ಜಗಳ ಮಾಡೋರು ಹೋಗ್ಯಾರ: ಜೋಶಿ
ಹುಬ್ಬಳ್ಳಿ: ಜಗಳ ಮಾಡೋ ಮಂದಿ ಪಕ್ಷ ಬಿಟ್ಟು ಹೋಗ್ಯಾರ, ಈಗ ಬಿಜೆಪಿ ಪೂರ್ಣ ಶುದ್ಧ ಪಕ್ಷ... ಹೀಗೆಂದು ಹೇಳಿದ್ದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ.
ಮಂಗಳವಾರ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಭದ್ರಪ್ಪ ಹಾಲಹರವಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಆರಂಭದಲ್ಲಿ ಗೊಂದಲಗಳಲ್ಲಿ ಪಕ್ಷ ಕಾಲಹರಣ ಮಾಡಿದೆ. ರಾಜ್ಯದ ಅಭಿವೃದ್ಧಿಯೂ ಆಗಿದೆ. 50ಕ್ಕೂ ಹೆಚ್ಚು ವರ್ಷ ಮಹಾನಗರ ಪಾಲಿಕೆ, ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸಾಧನೆ, ಬಿಜೆಪಿ ಆಡಳಿತಾವಧಿಯಲ್ಲಿ ಆದ ಅಭಿವೃದ್ಧಿ ಕಾಮಗಾರಿಗೆ ಹೋಲಿಸಿದರೆ ಶೂನ್ಯ ಎಂದರು.
ಬಿಜೆಪಿ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ಕೇಂದ್ರದ ಯುಪಿಎ ಸರ್ಕಾರದ ಹಗರಣಗಳ ಬಗ್ಗೆ ಕ್ರಮ ಕೈಗೊಳ್ಳಲಿ. 2ಜಿ ಹಗರಣದಲ್ಲಿ ಎ. ರಾಜಾ, ಕನಿಮೋಳಿ, ಕಾಮನ್ವೆಲ್ತ್ ಹಗರಣದಲ್ಲಿ ಸುರೇಶ ಕಲ್ಮಾಡಿ ಬಿಟ್ಟರೆ ಬೇರೆಯವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಅಕ್ರಮ ಗಣಿಗಾರಿಕೆ ಸಂಬಂಧ ಆರೋಪ ಪಟ್ಟಿ ಸಲ್ಲಿಸಿದ ಕಾರಣಕ್ಕೆ ಪಕ್ಷದ ಹಿರಿಯ ನಾಯಕರೊಬ್ಬರನ್ನು ಕೆಳಗಿಳಿಸಲು ಬಿಜೆಪಿ ಕ್ರಮ ಕೈಗೊಂಡಿದೆ. ಬಿಜೆಪಿ ಹಗರಣದಲ್ಲಿ ಸಿಲುಕಿಲ್ಲ. ಪಕ್ಷದ ಕೆಲವು ವ್ಯಕ್ತಿಗಳು ಹಗರಣದಲ್ಲಿ ಸಿಲುಕಿದ್ದಾರೆಂದರು.
ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಭದ್ರಪ್ಪ ಹಾಲಹರವಿ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಬಡವರಿದ್ದಾರೆ. ಇಲ್ಲಿನ ಮಹಿಳೆಯರಿಗೆ ಗುಡಿ ಕೈಗಾರಿಕೆ, ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆ ರೂಪಿಸಲಾಗುವುದು. ಕ್ಷೇತ್ರದ 20 ವಾರ್ಡ್ಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೊಳಿಸುತ್ತೇವೆ. 5 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮುಗಿಸಿದ್ದು, ಇನ್ನಷ್ಟು ಕೆಲಸ ಕೈಗೆತ್ತಿಕೊಳ್ಳಬೇಕಿದೆ. ಬಿಜೆಪಿಗೆ ಮತ ನೀಡಿ ಎಂದರು.
ರಂಗಾಬದ್ದಿ, ಮಹೇಶ ಟೆಂಗಿನಕಾಯಿ, ಶಂಕರಪ್ಪ ಛಬ್ಬಿ, ಯಮನೂರ ಜಾಧವ, ಡಿ.ಕೆ. ಚವ್ಹಾಣ, ಶಿವಾನಂದ ಮುತ್ತಣ್ಣವರ, ಕಮಲಾಕ್ಷಿ ಸಜ್ಜನ, ಬಾಳು ಮಗಜಿಕೊಂಡಿ ಮುಂತಾದವರು ಉಪಸ್ಥಿತರಿಇದ್ದರು.