ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಿಜೆಪಿ ಭ್ರಷ್ಟಾಚಾರದ ಮೂಲ ಪಕ್ಷ

Vishwanath S
Updated On : 6 Apr 2013, 12:02 pm

ಬೆಳಗಾವಿ: ಬಿಜೆಪಿ ಬೃಹತ್ ಭ್ರಷ್ಟಾಚಾರವೆಸಗಿದ ಬ್ರಹ್ಮಾಂಡ ಪಕ್ಷವಾದರೆ, ಪರ್ಸೆಂಟೆಜ್ ವ್ಯವಹಾರದಲ್ಲಿ  ಬಿಜೆಪಿಯೊಂದಿಗೆ ಕಿತ್ತಾಡಿ ಹುಟ್ಟಿದ್ದು ಕೆಜೆಪಿ ಹಾಗೂ ಬಿಎಸ್‌ಆರ್...!
ರಾಜ್ಯದ ಸಂಪತ್ತನ್ನು ಲೂಟಿ ಹೊಡೆದು ಭ್ರಷ್ಟಾಚಾರದಲ್ಲಿ ಮುಳುಗೆದ್ದಿರುವ ಬಿಜೆಪಿ ನಾಯಕರಿಗೆ  ರಾಜ್ಯದ ಜನತೆಯ ಮುಂದೆ ಬರಲು ಯಾವುದೇ ನೈತಿಕತೆ ಇಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರದಿಂದ ಸಿಡಿದಿರುವ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ತಾವು ಇದೀಗ ಸಾಚಾ ಎನ್ನುವಂತೆ ಸೋಗು ಹಾಕುತ್ತಿವೆ.
ಪ್ರಾದೇಶಿಕ ಪಕ್ಷಗಳೇ ರಾಜ್ಯದ ಭವಿಷ್ಯದ ಪಕ್ಷಗಳೆಂದು ಬೊಗಳೆ ಬಿಡುತ್ತಾ ಜನರನ್ನು ಮರಳು ಮಾಡಲೆತ್ನಿಸುತ್ತಿವೆ ಎಂದು ಕಾಂಗ್ರೆಸ್ ಬೆಳಗಾವಿ ಜಿಲ್ಲಾಧ್ಯಕ್ಷೆ, ಎಐಸಿಸಿ ಸದಸ್ಯೆ ಲಕ್ಷ್ಮಿ ಹೆಬ್ಬಾಳಕರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸೀಮಿತ ಮನೋಭಾವ, ತತ್ವಾದರ್ಶಗಳನ್ನು ಹೊಂದಿರುವ ಪ್ರಾದೇಶಿಕ ಪಕ್ಷಗಳಿಂದ ರಾಜ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಅದರಲ್ಲಿಯೂ ಭ್ರಷ್ಟಾಚಾರ ವ್ಯವಹಾರದಿಂದ ಹುಟ್ಟಿಕೊಂಡಿರುವ ಇಂತಹ ಪಕ್ಷಗಳನ್ನು ಜನತೆ ಸದಾ ಕಾಲ ದೂರವಿಡಬೇಕು ಎಂದರು.
ಅವರು 'ಕನ್ನಡಪ್ರಭ'ಕ್ಕೆ ಗುರುವಾರ ನೀಡಿದ ವಿಶೇಷ ಸಂದರ್ಶನದಲ್ಲಿ, ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಭ್ರಷ್ಟಾಚಾರ ಮಿತಿ ಮೀರಿ ನಡೆದಿದೆ.  ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಒಂದಿಲ್ಲೊಂದು ಹಗರಣದಲ್ಲಿ ಶಾಮೀಲಾಗಿದ್ದಾರೆ. ಭ್ರಷ್ಟಾಚಾರ, ಹಗರಣ ಮಾಡಿದ್ದೇ ಬಿಜೆಪಿ ಸರ್ಕಾರದ ಸಾಧನೆ. ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಲೂಟಿ ಮಾಡಲಾಗಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾದವರು ಒಬ್ಬೊಬ್ಬರಾಗಿ ಸೆರೆಮನೆಗೆ ಹೋಗಿ ಬಂದಿದ್ದಾರೆ. ರಾಜ್ಯದ ಗಣಿ ಸಂಪತ್ತು ಲೂಟಿ ಹೊಡೆದವರ ಸ್ಥಿತಿ ಇಂದು ಏನಾಗಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಿರುವ ವಿಚಾರ. ರಾಜ್ಯದ ಅಭಿವೃದ್ಧಿಗಿಂತ ಬಿಜೆಪಿ ನಾಯಕರಿಗೆ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯವಾಗಿದ್ದು, ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದಾರೆ. ಇದರಿಂದಾಗಿ ರಾಜ್ಯದ ಜನರು ವಿವಿಧ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ನಿರೀಕ್ಷೆ ಹುಸಿ: ಭೂಹಗರಣ, ಅಧಿಕಾರಕ್ಕಾಗಿ ಕಿತ್ತಾಟ, ಒಳಜಗಳ, ಗುಂಪುಗಾರಿಕೆಯಿಂದಾಗಿ ಬಿಜೆಪಿ ಸರ್ಕಾರ ರಾಜ್ಯದ ಆರು ಕೋಟಿ ಜನತೆಯ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಕೋಟ್ಯಂತರ ರುಪಾಯಿ ಖರ್ಚು ಮಾಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದಾಗಿ ಹೇಳಿಕೊಳ್ಳುತ್ತಿದ್ದರೂ ಅವು ಇನ್ನೂ ಹಳ್ಳಿಗಳಿಗೆ ತಲುಪುವಲ್ಲಿ ವಿಫಲವಾಗಿವೆ. ಸುವರ್ಣ ಗ್ರಾಮೋದಯ, ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ, ನೀರಾವರಿ ಇಲಾಖೆಗಳಿಂದ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದರೂ ಅನೇಕ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಕುಡಿಯುವ ನೀರಿಗಾಗಿ ರೂಪಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಳ್ಳದ ಕಾರಣ ಉತ್ತರ ಕರ್ನಾಟಕ ಭಾಗದ ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಲಕ್ಷ್ಮಿ ಹೆಬ್ಬಾಳಕರ ಕಟುವಾಗಿ ಖಂಡಿಸಿದರು.
ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವಿಲ್ಲ: ಪ್ರಾದೇಶಿಕ ಪಕ್ಷಗಳಿಂದ ಸ್ಥಿರ ಹಾಗೂ ಸುಭದ್ರ ಸರ್ಕಾರ ನೀಡುವುದು ಅಸಾಧ್ಯ. ಅವುಗಳಿಗೆ ರಾಜ್ಯದಲ್ಲಿ ಭವಿಷ್ಯವಿಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನಿಂದ ಮಾತ್ರ ಸುಭದ್ರ ಸರ್ಕಾರ ನೀಡಲು ಸಾಧ್ಯ. ಎಲ್ಲಾ ವರ್ಗದ ಜನತೆಗೆ ಉತ್ತಮ ಆಡಳಿತ ನೀಡಲು ಸಾಧ್ಯವಿರುವ ನಿಟ್ಟಿನಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಬೆಂಬಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ರಾಹುಲ್‌ಗಾಂಧಿಯವರೇ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಬಿಂಬಿಸುತ್ತದೆ. ಭ್ರಷ್ಟಾಚಾರ ನಿರ್ಮೂಲನೆಗೆ ಮಾಹಿತಿ ಹಕ್ಕು ಕಾಯಿದೆ, ಗ್ರಾಮಾಂತರ ಪ್ರದೇಶದ ಜನತೆಯ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಉದ್ಯೋಗ ಖಾತ್ರಿ ಯೋಜನೆ, ಬಡ ಜನತೆಗೆ ಆಹಾರ ಪೂರೈಸಲು ಆಹಾರ ಭದ್ರತೆ ಯೋಜನೆಯಂತಹ ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಜನತೆಗೆ ಸಾಕಷ್ಟು ಅನುಕೂಲವಾಗುವುದರಲ್ಲಿ ಯಾವುದೇ ಅನುಮಾನವೇ ಬೇಡ.
 ಎಲ್ಲ ರಾಜಕೀಯ ಪಕ್ಷಗಳಲ್ಲಿ ಗೆಲ್ಲುವ ಕುದುರೆಗಳಿಗಾಗಿಯೇ ಹುಡುಕಾಟ ನಡೆಯುತ್ತದೆ. ಮಹಿಳೆಯರು ಗೆಲ್ಲುವ ಸಾಮರ್ಥ್ಯ ಹೊಂದಿದರೆ ಖಂಡಿತವಾಗಿಯೂ ಹೆಚ್ಚಿನ ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸುಲಭವಾಗಿ ದೊರೆಯುತ್ತದೆ. ಇಂತಹ ಆಸಕ್ತಿಯನ್ನು ಮಹಿಳೆಯರು ಹೊಂದಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಸ್ಥಾನಗಳನ್ನು ಬಿಟ್ಟುಕೊಡಲಾಗುತ್ತದೆ. ಅದರಂತೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿಯೂ ಹೆಚ್ಚಿನ ಅವಕಾಶ ದೊರೆಯಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ದೃಢ ನಿರ್ಧಾರ ಬೆಳೆಸಿಕೊಳ್ಳಬೇಕು. ಅಭ್ಯರ್ಥಿಗಳ ಹಿನ್ನೆಲೆಯನ್ನು ಅಳೆದು ತೂಗಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ. ಹಾಗಾಗಿ ಮಹಿಳೆಯರು ರಾಜಕೀಯದಲ್ಲಿ ಸಮರ್ಥವಾಗಿ ಬೆಳೆಯಬೇಕು. ಮೀಸಲು ಮಾತ್ರ ಮಾನದಂಡವಾಗಲೇಬಾರದು.
ಅಭಿವೃದ್ಧಿಯೇ ನಮ್ಮ ಅಜೆಂಡಾ:  ಚುನಾವಣೆ ಸಂದರ್ಭದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯೇ ನಮ್ಮ ಅಜೆಂಡಾ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ. ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಕ್ಷೇತ್ರದ ಸಮಗ್ರ ಅಭಿವೃದ್ಧಿ, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಒದ್ಯತೆ ನೀಡಲಾಗುವುದು ಎಂದು ಲಕ್ಷ್ಮಿ ತಿಳಿಸಿದರು. 

-ಶ್ರೀಶೈಲ ಮಠದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement