ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರಾಜಕೀಯ ರಂಗಿನಾಟಕ್ಕೆ ಜಿಲ್ಲೆ ಸಜ್ಜು

Rashmi Kasaragodu
Updated On : 20 Apr 2013, 11:02 am

 ಸತೀಶ ಪಾಗಾದ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ.19
ನಾಮಪತ್ರ ಸಲ್ಲಿಕೆ, ಪರಿಶೀಲನೆ ಮುಗಿದು ಅಂತಿಮ ಹಣಾಹಣಿಗೆ ಸಿದ್ಧವಾಗಿರುವ ರಾಜಕೀಯ ಪಕ್ಷಗಳು ಜಿಲ್ಲೆಯಲ್ಲಿ ರಾಜಕೀಯ ರಂಗಿನಾಟಕ್ಕೆ ಹೊಸ ಮೆರುಗು ನೀಡುವುದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಚುನಾವಣಾ ಪ್ರಚಾರಕ್ಕೆ ರಾಷ್ಟ್ರಮಟ್ಟದ ನಾಯಕರನ್ನೇ ಕರೆತಂದು ಚುನಾವಣಾ ಆಖಾಡಕ್ಕೆ ಇಳಿಸುವ ಮೂಲಕ ತಮ್ಮ ನಾಯಕರ ಸಾಮರ್ಥ್ಯ ಪರೀಕ್ಷೆಗೆ ಒಡ್ಡುವುದಕ್ಕೆ ತುದಿಗಾಲ ಮೇಲೆ ನಿಂತಿವೆ.
ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಎಲ್ಲ ಪಕ್ಷಗಳಿಗಿಂತ ಬಿಜೆಪಿ ಈಗಾಗಲೇ ಸಿಎಂ ಶೆಟ್ಟರ್ ನೇತೃತ್ವದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದು, ಸ್ವಕ್ಷೇತ್ರ ಹು-ಧಾ ಸೆಂಟ್ರಲ್ನಲ್ಲಿ ಈಗಾಗಲೇ ಐದಕ್ಕೂ ಹೆಚ್ಚು ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಎರಡು ದಿನಗಳಿಂದ ಸ್ವಲ್ಪ ತಣ್ಣಗಾದಂತೆ ಕಂಡ ಚುನಾವಣಾ ಕಾವು ಶುಕ್ರವಾರ ಮತ್ತೆ ಕಾವು ಪಡೆದುಕೊಂಡಿದ್ದು, ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಜಿಲ್ಲೆಯ ಸಂಶಿ, ಅಳ್ನಾವರ, ಧಾರವಾಡ, ಹು-ಧಾ ಸೆಂಟ್ರಲ್ ಮತ್ತು ಹು-ಧಾ ಪೂರ್ವ ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳ ಪರ ಭರ್ಜರಿಯಾಗಿ ಪ್ರಚಾರ ಆರಂಭಿಸಿದ್ದು, ತಮ್ಮ ಮೂಲ ಪಕ್ಷ ಬಿಜೆಪಿ ಮತ್ತದರ ನಾಯಕರ ವಿರುದ್ಧ ಟೀಕೆಗಳ ಸುರಿಮಳೆಯನ್ನೆ ಸುರಿಯುತ್ತಿದ್ದಾರೆ.
ಪ್ರಚಾರದ ವಿಷಯದಲ್ಲಿ ಕಾಂಗ್ರೆಸ್ ಮಾತ್ರ ಸದ್ಯದ ಮಟ್ಟಿಗೆ ಸ್ವಲ್ಪ ಹಿಂದೆ ಇರುವಂತೆ ಕಂಡರೂ ಸ್ಥಳೀಯ ಮಟ್ಟದಲ್ಲಿ ಮಾತ್ರ ಕಾರ್ಯಕರ್ತರ ಪಡೆ ಅಲ್ಲಲ್ಲಿ ಮೆರವಣಿಗೆ, ಪಾದಯಾತ್ರೆ ಮಾಡುತ್ತಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದ ಬರುವಿಕೆಗೆ ಕೈ ಪಡೆ ಕಾಯುತ್ತಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಏ. 20ರಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಎಸ್. ಶಿವಳ್ಳಿ ಪರ ಪ್ರಚಾರ ಮಾಡಲಿದ್ದು, ನಂತರದ ಒಂದು ವಾರದಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಏ. 29ರಂದು ಪ್ರಧಾನಿ ಮನಮೋಹನ್ ಸಿಂಗ್ ಜಿಲ್ಲೆಯಲ್ಲಿ ಕಾಂಗ್ರೆಸ್ ಅಲೆ ಹುಟ್ಟು ಹಾಕಲಿದ್ದಾರೆ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಜಿಲ್ಲಾಧ್ಯಕ್ಷ ಎ.ಎಂ. ಹಿಂಡಸಗೇರಿ, ಪ್ರಧಾನಿ ಮನಮೋಹನ್ ಸಿಂಗ್ ಅವರು ಏ.29ರಂದು ಹುಬ್ಬಳ್ಳಿಗೆ ಬರುವುದು ಖಚಿತ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ನ ಯುವರಾಜ ರಾಹುಲ್ ಗಾಂಧಿ ಕೂಡ ಪ್ರಚಾರಕ್ಕೆ ಬರಲಿದ್ದಾರೆ. ಆದರೆ, ಪ್ರವಾಸ ವೇಳಾಪಟ್ಟಿ ಇನ್ನೂ ಸಿದ್ಧವಾಗಿಲ್ಲ ಎಂದಿದ್ದಾರೆ.
