ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಾಸುಕೊಟ್ಟು ಕಣ್ಣೀರಿಡುವ ಖಾದ್ರಿ

Vishwanath S
Updated On : 8 Apr 2013, 11:05 am

ಕನ್ನಡಪ್ರಭ ವಾರ್ತೆ,ಹಾವೇರಿ, ಏ. 6
ವ್ಹಾರೇವಾ... ಅಜ್ಜಂಪೀರ್ ಖಾದ್ರಿ ಕ್ಯಾ ಬಾತ್ ಹೈ, ಚುನಾವಣೆಯಲ್ಲಿ ಗೆಲ್ಲಬೇಕೆಂದು ಏನೆಲ್ಲಾ ನಾಟಾಕಾ ಮಾಡಿದ್ರಿ. ಅತ್ತು ಕರೆದು ನೀವೇನೇ ನಾಟಕಾ ಮಾಡಿದ್ರು ಈ ಬಾರಿಯೂ ಆಟಾ ನಡಿಯಲ್ಲ...
ಹೀಗೆಂದು ಆಡಿಕೊಂಡು ಮುಸಿ ಮುಸಿ ನಗುತ್ತಿದ್ದಾರೆ ಶಿಗ್ಗಾಂವಿ ಕ್ಷೇತ್ರದ ಜನತೆ. ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಆಸೆಯಿಂದ ಅಭ್ಯರ್ಥಿಗಳು ಮತದಾರರನ್ನು ತಮ್ಮದೇ ಆದ ರೀತಿಯಲ್ಲಿ ಓಲೈಸುತ್ತಾರೆ. ಕಂಡ ಕಂಡವರಿಗೆ ಕೈ ಮುಗಿಯುವುದು ಕಾಲಿಗೆ ಬೀಳುವುದು. ಅಪ್ಪಾ ಅಣ್ಣಾ ತಮಗೇ ಮತ ಹಾಕಿ ಎಂದು ಅಂಗಲಾಚುವ ತಂತ್ರ ಸಹಜ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ರಾಜಕೀಯದಲ್ಲಿ ಹೊಸ ತಂತ್ರ ಹೂಡಿದ್ದಾರೆ ಅಜ್ಜಂಫೀರ ಖಾದ್ರಿ. ಸಾಲದ್ದಕ್ಕೆ ಅಧಿಕಾರಕ್ಕಾಗಿ ಎಂಥ ಕಾರ್ಯಕ್ಕೂ ಹೇಸುವುದಿಲ್ಲ ಎಂಬುದನ್ನೂ ಸಾಬೀತು ಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತರೂ ಬುದ್ಧಿ ಬಂದಿಲ್ಲ ಎಂದು ಜನ ಅಜ್ಜಂಪೀರ್ ಆಡಿದ  ನಾಟಕವನ್ನು ಮೆಲಕು ಹಾಕುತ್ತಾ ಹೊಟ್ಟೆ ಹುಣ್ಣಾಗುವ ಹಾಗೆ ಆಡಿ ನಗುತ್ತಿದ್ದಾರೆ.
ಈಗಿನ ರಾಜಕೀಯದಲ್ಲಿ ಗೆಲ್ಲುವ ಕುದುರೆಯಾಗಬೇಕೆಂಬ ತಂತ್ರದಲ್ಲಿ ಜನರನ್ನು ಮೂಢರನ್ನು ಮಾಡಲು ಖಾದ್ರಿಯವರು ಹೊರಟಿರುವುದು ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಈ ಕಾಲದಲ್ಲಿ ಭಿನ್ನವಿಭಿನ್ನ ತಂತ್ರಗಳ ಮೂಲಕ ಜನರ ಮನಸ್ಸು ಸೆಳೆಯುವ ಕೆಲಸಕ್ಕೆ ಕೈಹಾಕುತ್ತಾರೆ. ಅಂದಹಾಗೆ, ಕಳೆದ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಅಜ್ಜಂಪೀರ್ ಖಾದ್ರಿ ಈ ಬಾರಿ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಆತುರದಲ್ಲಿ ಮತದಾರರ ಮುಂದೆ ಹೋಗಿ ಸೋಗು ಮಾಡಿದ ನಾಟಕದ ಅಸಲಿ ವೃತ್ತಾಂತ ಬಯಲಾಗಿ ಪೇಚಿಗೆ ಸಿಲುಕಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಅಜ್ಜಂಪೀರ್ ಖಾದ್ರಿಗೆ ಹೇಳಿಕೊಳ್ಳುವ ವಿಷಯವಿಲ್ಲ. ಪ್ರತಿಸ್ಪರ್ಧಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿವರು ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದರೆ ಜನ ನಂಬಲ್ಲ. ಹೀಗಿದ್ದಾಗ ಬೊಮ್ಮಾಯಿಯವರನ್ನು ಶಪಿಸಿದರೆ ಕೆಲಸ ಕೆಡುತ್ತದೆ ಎಂದು ಲೆಕ್ಕ ಹಾಕಿದ ಅಜ್ಜಂಪೀರ್ ಖಾದ್ರಿ ಹೊಸ ನಾಟಕವಾಡಲು ಶುರು ಮಾಡಿದ್ದಾರೆ. ಆ ನಾಟಕಕ್ಕೆ ಶಿಗ್ಗಾಂವ್ ಕ್ಷೇತ್ರದ ಜನತೆ ಮೊಸಳೆ ಕಣ್ಣೀರು ಎಂಬ ಶಿರ್ಷಿಕೆ ಬೇರೆ ಕೊಟ್ಟಿದ್ದಾರೆ. ಶನಿವಾರ ಶಿಗ್ಗಾಂವಿ ತಾಲೂಕಿನ ತಳ್ಳಿಹಳ್ಳಿ ಗ್ರಾಮಕ್ಕೆ ತೆರಳಿದ ಅಜ್ಜಂಫೀರ್ ಖಾದ್ರಿ ಸಾಹೇಬ್ರು ಹೊಸ ನಾಟಕಕ್ಕೆ ನಾಂದಿ ಹಾಡಿದರು. ತಳಿಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕೈಗೊಂಡಿದ್ದ ಖಾದ್ರಿ, ಅಲ್ಲಿಗೆ ತೆರಳುವ ಮೊದಲೇ ತಮ್ಮ ಪರ ಜೈಕಾರ ಹಾಕುವವರಿಗೆ ಹಣ ಹಂಚಿಸಿದ್ದರೆನ್ನಲಾಗಿದೆ. ಇಷ್ಟಕ್ಕೆ, ಖಾದ್ರಿ ಸುಮ್ಮನಾಗಿದ್ದರೆ ಈ ಕಪಟ ನಾಟಕ ಹೊರ ಜಗತ್ತಿಗೆ ಗೊತ್ತಾಗುತ್ತಿರಲಿಲ್ಲವೇನೋ. ಸಮಾರಂಭದಲ್ಲಿಯೂ ಹಣ ಹಂಚುತ್ತಾರೆಂಬ ಸುದ್ದಿ ಹಬ್ಬಿಸಲಾಯಿತು. ತಮ್ಮ ಪರವಾಗಿ ಮತ ಚಲಾಯಿಸುವಂತೆ ಖಾದ್ರಿ, ಮತದಾರರಿಗೆ ಹಣ ನೀಡುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದಂತೆಯೇ, ಪ್ರಚಾರ ಕಾರ್ಯ ನಡೆದ ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು. ಆದರೆ, ಅಲ್ಲಿಗೆ ಬಂದ ಮತದಾರರಿಗೆ ಮಾತ್ರ ಹಣ ನೀಡಲಿಲ್ಲ. ಅಜ್ಜಂಪೀರ್ ಖಾದ್ರಿ ಜನ ಸೇರಿದ್ದನ್ನು ಕಂಡು ಫುಲ್ ಖುಷ್ ಆಗಿ ಯದ್ವಾತದ್ವಾ ಭಾಷಣ ಬಿಗಿದಿದ್ದಾರೆ. ಅಜ್ಜಂಪೀರ್  ಖಾದ್ರಿ ಭಾಷಣ ಮುಗಿಯುತ್ತದೆ ನಮ್ಮ ಕೈಗೆ ಹಣ ಬರುತ್ತದೆ ಎಂದು ಕೆಲ ಮತದಾರರು ತುದಿಗಾಲಲ್ಲಿ ನಿಂತಿದ್ದರು. ಆದರೆ ಭಾಷಣ ಮುಗಿಸುತ್ತಿದ್ದಂತೆಯೇ ಖಾದ್ರಿ ಸಾಹೇಬ್ರು ಮತದಾರರ ಬಳಿ ಬಂದು ನಾನು ಬಡವ, ದುಡ್ಡು ಕೊಟ್ಟು ಮತದಾರರನ್ನು ಖರೀದಿಸುವಷ್ಟು ಸಮರ್ಥನೂ ಅಲ್ಲ, ಅನ್ಯಾಯದಿಂದ ಮತ ಪಡೆಯುವವನು ಅಲ್ಲ, ದಯವಿಟ್ಟು ನನ್ನನ್ನು ಗೆಲ್ಲಿಸಿ, ತಮ್ಮ ಸೇವೆಗೆ ಅವಕಾಶ ಮಾಡಿಕೊಡಿ, ನೀವು ದುಡ್ಡು ಕೊಟ್ಟರೆ, ನಾನು ಚುನಾವಣಾ ಪ್ರಚಾರ ಕಾರ್ಯ ಕೈಗೊಳ್ಳುತ್ತೇನೆ, ನೀವೇ ನನ್ನನ್ನು ದುಡ್ಡುಕೊಟ್ಟು, ಗೆಲ್ಲಿಸಿ ಎಂದು ನಾಟಕವಾಡಿ ಅಜ್ಜಂಫೀರ್ ಗಳಗಳನೆ ಅತ್ತರು, ದುಡ್ಡು ಸಿಗುತ್ತದೆ ಎಂದು ಓಡೋಡಿ ಬಂದಿದ್ದ ಮತದಾರರಂತೂ ದಂಗುಬಡಿದವರಂತಾಗಿದ್ದರು.
ಸಾಲದ್ದಕ್ಕೆ ಈ ನಾಟಕವಾಡಲು ಮೊದಲೇ ತಯಾರಿಯಲ್ಲಿ ಬಂದಿದ್ದ ಖಾದ್ರಿ, ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂಬ ಖಯಾಲಿಯಿಂದ ಮಾಧ್ಯಮದವರನ್ನು ಕರೆಸಿದ್ದರು. ಈ ನಾಟಕದ ಒಳಮರ್ಮ ತಿಳಿಯದಾಗಿದ್ದ ಮಾಧ್ಯಮದವರು ಅದರಲ್ಲಿಯೂ ದೃಶ್ಯ ಮಾಧ್ಯಮದವರು ರಂಜಿತವಾಗಿ ಪ್ರಸಾರ ಮಾಡಿದರು. ಏತನ್ಮಧ್ಯೆ ತೆಗೆದುಕೊಳ್ಳಲು ಬಂದು, ಕೊಡುವ ಸಂಕಷ್ಟ ಎದುರಾಯಿತಲ್ಲ ಎಂದು ತಲೆಮೇಲೆ ಕೈ ಹೊತ್ತು ಕುಳಿತರು. ಈ ಮಧ್ಯೆ ಮೊದಲೇ ಹಣ ಪಡೆದುಕೊಂಡಿದ್ದ ಖಾದ್ರಿ ಕೆಲ ಬೆಂಬಲಿಗರು 100-200. ಖಾದ್ರಿ ಅವರ ಕೈಗಿಟ್ಟು ಖಾದ್ರಿಗೆ ಸಹಾಯ ಮಾಡಿದಂತೆ ಸೋಗು ಹಾಕಿದರು. ಹಣ ಪಡೆದುಕೊಂಡ ಖಾದ್ರಿ ಭಾರಿ ಸಹಾಯವಾಯಿತು ಎಂದು ಇನ್ನೊಂದು ಬಾರಿ ಕಣ್ಣೀರಿಟ್ಟು ನಾಟಕವಾಡಿದರು. ಆದರೆ, ಈ ಪೈಕಿ ಕೆಲವರಿಗೆ ಸಂದೇಹ ಬಂದು ಖಾದ್ರಿಯವರದ್ದು ಯಾಕೋ ಓವರ್ ಆಕ್ಟಿಂಗ್ ಆಯಿತು ಎಂದು ಗುಟ್ಟು ತಿಳಿಯಲು ಮುಂದಾದರು. ಆಗ ತಿಳಿದಿದ್ದು ಏನೆಂದರೆ ಸ್ವತಃ ಖಾದ್ರಿ ದುಡ್ಡು ಕೊಟ್ಟು ಈ ರೀತಿ ನಾಟಕ ಮಾಡಿಸಿದ್ದಾರೆಂಬುದು. ವ್ಹಾರೇವಾ ಖಾದ್ರಿ ಕ್ಯಾ ನಾಟಕ ಕಿಯಾ ಎಂದು ತುಂಬಾ ಹೊತ್ತು ಅಲ್ಲಿದ್ದರೆ ಕಿಸಿಗೇ ಕೈ ಹಾಕುತ್ತಾರೆಂದು ಎಣಿಸಿ ಕಾಲಿಗೆ ಬುದ್ಧಿ ಹೇಳಿದರು. ಆ ಬಳಿಕ ಖಾದ್ರಿ ನಾಟಕ ವೃತ್ತಾಂತ ಶಿಗ್ಗಾಂವಿಯಲ್ಲಿ ಚರ್ಚಿತ ಚರ್ವಣ ವಿಷಯವಾಗಿದೆ.

ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement