ಜನಾಭಿಮತ
ಆಡಳಿತ ಯಂತ್ರ ಕುಸಿದಿದೆ
ರಾಜ್ಯದಲ್ಲಿ ಕಳೆದ ಅರವತ್ತು ವರ್ಷದಲ್ಲಿ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಅಧಿಕಾರ ದಾಹದಲ್ಲಿಯೇ ರಾಜಕಾರಣಿಗಳು ಕಾಲಹರಣ ಮಾಡುತ್ತ ಬಂದಿದ್ದಾರೆ. ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿಲ್ಲ. ವಿವಿಧ ಇಲಾಖೆಗಳ ಅಧಿಕಾರಿಗಳು ಈಗ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನೋಡಿ ಮತದಾರರು ಮತ ನೀಡಬೇಕು. ಹಣ, ಹೆಂಡದಾಸೆಗೆ ತಮ್ಮ ಮತ ಮಾರಿಕೊಳ್ಳಬಾರದು. ಚುನಾವಣಾ ಆಯೋಗ ಎಷ್ಟೇ ಕಠಿಣ ಕ್ರಮ ತೆಗೆದುಕೊಂಡರೂ ರಾಜ್ಯಾದ್ಯಂತ ಹಣದ ಹೊಳೆಯೇ ಹರಿಯುತ್ತಿದೆ. ಕಳೆದ ಬಾರಿಯ ಚುನಾವಣೆಗಿಂತ ಈಗ ಅಕ್ರಮ ಹೆಚ್ಚಾಗಿದೆ.
- ಗವಿಸಿದ್ದಪ್ಪ ಕರ್ಕಿಹಳ್ಳಿ
ಯುವ ಮುಖಂಡ, ಕೊಪ್ಪಳ
ಮತದಾರ ಭ್ರಷ್ಟನಾಗಬಾರದು
ಮತದಾರ ಜಾಗೃತಿಯಿಂದ ನಿಷ್ಠಾವಂತ ವ್ಯಕ್ತಿಗೆ ಮತ ಚಲಾವಣೆ ಮಾಡಲಿ. ಅದನ್ನು ಬಿಟ್ಟು ಮತವನ್ನು ಪುಡಿಗಾಸಿಗೆ ಮಾರಿಕೊಳ್ಳಬೇಡ. ಪ್ರಸ್ತುತ ದಿನಗಳಲ್ಲಿ ಮತದಾರನೇ ಭ್ರಷ್ಟನಾಗುತ್ತಿದ್ದಾನೆ. ರಾಜಕಾರಣಿಗಳು ನೀಡುವ ಬಿಡಿಗಾಸಿಗೆ ಆಸೆಪಟ್ಟು ತನ್ನ ಹಕ್ಕನ್ನೆ ಕಳೆದುಕೊಳ್ಳುತ್ತಿದ್ದಾನೆ. ಮೊದಲು ಮತದಾರ ಭ್ರಷ್ಟನಾಗುವುದು ನಿಲ್ಲಲಿ. ಆಗ ರಾಜಕೀಯ ವ್ಯವಸ್ಥೆ ಸುಧಾರಿಸುತ್ತದೆ. ಎಲ್ಲಿಯವರೆಗೂ ಮತದಾರ ಹಣ ಪಡೆಯುವನೋ ಅಲ್ಲಿವರೆಗೂ ರಾಜಕಾರಣಿಗಳು ಹಣ ಕೊಡುತ್ತಲೇ ಇರುತ್ತಾರೆ. 60 ವರ್ಷದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಅಭಿವೃದ್ಧಿಯತ್ತ ಗಮನಹರಿಸದೆ, ಅಧಿಕಾರದತ್ತ ಗಮನ ನೀಡುತ್ತಿವೆ. ಆದರೆ, ರಾಜ್ಯದಲ್ಲಿನ ಯುವಕರಿಗೆ ಉದ್ಯೋಗ ನೀಡಲು ಹಿಂಜರಿಯುತ್ತಿವೆ.
