಾರ
ಧಾರವಾಡ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಕಾಲೇಜಿನ ಗಣಕಯಂತ್ರ ವಿಭಾಗವು ವಿಜ್ಞಾನ ಮತ್ತು ತಾಂತ್ರಿಕ ಕಾಲೇಜಿನ ಉಪನ್ಯಾಸಕರಿಗಾಗಿ ಡೆಟಾ ಮೈನಿಂಗ್ ವಿಷಯದ ಮೇಲೆ ಏ. 4ರಿಂದ ಮೂರು ದಿನಗಳ ಕಾಲ ಕಾರ್ಯಾಗಾರ ಹಮ್ಮಿಕೊಂಡಿದೆ. ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ವಿದ್ಯಾ ಸಂಸ್ಥೆಗಳಿಂದ ಉಪನ್ಯಾಸಕರು ಭಾಗವಹಿಸಲಿದ್ದಾರೆ. ಕವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ ಉದ್ಘಾಟಿಸಿಲಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಜಿನೇಂದ್ರ ಪ್ರಸಾದ, ಪ್ರಾಂಶುಪಾಲ ಡಾ. ಎಸ್. ಮೋಹನಕುಮಾರ ಕಾರ್ಯಾಗಾರಕ್ಕೆ ಆಗಮಿಸಲಿದ್ದಾರೆ ಎಂದು ಸಂಯೋಜಕರಾದ ಪ್ರೊ. ಜೆ.ವಿ. ವಡವಿ ಹಾಗೂ ಪ್ರೊ. ಆರ್.ಎನ್. ಯಾದವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
15ರಿಂದ ರಂಗಾಯಣದಲ್ಲಿ ಚಿಣ್ಣರ ಮೇಳ ಬೇಸಿಗೆ ಶಿಬಿರ
ಧಾರವಾಡ: ಏ. 15ರಿಂದ ಮೇ 11ರ ವರೆಗೆ ರಂಗಾಯಣದ ಆವರಣದಲ್ಲಿ ಚಿಣ್ಣರ ಮೇಳ-2013 ವಿಶೇಷ ಮಕ್ಕಳ ಬೇಸಿಗೆ ಶಿಬಿರ ನಡೆಯಲಿದೆ. ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಂಗಾಯಣದ ನಿರ್ದೇಶಕ ಸುಭಾಸ ನರೇಂದ್ರ, ಶಿಬಿರದಲ್ಲಿ 7ರಿಂದ 15 ವರ್ಷದೊಳಗಿನ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದ್ದು, ಶಿಬಿರದಲ್ಲಿ ಹಿರಿಯ ಸಾಧಕರೊಂದಿಗೆ ಮುಖಾಮುಖಿ ಹಾಗೂ ಸಂವಾದ, ಜಾನಪದ ಕಲೆಗಳ ಪ್ರಾತ್ಯಕ್ಷಿಕೆ, ಪ್ರಶಸ್ತಿ ವಿಜೇತ ಮಕ್ಕಳ ಚಲನಚಿತ್ರ ಪ್ರದರ್ಶನ, ಶ್ವಾನದಳ, ಮಕ್ಕಳ ಮನೋರೋಗ ತಜ್ಞರೊಂದಿಗೆ ಸಂವಾದ ಮುಂತಾದವುಗಳ ಕುರಿತು ತಿಳಿಸಿಕೊಡಲಾಗುತ್ತಿದೆ ಎಂದರು. ಅಲ್ಲದೇ, ಶಿಬಿರದ ಮಕ್ಕಳಿಂದ ನಾಟಕ ಪ್ರದರ್ಶನ, ಭರತನಾಟ್ಯ, ಜಾನಪದ ನೃತ್ಯ, ಕೋಲಾಟ, ಹಾಸ್ಯದ ಅಣಕು ಮುಂತಾದವುಗಳನ್ನು ಹಮ್ಮಿಕೊಂಡಿದ್ದು, 300ರಿಂದ 350 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ಈ ಕುರಿತು ಮೈಸೂರಿನಿಂದ ಆಗಮಿಸಿರುವ ರಂಗಾಯಣದ ಕಲಾವಿದರೊಂದಗೆ ಮಾತನಾಡಿ ಅವರನ್ನೂ ಸಹ ಇದರಲ್ಲಿ ತೊಡಗಿಸಿಕೊಳ್ಳಲಾಗುವುದು. ಶಿಬಿರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ 500 ಪ್ರವೇಶ ಶುಲ್ಕ ನಿಗದಿಪಡಿಸಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆ.ಎಚ್. ಚನ್ನೂರ ಇದ್ದರು.
ಕಾನ್ಸರ್ ತಡೆಗಟ್ಟಲು ಜಾಗೃತಿ ಅಗತ್ಯ
ಧಾರವಾಡ: ಕಾನ್ಸರ್ ರೋಗದ ಕುರಿತು ಬಹಳ ಜನರಿಗೆ ಅರಿವಿಲ್ಲ. ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ನಿರಂತರ ಜನ ಜಾಗೃತಿ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎನ್. ಅಂಗಡಿ ಹೇಳಿದರು. ನಗರದ ಭಾರತೀಯ ಕುಟುಂಬ ಯೋಜನಾ ಸಂಘದ ಕಚೇರಿಯಲ್ಲಿ ಲಯನ್ಸ್ ಕ್ಲಬ್, ಮಯೂರ ಆದಿತ್ಯ ರೆಸಾರ್ಟ್ ಅಕ್ಷಯ ಪಾತ್ರೆ ಫೌಂಡೇಶನ್, ಹು-ಧಾ ಸಹಕಾರಿ ಹಾಲು ಒಕ್ಕೂಟದ ಜಂಟಿ ಸಹಯೋಗದಲ್ಲಿ ನಡೆದ ಕಾನ್ಸರ್ ಜಾಗೃತಿ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಹೆಚ್ಚಾಗಿ ಕಾನ್ಸರ್ ಕಾಣಿಸಿಕೊಳ್ಳುತ್ತಿದೆ. ಬಹುತೇಕರು ಅದನ್ನು ಒಂದು ಸಣ್ಣ ಗಂಟಾಗಿದೆ ಎಂದು ನಿರ್ಲಕ್ಷ್ಯ ತೋರಿ ಕೊನೆಗಳಿಗೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಮುಂಬೈನ ಕಾನ್ಸರ್ ರೋಗಿಗಳ ಸಹಾಯ ಸಂಸ್ಥೆಯ ನಿರ್ದೇಶಕಿ ನೀತಾ ಮೋರೆ, ಭಾರತೀಯ ಕುಟುಂಬ ಯೋಜನಾ ಸಂಘ ವಿವಿಧ ಸಂಸ್ಥೆಗಳ ಸಹಯೋಗ ಪಡೆದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ತಮಗೆ ಸಂತಸ ತಂದಿದೆ ಎಂದರು. ಡಾ. ರಾಜನ್ ದೇಶಪಾಂಡೆ, ಉಸ್ಮಾ ದೇಸಾಯಿ, ಸುನಂದಾ ಮೋರೆ, ವಿ.ವಿ. ಕಟ್ಟಿ, ಸುಮಿತ್ರಾ ನಾಯ್ಕ್, ಸುಜಾತ ಅನಿಶೆಟ್ಟರ್, ಎಸ್.ವಿ. ಕುಲಕರ್ಣಿ ಇತರರು ಇದ್ದರು.
ನಾಳೆ ಗೌರವಾರ್ಪಣೆ
ಧಾರವಾಡ: ಇಲ್ಲಿನ ವೀರಶೈವ ಜಂಗಮ ಸಂಸ್ಥೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವೀರಶೈವ ಸಾಧಕರನ್ನು ಗೌರವಿಸುವ ಸಮಾರಂಭವನ್ನು 7ರಂದು ಬೆಳಿಗ್ಗೆ 10.30ಕ್ಕೆ ಕಲ್ಯಾಣ ನಗರದಲ್ಲಿರುವ ಸಿದ್ಧರಾಮೇಶ್ವರ ಮಾರ್ಗದರ್ಶಿ ಸಂಸ್ಥೆಯ ಸಭಾಭವನದಲ್ಲಿ ಹಮ್ಮಿಕೊಂಡಿದೆ. ಮುಂಡರಗಿಯ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠದ ಡಾ. ಅನ್ನದಾನೇಶ್ವರ ಮಹಾಶಿವಯೋಗಿಗಳು, ಡಾ.ಕೆ.ಸಿ. ಹಿರೇಮಠ, ಪಾಲಿಕೆ ಸದಸ್ಯ ಶಿವು ಹಿರೇಮಠ, ಹಿರಿಯ ಲೆಕ್ಕಪರಿಶೋಧಕ ಎಂ.ಎನ್. ಹಿರೇಮಠ ಹಾಗೂ ಹು-ಧಾ ಪ್ರಾಧಿಕಾರದ ಅಧ್ಯಕ್ಷ ಲಿಂಗರಾಜ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಧ್ಯಕ್ಷತೆಯನ್ನು ಜಂಗಮ ಸಂಸ್ಥೆ ಅಧ್ಯಕ್ಷ ಜಿ.ಆರ್. ಹಿರೇಮಠ ವಹಿಸುವರು.
ನಾಳೆ ಗ್ರಂಥಗಳ ಬಿಡುಗಡೆ
ಧಾರವಾಡ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನವಲಗುಂದದ ವಿವೇಕಾನಂದ ಪ್ರಕಾಶನ ಜಂಟಿಯಾಗಿ 7ರ ಸಂಜೆ 6ಕ್ಕೆ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಬಯಲು ಸಭಾಂಗಣದಲ್ಲಿ ಡಾ. ಸಂಗಮೇಶ ಸವದತ್ತಿಮಠ ಅವರ ಅಂತರ್ಜಾಲ ತಾಣ, ಗ್ರಂಥಗಳ ಬಿಡುಗಡೆ ಹಾಗೂ ಸಂಶೋಧನ ವ್ಯಾಸಂಗ ದ್ವೈಮಾಸಿಕ ಪತ್ರಿಕೆಯ ಬೆಳ್ಳಿಹಬ್ಬದ ಸಂಚಿಕೆ ಬಿಡುಗಡೆ ಸಮಾರಂಭ ನಡೆಯಲಿದೆ. ಶರಣ ಹಾಗೂ ಅಕ್ಷತಾ ಸವದತ್ತಿಮಠ ಸಿದ್ಧಪಡಿಸಿದ ಅಂತರ್ಜಾಲ ತಾಣವನ್ನು ಹಿರಿಯ ಸಾಹಿತಿ ಡಾ.ಎಸ್.ಎಂ. ವೃಷಭೇಂದ್ರಸ್ವಾಮಿ ಹಾಗೂ ಕುತೂಹಲ ಗ್ರಂಥವನ್ನು ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಮತ್ತು ಭಾಷಾ ಬೆಳಕಿಂಡಿ ಗ್ರಂಥವನ್ನು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಬಸವರಾಜ ಜಗಜಂಪಿ ಬಿಡುಗಡೆ ಮಾಡುತ್ತಾರೆ.