ಕಾಂಗ್ರೆಸ್ ಪರ ಪ್ರಚಾರ ಮಾಡದಂತೆ ಬೆದರಿಕೆ ಪತ್ರ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್. ಮೋರೆ ಪರ ಪ್ರಚಾರ ಮಾಡದಂತೆ ಧಾರವಾಡದ ಉದ್ಯಮಿ ಮೋಹನ ಮೋರೆಗೆ ಆರ್‌ಎಸ್‌ಎಸ್ ಹೆಸರಿನಲ್ಲಿ ಬೆದರಿಕೆಯ ಪತ್ರವೊಂದು ಬಂದಿದೆ ಎಂದು ಸಂಸದ ಹುಸೇನ ದಳವಾಯಿ ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಈ ಬೆದರಿಕೆಯ ಪತ್ರ ಆರ್‌ಎಸ್‌ಎಸ್ ಲೆಟರ್ ಹೆಡ್‌ನಲ್ಲಿದೆ. ಆದರೆ ಸಂಘ ಪರಿವಾರದ ಮುಖಂಡರು ಈ ಪತ್ರ ತಮ್ಮದಲ್ಲವೆಂದು ಹೇಳುತ್ತಿದ್ದಾರೆ ಎಂದರು. ಒಂದು ವೇಳೆ ಎಸ್.ಆರ್. ಮೋರೆ ಪರ ಚುನಾವಣಾ ಪ್ರಚಾರ ಕೈಗೊಂಡಲ್ಲಿ ಮಯೂರ ಹೋಟೆಲ್ ನಿರ್ಮಾಣಕ್ಕೆ ಅಕ್ರಮ ಜಾಗ ಕಬಳಿಸಿದ ಹಗರಣ ಬಯಲಿಗೆಳೆಯುವುದಾಗಿ ಬೆದರಿಕೆ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಮುಖಂಡರೊಬ್ಬರು ಅನೇಕ ರೀತಿಯ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಆರ್‌ಎಸ್‌ಎಸ್‌ನವರು ಮೊದಲು ಆ ಅಕ್ರಮ ಬಯಲಿಗೆಳೆಯಲಿ. ನಂತರ ಮೋಹನ ಮೋರೆ ವಿರುದ್ಧ ಮಾತನಾಡಲಿ ಎಂದರು.
ಇಂದು ಆಡ್ವಾಣಿ ಹುಬ್ಬಳ್ಳಿಗೆ
ಹುಬ್ಬಳ್ಳಿ: ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ. ಆಡ್ವಾಣಿ ಏ. 29ರಂದು ಸಂಜೆ 6ಕ್ಕೆ ನಗರದ ನೆಹರು ಮೈದಾನದಲ್ಲಿ ಬಹಿರಂಗ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಸೇರಿದಂತೆ ವಿವಿಧ ಮುಖಂಡರು ಹಾಜರಿರುವರು. ಬೆಳಗ್ಗೆ 10ಕ್ಕೆ ಇದೇ ಮೈದಾನದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಭಾಷಣ ಮಾಡಲಿದ್ದರೆ, ಸಂಜೆ ಇದೇ ವೇದಿಕೆಯಲ್ಲಿ ಬಿಜೆಪಿ ಮುಖಂಡ ಆಡ್ವಾಣಿ ಪ್ರಚಾರ ಭಾಷಣ ಮಾಡಲಿದ್ದಾರೆ.