ಮತದಾರರ ಜಾಗೃತಿ ಅಭಿಯಾನ: ಭಾಷಣ ಸ್ಪರ್ಧೆ
ಧಾರವಾಡ: ಜಿಲ್ಲಾ ಮತದಾರರ ಜಾಗೃತಿ ಸಮಿತಿಯು (ಸ್ವೀಪ್) ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಶ್ರಯದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳಾರ ಕಾಲೇಜು ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಏರ್ಪಡಿಸಿತ್ತು.
ವಿವಿಧ ಕಾಲೇಜುಗಳ 22 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ತಪ್ಪದೆ ಮತ ಚಲಾಯಿಸುವ ಅಗತ್ಯ, ಪ್ರಜಾಪ್ರಭುತ್ವ ಗಟ್ಟಿಗೊಳಿಸುವಲ್ಲಿ ಮತದಾರರ ಪಾತ್ರ ಹಾಗೂ ಪ್ರತಿಯೊಬ್ಬರ ಮತ ನಿರ್ಣಾಯಕ ಎನ್ನುವ ಮತ ಚಲಾವಣೆ ಅಗತ್ಯ ಕುರಿತ ವಿಷಯಗಳ ಮೇಲೆ ಮಾತನಾಡಿದರು. ಈ ಸ್ಪರ್ಧೆಯಲ್ಲಿ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಂಜುನಾಥ ವೇಷಧಾರಿ ಪ್ರಥಮ ಹಾಗೂ ಅದೇ ಕಾಲೇಜಿನ ರವಿ ಶೇಷಗಿರಿ ದ್ವಿತೀಯ ಸ್ಥಾನ ಪಡೆದರು. ಧಾರವಾಡದ ಮೃತ್ಯುಂಜಯ ಕಾಲೇಜಿನ ಮಲ್ಲಯ್ಯ ಮಠಮತಿ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯನ್ನು ಜಿಲ್ಲಾಧಿಕಾರಿ ಸಮೀರ್ ಶುಕ್ಲ ಉದ್ಘಾಟಿಸಿದರು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಓ ಪಿ.ಎ. ಮೇಘಣ್ಣವರ ಅಧ್ಯಕ್ಷತೆ ವಹಿಸಿದ್ದರು.
ನವಲಗುಂದ: ಮೂರು ನಾಮಪತ್ರ ಸಲ್ಲಿಕೆ
ನವಲಗುಂದ: ನವಲಗುಂದ ವಿಧಾನಸಭಾ ಕ್ಷತ್ರಕ್ಕೆ ಸ್ಪರ್ಧೆ ಬಯಸಿ ಮೂವರು ಅಭ್ಯರ್ಥಿಗಳು ಮಂಗಳವಾರ ನಾಮಪತ್ರ ಸಲ್ಲಿಸಿದರು. ಬಿಎಸ್ಸಾರ್ ಕಾಂಗ್ರೆಸ್ನಿಂದ ಶಂಭು ಸಿದ್ರಾಮಶೆಟ್ಟರ್ ಅವರು ನಗರದ ಗಣಪತಿ ದೇವಸ್ಥಾನದಿಂದ ಲಿಂಗರಾಜ ಸರ್ಕಲ್ ಮಾರ್ಗವಾಗಿ ಚಕ್ಕಡಿಯಲ್ಲಿ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಅಣ್ಣಿಗೇರಿಯ ಬಸವಣ್ಣೆವ್ವ ಕದ್ರೊಳ್ಳಿ ಹಾಗೂ ಗೊಬ್ಬರಗುಂಪಿ ಗ್ರಾಮದ ವಿರೂಪಾಕ್ಷಗೌಡ ಕುಲಕರ್ಣಿ ತಮ್ಮ ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ಸೋಮವಾರ ವಿವಿಧ ಪಕ್ಷಗಳಿಂದ 6 ಅಭ್ಯರ್ಥಿಗಳು ಹಾಗೂ ಮಂಗಳವಾರ 3 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇದುವರೆಗೆ ಒಟ್ಟು 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ. ಬುಧವಾರ ಕೆಜೆಪಿ ಪಕ್ಷದಿಂದ ಡಾ. ಆರ್.ಬಿ. ಶಿರಿಯಣ್ಣವರ ಬೆಳಗ್ಗೆ 10.30ಕ್ಕೆ ಗಣಪತಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.
---