ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 15
ನಾನು ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಹಣ ಮಾಡಬೇಕೆಂಬ ಅಭಿಲಾಷೆಯೂ ನನಗಿಲ್ಲ. ದೇವರು ನನಗೆ ಹಣದ ಕೊರತೆ ಮಾಡಿಲ್ಲ. ಸಮಾಜ ಸೇವೆ ಮಾಡಬೇಕೆಂಬ ತುಡಿತ ಹೊಂದಿರುವ ನಾನು ಶಾಸಕನಾಗಿ ಅಧಿಕಾರ ಹೊಂದಿದ್ದಲ್ಲಿ ಮತ್ತಷ್ಟು ಸೇವಾಕಾರ್ಯ ಮಾಡಲು ಅನುಕೂಲವಾಗುತ್ತದೆ ಎಂಬ ನಂಬಿಕೆಯಿಂದ ರಾಜಕೀಯಕ್ಕೆ ಇಳಿದಿದ್ದೇನೆ.
ಹೀಗೆಂದವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಬ್ರೇಜ್ ಶಂಸಿ. ಕಷ್ಟ ಎಂದು ಬಂದವರಿಗೆ ನಾನು ಸದಾಕಾಲ ನೆರವಾಗಿದ್ದೇನೆ. ಆರೋಗ್ಯ ಸಮಸ್ಯೆ, ಶಿಕ್ಷಣಕ್ಕೆ ತೊಂದರೆ ಎಂದು ಹೇಳಿಕೊಂಡು ಬಂದವರಿಗೆ ಹಿಂದೆ ಮುಂದೆ ನೋಡದೆ ಸಹಾಯ ಮಾಡಿದ್ದೇನೆ. ಈ ಕಾರಣದಿಂದಾಗಿ ನಾನು ಜನರಿಗೆ ತೀರಾ ಹತ್ತಿರವಾಗಿದ್ದೇನೆ. ನನ್ನಂತವರು ಶಾಸಕ, ಮಂತ್ರಿಯಾದರೆ ಒಳ್ಳೆಯದಾಗುತ್ತದೆ ಎಂಬ ಅಭಿಲಾಷೆಯನ್ನು ಜನತೆ ವ್ಯಕ್ತಪಡಿಸಿದರು. ಸಾಲದ್ದಕ್ಕೆ ರಾಜಕೀಯ ಪ್ರವೇಶ ಮಾಡುವಂತೆ ಪ್ರೇರೇಪಿಸಿದರು. ಜನತೆಯ ಅಭಿಲಾಷೆಯಂತೆ ನಾನು ಚುನಾವಣಾ ಕಣಕ್ಕೆ ಇಳಿದಿದ್ದೇನೆ. ರಾಜಕೀಯಕ್ಕೆ ಕರೆತಂದ ಜನರೇ ನನ್ನನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ ಎಂದರು.
'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ರಾಜಕೀಯಕ್ಕೆ ಬರಲು ಕಾರಣ, ಜೆಡಿಎಸ್ ಆಯ್ಕೆ ಮಾಡಿಕೊಂಡಿದ್ದು ಏಕೆ? ಶೆಟ್ಟರ್ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರಲ್ಲದೇ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಂಡ ಕನಸನ್ನು ಬಿಚ್ಚಿಟ್ಟರು.
ನಾನು ರಾಜಕಾರಣಿಯಾಗುತ್ತೇನೆಂದು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಮಿಡ್ಮ್ಯಾಕ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ನಾನು ವೈಯಕ್ತಿಕವಾಗಿ ಅಭಿವೃದ್ಧಿ ಹೊಂದಿದೆ. ಕಳೆದ 10-15 ವರ್ಷದಲ್ಲಿ ಸಂಸ್ಥೆಯ ಮುಖೇನ ಸಮಾಜ ಸೇವೆ ಮಾಡುತ್ತಾ ಬಂದೆ. ಕಷ್ಟ ಎಂದು ಹೇಳಿಕೊಂಡು ಬಂದವರಿಗೆ ಕೈ ಎತ್ತಿ ದಾನ ಮಾಡಿದೆ. ಈ ಸೇವೆಯಲ್ಲಿ ನನಗೆ ತೃಪ್ತಿಯಿದೆ. ಆದರೆ ಕೆಲವೊಂದು ಬಾರಿ ಆಡಳಿತ ವ್ಯವಸ್ಥೆಯ ಸಹಕಾರ ಸಿಗದಾಗಿ ಜನರ ಕಷ್ಟ ಪರಿಹರಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ನನಗೆ ತುಂಬಾ ನೋವಾಗುತ್ತಿತ್ತು. ಅಧಿಕಾರವಿದ್ದರೆ ಜನರಿಗೆ ನ್ಯಾಯ ಕೊಡಿಸಬಹುದಿತ್ತಲ್ಲ ಎಂದು ಯೋಚಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜನರೇ ನನ್ನನ್ನು ರಾಜಕೀಯಕ್ಕೆ ಕರೆ ತಂದರು.
ಜೆಡಿಎಸ್ ಆಯ್ಕೆ: ನಾನು ರಾಜಕೀಯಕ್ಕೆ ಸೇರುವ ವಿಷಯ ಅರಿತು ಅನೇಕ ಪಕ್ಷಗಳಿಂದ ಕರೆ ಬಂತು. ಆದರೆ ನಾನು ಆಯ್ಕೆ ಮಾಡಿಕೊಂಡಿದ್ದು ಜೆಡಿಎಸ್. ಏಕೆಂದರೆ ನಾನು ಜಾತ್ಯತೀತತೆಯಲ್ಲಿ ನಂಬಿಕೆಯುಳ್ಳವನು. ಜೆಡಿಎಸ್ ಪಕ್ಷ ಕೂಡ ಜಾತ್ಯತೀತ ನೆಲೆಗಟ್ಟಿನ ಮೇಲೆ ರಚನೆಗೊಂಡಿದ್ದು. ಕುಮಾರಸ್ವಾಮಿ 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಯೋಜನೆಗಳು ನನಗೆ ಹಿಡಿಸಿದವು. ಅಲ್ಲದೇ ಅವರ ಕಾರ್ಯ ವೈಖರಿ ನನಗೆ ಖುಷಿ ತರಿಸಿತ್ತು, ಸಹಜವಾಗಿ ನಾನು ಅವರ ಬಗ್ಗೆ ಸೆಳೆತ ಹೊಂದಿದ್ದೆ, ಜೆಡಿಎಸ್ ಸೇರಿದೆ. ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡಿತು. ಚುನಾವಣಾ ಕಣಕ್ಕೆ ಧುಮುಕಿದ್ದೇನೆ.
ಸೇವೆಯೇ ಗೆಲುವಿಗೆ ಶ್ರೀರಕ್ಷೆ: ನಾನು ರಾಜಕೀಯ ಹಿನ್ನೆಲೆಯಿಂದ ಬಂದವನಲ್ಲ. ಆದರೆ ಸೇವೆ ಕಾರ್ಯ ನನ್ನ ರಾಜಕೀಯ ಬೆಳವಣಿಗೆಗೆ ಶ್ರೀರಕ್ಷೆಯಾಗಲಿದೆ. ಹಿಂದೆ ಅಧಿಕಾರದಲ್ಲಿದ್ದಾಗ ಏನೆಲ್ಲ ಮಾಡಿದ್ದೇ ಎಂದು ಹೇಳಿಕೊಳ್ಳಲು ನನ್ನ ಬಳಿ ಏನೂ ಇಲ್ಲ. ಆದರೆ ಸಾಮಾಜಿಕ ಸೇವೆ ಮಾಡಿದ ಸಾವಿರಾರು ಉದಾಹರಣೆಗಳಿವೆ. ನಾನು ಸೇವೆಗೆ ಮೊದಲ ಆದ್ಯತೆ ನೀಡಿದ್ದು ಆರೋಗ್ಯ ಮತ್ತು ಶಿಕ್ಷಣಕ್ಕೆ. ನಾನು ಜಾತಿಯಲ್ಲಿ ಅಲ್ಪಸಂಖ್ಯಾತನಾಗಿದ್ದರೂ ಜಾತಿ, ಭೇದ ಮಾಡದೇ ಮಿಡ್ಮ್ಯಾಕ್ ಸಂಸ್ಥೆಯ ಮುಖಾಂತರ ಎಲ್ಲರಿಗೂ ನೆರವಾಗಿದ್ದೇನೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನೋಟ್ಬುಕ್, ಬ್ಯಾಗ್, ಫೀ ಕೊಡಿಸಿದ್ದೇನೆ. ಡೆಸ್ಕ್ ವಿತರಣೆ ಮಾಡಿದ್ದೇನೆ. ಬಡವರಿಗೆ ಆರೋಗ್ಯ ಚಿಕಿತ್ಸೆಗೆ ಸಹಾಯ ಮಾಡಿದ್ದೇನೆ. ತನ್ಮೂಲಕ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದೇನೆ.
ಸುಳ್ಳು ಹೇಳುವ ಜಾಯಮಾನ ನನ್ನದಲ್ಲ: ನಾನು ಮಾತಿನಲ್ಲಿ ಮನೆ ಕಟ್ಟುವವನೂ ಅಲ್ಲ. ಸುಳ್ಳು ಹೇಳುವ ಜಾಯಮಾನದವನಂತೂ ಅಲ್ಲವೇ ಅಲ್ಲ. ಮಾತು ಕಡಿಮೆ ಮಾಡಿ ಕೆಲಸ ಹೆಚ್ಚು ಮಾಡುವ ಮನೋಧರ್ಮ ನನ್ನದು. ನಾನು ಶಾಸಕನಾಗಿ ಕ್ಷೇತ್ರದ ಚಿತ್ರಣವನ್ನೇ ಬದಲಾವಣೆ ಮಾಡುತ್ತೇನೆಂದು ಹೇಳಲಾರೆ. ಆದರೆ ಹುಬ್ಬಳ್ಳಿಯ ಬಗ್ಗೆ ಕೆಲವು ಕನಸು ಕಂಡಿದ್ದೇನೆ. ಈ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೈಗಾರಿಕೆಗಳು ಅಭಿವೃದ್ಧಿ ಹೊಂದಿಲ್ಲ. ಆಳುವವರ ನಿರ್ಲಕ್ಷ್ಯ ಧೋರಣೆಯೇ ಇದಕ್ಕೆ ಕಾರಣ. ಕೈಗಾರಿಕೆಗಳು ಬಂದಲ್ಲಿ ಉದ್ಯೋಗ ಸೃಷ್ಟಿಯಾಗಿ ನಿರುದ್ಯೋಗ ಸಮಸ್ಯೆ ದೂರವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ. ಜೊತೆಗೆ ಹುಬ್ಬಳ್ಳಿಯನ್ನು ಐಟಿ ಹಬ್ ಮಾಡಬೇಕೆಂಬ ಮಹದಾಸೆ ಹೊಂದಿದ್ದೇನೆ. ಇದಲ್ಲದೇ ಹುಬ್ಬಳ್ಳಿಯನ್ನು ಸ್ವಚ್ಛ ನಗರವಾಗಿಸುವ, ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಫ್ಲೈಓವರ್ ನಿರ್ಮಾಣ, ರಸ್ತೆ, ಕುಡಿಯುವ ನೀರಿಗೆ ಆದ್ಯತೆ ನೀಡುತ್ತೇನೆ. ಎಲ್ಲವನ್ನೂ ಮಾಡುತ್ತೇನೆಂದು ಹೇಳಲಾರೆ ಹೇಳಿರುವ ಕಾರ್ಯವನ್ನು ಚಾಚೂ ತಪ್ಪದೇ ಮಾಡುತ್ತೇನೆ. ಇದಕ್ಕೆ ಜನತೆ ಅವಕಾಶ ಕಲ್ಪಿಸಿಕೊಡುತ್ತಾರೆನ್ನುವ ವಿಶ್ವಾಸವಿದೆ ಎಂದರು.
ನಾನು ಸ್ಪರ್ಧಿಸುತ್ತಿರುವುದು ರಾಜ್ಯದ ಮುಖ್ಯಮಂತ್ರಿಯ ವಿರುದ್ಧವಲ್ಲ ಹೊರತಾಗಿ ಜಗದೀಶ ಶೆಟ್ಟರ್ ವಿರುದ್ಧ. ಶೆಟ್ಟರ್ ರಾಜ್ಯದ ಮುಖ್ಯಮಂತ್ರಿ ಎಂದೆನಿಸಿಕೊಂಡರೂ ಚುನಾವಣಾ ಕಣದಲ್ಲಿ ನನಗೆ ಕೇವಲ ಎದುರಾಳಿ. ನಾನು ಅವರನ್ನು ಸಿಎಂ ಎಂದು ಲೆಕ್ಕಿಸದೇ ಕೇವಲ ಎದುರಾಳಿ ಎಂಬ ದೃಷ್ಟಿಕೋನವನ್ನಿಟ್ಟುಕೊಂಡು ಎದುರಿಸುತ್ತಿದ್ದೇನೆ. ಶೆಟ್ಟರ್ ಅವರನ್ನು ಸೋಲಿಸುತ್ತೇನೆನ್ನುವ ವಿಶ್ವಾಸವಿದೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ಗೆ ಭವಿಷ್ಯವಿಲ್ಲ ಎನ್ನುವುದು ಸರಿಯಲ್ಲ. ಈ ಬಾರಿ ಬದಲಾವಣೆಯ ಅಲೆ ಬೀಸಿದೆ. ಉತ್ತರ ಕರ್ನಾಟಕದಿಂದ ಹೆಚ್ಚಾನು ಹೆಚ್ಚು ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಜೆಡಿಎಸ್ ಕನಿಷ್ಠ ಎರಡನೇ ಸ್ಥಾನದಲ್ಲಿದ್ದರೆ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಡಲಿದೆ.
- ತಬ್ರೇಜ್ ಶಂಸಿ, ಜೆಡಿಎಸ್ ಅಭ್ಯರ್ಥಿ