ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಾವೇರುತ್ತಿದೆ ಜಿಲ್ಲಾ ಚುನಾವಣೆ ಅಖಾಡ

Lingaraj Badiger
Updated On : 29 Apr 2013, 11:41 am

-ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 28
ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಧಾರವಾಡ ಜಿಲ್ಲಾ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿದೆ.
ವಿವಿಧ ಪಕ್ಷಗಳ ರಾಷ್ಟ್ರ ಮಟ್ಟದ 'ಫ್ರಂಟ್ ಲೈನ್ ಲೀಡರ್ಸ್‌' ಜಿಲ್ಲೆಗೆ ಆಗಮಿಸಿ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಪ್ರಧಾನಿ ಮನಮೋಹನ ಸಿಂಗ್ ಏ. 29ಕ್ಕೆ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೆಳಗ್ಗೆ 10ಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಚುನಾವಣಾ ಭಾಷಣ ಮಾಡಲಿದ್ದಾರೆ. ಅದೇ ದಿನ ಸಂಜೆ 6ಕ್ಕೆ ಇದೇ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡ ಎಲ್.ಕೆ. ಆಡ್ವಾಣಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.
ಪ್ರಧಾನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಳೆದ 8-10 ದಿನಗಳಿಂದ ಪೂರ್ವ ಸಿದ್ಧತೆಗಳು ತುರುಸಿನಿಂದ ನಡೆದಿದ್ದು, ನೆಹರು ಮೈದಾನದಲ್ಲಿ ಪೆಂಡಾಲ್ ನಿರ್ಮಾಣದ ಕಾರ್ಯ ಪೂರ್ಣಗೊಂಡಿದೆ.
ಎಸ್‌ಪಿಜಿ ಅಧಿಕಾರಿಗಳು ನೆಹರು ಮೈದಾನದ ಸುತ್ತಲಿನ ಹೋಟೆಲ್ ಸೇರಿದಂತೆ ಸಂಪೂರ್ಣ ಪ್ರದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದು, ಬಿಗಿ ಭದ್ರತೆ ಒದಗಿಸಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಜಿಲ್ಲೆಯ ಏಳೂ ವಿಧಾನಸಭೆ ಕ್ಷೇತ್ರಗಳ ಜೊತೆಗೆ ಪಕ್ಕದ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ಅಂದು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.
ಪ್ರಧಾನಿ ಮನಮೋಹನ ಸಿಂಗ್ ಪ್ರಚಾರ ಭಾಷಣದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯದ ಹಲವಾರು ಮುಖಂಡರು ಹುಬ್ಬಳ್ಳಿಯಲ್ಲಿ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಎಐಸಿಸಿ ಕಾರ್ಯದರ್ಶಿ ಸಂಜಯ ನಿರುಪಮ್, ಸಂಸದ ಹುಸೇನ ದಳವಾಯಿ ಸೇರಿದಂತೆ ಹಲವಾರು ಮುಖಂಡರು ಹುಬ್ಬಳ್ಳಿಯಲ್ಲಿ ಮುಕ್ಕಾಂ ಹೂಡಿದ್ದಾರೆ. ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಎಐಸಿಸಿ ಕಾರ್ಯದರ್ಶಿ ಮಧುಸೂಧನ ಮೇಸ್ತ್ರಿ, ಸಂಸದ ಆಸ್ಕರ ಫರ್ನಾಂಡಿಸ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಸೇರಿದಂತೆ ಮತ್ತಿತರ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.  
ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಪರ ಹಾಗೂ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದಲ್ಲಿ ಡಾ. ಮಹೇಶ ನಾಲವಾಡ ಪರ ಕೇಂದ್ರ ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯ್ಲಿ ಪ್ರಚಾರ ನಡೆಸಿದರು.
ಬಿಜೆಪಿ ನಾಯಕರು: ಧಾರವಾಡದಲ್ಲಿ ಶನಿವಾರ ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಿದರು. ಭಾನುವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುಷ್ಮಾ ಸ್ವರಾಜ್, ರಾಜ್ಯ ಬಿಜೆಪಿ ನಾಯಕರಲ್ಲಿ ಒಗ್ಗಟ್ಟು ಮೂಡಿದೆ. ಹೀಗಾಗಿ ಮತದಾರ ಬಿಜೆಪಿಯನ್ನೇ ಮತ್ತೊಮ್ಮೆ ಚುನಾಯಿಸುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಹಲವಾರು ಹಗರಣಗಳನ್ನು ಪ್ರಸ್ತಾಪಿಸಿದ ಅವರು, ಭ್ರಷ್ಟ ಸಚಿವರ ರಕ್ಷಣೆಗೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಅರುಣ ಜೇಟ್ಲಿ ಧಾರವಾಡದಲ್ಲಿ ವಿಚಾರವಂತರ ಸಭೆ ಹಾಗೂ ಸಂವಾದದಲ್ಲಿ ಬುದ್ಧಿಜೀವಿಗಳೊಂದಿಗೆ ರಾಜಕೀಯ ಸಂವಾದ ನಡೆಸಿದರು. ಚೀನಾ ಸೈನಿಕರು ಅತಿಕ್ರಮಿಸಿಕೊಂಡಿರುವ ದೇಶದ ಗಡಿ ಭಾಗವನ್ನು ಸ್ಥಳೀಯ ಸಮಸ್ಯೆಯೆಂದ ಪ್ರಧಾನಿ ಮನಮೋಹನ ಸಿಂಗ್‌ರನ್ನು ತರಾಟೆಗೆ ತೆಗೆದುಕೊಂಡರು. ನಂತರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಮಧ್ಯೆ ಚಿತ್ರ ನಟಿ ಶ್ರುತಿ ಅವರು ಧಾರವಾಡ ವಿಧಾನಸಭೆ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ತವನಪ್ಪ ಅಷ್ಟಗಿ ಪರ ಪ್ರಚಾರ ನಡೆಸಿದರು. ಶುಕ್ರವಾರ ನಟ ಜಗ್ಗೇಶ ಕುಂದಗೋಳದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಎರಡು ದಿನಗಳ ಹಿಂದೆ ನಾಯಕ ನಟ ದರ್ಶನ್ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕಣಿ ಪರ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದ್ದರು.
ಇದರೊಂದಿಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಭಾನುವಾರವೂ ಮನೆ ಮನೆಗೆ ತೆರಳಿ, ಮತ ಯಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement