ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಂತೋಷ ಲಾಡ್ ನಾಮಪತ್ರ ಸಲ್ಲಿಕೆ

Lingaraj Badiger
Updated On : 18 Apr 2013, 11:45 am

 ಕನ್ನಡಪ್ರಭ ವಾರ್ತೆ, ಕಲಘಟಗಿ, ಏ. 17
ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೃಷಿಗಳೊಂದಿಗೆ ಕಲಘಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಸಂತೋಷ ಲಾಡ್ ಬುಧವಾರ ಚುನಾವಣಾಧಿಕಾರಿ ವಿಜಯಕುಮಾರ ಹೊರಕೇರಿ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಹನ್ನೆರಡು ಮಠದಲ್ಲಿ ಜಮಾಯಿಸಿದ್ದ ಸಹಸ್ರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ಮೂಲಕ ತೆರೆದ ವಾಹನದಲ್ಲಿ ತೆರಳಿದ ಲಾಡ್, ಮಧ್ಯಾಹ್ನ 1.40ರ ಸುಮಾರಿಗೆ ನಾಮಪತ್ರ ಸಲ್ಲಿಸಿದರು.
ವಾಹನಗಳ ಕಾರುಬಾರು!: ಶಾಸಕ ಸಂತೋಷ ಲಾಡ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ರೈತರು ಹಾಗೂ ಶ್ರೀಸಾಮಾನ್ಯರು ಟ್ರ್ಯಾಕ್ಟರ್, ಕಾರ್ ಹಾಗೂ ದ್ವಿಚಕ್ರ ವಾಹನಗಳೊಂದಿಗೆ ಪಾಲ್ಗೊಂಡಿದ್ದು ವಿಶೇಷ. ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಮೆರವಣಿಗೆ ತಾಲೂಕಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ತಹಸೀಲ್ದಾರ್ ಕಚೇರಿ ತಲುಪಿತು.
ಝಾಂಜ್ ಮೇಳ: ಇನ್ನೂ ಕೆಲ ಕಾರ್ಯಕರ್ತರು ಝಾಂಜ್ ಮೇಳಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಉರಿ ಬಿಸಿಲು ಲೆಕ್ಕಿಸದೇ ಮೇಳದ ತಂಡದವರು ಸುಶ್ರಾವ್ಯವಾಗಿ ವಾದ್ಯಗಳನ್ನು ಬಾರಿಸುತ್ತ ಲಾಡ್ ಜನರ ಗಮನ ಸೆಳೆದರು. ಮೆರವಣಿಗೆಯಿಂದಾಗಿ ಸುಮಾರು 2 ಗಂಟೆಗೂ ಅಧಿಕ ಕಾಲ ವಾಹನ ಸಂಚಾರಕ್ಕೆ ಅಡೆತಡೆಯುಂಟಾಯಿತು.
ಜಯಘೋಷ: ಮೆರವಣಿಗೆಯುದ್ದಕ್ಕೂ ಲಾಡ್ ಪರ ಜಯಘೋಷ ಕೂಗಿದ ಕಾರ್ಯಕರ್ತರು, ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಂತೋಷ ಲಾಡ್‌ರ ಕೈಬಲಪಡಿಸುವಂತೆ ವಿನಂತಿಸಿಕೊಂಡರು. ಅಲ್ಲದೇ, ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಜೀತೆಗಾ ಭಾಯ್ ಜೀತೆಗಾ ಸಂತೋಷ ಲಾಡ್ ಜಿತೇಗಾ ಎಂದು ಮುಗಿಸು ಮುಟ್ಟುವಂತೆ ಘೋಷಣೆ ಕೂಗಿದರು.
ವಿಜಯದ ಸಂಕೇತ: ನಾಮಪತ್ರ ಸಲ್ಲಿಸಲು ಲಾಡ್ ಮೆರವಣಿಗೆ ಮೂಲಕ ಆಗಮಿಸುತ್ತಿದ್ದಾರೆಂಬ ಮಾಹಿತಿ ಕಲೆ ಹಾಕಿದ್ದ ಮತದಾರರು, ಮೆರವಣಿಗೆ ಆಯಾ ಭಾಗಗಳಲ್ಲಿ ಬರುತ್ತಿದಂತೆಯೇ ಮನೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ನಿಂತುಕೊಂಡೆ ಲಾಡ್ ಅವರತ್ತ ವಿಜಯದ ಸಂಕೇತ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಲಾಡ್ ಅವರ ನಾಮಪತ್ರ ಸಲ್ಲಿಕೆಯ ಭರಾಟೆ ಒಂದು ರೀತಿ ತಾಲೂಕಿನಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು.
ಮಹಿಳೆಯರು ಸಿಂಹಪಾಲು: ಲಂಬಾಣಿ ಹಾಗೂ ಸಿದ್ಧಿ ಜನಾಂಗ, ವಿವಿಧ ಸಮುದಾಯಗಳ ಮಹಿಳೆಯರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಲಾಡ್ ಅವರ ಬಗ್ಗೆ ಹೊಂದಿರುವ ಅಭಿಮಾನ ತೋರ್ಪಡಿಸಿದರು. ಕಲಘಟಗಿ ಮಾತ್ರವಲ್ಲದೇ ಅಳ್ನಾವರ ಭಾಗದ ಮಹಿಳಾ ಹಾಗೂ ಪುರುಷ ಮತದಾರರು ಬೃಹತ್ ಪ್ರಮಾಣದಲ್ಲಿ ಸೇರಿದ್ದರು.
