ರಾಜ್ಯವನ್ನೇ ಲೂಟಿ ಮಾಡಿದ ಬಿಜೆಪಿ: ಎ.ಎಂ. ಹಿಂಡಸಗೇರಿ
ಧಾರವಾಡ: ಐದೇ ವರ್ಷದ ಆಡಳಿತಾವಧಿಯಲ್ಲಿ ಬಿಜೆಪಿ ಸರ್ಕಾರದ ಶಾಸಕರು ಕೋಟಿಗಟ್ಟಲೇ ಅವ್ಯವಹಾರ ಮಾಡಿ ಇಡೀ ರಾಜ್ಯವನ್ನೇ ಲೂಟಿ ಮಾಡಿದರು ಎಂದು ಕಾಂಗ್ರೆಸ್ ಮುಖಂಡ ಎ.ಎಂ. ಹಿಂಡಸಗೇರಿ ದೂರಿದರು.
ಇಲ್ಲಿನ 9ನೇ ವಾರ್ಡ್ ನವಲೂರು ಅಗಸಿಯ ವಾಲ್ಮೀಕಿ ಓಣಿಯಲ್ಲಿ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, 125 ವರ್ಷಗಳ ಇತಿಹಾಸ ಹೊಂದಿದ ಕಾಂಗ್ರೆಸ್ ಪಕ್ಷವು ರಾಜ್ಯವನ್ನು ಅಭಿವೃದ್ಧಿ ಪಥದತ್ತ ತಂದರೆ, ಬಿಜೆಪಿ ಬರೀ ಅಕ್ರಮಗಳಲ್ಲಿ ತೊಡಗಿ ಅಲ್ಲಿನ ಅನೇಕ ಶಾಸಕ, ಸಚಿವರು ಜೈಲು ಪಾಲಾದರು. ಪಾಪದ ಕೊಡ ತುಂಬಿದ ಮೇಲೆ ದೇವಸ್ಥಾನಗಳಿಗೆ ಹಣ ಕೊಟ್ಟರೂ ಪ್ರಯೋಜನವಿಲ್ಲ. ಈ ಬಾರಿ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚಿಸಲಿದೆ. ಜನತೆ ಕಾಂಗ್ರೆಸ್ನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಬಡ ಜನರಿಗೆ ಆಶ್ರಯ ಯೋಜನೆ ನೀಡುವುದಲ್ಲದೇ, ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆ. ಬೆಲೆ ಏರಿಕೆಯನ್ನು ನಿಯಂತ್ರಣ ಮಾಡುತ್ತೇವೆ. ಆದ್ದರಿಂದ ವಿನಯ ಕುಲಕರ್ಣಿಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು. ಅಭ್ಯರ್ಥಿ ವಿನಯ ಕುಲಕರ್ಣಿ ಮಾತನಾಡಿ, ಐದು ವರ್ಷದಲ್ಲಿ ಶಾಸಕಿ ಸೀಮಾ ಮಸೂತಿ ಬರೀ ಭರವಸೆಗಳನ್ನೇ ಕೊಡುತ್ತಾ ಬಂದಿದ್ದು, ಈ ಬಾರಿ ಕಾಂಗ್ರೆಸ್ಗೆ ಹೆಚ್ಚಿನ ಒಲವು ತೋರುತ್ತಿದ್ದು, ಕಾಂಗ್ರೆಸ್ಗೆ ಮತ ನೀಡಿ ಎಂದು ಕೇಳಿಕೊಂಡರು. ಪಾಲಿಕೆ ಸದಸ್ಯರಾದ ದೀಪಕ ಚಿಂಚೋರೆ, ಯಾಸೀನ ಹಾವೇರಿಪೇಟ, ರಘು ಲಕ್ಕಣ್ಣವರ, ಈರಣ್ಣ ಮಲ್ಲಿಗವಾಡ, ಫಕ್ಕೀರಪ್ಪ ಪೂಜಾರ, ಎಲ್ಲಪ್ಪ ಕನಕೂರ, ಸುಬ್ಬರಾವ ಘೋರ್ಪಡೆ, ಹನುಮಂತಪ್ಪ ಕರಾಡೆ, ಕರೆಪ್ಪ ಕೊಟೆ ಕಲ್ಲೂರ, ಬಸಪ್ಪ ಮಾಲನ್ನವರ, ಸಿ.ಎಸ್. ಸಾಲಿಗೌಡರ, ಶಿವಶಂಕರ ಹಂಪಣ್ಣವರ, ನೀಲಪ್ಪ ಜಂಬಣ್ಣವರ, ಎಚ್.ಎ. ಮುಲ್ಲಾನವರ, ಬಸವರಾಜ ಹುಡೇದ, ಈರಣ್ಣ ಹಿರೇಮಠ, ಉಳವಪ್ಪ ದಾಸನೂರ, ಪ್ರಕಾಶ ಪವಾರ, ನೀಲಪ್ಪ ಜಂಬಣ್ಣವರ, ರಜಿಯಾ ಬೇಗಂ ಸಂಗೊಳ್ಳಿ, ಕವಿತಾ ಕಟ್ಟಿ, ಪ್ರಕಾಶ ಘಾಟಗೆ ಇದ್ದರು. ಜಗದೀಶ ರೊಟ್ಟಿಮಠ ಸ್ವಾಗತಿಸಿದರು. ಸಿ.ಎಸ್. ನೇಗಿನಹಾಳ ವಂದಿಸಿದರು. ಸಿ.ಎಸ್. ಸಾಲಿಗೌಡರ ನಿರೂಪಿಸಿದರು.