- ಮಹೇಶ ಬೆಳವಣಿಕಿ
ಬಟ್ಟೆ ಅಂಗಡಿ ಮಾಲೀಕ, ಕೊಪ್ಪಳ
ಹಣ, ಹೆಂಡಕ್ಕೆ ಮರುಳಾಗಬೇಡಿ
ಮತ ಎನ್ನುವುದು ಬಹಳ ಮಹತ್ವ ಪಡೆದಿದೆ. ನಗರ ಇರಲಿ, ಗ್ರಾಮೀಣ ಪ್ರದೇಶವೇ ಇರಲಿ ಅಭಿವೃದ್ಧಿಯಾಗಬೇಕಾದರೆ, ನಾವು ಒಳ್ಳೆಯ ವ್ಯಕ್ತಿಯನ್ನು ನೋಡಿ ಮತ ಹಾಕಿ ಆಯ್ಕೆ ಮಾಡಬೇಕು. ಹಣ ಹೆಂಡಕ್ಕೋಸ್ಕರ ಯಾವುದೋ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಆತ ಅಭಿವೃದ್ಧಿ ಪರ ಚಿಂತನೆ ಮಾಡಲಾರ. ಹಣ ಗಳಿಕೆ ಬಗ್ಗೆ ಚಿಂತನೆ ಮಾಡುತ್ತಾನೆ. ಕೇವಲ ಅಧಿಕಾರದ ಪರ ಚಿಂತನೆ ಶುರುವಾಗುತ್ತದೆ. ಆಗ ನಾವೇ ಐದು ವರ್ಷಗಳ ಕಾಲ ಕಹಿ ಅನುಭವಿಸಬೇಕಾಗುತ್ತದೆ. ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ನಮ್ಮ ಅಮೂಲ್ಯ ಮತವನ್ನು ಸರಿಯಾದ ವ್ಯಕ್ತಿ ಮತ್ತು ಪಕ್ಷಕ್ಕೆ ನೀಡಬೇಕು. ಆ ಮೂಲಕ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕಾರಣವಾಗಬೇಕು.
- ನಿಂಗಪ್ಪ ವಿ. ಜಿಗೇರಿ.
ಯುವಕ, ಕುಷ್ಟಗಿ
ಯುವಕರು ರಾಜಕೀಯಕ್ಕೆ ಬರಲಿ
ರಾಜ್ಯದಲ್ಲಿ ಹಳೆಯ ರಾಜಕಾರಣಿಗಳೆಲ್ಲರೂ ತೊಲಗಲಿ. ಪ್ರಸ್ತುತ ದಿನಗಳಲ್ಲಿ ಯುವ ಮುಖಂಡರು ರಾಜಕೀಯಕ್ಕೆ ಬರಲಿ. ಅವರಿಗೆ ಪ್ರಸ್ತುತ ದಿನದ ಆಗು ಹೋಗುಗಳ ಅರಿವಿರುತ್ತದೆ. ಅಭಿವೃದ್ದಿಯತ್ತ ಚಿಂತನೆ ಮಾಡಲು ಅವಕಾಶ ದೊರೆಯುತ್ತದೆ. ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರ ಸುಧಾರಿಸಲು ಸಹಕಾರಿಯಾಗುತ್ತದೆ. ರಾಜ್ಯದಲ್ಲಿ ಹೊಸ ಯೋಜನೆಗಳ ಮಹಾಪೂರವೇ ಹರಿಯುತ್ತದೆ. ಹಳೆಯ ರಾಜಕಾರಣಿಗಳಿದ್ದರೆ, ರಾಜಕೀಯ ಕುತಂತ್ರವೇ ಹೆಚ್ಚಾಗುತ್ತದೆ. 60 ವರ್ಷದಲ್ಲಿ ಹಳೆಯ ರಾಜಕಾರಣಿಗಳು ರಾಜ್ಯವನ್ನು ಎಷ್ಟರ ಮಟ್ಟಿಗೆ ಅಭಿವೃದ್ಧಿ ಪಡಿಸಿದ್ದಾರೆ ಎನ್ನುವುದನ್ನು ಜನತೆ ಅರಿತುಕೊಳ್ಳಬೇಕಿದೆ. ರಾಜ್ಯದ ಸ್ಥಿತಿಗತಿಯ ಬಗ್ಗೆ ಪ್ರತಿಯೊಬ್ಬ ಮತದಾರನು ಚಿಂತನೆ ಮಾಡಬೇಕಿದೆ.
- ರವಿಕುಮಾರ ಹುರಿಗೆಜ್ಜಿ
ಸ್ನಾತಕೋತ್ತರ ಪದವೀಧರ, ಕೊಪ್ಪಳ
ಹೆಗಡೆ ಅವರಂಥ ಆಡಳಿತ ಬೇಕು
ರಾಜ್ಯಕ್ಕೆ ರಾಮಕೃಷ್ಣ ಹೆಗಡೆ ಅವರಂಥ ಆಡಳಿತ ಪ್ರಮುಖವಾಗಿ ಬೇಕಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಅವರು ತಮ್ಮ ಸರ್ಕಾರವನ್ನೇ ವಿಸರ್ಜಿಸಿದ್ದರು. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಪ್ರಾಮಾಣಿಕ ರಾಜಕಾರಣಿಗಳ ಕೊರತೆ ಕಾಡುತ್ತಿದೆ. ಪರ್ಸೆಂಟೆಜ್ ರಾಜಕಾರಣಿಗಳೇ ಈಗ ಹೆಚ್ಚಾಗಿದ್ದಾರೆ. ಭ್ರಷ್ಟ ರಾಜಕಾರಣಿಗಳ ಆಯ್ಕೆಯಿಂದ ಅಧಿಕಾರಿಗಳು ಗುಲಾಮರಂತೆ ವರ್ತಿಸುವಂಥ ಕಾಲ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯಕ್ಕೆ ಅಭಿವೃದ್ಧಿ ಪರ ಮತ್ತು ದೂರದೃಷ್ಟಿ ಇರುವ ಮುತ್ಸದ್ದಿ ರಾಜಕಾರಣಿಗಳ ಆವಶ್ಯಕತೆ ಇದೆ. ಶೈಕ್ಷಣಿಕ ಮತ್ತು ಆರ್ಥಿಕತೆ ಕುರಿತು ಚಿಂತನೆ ನಡೆಸಿ, ಪ್ರಬುದ್ಧರನ್ನು ಆಯ್ಕೆ ಮಾಡುವ ಹೊಣೆ ಮತದಾರನ ಮೇಲಿದೆ.
- ಜಗದೀಶ ಚಟ್ಟಿ
ಸಾರ್ವಜನಿಕ, ಕೊಪ್ಪಳ
ಯಾವ ಪಕ್ಷದ ಮೇಲೂ ನಂಬಿಕೆ ಇಲ್ಲ
ರಾಜ್ಯದಲ್ಲಿ ಆಳಿದ ಪಕ್ಷಗಳಲ್ಲಿ ಎಲ್ಲ ಪಕ್ಷಗಳ ಮೇಲೂ ಜನತೆ ನಂಬಿಕೆ ಕಳೆದುಕೊಂಡಿದ್ದಾರೆ. ಯಾವ ಪಕ್ಷಕ್ಕೆ ಮತ ನೀಡಬೇಕು ಎಂದು ಗೊಂದಲ ಮೂಡುವಂತಾಗಿದೆ. ಯಾವ ಪಕ್ಷಗಳು ಅಭಿವೃದ್ಧಿ ಮಾಡಿವೆ ಎನ್ನುವುದನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕಾರಣಿಗಳು ಭರವಸೆಯ ಮಹಾಪೂರವನ್ನೆ ಹರಿಸುತ್ತಾರೆ. ಆದರೆ, ಅಭಿವೃದ್ಧಿ ಮಾತ್ರ ಶೂನ್ಯ. ಪುಸ್ತಕದಲ್ಲಿ ಮಾತ್ರ ಅಭಿವೃದ್ಧಿ ದಾಖಲೆ ಮಾಡಲಾಗಿದೆ. ಅಧಿಕಾರಕ್ಕೆ ಬರುವ ಸರ್ಕಾರಗಳು ಬಡವರ ಬೇಡಿಕೆ ಈಡೇರಿಸಲು ಮುಂದಾಗಲಿ. ಮತದಾರ ಒಳ್ಳೆಯ ವ್ಯಕ್ತಿಗೆ ಮತ ನೀಡುವ ಮೂಲಕ ರಾಜ್ಯವನ್ನು ಅಭಿವೃದ್ಧಿಯ ಕಡೆ ಕೊಂಡೊಯ್ಯಬೇಕಿದೆ.
- ರಾಘು ಮಡಿವಾಳರ
ಲಾಂಡ್ರಿ ಶಾಪ್ ಮಾಲೀಕ, ಕೊಪ್ಪಳ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.