ಬಿಜವಾಡ, ಅಲ್ಕೋಡ್ ನಾಮಪತ್ರ ಸಲ್ಲಿಕೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ (ಮೀಸಲು) ವಿಧಾನಸಭಾ ಮತಕ್ಷೇತ್ರಕ್ಕೆ ಜೆಡಿಎಸ್, ಕೆಜೆಪಿ ಹಾಗೂ ಹು-ಧಾ ಸೆಂಟ್ರಲ್ ಕ್ಷೇತ್ರಕ್ಕೆ ಬಿಎಸ್ಪಿ ಪಕ್ಷದ ಅಭ್ಯರ್ಥಿಗಳು ಸೋಮವಾರ ಉಮೇದುವಾರಿಕೆ ಸಲ್ಲಿಸಿದರು.
ಬೆಳಗ್ಗೆ 11ರ ಹೊತ್ತಿಗೆ ಜೆಡಿಎಸ್ ಅಭ್ಯರ್ಥಿ ಆಲ್ಕೋಡ್ ಬೆಂಬಲಿಗರೊಂದಿಗೆ ತಹಸೀಲ್ದಾರ್ ಕಚೇರಿಗೆ ತೆರೆಳಿ ತಮ್ಮ ಉಮೇದುವಾರಿಕೆಯನ್ನು ಚುನಾವಣಾಧಿಕಾರಿ ಫರ್ನಾಂಡಿಸ್ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ್, ಪರಿಷತ್ ಸದಸ್ಯನಾಗಿ, ಸಚಿವನಾಗಿ ನನಗೆ ಸರ್ಕಾರದ ಯಾವ ಮೂಲ ಮತ್ತು ಇಲಾಖೆಯಿಂದ ಅನುದಾನ ತರಬೇಕು ಎಂದು ಗೊತ್ತಿದೆ. ಹು-ಧಾ ಮೀಸಲು ಕ್ಷೇತ್ರ ಅತ್ಯಂತ ಹಿಂದುಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದ್ದು, ಇಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಅದರಲ್ಲೂ ಈ ಕ್ಷೇತ್ರದ ಬಹುತೇಕ ನಿವಾಸಿಗಳಿಗೆ ಮನೆಗಳಿಲ್ಲ. ಜನರ ಆಶೀರ್ವಾದಿಂದ ಅಧಿಕಾರಕ್ಕೆ ಬಂದರೆ ಇಲ್ಲಿನ ಮೂಲ ಸೌಕರ್ಯಗಳ ಸಮಸ್ಯೆ ಪರಿಹರಿಸುವುದಕ್ಕೆ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಇನ್ನು ಕೆಜೆಪಿ ಅಭ್ಯರ್ಥಿಯಾಗಿ ಶಂಕರಣ್ಣ ಬಿಜವಾಡ ಪಕ್ಷದ ಮುಖಂಡರಾದ ವಿಜಯ ಸಂಕೇಶ್ವರ, ಜಬ್ಬಾರ್‌ಖಾನ್ ಹೊನ್ನಳ್ಳಿ, ಅಶೋಕ ಕಾಟವೆ ಸೇರಿದಂತೆ ತಮ್ಮ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ ಅವರು ರಾಜ್ಯದ ವಿವಿಧ ಭಾಗಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಡುವುದಕ್ಕೆ ಹೋರಾಟ ಮಾಡಿದ್ದಾರೆ. ಇದೇ ಅಂಶವನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವ ಪಕ್ಷದ ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಕೆಜೆಪಿ 224 ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲವು ಸಾಧಿಸಲಿದ್ದಾರೆ ಎಂದರು.
ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಬಿಎಸ್ಪಿ ಹುರಿಯಾಳು ಆಗಿರುವ ಚಿಕ್ಕತುಂಬಳ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಿದರು.