ಬಿಜೆಪಿ ತಿರಸ್ಕರಿಸಿ: ಮಹೇಶ ನಾಲವಾಡ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ.23
ಕಳೆದ ಐದು ವರ್ಷಗಳ ಕಾಲ ರಾಜ್ಯವನ್ನು ಆಳಿದ ಬಿಜೆಪಿ ಜನರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡುವಲ್ಲಿ ಕೂಡ ವಿಫಲವಾಗಿದ್ದು, ಮೆ 5ರಂದು ನಡೆಯುವ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಹೇಶ ನಾಲವಾಡ ಹೇಳಿದರು.
ಮಂಗಳವಾರ ಇಲ್ಲಿನ ಗಿರಣಿ ಚಾಳದಲ್ಲಿ ಪಾದಯಾತ್ರೆ ಕೈಗೊಂಡು ಮನೆ ಮನೆಗಳಿಗೆ ತೆರಳಿ ಪ್ರಚಾರದ ವೇಳೆ ಬಿಜೆಪಿ ಸರ್ಕಾರದ ಕಾರ್ಯವೈಖರಿ ಟೀಕಿಸಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಐದು ವರ್ಷಗಳಲ್ಲಿ ಕೇವಲ ಅಧಿಕಾರಕ್ಕಾಗಿ ಕಚ್ಚಾಡಿದೆ ವಿನಃ ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಗಮನ ನೀಡಿಲ್ಲ ಎಂದರು.
ಮಂಗಳವಾರ, ಗಿರಣಿ ಚಾಳ, ಗವಿ ಓಣಿ, ಚಾಣಕ್ಯಪುರಿ ಪ್ರದೇಶಗಳಲ್ಲಿ ನೂರಾರು ಪಕ್ಷದ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಕೈಗೊಂಡು ಬದಲಾವಣೆಗಾಗಿ ಈ ಬಾರಿ ಕಾಂಗ್ರೆಸ್ಗೆ ಮತ ನೀಡಿ ಎಂದು ಕೇಳಿಕೊಂಡರು.
ವಾರ್ಡ್ ನಂ. 33ರ ವ್ಯಾಪ್ತಿಯಲ್ಲಿ ಪಾದಯಾತ್ರೆ ಕೈಗೊಂಡ ಡಾ. ಮಹೇಶ ನಾಲವಾಡ ಅವರೊಂದಿಗೆ ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಸೇರಿದಂತೆ ಇನ್ನಿತರರು ಇದ್ದರು.