ಪಟ್ಟಿ ಬಿಡುಗಡೆ ಸೇರಿದಂತೆ ಎಲ್ಲ ಸಂಗತಿಗಳಲ್ಲಿ ಪಕ್ಕಾ ಚುನಾವಣಾ ರಣತಂತ್ರ ಹೆಣೆದಿರುವ ಬಿಜೆಪಿ ಪ್ರಚಾರದಲ್ಲೂ ಒಂದು ಹೆಜ್ಜೆ ಮುಂದೆ ಇರುವ ಎಲ್ಲ ಲಕ್ಷಣ ತೋರಿಸಿದ್ದು, ಏ. 21ರಂದು ಶುರುವಾಗುವ ಬಿಜೆಪಿ ನಾಯಕರ ದಂಡಯಾತ್ರೆ ಈ ಮಾಸಾಂತ್ಯದವರೆಗೆ ನಡೆಯಲಿದೆ. ಏ.21ರಂದು ವೆಂಕಯ್ಯ ನಾಯ್ಡು, ಮಹಿಳಾ ಘಟಕದ ಬಿಜೆಪಿ ನಾಯಕಿ, ಚಿತ್ರನಟಿ ತಾರಾ ಅಂದೇ ಆಗಮಿಸಲಿದ್ದು, ಚಿತ್ರನಟಿ ತಾರಾ ಅವರು ಬಹುತೇಕ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಶೆಟ್ಟರ್ ಪರವಾಗಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.  ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಈಗಾಗಲೇ ಅವಳಿ ನಗರದ ಹಲವು ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರೂ ಎರಡನೇ ಹಂತವಾಗಿ ಏ. 23ರಂದು ಮತ್ತೊಮ್ಮೆ ಪ್ರಚಾರಕ್ಕೆ ಇಳಿಯಲಿದ್ದಾರೆ. ಇದೇ ದಿನ ರಾಷ್ಟ್ರೀಯ ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಸ್ಮೃತಿ ಇರಾಣಿ ಕೂಡ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಬಿಜೆಪಿಯ ರಾಷ್ಟ್ರೀಯ ನಾಯಕರಾದ ಲಾಲ್ಕೃಷ್ಣ ಆಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಗುಜರಾತ ನರೇಂದ್ರ ಮೋದಿ ಕೂಡ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ರಂಗು ತರುವ ಸಾಧ್ಯತೆಗಳಿದ್ದು, ಅವರ ಪ್ರವಾಸ ವೇಳಾಪಟ್ಟಿ ಇನ್ನೂ ಸಿದ್ಧವಾಗಿಲ್ಲ ಎನ್ನುವುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸ್ಪಷ್ಟವಾಗದ ಜೆಡಿಎಸ್ ಪ್ರಚಾರ ತಂತ್ರ: ಸ್ಥಳೀಯ ಮಟ್ಟದ ಕಾರ್ಯಕರ್ತರು ಮತ್ತು ಮುಖಂಡರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಪಾದಯಾತ್ರೆ ಮುಖಾಂತರ ಪ್ರಚಾರ ಮುಂದುವರಿಸಿದ್ದಾರೆ. ಈಗಾಗಲೇ ಜೆಡಿಎಸ್ನ ರಾಜ್ಯಮಟ್ಟದ ನಾಯಕರಾದ ಜಮೀರ್ ಅಹ್ಮದ್ ಮತ್ತು ಇಕ್ಬಾಲ್ ಅನ್ಸಾರಿ ಚುನಾವಣಾ ಪೂರ್ವ ಸಭೆಗಳನ್ನು ಉದ್ದೇಶಿಸಿ ಮಾತನಾಡಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದ್ದಾರೆ. ಆದರೆ ಜೆಡಿಎಸ್ನ ನಿರ್ಣಾಯಕ ಶಕ್ತಿಗಳಾದ ಮಾಜಿ ಪ್ರಧಾನಿ ದೇವೆಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಆಗಮನಕ್ಕೆ ಜೆಡಿಎಸ್ ಕಾರ್ಯಕರ್ತರು ಕಾಯುತ್ತಿರುವುದಂತೂ ಸತ್ಯ. ಈ ನಿಟ್ಟಿನಲ್ಲಿ ಪಕ್ಷದ ಸ್ಥಳೀಯ ಮುಖಂಡರು ಚಿಂತನೆ ಮಾಡುತ್ತಿದ್ದು, ಕುಮಾರಸ್ವಾಮಿ ಅಥವಾ ದೇವೇಗೌಡರನ್ನು ಜಿಲ್ಲೆಗೆ ಕರೆತಂದು ಪ್ರಚಾರಕ್ಕೆ ತುರುಸು ತರಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement