ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರಂಗೇರುತ್ತಿದೆ ಚುನಾವಣಾ ಪ್ರಚಾರ

Rashmi Kasaragodu
Updated On : 23 Apr 2013, 10:29 am

ರಾಜ್ಯ ವಿಧಾನಸಭೆ ಚುನಾವಣೆ ದಿನ ಸಮೀಪಿಸುತ್ತಿದ್ದಂತೆಯೇ ಎಲ್ಲೆಡೆ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ನಡೆಯುತ್ತಿರುವ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ವಿವಿಧ ಪಕ್ಷಗಳ ರಾಷ್ಟ್ರ ಮತ್ತು ರಾಜ್ಯಮಟ್ಟದ ಮುಖಂಡರು ಜಿಲ್ಲೆಗಾಗಮಿಸಿ, ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೆಲ ಪಕ್ಷಗಳು ಮತದಾರರ ಆಕರ್ಷಣೆಗಾಗಿ ಚಲನಚಿತ್ರ ತಾರೆಯರನ್ನು ಕರೆತಂದು ಪ್ರಚಾರದಲ್ಲಿ ತೊಡಗಿಸಿದ್ದಾರೆ. ಕಾರ್ಯಕರ್ತರು ಹಲವಾರು ತಂಡಗಳನ್ನು ರಚಿಸಿಕೊಂಡು ಕ್ಷೇತ್ರದ ಬೇರೆ ಬೇರೆ ಪ್ರದೇಶಗಳಿಗೆ ತೆರಳಿ, ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಆಟೋಗಳಲ್ಲಿ ಲೌಡ್ ಸ್ಪೀಕರ್ ಮೂಲಕ ಕ್ಷೇತ್ರದಾದ್ಯಂತ ತಿರುಗಾಡಿ ಮತ ಯಾಚಿಸುವ ಕಾರ್ಯವೂ ಭರದಿಂದ ಸಾಗಿದೆ.
ಈ ಮಧ್ಯೆ ಚುನಾವಣಾ ಆಯೋಗದ ಕಣ್ಣು ತಪ್ಪಿಸಿ, ಹಣ-ಹೆಂಡ ಹಾಗೂ ಬಟ್ಟೆ ಹಂಚುವ ಕಾರ್ಯ ಕೆಲವೆಡೆ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ. ಬೆಳಗಾಯಿತೆಂದರೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸುವ ಕರಪತ್ರ ಹಂಚುವ ಕಾರ್ಯಕರ್ತರ ದಂಡು ಮನೆ ಮನೆಗೆ ಭೇಟಿ ನೀಡುವುದು ಮಾಮೂಲಾಗಿದೆ. ಸುಡು ಬಿಸಿಲನ್ನೂ ಲೆಕ್ಕಿಸದೇ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ, ಮತ ಯಾಚಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಭ್ಯರ್ಥಿಗಳು ಸಾರ್ವಜನಿಕರ ಮನೆಗಳ ಕಟ್ಟೆ ಮೇಲೆ ಕುಳಿತು, ಜನರಿಂದ ಎಲೆ ಅಡಿಕೆ ಪಡೆದು ಕೆಲ ಸಮಯ ಹರಟೆ ಹೊಡೆಯುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮದಲ್ಲಿರುವ ಸಮಸ್ಯೆ ಹಾಗೂ ಅವುಗಳ ನಿವಾರಣೆಗೆ ಕೈಗೊಳ್ಳಬಹುದಾದ ಯೋಜನೆಗಳನ್ನು ಅಭ್ಯರ್ಥಿಗಳು ಮತದಾರರೊಂದಿಗೆ ಚರ್ಚಿಸುವ ಮೂಲಕ ತಮಗಿರುವ ಕಳಕಳಿಯನ್ನು ತೋರಿಸಿಕೊಳ್ಳುವ ಪ್ರಯತ್ನದಲ್ಲಿ ಅಭ್ಯರ್ಥಿಗಳು ನಿರತರಾಗಿದ್ದಾರೆ.
ಅಭ್ಯರ್ಥಿಗಳ ಪ್ರಹಸನ: ಚುನಾವಣೆ ನಂತರ ಗ್ರಾಮದಲ್ಲಿ ಒಮ್ಮೆಯೂ ಕಾಣದ ಕೆಲ ಅಭ್ಯರ್ಥಿಗಳು, ಏಕಾಏಕಿ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತದಾರರನ್ನು ತಮ್ಮ ಸಂಬಂಧಿಕರೇನೋ ಎಂಬ ಭಾವನೆಯಿಂದ ಮಾತನಾಡಿಸುವ ಪ್ರಹಸನದಲ್ಲಿ ತೊಡಗಿದ್ದಾರೆ.  ಕೆಲವೆಡೆ ಅಭ್ಯರ್ಥಿಗಳ ಎದುರು ತಮ್ಮ ಕಷ್ಟಗಳನ್ನು ಮತದಾರರು ಹೇಳಿಕೊಳ್ಳುತ್ತಿದ್ದು, ತಾವು ಚುನಾಯಿತರಾದಲ್ಲಿ ಕಷ್ಟಗಳ ನಿವಾರಣೆಗೆ ಪ್ರಯತ್ನಿಸುವ ಭರವಸೆಯನ್ನು ಅಭ್ಯರ್ಥಿಗಳು ನೀಡುತ್ತಿದ್ದಾರೆ.
ಕುಡಿಯುವ ನೀರಿಗಾಗಿ ಪರದಾಟ, ಸಮರ್ಪಕ ವಿದ್ಯುತ್ ಕೊರತೆ, ತ್ರಿ ಫೇಸ್ ವಿದ್ಯುತ್ ಇಲ್ಲದೇ ನೀರಾವರಿ ಸೌಲಭ್ಯವಿರುವ ಹೊಲಗಳಲ್ಲಿನ ಬೆಳೆ ಬಾಡುತ್ತಿರುವುದು, ಕಾಣದ ಗುಣಮಟ್ಟದ ರಸ್ತೆಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಹಲವಾರು ಸಮಸ್ಯೆಗಳು ಅಭ್ಯರ್ಥಿಗಳಿಗೆ ಮತ ಯಾಚನೆ ಸಂದರ್ಭದಲ್ಲಿ ಎದುರಾಗುತ್ತಿವೆ. ಚುನಾವಣೆ ಪೂರ್ವದಲ್ಲಿ ಈ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಬಹುತೇಕ ಅಭ್ಯರ್ಥಿಗಳು ಇದೀಗ ಮತಯಾಚನೆ ಸಂದರ್ಭದಲ್ಲಿ ಈ ಎಲ್ಲ ಸಮಸ್ಯೆಗಳ ನಿವಾರಣೆಗೆ ಶ್ರಮಿಸುವ ಭರವಸೆ ನೀಡುತ್ತಿದ್ದಾರೆ. ಈ ಸಮಸ್ಯೆಗಳ ನಿವಾರಣೆಗೆ ತನ್ನನ್ನು ಆಯ್ಕೆ ಮಾಡುವಂತೆ ಮತದಾರರ ಮನವೊಲಿಸುವ ಪ್ರಯತ್ನದಲ್ಲಿ ಅಭ್ಯರ್ಥಿಗಳು ನಿರತರಾಗಿದ್ದಾರೆ.
ಹಾಲಿ ಶಾಸಕರು ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪುಸ್ತಕ ತಯಾರಿಸಿ ಮತದಾರರಿಗೆ ಹಂಚುತ್ತಿದ್ದಾರೆ. ಕಳೆದ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲವೆಂಬ ಮಾತುಗಳು ಬೇರೆ ಪಕ್ಷಗಳ ಅಭ್ಯರ್ಥಿಗಳಿಂದ ಕೇಳಿಬರುತ್ತಿವೆ. ಈ ಮಧ್ಯೆ ನಿತ್ಯ ಬೆಳಗ್ಗೆ ಮನೆ ಮನೆಗೆ ಹಂಚಿಕೆಯಾಗುವ ಪತ್ರಿಕೆಗಳಲ್ಲಿಯೂ ಅಭ್ಯರ್ಥಿಗಳು ಕರಪತ್ರಗಳನ್ನು ಇಡುವ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಮನೆಗಳನ್ನು ತಲುಪುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ರಾತ್ರಿ ಹೊತ್ತಲ್ಲಿ ಹೆಂಡ ಹಂಚುವ ವ್ಯವಸ್ಥಿತ ಜಾಲವೊಂದು ಹುಟ್ಟಿಕೊಂಡಿದ್ದು, ತಮ್ಮ ಪಕ್ಷದ ಅಭ್ಯರ್ಥಿಗೆ ಕುಟುಂಬದವರೆಲ್ಲ ಮತ ಹಾಕಿದರೆ ಚುನಾವಣೆ ಮುಗಿಯುವವರೆಗೂ ಮದ್ಯದ ಬಾಟಲಿ ನೀಡುವ ಆಮೀಷ ವೊಡ್ಡಲಾಗುತ್ತಿದೆ. ಇನ್ನೂ ಕೆಲವೆಡೆ ಮತದಾರರೇ ಅಭ್ಯರ್ಥಿ ಅಥವಾ ಅವರ ನಿಕಟವರ್ತಿಗಳನ್ನು ಭೇಟಿ ಮಾಡಿ, ತಮ್ಮ ಮನೆ ಹಾಗೂ ಸಂಬಂಧಿಕರ ನೂರಾರು ಮತಗಳನ್ನು ಹಾಕಲು ನಿಗದಿತ ಹಣ ನೀಡುವಂತೆ ಒತ್ತಾಯವನ್ನೂ ಮಾಡುತ್ತಿದ್ದಾರೆ. ಕಂಡವರ ಮದುವೇಲಿ ಉಂಡವನೇ ಜಾಣ ಎನ್ನುವಂತೆ ಕೆಲವೇ ದಿನ ಬಾಕಿ ಉಳಿದಿರುವ ಚುನಾವಣೆಯಲ್ಲಿ ಅಭ್ಯರ್ಥಿಗಳಿಂದ ಹಣ ಸುಲಿಯುವ ಯೋಜನೆಯಲ್ಲಿ ಕೆಲ ಮತದಾರರು ತೊಡಗಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement