3ನೇ ದಿನ 4 ನಾಮಪತ್ರ ಸಲ್ಲಿಕೆ
ಧಾರವಾಡ: ನಾಮಪತ್ರ ಸಲ್ಲಿಕೆಯ 3ನೇ ದಿನ ಶನಿವಾರ ಒಟ್ಟು ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ. ಹು-ಧಾ (ಕೇಂದ್ರ) ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಗಳಾಗಿ ನೂರ್‌ಅಹ್ಮದ್ ಹುಸೇನಸಾಬ ಹುನಗುಂಡಿ ಹಾಗೂ ಜೈರುದ್ದೀನ್ ದಾವಲಸಾಬ ಇಂಗಳಗಿ ಸಲ್ಲಿಸಿದರೆ, ಹುಬ್ಬಳ್ಳಿ-ಧಾರವಾಡ (ಪಶ್ಚಿಮ)ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಲಕ್ಷ್ಮಣ ಫಕ್ಕೀರಪ್ಪ ಕಾಡಪ್ಪನವರ ಹಾಗೂ ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಶಿವಪ್ಪ ಯಲ್ಲಪ್ಪ ಅಕ್ಕಿ ನಾಮಪತ್ರ ಸಲ್ಲಿಸಿದ್ದಾರೆ. ಇದನ್ನು ಹೊರತುಪಡಿಸಿ ಉಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಯಾವ ನಾಮಪತ್ರಗಳು ಸಲ್ಲಿಕೆಯಾಗಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಧಾರವಾಡ: ಕನ್ನಡ ಸಾಹಿತ್ಯ ಸಂಶೋಧನೆ ಕಾರ್ಯಾಗಾರ
ಧಾರವಾಡ: ಇಲ್ಲಿನ ಕವಿವಿ ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ ಹಾಗೂ ಕನ್ನಡ ಸಂಶೋಧನಾ ಸಂಘದ ವತಿಯಿಂದ ಕನ್ನಡ ಸಾಹಿತ್ಯ ಸಂಶೋಧನೆ ಕುರಿತು ಏ. 16ರ ಬೆಳಗ್ಗೆ 11ಕ್ಕೆ ಕವಿವಿ ಕನ್ನಡ ಅಧ್ಯಯನ ಪೀಠದ ವಿಶ್ವನಿಕೇತನ ಸಭಾಭವನದಲ್ಲಿ ಕಾರ್ಯಾಗಾರ ಹಮ್ಮಿಕೊಂಡಿದೆ. ಕವಿವಿ ಕುಲಪತಿ ಡಾ.ಎಚ್.ಬಿ. ವಾಲೀಕಾರ ಕಾರ್ಯಾಗಾರಉದ್ಘಾಟಿಸಲಿದ್ದಾರೆ. ಡಾ. ಮಧು ವೆಂಕಾರೆಡ್ಡಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ. ವೃಷಭೇಂದ್ರಸ್ವಾಮಿ ಭಾಗವಹಿಸಲಿದ್ದಾರೆ.
ಇಂದು ಉಪನ್ಯಾಸ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಏ. 14ರಂದು ಭಾನುವಾರ ಸಂಜೆ 6ಕ್ಕೆ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಡಾ. ದೇವೇಂದ್ರಕುಮಾರ ಹಕಾರಿ ದತ್ತಿ ಅಂಗವಾಗಿ ಮೂಲ ಜನಪದ ಮತ್ತು ನವೀಕರಣಗೊಂಡ ಜನಪದ ಸಾಹಿತ್ಯ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ. ಅತಿಥಿ ಉಪನ್ಯಾಸಕರಾಗಿ ವೀರೇಶ ಬಡಿಗೇರ, ಜಾನಪದ ಕಲಾವಿದರು, ಕುಂದಗೋಳ ಆಗಮಿಸುವರು. ಸಿದ್ದು ಮೋಟೆ ಅಧ್ಯಕ್ಷತೆ ವಹಿಸುವರು.
ಇಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಘಟಕದ ಸಭೆ
ಧಾರವಾಡ: ಭಾರತೀಯ ಜನತಾ ಪಕ್ಷದ ರೈತಮೋರ್ಚಾ ಗ್ರಾಮಾಂತರ ಜಿಲ್ಲಾ ಘಟಕದ ಸಭೆಯನ್ನು ಏ. 14ರಂದು ಮಧ್ಯಾಹ್ನ 3.30ಕ್ಕೆ ಪಕ್ಷದ ಹುಬ್ಬಳ್ಳಿ ಕಚೇರಿಯಲ್ಲಿ ಕರೆಯಲಾಗಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜರುಗುವ ಸಭೆಯಲ್ಲಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಶಶಿಮೌಳಿ ಕುಲಕರ್ಣಿ ಮತ್ತು ಗ್ರಾಮೀಣ ಜಿಲ್ಲಾ ಅಧ್ಯಕ್ಷ ಷಣ್ಮುಖ ಗುರಿಕಾರ ಅತಿಥಿಗಳಾಗಿ ಆಗಮಿಸುವರು. ಮೋರ್ಚಾದ ಜಿಲ್ಲಾ ಅಧ್ಯಕ್ಷ ಶಂಕ್ರಣ್ಣ ಅವರಾದಿ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯದರ್ಶಿಗಳಾದ ಈರಣ್ಣ ಜಡಿ ಮತ್ತು ವಿಜಯ ನಾಡಜೋಶಿ ಭಾಗವಹಿಸುತ್ತಾರೆ. ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆಕಸ್ಮಿಕ ಬೆಂಕಿ: ರು. ಲಕ್ಷ ಹಾನಿ
ನವಲಗುಂದ: ಸ್ಥಳೀಯ ಕುಂಬಾರ ಓಣಿಯ ನಿವಾಸಿಯಾದ ಲೋಕಪ್ಪ ಪರಸನಾಯ್ಕ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 1 ಲಕ್ಷ ವಸ್ತುಗಳು ಹಾನಿಯಾದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಅಹಿತಕರ ಘಟನೆ ಸಂಭವಿಸಿಲ್ಲ. ಅಕ್ಕಪಕ್ಕದವರು ಮನೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದರು. ನರಗುಂದದಿಂದ ಆಗ್ನಿಶಾಮಕ ದಳದ ಸಿಬ್ಬಂದಿ ಕರೆಸಲಾಗಿತ್ತು. ಮನೆಯಲ್ಲಿದ್ದ ರು. 30 ಸಾವಿರ ನಗದು, ಗೋದಿ, ಜೋಳ, ಕಡಲೆ, ಟೇಲರಿಂಗ್ ಮಶೀನ್ ಸೇರಿ ರು. 1 ಲಕ್ಷ ಹಾನಿಯಾಗಿದೆಂದು ದೂರಿನಲ್ಲಿ ತಿಳಿಸಲಾಗಿದೆ.