ಭ್ರಷ್ಟ ಈಶ್ವರಪ್ಪ ಇದ್ದರೂ ಬಿಜೆಪಿ ಹೇಗೆ ಸ್ವಚ್ಛ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 19
ಮನೆಯಲ್ಲಿ ನೋಟು ಎಣಿಸೊ ಯಂತ್ರ ಇರಿಸಿಕೊಂಡು ಇನ್ನೂ ಜಾಮೀನು ಸಿಗದೆ ಪರದಾಡುತ್ತಿರುವ ಕೆ.ಎಸ್. ಈಶ್ವರಪ್ಪ ಅವರಂತವರನ್ನು ಪಕ್ಷದಲ್ಲಿ ಇಟ್ಟುಕೊಂಡು ಭ್ರಷ್ಟರು ಹೊರ ಹೋಗಿದ್ದಾರೆ ಈಗ ಬಿಜೆಪಿ ಸ್ವಚ್ಛವಾಗಿದೆ ಎಂದು ಯಾವ ಮಾತಿನಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಪ್ರಶ್ನಿಸಿದರು.
ಶುಕ್ರವಾರ ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಹು-ಧಾ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಪಾಟೀಲ ಅವರ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, ತಮ್ಮ ಮಾತಿನುದ್ದಕ್ಕೂ ನಮ್ಮ ಪಕ್ಷದವರೇ ಬೆನ್ನಿಗೆ ಚೂರಿ ಹಾಕಿದ್ದರಿಂದ 24 ದಿನಗಳ ನ್ಯಾಯಾಂಗ ಬಂಧನದಲ್ಲಿರಬೇಕಾಯಿತು. ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ ಕಾಂಗ್ರೆಸ್ನವರೆ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ದೃಢಪಟ್ಟಿದೆ.
ಸಂತೋಷ್ ಹೆಗ್ಡೆಯಿಂದಲೂ ಷಡ್ಯಂತ್ರ: ಅಕ್ರಮ ಗಣಿಗಾರಿಕೆ ಸಂಬಂಧ ತನಿಖೆ ಮಾಡಿ ಎಂದು ಲೋಕಾಯುಕ್ತ ಸಂತೋಷ ಹೆಗ್ಡೆ ಅವರಿಗೆ ಸೂಚಿಸಿದ್ದು ನಾನೇ, ಆದರೆ ಅವರು ಕೂಡ ಯಾವುದೋ ಒಂದು ಶಿಕ್ಷಣ ಸಂಸ್ಥೆಗೆ ನೀಡಿದ ದೇಣಿಗೆಯನ್ನೇ ಆಧಾರವಾಗಿಟ್ಟುಕೊಂಡು ನಮ್ಮವರೊಂದಿಗೆ ಸೇರಿ ನನ್ನ ವಿರುದ್ಧ ವರದಿ ಸಿದ್ಧಪಡಿಸಿ ಷಡ್ಯಂತ್ರದಲ್ಲಿ ಭಾಗಿಯಾದರು. ಮಾಜಿ ಮುಖ್ಯಮಂತ್ರಿಗಳಾದ ಧರಂಸಿಂಗ್ ಮತ್ತು ಎಸ್.ಎಂ. ಕೃಷ್ಣ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆಯಿಂದ ಆಗಿರುವ ನಷ್ಟವನ್ನು ಭರ್ತಿ ಮಾಡಬೇಕು ಎಂದು ಸೂಚಿಸಿದ್ದರೂ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಆಪಾದಿಸಿದರು.
ಅಭಿವೃದ್ಧಿಯಲ್ಲಿ 8ನೇ ಸ್ಥಾನದಲ್ಲಿದ್ದ ರಾಜ್ಯವನ್ನು 2ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದು, ನನ್ನ ಅವಧಿಯಲ್ಲಿ ಆಗಿರುವ ಸಾಧನೆ. ಈ ಸಾಧನೆ ಮತ್ತು ನನ್ನ ಏಳಿಗೆ ಸಹಿಸದ ಈಶ್ವರಪ್ಪ ಮತ್ತು ಜಗದೀಶ ಶೆಟ್ಟರ್ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಅಧಿಕಾರದಿಂದ ಕೆಳಗೆ ಇಳಿಸಿದರು. ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಎರಡು ಕಂತುಗಳಲ್ಲಿ ರು. 200 ಕೋಟಿ, ಹು-ಧಾ ರಸ್ತೆ ಅಗಲೀಕರಣಕ್ಕೆ ರು. 260 ಕೋಟಿ ಬಿಡುಗಡೆಯಾಗಿದ್ದು ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಂದು ತಿಳಿಸಿದ ಅವರು, ಈ ಯಡಿಯೂರಪ್ಪನ ಕೈ ಬಲಪಡಿಸುವುದಕ್ಕೆ ಈ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಪಾಟೀಲರಿಗೆ ಮತ ನೀಡಿ ಎಂದು ಮತದಾರರಲ್ಲಿ ಕೇಳಿಕೊಂಡರು.
ವೇದಿಕೆಯಲ್ಲಿ ಹು-ಧಾ ಸೆಂಟ್ರಲ್ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಸ್.ಎಸ್. ಪಾಟೀಲ, ಮೋಹನ ಲಿಂಬಿಕಾಯಿ, ರಾಜೇಶ್ವರಿ ಜಡಿ, ಅಶೋಕ ಕಾಟವೆ, ಈಶ್ವರಚಂದ್ರ ಹೊಸಮನಿ ಸೇರಿದಂತೆ ಇನ್ನಿತರರು ಇದ್ದರು.