ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವ್ಯವಸ್ಥಿತ ಚುನಾವಣೆ ನಡೆಸಲು ಡಿಸಿ ಸೂಚನೆ

Rashmi Kasaragodu
Updated On : 20 Apr 2013, 11:03 am

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 19
ಮೇ 5ರಂದು ಜರುಗಲಿರುವ ವಿಧಾನಸಭಾ ಚುನಾವಣೆ ಸಿದ್ಧತೆಗಳ ಕುರಿತು ಜಿಲ್ಲೆಗೆ ನೇಮಕವಾಗಿರುವ ಸಾಮಾನ್ಯ, ಲೆಕ್ಕ ಹಾಗೂ ಪೊಲೀಸ್ ವೀಕ್ಷಕರ ಹಾಗೂ ವಿವಿಧ ನೋಡಲ್ ಅಧಿಕಾರಿಗಳ ಸಭೆ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.
ಜಿಲ್ಲೆಯಲ್ಲಿ ಚುನಾವಣಾ ಕಾರ್ಯದಲ್ಲಿ ನಿರತವಾಗುವ ಅಧಿಕಾರಿ ಸಿಬ್ಬಂದಿ, ರಾಜಕೀಯ ಪಕ್ಷಗಳ ಏಜೆಂಟರೂ ಸೇರಿದಂತೆ ಪ್ರತಿಯೊಬ್ಬರು ತಪ್ಪದೆ ಅಂಚೆ ಪತ್ರದ ಮೂಲಕ ಮತದಾನ ಮಾಡುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಮೀರ ಶುಕ್ಲ ವೀಕ್ಷಕರಿಗೆ ತಿಳಿಸಿದರು.
ರಾಜಕೀಯ ಪಕ್ಷ, ಅಭ್ಯರ್ಥಿಗಳು ಚುನಾವಣೆ ಕುರಿತು ಮಾಡುವ ಖರ್ಚು-ವೆಚ್ಚದ ವಿವರ ಗಮನಿಸಲು ಈಗಾಗಲೆ ಲೆಕ್ಕಾಧಿಕಾರಿಗಳ ತಂಡಗಳು ಕಾರ್ಯನಿರತವಾಗಿವೆ. ಮುಖ್ಯ ವೆಚ್ಚಾಧಿಕಾರಿಗಳ ತಂಡವು ಪ್ಲಾಯಿಂಗ್, ಸ್ಟಾಟಿಕ ಟೀಂ ಹಾಗೂ ಮಾಧ್ಯಮಗಳ ವರದಿಗಳ ಆಧಾರದ ಮೇಲೆ ಸಂಬಂಧಿತ ಪಕ್ಷ, ವ್ಯಕ್ತಿಗಳ ವೆಚ್ಚದ ಪರಿಶೀಲನೆ ನಡೆಸುತ್ತಿದೆ. ರಾಜಕೀಯ ಪಕ್ಷಗಳು ಸದಾಚಾರ ಸಂಹಿತೆ ಅನುಸರಿಸುವ ಕುರಿತು ಅಭ್ಯರ್ಥಿ ಹಾಗೂ ಪಕ್ಷಗಳ ವೆಚ್ಚ ನಿರ್ವಹಿಸುವ ಕುರಿತು ಸಭೆಗಳನ್ನು ಜರುಗಿಸಿ ಸೂಕ್ತ ತಿಳುವಳಿಕೆ ಹಾಗೂ ಮಾರ್ಗದರ್ಶನ ನೀಡಲಾಗಿದೆ. ಚುನಾವಣಾ ಅಭ್ಯರ್ಥಿಗಳ ಖಚಿತ ಪಟ್ಟಿ ಶನಿವಾರ ಸಂಜೆ ವೇಳೆಗೆ ತಿಳಿಸಿ ನಂತರ ಅವರ ಸಭೆ ಜರುಗಿಸಿ ಇನ್ನೊಮ್ಮೆ ಅವರಿಗೆ ಅವಶ್ಯಕ ಮಾಹಿತಿಗಳನ್ನು ನೀಡಲಾಗುವುದು. ಗಣ್ಯ ವ್ಯಕ್ತಿಗಳ, ಹೆಲಿಕಾಪ್ಟರ್ ಬಾಡಿಗೆ ವಿಮಾನಗಳ ಮೂಲಕ ಬರುವವರ ಹಾಗೂ ಸಾರ್ವಜನಿಕ ಪ್ರಚಾರ ಸಭೆಗಳ ಕುರಿತು ಈಗಾಗಲೇ ರಾಜಕೀಯ ಪಕ್ಷಗಳಿಗೆ ಎಲ್ಲ ಮಾಹಿತಿ ನೀಡಲಾಗಿದೆ.
13 ಲಕ್ಷ ಮತದಾರರು: ಜಿಲ್ಲೆಯಲ್ಲಿ 18.5 ಲಕ್ಷ ಜನಸಂಖ್ಯೆ ಅಂದಾಜಿದ್ದು, ಅದರಲ್ಲಿ ಸದ್ಯ 13 ಲಕ್ಷ ಮತದಾರರಿದ್ದಾರೆ. ಗಂಡು, ಹೆಣ್ಣುಗಳ ಅನುಪಾತ 957 ರಷ್ಟಿದೆ. ಜಿಲ್ಲೆಯಲ್ಲಿ ಶೇ. 9ರಷ್ಟು ಎಸ್ಸಿ ಹಾಗೂ ಶೇ. 5ರಷ್ಟು ಎಸ್ಟಿ ಜನರಿದ್ದಾರೆ. ಜನೆವರಿ ನಂತರ ಇಲ್ಲಿಯವರೆಗೆ 35,780 ನಿವ್ವಳ ಮತದಾರರ ಸೇರ್ಪಡೆ ಆಗಿದೆ. ಮತದಾನದ ನಾಲ್ಕು ದಿನ ಮುಂಚೆ ಹಾಗೂ ಮತದಾನದ ದಿನ ಮತದಾರ ಚೀಟಿ ವಿವರ ನೀಡಲು ಕ್ರಮ ಜರುಗಿಸಲಾಗುವುದು. ಕಡಿಮೆ ಮತದಾನವಾಗಿರುವ ಪ್ರದೇಶಗಳನ್ನು ಗುರುತಿಸಿದ್ದು, ಅಲ್ಲಿ ಮತದಾರ ಜಾಗೃತಿ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 1346 ಮತಗಟ್ಟೆ ಇದ್ದು, ಹೆಚ್ಚುವರಿ 81ಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರತಿಯೊಂದು ಮತಗಟ್ಟೆ ಸರಿಯಾಗಿ ಕಾರ್ಯನಿರ್ವಹಿಸುವ ಹೊಣೆಗಾರಿಕೆ ಅದಕ್ಕೆ ತಕ್ಕ ಸಿಬ್ಬಂದಿ ಇರುವ ಒಂದು ವಿಧಾನಸಭಾ ಕ್ಷೇತ್ರಕ್ಕೆ ತಲಾ 20ರಂತೆ ಸೆಕ್ಟರಲ್ ಅಧಿಕಾರಿಗಳ ತಂಡಗಳು ಕಾರ್ಯನಿರ್ವಹಿಸಲಿವೆ. ಹೆಚ್ಚು ಮತದಾನವಾಗುವ, ಸೂಕ್ಷ್ಮ ಅತೀಸೂಕ್ಷ್ಮ ಮತಗಟ್ಟೆಗಳ ಸೂಕ್ತ ರಕ್ಷಣಾ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ವೀಕ್ಷಕರಿಗೆ ವಿವರ ನೀಡಿದರು.  ಹುಬ್ಬಳ್ಳಿ-ಧಾರವಾಡ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣಾ ಬಂದೋಬಸ್ತ್ ಹಾಗೂ ರಕ್ಷಣಾ ವ್ಯವಸ್ಥೆ ಕುರಿತು ಹು-ಧಾ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಎಸ್ಪಿ ಡಾ. ವೈ.ಎಸ್. ರವಿಕುಮಾರ ವಿವರಗಳನ್ನು ನೀಡಿದರು.
ಸೂಕ್ತ ತರಬೇತಿ: ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಮತಗಟ್ಟೆಗಳಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಕುರಿತು ಸೂಕ್ತ ತರಬೇತಿ, ಮಾಹಿತಿ ನೀಡಲು, ಸೆಕ್ಟರ್ ಅಧಿಕಾರಿಗಳು ಮತದಾನದ ದಿನದ ಮುಂಚಿತವಾಗಿ ತಮ್ಮ ವ್ಯಾಪ್ತಿಯ ಪ್ರತಿ ಮತಗಟ್ಟೆ ಪರಿಶೀಲಿಸಿ ಕುಂದು ಕೊರತೆಗಳಿದ್ದಲ್ಲಿ ಅವುಗಳನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತರಲು, ಜಿಲ್ಲೆಗೆ ಪ್ರವೇಶವಾಗುವಾಗ ಇರುವ ನಾಕಾಬಂದಿಗಳ ಜೊತೆಗೆ ಜಿಲ್ಲೆಯಲ್ಲಿ ಪ್ರಮುಖ ಸ್ಥಾನಗಳಲ್ಲಿ ತಪಾಸಣಾ ತಂಡಗಳನ್ನು ಹಾಗೂ ಚಕಿತಗೊಳಿಸುವ ತಪಾಸಣಾ ಕಾರ್ಯ ಜರುಗಿಸಲು ಸಭೆಯಲ್ಲಿ ಭಾಗವಹಿಸಿದ ವೀಕ್ಷಕರು ಸೂಚಿಸಿದರು.
ಜಿಲ್ಲೆಯಲ್ಲಿನ ಚುನಾವಣಾ ಸಿಬ್ಬಂದಿಯಿಂದ ಅಂಚೆ ಮತದಾನಕ್ಕಾಗಿ ಗಮನ ನೀಡಬೇಕು. ಪ್ಯಾರಾಮಿಲಿಟರಿ ಸಿಬ್ಬಂದಿ ಇರದಿರುವ ಮತಗಟ್ಟೆಯಲ್ಲಿ ಮೈಕ್ರೋ ವೀಕ್ಷಕರು ಇರಬೇಕು. ಇದಕ್ಕಾಗಿ ಅವಶ್ಯಕ ಕೇಂದ್ರ ಸರ್ಕಾರದ ಸಿಬ್ಬಂದಿಯನ್ನು ಅಗತ್ಯ ಬಿದ್ದಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲು ವೀಕ್ಷಕರು ತಿಳಿಸಿದರು. ಸಭೆಯಲ್ಲಿ ಸಾಮಾನ್ಯ ವೀಕ್ಷಕ ಡಾ. ದೇವೆಂದ್ರನಾಥ, ರಮಣಕುಮಾರ, ಕುಂವರ ಜಂಗ ಬಹದ್ದೂರ, ಡಾ. ರಾಜು ನಾರಾಯಣಸ್ವಾಮಿ, ವಿ.ಎನ್. ವಿಷ್ಣು, ಕೆ.ಜೆ.ಎಸ್. ಚವ್ಹಾಣ, ಜೆ.ಪಿ. ಲಾಕ್ರಾ, ವೆಚ್ಚ ವೀಕ್ಷಕ ಎಲ್.ಎಸ್. ಸಿಂಗ್, ಪ್ರಸಾದ ಆದೆಳ್ಳಿ, ಆರ್.ಆರ್. ಬಹ್ಲ, ಕುಮಾರ ಅಮರೇಂದ್ರ ನಾರಾಯಣ ಹಾಗೂ ಪೊಲೀಸ್ ವೀಕ್ಷಕ ವೈ.ಬಿ. ಖುರಾನಿಯಾ, ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪ್ಸಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement