ಚಿತ್ರಕಲಾ ಆರ್ಟ್ ಗ್ಯಾಲರಿಯಲ್ಲಿ ಅನಿಮೇಷನ್ ಪದವಿ: ವಾಲೀಕಾರ
ಧಾರವಾಡ: ಇಲ್ಲಿನ ಸರ್ಕಾರಿ ಚಿತ್ರಕಲಾ ಕಾಲೇಜ್‌ನ್ನು ಕರ್ನಾಟಕ ವಿಶ್ವವಿದ್ಯಾಲಯ ತನ್ನ ಅಧೀನಕ್ಕೆ ಪಡೆದು ಕಾಲೇಜಿನ ಆವರಣದಲ್ಲಿ ಅನಿಮೇಷನ್ ಪದವಿ ಕೋರ್ಸ್ ಆರಂಭಿಸುವ ಚಿಂತನೆ ಇದೆ ಎಂದು ಕರ್ನಾಟಕ ವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ ಹೇಳಿದರು.
ವಿಶ್ವಕಲಾವಿದರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಲಾವಿದರ ಚಿತ್ರ ಪ್ರದರ್ಶನ ಹಾಗೂ ಚಿತ್ರಕಲಾವಿದರ ದಿನಾಚರಣೆ ಉದ್ಘಾಟಿಸಿದ ಅವರು, ಈ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿದಾಗ ಎಲ್ಲ ಸದಸ್ಯರು ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಸಿಂಡಿಕೇಟ್ ಸದಸ್ಯ ಡಾ. ಕೆ.ಎಸ್. ಜಯಂತ್ ಅವರ ಅಧ್ಯಕ್ಷತೆಯಲ್ಲಿ ಈ ಸಂಬಂಧ ಸಮಿತಿ ರಚಿಸಲಾಗಿದೆ. ಶೀಘ್ರದಲ್ಲೇ ಅವರು ವರದಿ ಸಲ್ಲಿಸಲಿದ್ದು, ಬಳಿಕ ಸಂಯೋಜನೆ ಪ್ರಕ್ರಿಯೆ ನಡೆಯಲಿದೆ ಎಂದರು. ಚಿತ್ರಕಲಾ ಕಾಲೇಜು ವಿ.ವಿ. ತೆಕ್ಕೆಗೆ ಬಂದ ಕೂಡಲೇ ಅನಿಮೇಷನ್ ಪದವಿ ಕೋರ್ಸ್ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಾಚಾರ್ಯ ಎನ್.ಎಂ. ದಾಟನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳೆದ ಬಾರಿಯ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಚಿತ್ರಕಲಾವಿದ ಆರ್ಯ ಆಚಾರ್ಯ, ಕವಿವಿ ಮೌಲ್ಯಮಾಪನ ಕುಲಸಚಿವ ಡಾ.ಕೆ.ಆರ್. ದುರ್ಗಾದಾಸ, ಸಿಂಡಿಕೇಟ್ ಸದಸ್ಯರಾದ ಕೆ.ಎಸ್. ಜಯಂತ್, ಜಯದೇವ ಮೆಣಸಗಿ ಇದ್ದರು.