ಕೆಜೆಪಿ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ
ಕೊಪ್ಪಳ/ಗಂಗಾವತಿ: ರಾಜ್ಯದಲ್ಲಿ ಕೆಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮೀನುಗಾಗರು, ರೈತರು ಮತ್ತು ನೇಕಾರರ ರು. 1 ಲಕ್ಷ ಸಾಲ ಮನ್ನಾ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕೊಪ್ಪಳ ಹಾಗೂ ಗಂಗಾವತಿಯಲ್ಲಿ ಏರ್ಪಡಿಸಿದ್ದ ಕೆಜೆಪಿ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ತಿಳಿಸಿದ ಅವರು, 65 ವರ್ಷ ದಾಟಿದ ರೈತರಿಗೆ ನಿವೃತ್ತಿ ವೇತನ ಜಾರಿಗೆ ತರುವುದಾಗಿ ಭರವಸೆ ನೀಡಿದರು.
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಇದ್ದ ಭಾಗ್ಯಲಕ್ಷ್ಮೀ ಯೋಜನೆಯನ್ನು ಎಲ್ಲ ವರ್ಗದ ಜನರಿಗೆ ವಿಸ್ತರಿಸಲಾಗುತ್ತದೆ. ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಕರ್ನಾಟಕದಲ್ಲಿಯೇ ಮೊದಲ ಮಹಿಳಾ ಬ್ಯಾಂಕ್ ಸ್ಥಾಪನೆ ಮಾಡಿ ರು. 2 ಸಾವಿರ ಕೋಟಿ ಮೀಸಲಿಡುವುದಾಗಿ ತಿಳಿಸಿದರು.
ಸಿಎಂ ಆಗಿದ್ದಾಗ ಪರಿಶಿಷ್ಟ ಜಾತಿ, ಪಂಗಡದವರಿಗೆ ರು. 4,630 ಕೋಟಿ ಖರ್ಚು ಮಾಡಿದ್ದು, ಇದು ದೇಶದಲ್ಲಿ ಒಂದು ದಾಖಲೆಯಾಗಿದೆ. 2011-12ನೇ ಸಾಲಿನಲ್ಲಿ ರು. 426 ಕೋಟಿಗಳನ್ನು ಅಲ್ಪ ಸಂಖ್ಯಾತರಿಗೆ ಖರ್ಚು ಮಾಡಿರುವುದಾಗಿ ಹೇಳಿದರು. ತಾವು ಮತ್ತು ಅಭ್ಯರ್ಥಿ ಬಸವರಾಜ ಪಾಟೀಲ ಅನ್ವರಿ ಒಂದೇ ಇದ್ದಂತೆ. ಅವರನ್ನು ಚುನಾಯಿಸುವ ಮೂಲಕ ರಾಜ್ಯದಲ್ಲಿ ಕೆಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಗಂಗಾವತಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ ಮಾತನಾಡಿ, ನಾನು ಆಕಾಂಕ್ಷಿಯಾಗಿರಲ್ಲಿಲ್ಲ. ಯಡಿಯೂರಪ್ಪನವರ ಕೈ ಬಲಪಡಿಸಲು ಮುಂದಾಗಿದ್ದೆ. ಆದರೆ, ಬಿಎಸ್ವೈ ನನಗೆ ಟಿಕೆಟ್ ನೀಡಿ ಸ್ಪರ್ಧಿಸಲು ಸೂಚಿಸಿದರು. ಚುನಾವಣೆಯಲ್ಲಿ ಸೋತರೂ ಗಂಗಾವತಿ ಕ್ಷೇತ್ರದ ಸೇವೆ ಮಾಡುವುದಾಗಿ ಹೇಳಿದರು. ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು.