ಬಿಜೆಪಿ ಕಥೆ ಇಲ್ಲಿಗೇ ಮುಗಿಯಿತು
ಧಾರವಾಡ: ಬಿಜೆಪಿಗೆ ಅಧಿಕಾರ ನೀಡಿದ್ದಕ್ಕಾಗಿ ಜನ ಪಶ್ಚಾತ್ತಾಪ ಪಡುತ್ತಿದ್ದಾರೆ. ಸ್ವಚ್ಛ ಆಡಳಿತ ನೀಡಬಹುದೆಂದು ಬಿಜೆಪಿಯನ್ನು ಅಧಿಕಾರಕ್ಕೆ ತಂದ ಜನರ ನಿರೀಕ್ಷೆ ಹುಸಿಯಾಗಿದೆ. ಭ್ರಷ್ಟಾಚಾರವೆಸಗಿದ, ದುರಾಡಳಿತ ನಡೆಸಿದ, ವಿಶ್ವಾಸ ದ್ರೋಹಿಯಾಗಿ ನಡೆದುಕೊಂಡ ಬಿಜೆಪಿಯನ್ನು ಜನ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಬಿಜೆಪಿಯ ಕಥೆ ಇಲ್ಲಿಗೇ ಮುಗಿಯಿತು.
- ಹೀಗೆಂದವರು ಮಾಜಿ ಸಚಿವ, ಹು-ಧಾ ಪಶ್ಚಿಮ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್. ಮೋರೆ. 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ಅನುಕಂಪದ ಅಲೆಯಲ್ಲಿ ಬಿಜೆಪಿ ಅಧಿಕಾರಕ್ಕೇನೋ ಬಂತು. ಉತ್ತಮ ಆಡಳಿತ ನೀಡುವುದನ್ನು ಬಿಟ್ಟು ಸರ್ಕಾರದ ಹಣ ಲೂಟಿ ಹೊಡೆಯಿತು. ಸಂಘ, ತತ್ವ, ನಿಷ್ಠೆ, ಸಿದ್ಧಾಂತ ಹೇಳುವ ಬಿಜೆಪಿಗರು ಇಂದು ಕೋಟಿ ಕೋಟಿ ತೂಗುತ್ತಿದ್ದಾರೆ. ಜನ ನೀಡಿದ ಅತ್ಯಮೂಲ್ಯ ಮತ ಪಡೆದು ಅಧಿಕಾರಕ್ಕೆ ಬಂದು ಭ್ರಷ್ಟಾಚಾರವೆಸಗಿ ಆ ಮತಕ್ಕೆ ಅಪಮಾನವೆಸಗಿದರೆಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಬಿಜೆಪಿ ವಿರುದ್ಧ ಹರಿಹಾಯ್ದ ಮೋರೆ ಜನ ಬದಲಾವಣೆ ಬಯಸಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದರು. ತಾವು ಸಚಿವರಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ತಮ್ಮ ಗೆಲುವಿಗೆ ಕಾರಣವಾಗಲಿದೆ ಎಂದರು.
ಮಾನ ಹರಾಜು: ಸಂದರ್ಶನದ ಪೂರ್ಣ ಪಾಠ ಇಂತಿದೆ. ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕದ ಮಾನ ಬಿಜೆಪಿಗರು ಹರಾಜು ಹಾಕಿದರು. ರಾಜ್ಯದ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋಗುವ ಮೂಲಕ ಕರಾಳ ಇತಿಹಾಸ ಸೃಷ್ಟಿ ಮಾಡಿದರು. ಇವರೊಂದಿಗೆ ಮತ್ತೊಂದಿಷ್ಟು ಸಚಿವರು ಜೈಲು ಪಾಲಾದರು. ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವ ಮೂಲಕ ಕರ್ನಾಟಕದ ತಲೆ ಕೆಳಗಾಗಿಸಿದರು. ಇಂತಹ ಲಜ್ಜೆಗೆಟ್ಟ ಬಿಜೆಪಿಯಿಂದ ಜನ ಬೇಸತ್ತಿದ್ದಾರೆ, ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಅಭಿವೃದ್ಧಿ ಕಾರ್ಯವೇ ಶ್ರೀರಕ್ಷೆ: ತಾವು ಸಚಿವರಾಗಿದ್ದಾಗ 9,500 ನಿವೇಶನಗಳನ್ನು ಹಂಚಿಕೆ ಮಾಡಲಾಯಿತು. ಮೊಟ್ಟಮೊದಲ ಬಾರಿಗೆ ಅಲೆಮಾರಿಗಳಿಗೆ, ಸುಡಗಾಡು ಸಿದ್ಧರು ಸೇರಿದಂತೆ ಹಿಂದುಳಿದವರಿಗೆ ಮನೆ ನೀಡಲಾಯಿತು. ಧಾರವಾಡದ ಜನ್ನತ ನಗರ, ರಾಜೀವಗಾಂಧಿ ನಗರ ಸೇರಿದಂತೆ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆ ಹಂಚಲಾಯಿತು. ಶಿಕ್ಷಣಕ್ಕೆ ಆದ್ಯತೆ ನೀಡುವುದರೊಂದಿಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಯಿತು. 2004ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮೊದಲ ಕ್ಯಾಬಿನೆಟ್ನಲ್ಲೇ ಬಡವರಿಗೆ ಹಸಿರು ಪಡಿತರ ಚೀಟಿ ವಿತರಿಸಿ 3 ರಂತೆ 30 ಕೆಜಿ ಅಕ್ಕಿ, ಗೋಧಿ, ಸಕ್ಕರೆ, ಸೀಮೆಎಣ್ಣೆ ವಿತರಿಸಲಾಯಿತು. ಆದರೆ, ಕಾಂಗ್ರೆಸ್ ಸರ್ಕಾರ ಕೆಳಗಿಳಿದ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಹಾಗೂ ಜೆಡಿಎಸ್ ಈ ಕಾರ್ಡ್ಗಳನ್ನು ರದ್ದುಪಡಿಸಿ ಹೊಸ ಕಾರ್ಡ್ ನೀಡುವುದಾಗಿ ಹೇಳಿ ಬಡವರನ್ನು ಗೋಳು ಹೊಯ್ದುಕೊಂಡಿತು. ಬಿಪಿಎಲ್ ಕಾರ್ಡ್ ಶ್ರೀಮಂತರು, ತಮ್ಮ ಕಾರ್ಯಕರ್ತರಿಗೆ ಕೊಟ್ಟು ಎಪಿಎಲ್ ಕಾರ್ಡ್ಗಳನ್ನು ಬಡವರಿಗೆ ಹಂಚಿ ಅನ್ಯಾಯವೆಸಗಿತು. ಇದರಿಂದ ಬಡ ಜನರು ತತ್ತರಿಸಿ ಹೋದರು. ತಾವು ಪ್ರಮುಖವಾಗಿ ಕೈಗೊಂಡ ಅಭಿವೃದ್ಧಿ ಕಾರ್ಯದಲ್ಲಿ ಮಲಪ್ರಭಾ ಮೂರನೇ ಹಂತದ ಕುಡಿಯುವ ನೀರಿನ ಯೋಜನೆ ಸಾಕಾರಗೊಳಿಸಿದ್ದು, ಸವದತ್ತಿಯ ನವಿಲುತೀರ್ಥ ಹಾಗೂ ಅಮ್ಮಿನಬಾವಿಯಿಂದ ಹು-ಧಾಕ್ಕೆ ಕುಡಿಯುವ ನೀರು ಪೂರೈಸಲಾಯಿತು. ಈ ಯೋಜನೆಗೆ ಪ್ರಮುಖವಾಗಿ ವಿದ್ಯುತ್ ಸಮಸ್ಯೆ ಕಾಡುತ್ತಿತ್ತು. ಫೀಡರ್ ಲೈನ್ ಹಾಕುವ ಮೂಲಕ ವಿದ್ಯುತ್ ಸಮಸ್ಯೆ ಪರಿಹಾರವಾಗಿ ಸಾಕಷ್ಟು ನೀರು ಹರಿಯುವಂತಾಯಿತು. ಪರಿಣಾಮ ಅವಳಿನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಯಿತು. ತಾವು ಮಾಡಿದ್ದು ಎಂದು ಹೇಳಿಕೊಂಡು ಓಡಾಡುತ್ತಿರುವ ನಿರಂತರ ಕುಡಿಯುವ ನೀರು ಯೋಜನೆ ಸಾಕಾರಗೊಂಡಿದ್ದು ನಾನು ಸಚಿವನಾಗಿದ್ದಾಗ. ವರ್ಲ್ಡ್ ಬ್ಯಾಂಕ್ ಸಹಾಯದಿಂದ ಹು-ಧಾ ಕೆಲ ವಾರ್ಡ್ಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಕೈಗೆತ್ತಿಕೊಂಡು ಸಾಕಾರಗೊಳಿಸಿದೆವು. ಈ ಯೋಜನೆ ಜಾರಿಗೆ ತರಲು ಬಿಜೆಪಿಗರು ಅಡ್ಡಗಾಲು ಹಾಕಿದ್ದರು. ಆದರೆ ತದನಂತರ ಅಧಿಕಾರಕ್ಕೆ ಬಂದ ಬಿಜೆಪಿ ಅವಳಿನಗರದ ಎಲ್ಲ ವಾರ್ಡ್ಗಳಿಗೆ ಯೋಜನೆ ವಿಸ್ತರಿಸುವುದಾಗಿ ಹೇಳಿಕೊಂಡಿದ್ದರೂ ಅದು ಸಾಧ್ಯವಾಗಿಲ್ಲ. ನನಗೆ ಚುನಾವಣೆಯಲ್ಲಿ ಬಿಜೆಪಿ ಎದುರಾಳಿ. ಬಿಜೆಪಿ ಅಭ್ಯರ್ಥಿಯ ಬಗ್ಗೆ ಅವರ ಪಕ್ಷದವರೇ ಅಪಸ್ವರವೆತ್ತಿದ್ದಾರೆ. ಈ ಜಗಳದಲ್ಲಿಯೇ ಬಿಜೆಪಿ ಅಭ್ಯರ್ಥಿ ಸೋಲಲಿದ್ದಾರೆ. ಈ ರೀತಿಯ ಗೊಂದಲ ನಮ್ಮ ಪಕ್ಷದಲ್ಲಿಲ್ಲ. ನಾನು ಸುಲಭವಾಗಿ ಜಯಗಳಿಸುತ್ತೇನೆ ಎಂದರು.
ಪಕ್ಷ ಗುರುತಿಸಿದೆ: 2008ರ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿಸಿ ಜಬ್ಬಾರಖಾನ್ ಹೊನ್ನಳ್ಳಿಯವರಿಗೆ ಟಿಕೆಟ್ ನೀಡಲಾಯಿತು. ಪಕ್ಷದ ವರಿಷ್ಠರು ಹೇಳಿದಾಗ ತಕ್ಷಣ ಒಪ್ಪಿದೆ. ಆದರೆ, ಅವಕಾಶ ಕೊಟ್ಟ ಕಾಂಗ್ರೆಸ್ಸನ್ನೇ ಹೊನ್ನಳ್ಳಿ ತೊರೆದರು. ನನಗೆ ಟಿಕೆಟ್ ಸಿಕ್ಕಿಲ್ಲವೆಂದಾದರೂ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಸೇವೆ ಮಾಡುತ್ತಾ ಬಂದೆ. ಪಕ್ಷ ನನ್ನನ್ನು ಗುರುತಿಸಿ ಪುನಃ ಟಿಕೆಟ್ ನೀಡಿದೆ.