ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಾಂಗ್ರೆಸ್ ಗೆದ್ದರೆ ಎಲ್ಲ ನೀರಾವರಿ ಯೋಜನೆ ಪೂರ್ಣ

Rashmi Kasaragodu
Updated On : 21 Apr 2013, 12:07 pm

ಕನ್ನಡಪ್ರಭ ವಾರ್ತೆ, ಗದಗ, ಏ. 20
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ. ರಾಜ್ಯದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ನಮ್ಮ ಪಕ್ಷ ಸಂಕಲ್ಪ ಮಾಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿಂದ ಹಣ ಲೂಟಿ ಮಾಡುವುದರಲ್ಲೇ ಕಾಲ ಕಳೆದಿದೆ. ವರ್ಗಾವಣೆಯಲ್ಲೂ ಹಣ ಮಾಡಿರುವ ಬಿಜೆಪಿಯವರ ನಿರ್ಧಾರಗಳಿಂದ ಅಧಿಕಾರಿಗಳು ಬೇಸತ್ತು ಹೋಗಿದ್ದು, ಅವರೆಲ್ಲ ನಿರ್ಲಕ್ಷ್ಯ ಭಾವನೆಯಿಂದ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಘ ಪರಿವಾರದವರು ಕಾನೂನು ಕೈಗೆ ತೆಗೆದುಕೊಂಡಿದ್ದು, ಹಿಂದುಳಿದ ವರ್ಗದವರಿಗೆ ಜೀವನ ನಡೆಸಲು ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರದ 20ಕ್ಕೂ ಹೆಚ್ಚಿನ ಸಚಿವರು, ಶಾಸಕರು ಜೈಲಿಗೆ ಹೋಗಿ ಬಂದಿದ್ದಾರೆ. ಇದೇ ಇವರ ದೊಡ್ಡ ಸಾಧನೆ. ಬಿಎಸ್‌ವೈ ಜೈಲಿಗೆ ಹೋಗುವ ಮೂಲಕ ರಾಜ್ಯದಲ್ಲಿ ಒಂದು ದೊಡ್ಡ ಇತಿಹಾಸವನ್ನೇ ನಿರ್ಮಿಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಗದಗ ಜಿಲ್ಲೆಯ ಮಹತ್ವದ ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವ ಜತೆಗೆ, ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ವಿಶೇಷ ಗಮನ ನೀಡಲಿದೆ ಎಂದರು.  ಗದಗ ಕ್ಷೇತ್ರದ ಅಭ್ಯರ್ಥಿ ಎಚ್.ಕೆ. ಪಾಟೀಲ, ಹಿಂದುಳಿದ ವರ್ಗದ ನಾಯಕ ಸತೀಶ ಜಾರಕಿಹೊಳಿ ಮಾತನಾಡಿದರು. ಬಿ.ಆರ್. ಯಾವಗಲ್, ಜಿ.ಎಸ್. ಪಾಟೀಲ, ಡಿ.ಆರ್. ಪಾಟೀಲ, ಪ್ರೊ೤ ಬಿ.ಎಫ್. ದಂಡೀನ, ಶಿವಕುಮಾರಗೌಡ ಪಾಟೀಲ, ಟಿ. ಈಶ್ವರ ಹಾಜರಿದ್ದರು.
ಬಡವರಿಗೆ 30 ಕೆಜಿ ಅಕ್ಕಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಎಲ್ಲ ಬಿಪಿಎಲ್ ಕಾರ್ಡ್‌ದಾರರಿಗೆ ಕೆಜಿಗೆ ರು. 2ರಂತ 30 ಕೆಜಿ ಅಕ್ಕಿಯನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಬಡವರ ಅನ್ನಕ್ಕೆ ಕುತ್ತು ತಂದಿದೆ. ಅದನ್ನೆಲ್ಲ ಹೋಗಲಾಡಿಸಲು ನೀವೆಲ್ಲ ಕಾಂಗ್ರೆಸ್ ಬೆಂಬಲಿಸಬೇಕು. ಅಭಿವೃದ್ಧಿ ವಿಷಯದಲ್ಲಿ ರಾಜ್ಯ 10 ವರ್ಷ ಹಿಂದೆ ಹೋಗಿದೆ ಎಂದರು.
3 ಗಂಟೆ ತಡವಾಗಿ ಸಭೆ: ಕಾರ್ಯಕರ್ತರ ಸಭೆ ಬೆಳಗ್ಗೆ 10 ಗಂಟೆಗೆ ಎಂದು ಸಂಘಟಕರು ತಿಳಿಸಿದ್ದು, ಗದಗ-ಬೆಟಗೇರಿ ಅವಳಿ ನಗರ ಹಾಗೂ ಗ್ರಾಮೀಣ ಭಾಗಗಳಿಂದ ಬಂದಿದ್ದ ಹಲವಾರು ಕಾರ್ಯಕರ್ತರು 3 ಗಂಟೆ ಕಾಯುವಂತಾಯಿತು. ಎಚ್.ಕೆ. ಪಾಟೀಲ ಅಭಿಮಾನಿಗಳು ಖಾಸಗಿ ವಾಹಿನಿಗಳಲ್ಲಿ ಎಚ್ಕೆ ನೀಡಿದ ಸಂದರ್ಶನಗಳ ತುಣುಕುಗಳನ್ನು ಟಿವಿ ಮೂಲಕ ಬಿತ್ತರಿಸಿ, ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದರು.


ಅಕ್ರಮ ಗಣಿಗಾರಿಕೆಯಿಂದ ರು. 20 ಸಾವಿರ ಕೋಟಿಗೂ ಅಧಿಕ ಮೌಲ್ಯದ ಸಂಪತ್ತು ಲೂಟಿಯಾಗಿದೆ. ಅದರ ಐದು ಪಟ್ಟು ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕೆಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ವರದಿ ನೀಡಿದ್ದರೂ ಬಿಜೆಪಿ ಸರ್ಕಾರ ಅದನ್ನು ಜಾರಿಗೊಳಿಸಿಲ್ಲ. ಅವರಿಗೆ ಅದರ ಬಗ್ಗೆ ಭಯವಿದೆ. ಅಕ್ರಮ ಸಂಪತ್ತು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ.
- ಸಿದ್ದರಾಮಯ್ಯ
ವಿಧಾನಸಭೆ ವಿಪಕ್ಷ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement