ನಾಮಪತ್ರ ಸಲ್ಲಿಕೆಗೆ ಶುಭ ಸೋಮವಾರ ಆಯ್ಕೆ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 13
ಏ. 15ರ ಸೋಮವಾರ. ಮೃಗಶಿರಾ ನಕ್ಷತ್ರ. ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಶುಭಗಳಿಗೆ. ಇದು ವಿಧಾನಸಭಾ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ನಿಗದಿಪಡಿಸಿಕೊಂಡ ಮುಹೂರ್ತ.
ಏ. 10ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗಿದೆ. ಅಮಾವಾಸ್ಯೆ, ಯುಗಾದಿ ಹಬ್ಬ ಹಾಗೂ ಸರ್ಕಾರಿ ರಜಾ ದಿನ - ಹೀಗೆ ಮೂರು ದಿನ ನಾಮಪತ್ರ ಸಲ್ಲಿಸಲು ಅವಕಾಶ ಆಗಿರಲಿಲ್ಲ. ಅಂಥ ಶುಭ ಗಳಿಗೆಯೂ ಇರಲಿಲ್ಲ. ಹೀಗಾಗಿ, ನಾಲ್ಕು ದಿನಗಳಲ್ಲಿ ಧಾರವಾಡ ಕ್ಷೇತ್ರಕ್ಕೆ ಮತ್ತು ಹು-ಧಾ ಪಶ್ಚಿಮ ಕ್ಷೇತ್ರಕ್ಕೆ ತಲಾ ಒಂದು ನಾಮಪತ್ರಗಳು ಸಲ್ಲಿಕೆಯಾಗಿವೆ. ಉಳಿದ ಕ್ಷೇತ್ರಗಳಲ್ಲೂ ಈ ಸಂಖ್ಯೆ ಹೆಚ್ಚೇನೂ ಇಲ್ಲ.
ನಾಮಪತ್ರ ಸಲ್ಲಿಸಲು ಏ. 17 ಕೊನೆ ದಿನ. ಏ. 14 ಭಾನುವಾರ. ಏ. 15 ಸೋಮವಾರ ಶುಭ ದಿನವಿದೆ. ಹೀಗಾಗಿ ಸೋಮವಾರವೇ ಹೆಚ್ಚಿನ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಮೃಗಶಿರಾ ನಕ್ಷತ್ರವಿರುವ ಕಾರಣ ನಾಮಪತ್ರ ಸಲ್ಲಿಸಿ ಎಂದು ಜ್ಯೋತಿಷಿಗಳಿಂದ ಅಪ್ಪಣೆ ಪಡೆದಿರುವ ಅಭ್ಯರ್ಥಿಗಳು ಅದಕ್ಕೆ ಬದ್ಧರಾಗಲು ತೀರ್ಮಾನಿಸಿದ್ದಾರೆ.
ಅಭ್ಯರ್ಥಿಗಳ ನಿರ್ಧಾರ: ಧಾರವಾಡ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಮಾಜಿ ಶಾಸಕ ವಿನಯ ಕುಲಕರ್ಣಿ, ಬಿಜೆಪಿಯಿಂದ ಶಾಸಕಿ ಸೀಮಾ ಮಸೂತಿ, ಜೆಡಿಎಸ್ನಿಂದ ಅಮೃತ ದೇಸಾಯಿ ಹಾಗೂ ಕೆಜೆಪಿಯಿಂದ ತವನಪ್ಪ ಅಷ್ಟಗಿ ಹಾಗೂ ಹಲವಾರು ಪಕ್ಷೇತರ ಅಭ್ಯರ್ಥಿಗಳು ಸೋಮವಾರವೇ ನಾಮಪತ್ರ ಸಲ್ಲಿಸಲಿದ್ದಾರೆ. ಈ ಎಲ್ಲ ಅಭ್ಯರ್ಥಿಗಳು ತಮ್ಮ ಸಾವಿರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ನಗರದ ವಿವಿಧೆಡೆ ಮೆರವಣಿಗೆ ಮಾಡಿ, ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವರು. ಹು-ಧಾ ಪಶ್ಚಿಮ ಕ್ಷೇತ್ರಕ್ಕೆ ಉಮೇದುವಾರಿಕೆ ಬಯಸಿ ಬಿಜೆಪಿಯಿಂದ ಅರವಿಂದ ಬೆಲ್ಲದ, ಜೆಡಿಎಸ್ನಿಂದ ಇಸ್ಮಾಯಿಲ್ ತಮಟಗಾರ, ಕೆಜೆಪಿಯಿಂದ ಮೋಹನ ಲಿಂಬಿಕಾಯಿ ಅವರೂ ಸೋಮವಾರವೇ ನಾಮಪತ್ರ ಸಲ್ಲಿಸಲಿದ್ದಾರೆ. ಉಳಿದ ಕ್ಷೇತ್ರಗಳಲ್ಲೂ ಸೋಮವಾರ ಆದ್ಯತೆಯ ದಿನವಾಗಿದೆ.
ಸೂಕ್ತ ಬಂದೋಬಸ್ತ್: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ನಾಮಪತ್ರಗಳನ್ನು ಎಲ್ಲೆಲ್ಲಿ ಸಲ್ಲಿಸಬೇಕೆಂದು ಆಯೋಗ ಸೂಚನೆ ನೀಡಿದೆ. ಆಯಾ ಸ್ಥಳಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ನಾಮಪತ್ರ ಸಲ್ಲಿಸಬೇಕಾದ ಅಭ್ಯರ್ಥಿ ಹಾಗೂ ಅನುಮೋದಕರನ್ನು ಹೊರತುಪಡಿಸಿ ಬೆಂಬಲಿಗರನ್ನು ದೂರದಲ್ಲಿಯೇ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಗದ್ದಲ ಅಥವಾ ಗಲಾಟೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಸ್ಥಳೀಯ ಪೊಲೀಸರೊಂದಿಗೆ ಅರೆ ಸೇನಾ ಪಡೆಯವರೂ ಬಿಗಿ ಕಾವಲು ಕಾಯುತ್ತಿದ್ದಾರೆ.
ನವಲಗುಂದ, ಕುಂದಗೋಳ, ಹು-ಧಾ ಪೂರ್ವ, ಕಲಘಟಗಿ ಕ್ಷೇತ್ರಗಳ ನಾಮ ಪತ್ರಗಳನ್ನು ಆಯಾ ತಹಸೀಲ್ದಾರ್ ಕಚೇರಿಯಲ್ಲಿ ಸ್ವೀಕರಿಸಲಾಗುತ್ತಿದೆ. ಧಾರವಾಡ ಕ್ಷೇತ್ರದ ನಾಮಪತ್ರಗಳನ್ನು ಧಾರವಾಡ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ, ಹು-ಧಾ ಕೇಂದ್ರ ಕ್ಷೇತ್ರದ ನಾಮಪತ್ರಗಳನ್ನು ಹುಬ್ಬಳ್ಳಿ ಪಾಲಿಕೆಯ ಆಯುಕ್ತರ ಕಚೇರಿ ಹಾಗೂ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ನಾಮಪತ್ರಗಳನ್ನು ಧಾರವಾಡ ತಾಪಂ ಕಚೇರಿಯಲ್ಲಿ ಚುನಾವಣಾಧಿಕಾರಿಗಳು ಸ್ವೀಕರಿಸುತ್ತಿದ್ದಾರೆ.
ನಾಮಪತ್ರ ಸಲ್ಲಿಸಲು ತಯಾರಿ: ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಭರ್ತಿ ಮಾಡಿ, ಅದಕ್ಕೆ ಅಗತ್ಯವಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಸೋಮವಾರ ತಮ್ಮ ಬೆಂಬಲಿಗರೊಂದಿಗೆ ನೇರವಾಗಿ ತೆರಳಿ ನಾಮಪತ್ರ ಸಲ್ಲಿಸುವ ತವಕದಲ್ಲಿದ್ದಾರೆ. ತಮ್ಮ ಇತ್ತೀಚಿನ ಭಾವಚಿತ್ರ, ಹೊಸದಾಗಿ ತೆರೆದ ಬ್ಯಾಂಕ್ ಖಾತೆ ವಿವರ, ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವ ಪ್ರಮಾಣಪತ್ರ ಹಾಗೂ ಬಿ ಫಾರಂನ್ನು ಅಭ್ಯರ್ಥಿಗಳು ಸಿದ್ಧ ಮಾಡಿಕೊಂಡಿದ್ದಾರೆ.
-ಬಸವರಾಜ ಹಿರೇಮಠ