ಅಭಿವೃದ್ಧಿ ಹರಿಕಾರನಿಗೆ ಮತ ನೀಡಿ: ಶಿಲ್ಪಾ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರ ಶಿಲ್ಪಾ ಶೆಟ್ಟರ್ ಅವರ ಪ್ರಚಾರ ಕಳೆದ ಎರಡು ದಿನಗಳ ಅವಧಿಯಲ್ಲಿ ವೇಗ ಪಡೆದುಕೊಂಡಿದ್ದು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತಷ್ಟು ವೇಗ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ವಾರ್ಡ್ ನಂ. 34ರ ವ್ಯಾಪ್ತಿಯ ವಿದ್ಯಾನಗರದಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ಕೈಗೊಂಡು ಮಾತನಾಡಿ, ಅವಳಿ ನಗರದ ಅಭಿವೃದ್ಧಿಗೆ ಶ್ರಮಿಸಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ತಪ್ಪದೇ ಮತ ನೀಡಿ ಎಂದು ಮನೆ ಮನೆಗಳಿಗೆ ತೆರಳಿ ಮತದಾರರಲ್ಲಿ ವಿನಂತಿಸಿದರು. ವಾರ್ಡ್ ನಂ. 34ರಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಬಿಜೆಪಿ ಮಹಿಳಾ ಕಾರ್ಯಕರ್ತರು ಎರಡು ಅಥವಾ ಅದಕ್ಕಿಂತ ಹೆಚ್ಚು ತಂಡಗಳಾಗಿ ಮನೆ ಮನೆಗಳಿಗೆ ತೆರಳಿ ಮತ ಯಾಚಿಸುವುದರ ಜೊತೆಗೆ ಶೆಟ್ಟರ್ ಆಡಳಿತಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಇರುವ ಕರಪತ್ರ ಹಂಚುತ್ತಿದ್ದಾರೆ. ಬಿಜೆಪಿ ಪ್ರಚಾರ ಅಭಿಯಾನ್ ಪ್ರಮುಖ ಶ್ರೀನಿವಾಸ ಶಾಸ್ತ್ರಿ, ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ, ರಾಜ್ಯ ಮಹಿಳಾ ಘಟಕದ ಸರೋಜಿನಿ ಭಾರದ್ವಾಜ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ವಂಟಮೂರಿ, ಸ್ನೇಹಾ ಶೆಟ್ಟರ್, ಶೋಭಾ ಶೆಟ್ಟರ್, ಪ್ರಭಾ ಎಚ್.ಡಿ, ಪಾರ್ವತಿ ಪಂಥ, ಸೀಮಾ ಲಾದ್ವಾ ಇನ್ನಿತರರು ಇದ್ದರು.
ಶನಿವಾರ ಶಿಲ್ಪಾ ಶೆಟ್ಟರ್ ಅವರು ವಿದ್ಯಾನಗರ ಇನ್ನುಳಿದ ಪ್ರದೇಶಗಳಲ್ಲಿ ಪಾದಯಾತ್ರೆ ಮುಖಾಂತರ ಮತ ಯಾಚಿಸಲಿದ್ದಾರೆ. ಏ. 21ರಂದು ಬೆಂಗೇರಿ ಮತ್ತು 22ರಂದು ಉಣಕಲ್, ಸಾಯಿನಗರ, ಜ್ಯೋತಿ ಕಾಲೋನಿ ಸೇರಿದಂತೆ ವಾರ್ಡ್ ನಂ. 27ರಲ್ಲಿ ಪತಿ ಜಗದೀಶ ಶೆಟ್ಟರ್ ಪರವಾಗಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ.