ಇಂದು ಹುಬ್ಬಳ್ಳಿಗೆ ಪ್ರಧಾನಿ: ಬಿಗಿ ಭದ್ರತೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 28
ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಏ. 29ರಂದು ಪ್ರಧಾನಿ ಮನಮೋಹನ ಸಿಂಗ್ ಹುಬ್ಬಳ್ಳಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ ಮಾಡಲಾಗಿದೆ.
ಬೆಳಗ್ಗೆ 10ಕ್ಕೆ ನೆಹರು ಮೈದಾನದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರಿಂದ ಬಹಿರಂಗ ಚುನಾವಣಾ ಪ್ರಚಾರ ಭಾಷಣ ನಡೆಯಲಿರುವುದರಿಂದ ಮೈದಾನದ ಸುತ್ತಲೂ ಹೆಚ್ಚಿನ ನಿಗಾ ವಹಿಸಲಾಗಿದೆ.
ನೆಹರು ಮೈದಾನದ ಸುತ್ತಲಿನ ಹೋಟೆಲ್, ಲಾಡ್ಜ್, ವಾಣಿಜ್ಯ ಮಳಿಗೆ ಸೇರಿದಂತೆ ಎಲ್ಲ ಕಟ್ಟಡಗಳಲ್ಲಿ ಈಗಾಗಲೇ ಕೆಲ ಬಾರಿ ಪೊಲೀಸ್ ಹಾಗೂ ಎಸ್‌ಪಿಜಿ ಅಧಿಕಾರಿಗಳು ಸೂಕ್ಷ್ಮ ಪರಿಶೀಲನೆ ನಡೆಸಿದ್ದು, ಸೋಮವಾರವೂ ಮತ್ತೊಂದು ಸುತ್ತಿನ ಪರಿಶೀಲನೆ ನಡೆಸಲಿದ್ದಾರೆ. ಹುಬ್ಬಳ್ಳಿ-ಮಹಾನಗರ ಪೊಲೀಸ್ ಕಮೀಷನರೇಟ್ ಸಿಬ್ಬಂದಿ ಜೊತೆಗೆ ಬೆಳಗಾವಿ, ದಾವಣಗೆರೆ, ಬಳ್ಳಾರಿ, ರಾಯಚೂರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಪ್ರಧಾನಿ ಅವರ ಭದ್ರತೆಯ ನೇತೃತ್ವ ವಹಿಸಿರುವ ಎಸ್‌ಪಿಜಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಮಹಾನಗರ ಪೊಲೀಸರು ನಗರದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶದಲ್ಲಿಯೂ ಹೆಚ್ಚು ನಿಗಾ ವಹಿಸಿದ್ದಾರೆ. ಮೈದಾನ ಸುತ್ತಲಿನ ಕಟ್ಟಡಗಳ ಮೇಲೆ ಬಂದೂಕುಧಾರಿ ಪೊಲೀಸರನ್ನು ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಪ್ರಧಾನಿ ಆಗಮನದ ಸಂದರ್ಭದಲ್ಲಿ ಕೆಲ ಸಮಯ ವಾಹನ ಸಂಚಾರ ಮಾರ್ಗ ಬದಲಾಯಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ವಾಹನ ಚಾಲಕರು ಒಂದಿಷ್ಟು ಕಿರಿಕಿರಿ ಸಹಿಸುವುದು ಅನಿವಾರ್ಯ.
ವಾಹನ ನಿಲುಗಡೆ: ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ನಗರಕ್ಕಾಗಮಿಸುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಪೊಲೀಸ್ ಇಲಾಖೆ ಪ್ರತ್ಯೇಕ ವ್ಯವಸ್ಥೆ ಮಾಡಿದೆ. ಗದಗ ರಸ್ತೆ ಕಡೆಯಿಂದ ಬರುವ ವಾಹನಗಳಿಗೆ ಆಂದ್ರಾ ಸ್ಕೂಲ್ ಮೈದಾನ (ಚಿಲ್ಲಿ ಮೈದಾನ) ಹಾಗೂ ರೈಲ್ವೆ ಆಸ್ಪತ್ರೆಯ ಎದುರಿಗಿನ ರಸ್ತೆ ಬದಿಗೆ ಗದಗ ಕಡೆಯಿಂದ ಬರುವಾಗ ಎಲ್ಲ ಭಾರಿ ವಾಹನಗಳನ್ನು ಮತ್ತು ಆಸ್ಪತ್ರೆ ಬಲಬದಿ ರಸ್ತೆ ಮೇಲೆ ದ್ವಿ ಚಕ್ರ ವಾಹನಗಳನ್ನು ನಿಲುಗಡೆ ಮಾಡಬೇಕು.
ಕಾರವಾರ ರಸ್ತೆ ಕಡೆಯಿಂದ ಬರುವ ವಾಹನಗಳಿಗೆ ಎಂ.ಟಿ. ಮಿಲ್ ಮೈದಾನದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಧಾರವಾಡ ಕಡೆಯಿಂದ ಬರುವ ವಾಹನಗಳಿಗೆ ವಿದ್ಯಾನಗರ ರಾಯ್ಕರ ಮೈದಾನದಲ್ಲಿ, ನವಲಗುಂದ ಕಡೆಯಿಂದ ಬರುವ ವಾಹನಗಳಿಗೆ ಸೆಂಟ್ ಮೈಕಲ್ ಸ್ಕೂಲ್ ಮೈದಾನ ಹಾಗೂ ಶ್ರೀನಿವಾಸ ಗಾರ್ಡನ್ ಹತ್ತಿರ, ಗೋಕುಲ ರೋಡ ಕಡೆಯಿಂದ ಬರುವ ವಾಹನಗಳಿಗೆ ವಿಕಾಸ ನಗರ ಮುಜಾಹಿದ್ ಮೈದಾನ, ಲ್ಯಾಮಿಂಗಟನ್ ಸ್ಕೂಲ್ ಮೈದಾನದಲ್ಲಿ ವಿಐಪಿ ವಾಹನಗಳಿಗೆ ನಿಲುಗಡೆಗೆ ಅವಕಾಶ ಒದಗಿಸಲಾಗಿದೆ.
ಮೂರು ಸಾವಿರ ಮಠದ ಆವರಣದಲ್ಲಿ ನಗರದೊಳಗೆ ಪ್ರವೇಶ ಮಾಡಿದ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಭಾರಿ ವಾಹನಗಳಿಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ನಗರದಲ್ಲಿ ಪ್ರವೇಶ ನಿಷೇಧಿಸಲಾಗಿದೆ.