'ಸತ್ತು ಹುಟ್ಟಿದ್ದು', 'ಟೂರಿಂಗ್ ಟಾಕೀಜ್' ಕೃತಿ ಬಿಡುಗಡೆ
ಧಾರವಾಡ: ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವ ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರ ಇದೀಗ ವ್ಯಾಪಾರೀಕರಣವಾಗಿ ಮಾರ್ಪಟ್ಟಿದೆ ಎಂದು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಮಣ್ಯ ಅವರು ವಿಷಾದ ವ್ಯಕ್ತಪಡಿದರು.
ಇಲ್ಲಿನ ಮನೋಹರ ಗ್ರಂಥಮಾಲಾ ಸಹಸ್ರ ದರ್ಶನ ಕಂಡ ಹಿನ್ನೆಲೆಯಲ್ಲಿ ನಗರದ ಸೃಜನಾ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರೋಹಿಣಿ ನಿಲೇಕಣಿ ಅವರು ರಚಿಸಿದ ಖಡ್ಝಿಟಟ ಛ್ಟ್ಠಿಟಿ ಕನ್ನಡದಲ್ಲಿ ಅನುವಾದಿಸಿದ ಆರ್ಯ ಆಚಾರ್ಯ ಅವರ 'ಸತ್ತು ಹುಟ್ಟಿದ್ದು' ಹಾಗೂ ಜಯಂತ ಕಾಯ್ಕಿಣಿ ಅವರ 'ಟೂರಿಂಗ್ ಟಾಕೀಜ್' ಕಾದಂಬರಿಗಳನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಈ ಮೊದಲು ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಗಳು ಸಾರ್ವಜನಿಕ ಸೇವಾಕೇಂದ್ರಗಳಾಗಿದ್ದವು ಎಂದರು.
ಪ್ರಸ್ತುತ ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರಗಳು ಬೌದ್ಧಿಕವಾಗಿ ಆಕ್ರಮಣ ಮಾಡುತ್ತಿದ್ದು, ಎಳೆಯ ಮನಸ್ಸಿನ ಮೇಲೆ ಭಾವನಾತ್ಮಕವಾಗಿ ಆವರಿಸಿಕೊಂಡಿವೆ. ಸೇವಾ ಮನೋಭಾವನೆ ಹೊಂದಿದ್ದ ಈ ವಲಯಗಳು ಸದ್ಯ ಉದ್ಯಮವಾಗಿ ರೂಪಾಂತರಗೊಂಡಿವೆ. ಹಣವುಳ್ಳರೆಲ್ಲರೂ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳನ್ನು ತೆರೆಯುವ ಮೂಲಕ ಹಣ ಗಳಿಸುವ ಮೂಲವನ್ನಾಗಿಸಿಕೊಂಡಿದ್ದಾರೆ. ಅದರಲ್ಲೂ ಪ್ರಾಥಮಿಕ ಶಿಕ್ಷಣ ಕ್ಷೇತ್ರವಂತೂ ತುಂಬಾ ದುಬಾರಿಯಾಗಿ ಪರಿಣಮಿಸಿದ್ದು, ಬಡವರು ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಪರದಾಡುವಂತಾಗಿದೆ ಎಂದರು.
ಹಣ ಸುಲಿಗೆ: ಅನೇಕರು ಆಸ್ಪತ್ರೆಗಳಿಗೆ ಹಲವಾರು ಕಾಯಿಲೆಗಳನ್ನು ಇಟ್ಟುಕೊಂಡು ಬರುತ್ತಿರುತ್ತಾರೆ. ಅದೇ ನೆಪವನ್ನಾಗಿಸಿಕೊಂಡು ಕೆಲ ಆಸ್ಪತ್ರೆಗಳು ರೋಗಿಗಳಿಂದ ಅಪಾರ ಪ್ರಮಾಣದ ಹಣ ಸುಲಿಗೆ ಮಾಡುತ್ತಿವೆ. ಇದು ಆ ಕ್ಷೇತ್ರದಲ್ಲಿ ನಡೆಯುವ ಬಹುದೊಡ್ಡ ದುರಂತವೇ ಸರಿ. ಸದ್ಯ ಶಿಕ್ಷಣದ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ಆದರೆ, ವೈದ್ಯಕೀಯ ಕ್ಷೇತ್ರದ ಬಗೆಗೆ ಯಾವುದೇ ಚರ್ಚೆ, ವಿಮರ್ಶೆ ಹಾಗೂ ಮೀಮಾಂಸೆ ನಡೆಯುತ್ತಿಲ್ಲ. ಹೀಗಾಗಿ ವೈದ್ಯಕೀಯ ಕ್ಷೇತ್ರ ಇದನ್ನೆ ಬಂಡವಾಳವಾಗಿಸಿಕೊಂಡಿದ್ದು, ಸುಲಿಗೆಗೆ ಮುಂದಾಗಿವೆ ಎಂದು ಆರೋಪಿಸಿದರು.
ಕವಿವಿ ಕುಲಪತಿ ಡಾ.ಎಚ್.ಬಿ. ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು. ನಂದನ ನಿಲೇಕಣಿ, ಜಯಂತ ಕಾಯ್ಕಿಣಿ, ಲೇಖಕ ಆರ್ಯ ಆಚಾರ್ಯ, ಲೇಖಕಿ ರೋಹಿಣಿ ನಿಲೇಕಣಿ, ಮನೋಹರ ಗ್ರಂಥ ಮಾಲಾ ಪ್ರಕಾಶಕ ಡಾ. ರಮಾಕಾಂತ ಜೋಶಿ, ಸಮೀರ ಜೋಶಿ ಹಾಗೂ ಆನಂದ ನಿಲೇಕಣಿ ಇದ್ದರು.