ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಿ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 8
ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಪರಿಸರದ ಬಗ್ಗೆ ಕಾಳಜಿ, ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಿ, ಅವರಲ್ಲಿ ಸೂಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಹೊರಗೆಳೆಯುವಲ್ಲಿ ಶ್ರಮಿಸಿದ ಮಾರ್ತಾಂಡಪ್ಪ ಕತ್ತಿಯವರ ಕಾರ್ಯ ನಿಜವಾಗಲೂ ಶ್ಲಾಘನೀಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ಇಲ್ಲಿನ ರಂಗಾಯಣ ಮತ್ತು ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಆಶ್ರಯದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ 99ನೇ ಜಯಂತಿ ಅಂಗವಾಗಿ ಭಾನುವಾರ ರಂಗಾಯಣದ ಪಂ. ಬಸವರಾಜ ರಾಜಗುರು ಬಯಲು ರಂಗ ಮಂದಿರದಲ್ಲಿ ಶಿವಯೋಗಿ ರೊಳ್ಳಿಯವರ ರಚನೆ, ಮಾರ್ತಾಂಡಪ್ಪ ಕತ್ತಿಯವರ ನಿರ್ದೇಶನದಲ್ಲಿ ಮಂಟೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಪ್ರಸ್ತುತ ಪಡಿಸಿದ 'ಮಳಿ ಬೇಕ್ರಿ ಮಳಿ' ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಅವಕಾಶ ಸಿಕ್ಕರೆ ಅವರ ಪ್ರತಿಭೆ ಹೊರಹಾಕಲು ಸಾಧ್ಯವಾಗುತ್ತದೆ. ಅಂತಹ ಅವಕಾಶವನ್ನು ನಗರಗಳಿಗೆ ಮಾತ್ರ ಸೀಮಿತ ಮಾಡದೆ ಗ್ರಾಮೀಣಕ್ಕೂ ಕೊಂಡೊಯ್ಯುವ ಪ್ರಯತ್ನ ನಡೆಯಬೇಕಿದೆ ಎಂದರು.
ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಕೆ.ಎಚ್. ನಾಯಕ ಮಾತನಾಡಿ, ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ಮಕ್ಕಳ ಅಭಿವೃದ್ಧಿಗಾಗಿ, ಮಕ್ಕಳ ರಂಗಭೂಮಿಗಾಗಿ ದುಡಿಯುವ ವೃತ್ತಿಯಿಂದ ಮಾತ್ರ ನಿವೃತ್ತಿಯಾಗಿಲ್ಲ. ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಒಬ್ಬ ಕ್ರೀಯಾಶೀಲ ಶಿಕ್ಷಕನಿಗೆ ಸ್ಪೂರ್ತಿ ತರುವ ಸಂಗತಿ ಎಂದರು.
ರಂಗ ನಿರ್ದೇಶಕ ಕೆ. ಜಗುಚಂದ್ರ ಮಾತನಾಡಿ, ಮಕ್ಕಳ ವ್ಯಕ್ತಿತ್ವವು ಎಲ್ಲವನ್ನೂ ಸ್ವೀಕರಿಸುವ ಮನೋಭಾವದ್ದಾಗಿರುತ್ತದೆ. ಸ್ವೀಕರಿಸುವ ಮನೋಭಾವನೆಗೆ ಉತ್ತಮ ಆಯಾಮ ಉಳ್ಳ ಮಾರ್ಗದರ್ಶನ ನೀಡುವುದು ಹಿರಿಯರ ಮತ್ತು ಶಿಕ್ಷಕರ ಜವಾಬ್ದಾರಿ. ಅಂತಹ ಕಾರ್ಯಕ್ಕೆ ರೂಪ ನೀಡಲು ಪ್ರಯತ್ನಿಸುತ್ತಿರುವ ಮಾರ್ತಾಂಡಪ್ಪ ಶ್ರಮ ನಿಜವಾಗಲೂ ಹೆಮ್ಮೆ ಪಡುವ ಸಂಗತಿ. ಮಕ್ಕಳ ರಂಗಭೂಮಿ ಉಳಿಯಬೇಕಾದರೆ ಯುವ ಪೀಳಿಗೆಯನ್ನು ರಂಗಭೂಮಿಯತ್ತ ಸೆಳೆಯುವ ಕಾರ್ಯ ನಡೆಯಬೇಕಿದೆ ಎಂದರು.
ರಂಗಾಯಣದ ನಿರ್ದೇಶಕ ಸುಭಾಸ ನರೇಂದ್ರ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್. ಚನ್ನೂರು, ಎಸ್.ಎಲ್. ಚಲವಾದಿ, ಎಂ.ಎಸ್. ಫರಾಸ, ಎನ್.ಆರ್. ಗ್ರಾಮಪುರೋಹಿತ, ಸುರೇಶ ಬೇಟಗೇರಿ, ಎಸ್.ಎಂ. ಹೂಗಾರ, ಸಹ ಶಿಕ್ಷಕಿ ವಿಜಯಲಕ್ಷ್ಮೀ ಶೆಟ್ಟಿ, ಪ್ರೇಮಾನಂದ ಶಿಂಧೆ ಇದ್ದರು.