ಕೆಜೆಪಿಗೆ ಬಿಎಸ್ಸಾರ್ ಅಭ್ಯರ್ಥಿ ಬೆಂಬಲ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 22
ಧಾರವಾಡ ವಿಧಾನಸಭಾ ಕ್ಷೇತ್ರದ ಬಿಎಸ್ಸಾರ್ ಅಭ್ಯರ್ಥಿ ಯೋಗೀಶಗೌಡ ಗೌಡರ ಕೆಜೆಪಿ ಪಾಲಾಗಿದ್ದು, ಚುನಾವಣೆಯಲ್ಲಿ ಕೆಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಯಕ್ತಿಕ ಹಾಗೂ ಕ್ಷೇತ್ರದ ಜನತೆ ಹಿತದೃಷ್ಟಿಯಿಂದ ಕೆಜೆಪಿ ಅಭ್ಯರ್ಥಿ ತವನಪ್ಪ ಅಷ್ಟಗಿ ಅವರನ್ನು ಬೆಂಬಲಿಸುತ್ತಿದ್ದೇನೆ. ಏ. 20ರಂದು ನಾಮಪತ್ರ ವಾಪಸ್ ಪಡೆಯಲು ಆಗಮಿಸಿದ್ದೆ. ಆದರೆ, ಸಮಯ ಮೀರಿದ್ದರಿಂದ ವಾಪಸ್ ಪಡೆಯಲಾಗಲಿಲ್ಲ ಎಂದು ಹೇಳಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸ್ವ-ಹಿತಾಸಕ್ತಿಯಿಂದಾಗಿ ಜನತೆ ಮೇಲೆ ದಬ್ಬಾಳಿಕೆಯ ರಾಜಕೀಯ ನಡೆಸುತ್ತಿವೆ. ಅವುಗಳ ಶಕ್ತಿ ತಗ್ಗಿಸಲು ಕೆಜೆಪಿ ಬೆಂಬಲಿಸುತ್ತಿರುವುದಾಗಿ ಹೇಳಿದ ಯೋಗೀಶಗೌಡರು, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಕೆಜೆಪಿ ಜನಪರ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸದಡಿ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೂ ಕೆಜೆಪಿಯನ್ನು ಬೆಂಬಲಿಸುತ್ತಿದ್ದೇನೆ ಎಂದರು. ಈ ಕುರಿತಾಗಿ ಪಕ್ಷದ ರಾಜ್ಯಾಧ್ಯಕ್ಷ ಶ್ರೀರಾಮುಲು ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಅವರು, ತಮಗೆ ಸರಿ ಎನ್ನಿಸಿದ ನಿರ್ಧಾರ ಕೈಗೊಳ್ಳಿ ಎಂದಿದ್ದಾರೆ. ಬಿಎಸ್ಸಾರ್ ಕಾಂಗ್ರೆಸ್‌ನಲ್ಲಿಯೇ ಮುಂದುವರಿಯುತ್ತಿದ್ದು, ಈ ಚುನಾವಣೆಯಲ್ಲಿ ಮಾತ್ರ ಕೆಜೆಪಿ ಬೆಂಬಲಿಸುತ್ತೇನೆ ಎಂದರು. ಕ್ಷೇತ್ರದ ಅಭ್ಯರ್ಥಿ ತವನಪ್ಪ ಅಷ್ಟಗಿ ಮಾತನಾಡಿ, ಪಕ್ಷೇತರ ಅಭ್ಯರ್ಥಿಗಳಾಗಿದ್ದ ನಿಜನಗೌಡ ಪಾಟೀಲ, ವೀರೇಶ ಚಿಕ್ಕಮಠ ಹಾಗೂ ಯೋಗೀಶಗೌಡರು ಬೆಂಬಲಿಸಿದ್ದು ತಮಗೆ ಆನೆಬಲ ಬಂದಂತಾಗಿದೆ. ಕ್ಷೇತ್ರದ ಜನತೆ ಸಂಪೂರ್ಣ ಬೆಂಬಲ ನೀಡುತ್ತಿದ್ದು, ಈ ಚುನಾವಣೆಯಲ್ಲಿ ತಮ್ಮ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಜನಗೌಡ ಪಾಟೀಲ, ವೀರೇಶ ಚಿಕ್ಕಮಠ ಸುದ್ದಿಗೋಷ್ಠಿಯಲ್ಲಿದ್ದರು.