ಹುಬ್ಬಳ್ಳಿಯಲ್ಲಿ ಹೈ ಅಲರ್ಟ್
ಕ.ಪ್ರ. ವಾರ್ತೆ , ಹುಬ್ಬಳ್ಳಿ , ಏ.26
ಪ್ರಧಾನಿ ಆಗಮನಕ್ಕೆ ಇನ್ನೂ ಮೂರು ದಿನಗಳು ಬಾಕಿ ಇವೆ. ಈಗಲೇ ಜಿಲ್ಲಾ ಪೊಲೀಸ್ ಪಡೆಯಲ್ಲಿ ಸಂಚಲನ ಶುರುವಾಗಿದೆ.
ಶುಕ್ರವಾರ ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ಮನ್ಮೋಹನ್ ಸಿಂಗ್ ಅವರ ವಿಶೇಷ ಸುರಕ್ಷತಾ ಪಡೆ (ಎಸ್ಪಿಜಿ) ಕಾರ್ಯಕ್ರಮ ನಡೆಯಲಿರುವ ನೆಹರು ಸ್ಟೇಡಿಯಂ ಸೇರಿದಂತೆ ಸುತ್ತಲಿನ ಪರಿಸರವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ರೇಲ್ವೆ ಮೈದಾನವನ್ನೂ ಎಸ್ಪಿಜಿ ಸಿಬ್ಬಂದಿ ಮತ್ತು ಕಮಿಷನರ್ ಬಿ.ಎ. ಪದ್ಮನಯನ ಪರಿಶೀಲಿಸಿದ್ದಾರೆ.
ಏ.29ರಂದು ನೆಹರು ಮೈದಾನದಲ್ಲಿ ನಡೆಯಲಿರುವ ಚುನಾವಣಾ ಪ್ರಚಾರದ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಿದ್ಧವಾಗುತ್ತಿದ್ದು, ಹು-ಧಾ ಕಮಿಷನರೇಟ್ನ ಹಿರಿಯ ಪೊಲೀಸ್ ಅಧಿಕಾರಿಗಳು ಖುದ್ದಾಗಿ ವೇದಿಕೆ ನಿರ್ಮಾಣ ಸೇರಿದಂತೆ ಆಗಬೇಕಿರುವ ಕೆಲಸಗಳ ಬಗ್ಗೆ ಗಮನ ಕೇಂದ್ರಿಕರಿಸಿದ್ದಾರೆ. ಕಮಿಷನರೇಟ್ನ ಕಾನೂನು ಸುವ್ಯವಸ್ಥೆ, ಅಪರಾಧ ಮತ್ತು ಸಂಚಾರಿ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಧಾನಿ ಸುರಕ್ಷತೆ ವಿಚಾರದಲ್ಲಿ ಯಾವುದೇ ರೀತಿಯ ಕುಂದುಂಟಾಗಬಾರದು ಎನ್ನುವ ಉದ್ದೇಶದಿಂದ ಶುಕ್ರವಾರ ಬೆಳಗ್ಗೆಯೇ ಮೈದಾನವನ್ನು ಪರಿಶೀಲಿಸಿದರು.
ಎಸ್ಪಿಜಿ ಸುರಕ್ಷತೆ: ಪ್ರಧಾನಿ ಸುರಕ್ಷತೆಯನ್ನು ನೋಡಿಕೊಳ್ಳುವ ವಿಶೇಷ ಭದ್ರತಾ ಪಡೆಯ ಒಂದು ತಂಡ ಹುಬ್ಬಳ್ಳಿಗೆ ಆಗಮಿಸಿ ಕಾರ್ಯಕ್ರಮದ ವೇಳೆ ಮತ್ತು ಅದಕ್ಕೂ ಮುನ್ನ ವಶಕ್ಕೆ ತೆಗೆದುಕೊಳ್ಳಬೇಕಾದ ಕಟ್ಟಡಗಳು ಶಸ್ತ್ರಧಾರಿ ಪೊಲೀಸ್ ಸಿಬ್ಬಂದಿಯನ್ನು ಯಾವ ಕಟ್ಟಡಗಳ ಮೇಲೆ ನಿಯೋಜಿಸಬೇಕು ಎನ್ನುವ ನೀಲನಕ್ಷೆ ಸಿದ್ಧಪಡಿಸುತ್ತಿದೆ.
ಎಸ್ಪಿಜಿಯ ಪರಿಶೀಲನಾ ತಂಡ ಸುರಕ್ಷತೆ ವಿಚಾರದಲ್ಲಿ ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಲಿದ್ದು, ಅದರ ಪ್ರಕಾರ ಕಮಿಷನರೇಟ್ನ ಬಂದೋಬಸ್ತ್ ಮಾಡಲಿದೆ.
ಶುಕ್ರವಾರ ನಗರಕ್ಕೆ ಆಗಮಿಸಿರುವ ಎಸ್ಪಿಜಿ ಅಧಿಕಾರಿಗಳು ಇಲ್ಲಿನ ಭಾರತೀಯ ದೂರಸಂಪರ್ಕ ನಿಗಮ, ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರ ರಾಜಧಾನಿ ದೆಹಲಿಗೆ ನೇರ ಸಂಪರ್ಕ ಕಲ್ಪಿಸುವ ವೈರಲೆಸ್ ತಂತ್ರಜ್ಞಾನ, ವೈಫೈ ಮುಂತಾದ ಸಂಪರ್ಕ ತಂತ್ರಜ್ಞಾನಗಳ ಅಗತ್ಯವನ್ನು ವಿವರಿಸಿದ್ದು, ಎಸ್ಪಿಜಿ ಸೂಚಿಸಿರುವ ಕ್ರಮಗಳ ಪ್ರಕಾರ ಸಂಪರ್ಕ ಸಾಧನಗಳನ್ನು ನೆಹರು ಮೈದಾನಕ್ಕೆ ಬಿಎಸ್ಎನ್ಎಲ್ ಒದಗಿಸಲಿದೆ.
'ಕೈ' ಪಡೆ ಸಜ್ಜು: ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಹುಟ್ಟು ಹಾಕುವುದಕ್ಕೆ ಅಗ್ರಗಣ್ಯ ನಾಯಕರ ಆಗಮನಕ್ಕೆ ತುದಿಗಾಲ ಮೇಲೆ ನಿಂತಿರುವ ಕಾಂಗ್ರೆಸ್ ಪ್ರಧಾನಿ ಕಾರ್ಯಕ್ರಮಕ್ಕೆ ಭರದ ಸಿದ್ಧತೆಯಲ್ಲಿ ತೊಡಗಿದೆ. ಜಿಲ್ಲಾ ಕಾಂಗ್ರೆಸ್ ಘಟಕ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಸೇರಿದಂತೆ ಇತರ ಜಿಲ್ಲಾ ಮುಖಂಡರು ಕಾರ್ಯಕ್ರಮ ನಡೆಯಲಿರುವ ನೆಹರು ಮೈದಾನದ ಪರಿಶೀಲನೆ ಮಾಡುತ್ತಿದ್ದು, ಹು-ಧಾ ಕಮಿಷನರೇಟ್ ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
- ಸತೀಶ ಪಾಗಾದ