ಬಿಜೆಪಿ ತರಾಟೆಗೆ: ನಾಮಪತ್ರ ಸಲ್ಲಿಸಿದ ನಂತರ ಯುವಶಕ್ತಿ ಸರ್ಕಲ್‌ನಲ್ಲಿ ಸೇರಿದ್ದ ಕಾರ್ಯಕರ್ತರನ್ನುದ್ದೇಶಿಸಿ ಸಂತೋಷ ಲಾಡ್ ಮಾತನಾಡಿ, ಕ್ಯಾಬಿನೆಟ್ ದರ್ಜೆಯ ಖಾತೆ ಹೊಂದಿದ್ದರೂ ಸಿ.ಎಂ. ನಿಂಬಣ್ಣವರ ಕ್ಷೇತ್ರದ ಅಭಿವೃದ್ಧಿಗೆ ಕಿಂಚಿತ್ತೂ ಪ್ರಯತ್ನಿಸಿಲ್ಲ ಎಂದು ದೂರಿದರು. ತಾವೊಬ್ಬ ಕಾಂಗ್ರೆಸ್ ಪಕ್ಷದ ಶಾಸಕನಾಗಿಯೂ ಬಿಜೆಪಿ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರಲು ಅವಿರತವಾಗಿ ಪ್ರಯತ್ನಿಸಿದ್ದೇವೆ. ಅತಿ ಅವಶ್ಯಕ ಕಾರ್ಯಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಲು ಮೀನಮೇಷ ಎಣಿಸಿದ್ದ ಸಂದರ್ಭದಲ್ಲಿ ವೈಯಕ್ತಿದ ದುಡ್ಡು ಹರಿಸಿ ಕ್ಷೇತ್ರದ ಜನತೆ ಅನುಕೂಲ ಕಲ್ಪಿಸಿಕೊಟ್ಟ ತೃಪ್ತಿ ತಮಗಿದೆ ಎಂದರು.
ಚುನಾವಣೆ ಬಂದಾಗ ತಮ್ಮನ್ನು ಹೊರಗಿನಿಂದ ಬಂದವರು ಎಂದು ಟೀಕಿಸುವ ನಿಂಬಣ್ಣವರು, ಸ್ವ-ಕ್ಷೇತ್ರದವರಾದರೂ ಕಲಘಟಗಿ ಈವರೆಗೂ ಹಿಂದುಳಿದ ಕ್ಷೇತ್ರವಾಗಿ ಉಳಿದುಕೊಳ್ಳಲು ಯಾಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಸುಳ್ಳಾದ ಭರವಸೆ: ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಗರು ರೈತರಿಗೆ ಉಚಿತ ವಿದ್ಯುತ್, ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ನೀಡಿದ್ದ ಭರವಸೆಗಳೆಲ್ಲ ಸುಳ್ಳಾಗಿವೆ. ಬಿಜೆಪಿ ಸರ್ಕಾರದಿಂದ ರೈತರು, ವಯೊವೃದ್ಧರು ಹಾಗೂ ಶ್ರೀಸಾಮಾನ್ಯರಿಗೆ ಯಾವುದೇ ಅನುಕೂಲವಾಗಿಲ್ಲ ಎಂದರು. ಚುನಾವಣೆ ಬಂದಾಗ ಅಭಿವೃದ್ಧಿ ಮಂತ್ರ ಪಠಿಸುವ ಬಿಜೆಪಿ ನಾಯಕರು, ಅಧಿಕಾರದಲ್ಲಿದ್ದಾಗ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ನಡೆದುಕೊಂಡಿದ್ದರೇ ಇಂದು ರಾಜ್ಯದ ಚಿತ್ರಣ ಬದಲಾಗಿರುತ್ತಿತ್ತು ಎಂದರು. ರೈತರ 70 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಈವರೆಗಿನ ಯಾವ ಸರ್ಕಾರಗಳು ರೈತರಿಗೆ ಇಂತಹ ದೊಡ್ಡ ಕೊಡುಗೆ ನೀಡಿದ ಉದಾಹರಣೆಗಳಿಲ್ಲ ಎಂದ ಅವರು, ಕ್ಷೇತ್ರದ ಅಭಿವೃದ್ಧಿಗೆ ಕಾಯಾ, ವಾಚಾ ಹಾಗೂ ಮನಸಾ ಪ್ರಯತ್ನಿಸುತ್ತಿರುವ ತಮಗೆ ಈ ಬಾರಿ ಚುನಾವಣೆ ಅಭೂತ ಪೂರ್ವ ಗೆಲವು ತಂದುಕೊಡುವ ಮೂಲಕ ಸುಳ್ಳು ಆಶ್ವಾಸನೆ ನೀಡುವ ನಾಯಕರಿಗೆ ತಕ್ಕಪಾಠ ಕಲಿಸಲು ಮತದಾರ ಶಪಥಗೈಯಬೇಕೆಂದರು. ವಿಪ ಸದಸ್ಯ ಶ್ರೀನಿವಾಸ ಮಾನೆ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಿವಲಿಂಗಯ್ಯ ಉಲಿಕಲ್ಲ, ಜಿಪಂ ಮಾಜಿ ಸದಸ್ಯ ಎಸ್.ಆರ್. ಪಾಟೀಲ, ಚಿಕ್ಕಣ್ಣವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವೈ. ಪಾಟೀಲ, ಜಿಪಂ ಸದಸ್ಯೆ ಕಸ್ತೂರಬಾಯಿ ಧಾರವಾಡ, ತಾಲೂಕು, ಅಳ್ನಾವರ ಭಾಗದಿಂದಲೂ ಅನೇಕ ಗಣ್ಯರು ಪಾಲ್ಗೊಂಡಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement