ಚೀನಿ ಅತಿಕ್ರಮಣ ತಡೆಗಟ್ಟದ ಯುಪಿಎ ವಿರುದ್ಧ ಜೇಟ್ಲಿ ಕಿಡಿ
ಹುಬ್ಬಳ್ಳಿ: ಭಾರತದ ಗಡಿ ದಾಟಿ ಒಳನುಗ್ಗಿರುವ ಚೀನಿ ಸೈನಿಕರ ಅತಿಕ್ರಮಣ ಕೇವಲ ಸ್ಥಳೀಯ ಸಮಸ್ಯೆ ಎಂದು ಹೇಳುತ್ತಿರುವ ಪ್ರಧಾನಿ ಮನಮೋಹನ್ಸಿಂಗ್ ಅವರಿಗೆ ಚೀನಿ ಅತಿಕ್ರಮಣ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ಚಿಂತನೆ ಇಲ್ಲ ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಟೀಕಿಸಿದರು. ಭಾನುವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್ಡಿಎ ಆಡಳಿತಾವಧಿಯಲ್ಲಿ ಕಾರ್ಗಿಲ್ ಸಮಸ್ಯೆ ಎದುರಾಗಿತ್ತು. ಆಂತಾರಾಷ್ಟ್ರೀಯ ಮಟ್ಟದ ಒತ್ತಡ, ರಾಜತಾಂತ್ರಿಕ ಪರಿಹಾರ ಮತ್ತು ಕೊನೆಗೆ ಮಿಲಿಟರಿ ಕ್ರಮ ಜರುಗಿಸುವ ಮೂಲಕ ಎನ್ಡಿಎ ಕಾರ್ಗಿಲ್ ಅತಿಕ್ರಮಣ ಪರಿಹರಿಸುವಲ್ಲಿ ಯಶಸ್ವಿಯಾಯಿತು. ಕೇಂದ್ರ ಯುಪಿಎ ಸರ್ಕಾರಕ್ಕೆ ಚೀನಿ ಅತಿಕ್ರಮಣ ಹಿಮ್ಮೆಟ್ಟಿಸುವುದಕ್ಕೆ ಪರ್ಯಾಯ ಆಯ್ಕೆಗಳಿದ್ದರೂ ಆ ಬಗ್ಗೆ ಚಿಂತಿಸದೆ ಇದೊಂದು ಸ್ಥಳೀಯ ಸಮಸ್ಯೆ ಎನ್ನುವ ಮೂಲಕ ತಿಪ್ಪೆ ಸಾರಿಸುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ದುರಾಡಳಿತದಿಂದ ಸಂಪತ್ತು ಲೂಟಿ:ಪ್ರೊ. ಸಿದ್ದರಾಮಯ್ಯ
ಹೊಸದುರ್ಗ: ಕಳೆದ ಐದು ವರ್ಷಗಳ ಕಾಲ ಅಭದ್ರ ರಾಜ್ಯ ಸರ್ಕಾರದ ದುರಾಡಳಿತದಿಂದ ರಾಜ್ಯದಲ್ಲಿ ಅಪಾರ ಬೆಲೆ ಬಾಳುವ ಪ್ರಾಕೃತಿಕ ಸಂಪತ್ತಿನ ಲೂಟಿಯಾಗಿ ಖಜಾನೆಯನ್ನು ದೋಚಿದ್ದಾರೆಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ತೀವ್ರ ವಿಷಾದ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭದ್ರ ಸರ್ಕಾರ ರಚನೆಯಾದಾಗ ಅನಾಹುತಗಳು ಸಂಭವಿಸಿ ಬ್ಲಾಕ್ಮೇಲ್ ರಾಜಕೀಯ ಹೆಚ್ಚಾಗಿ ಪುಡಿ ಪಕ್ಷಗಳು ಸಂಪತ್ತಿಗೆ ಲಗ್ಗೆ ಹಾಕಿವೆ ಎಂದರು. ಇದರಿಂದ ಪ್ರಜಾರಾಜ್ಯದ ಮತಗಳು ಹರಾಜು ಹಾಕಿದಂತಾಗಿದೆ. ಆಪರೇಷನ್ ಕುತಂತ್ರ ಪ್ರಜಾಪ್ರಭುತ್ವಕ್ಕೆ ಅವಮಾನಕರ ಎಂದು ಖೇದ ವ್ಯಕ್ತಪಡಿಸಿದರು.
ಭ್ರಷ್ಟಾಚಾರಿಗಳಿಗೆ ತಕ್ಕ ಪಾಠ: ಮಹೇಂದ್ರ
ಸಿದ್ದಾಪುರ: ರಾಜ್ಯ ಬಿಜೆಪಿ ಸರ್ಕಾರ ಹಾಗೂ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಭ್ರಷ್ಟಾಚಾರಿಗಳ ಗೂಡಾಗಿದ್ದು, ಸಾರ್ವಜನಿಕರ ಹಣ ಕೊಳ್ಳೆ ಹೊಡೆಯುವವರನ್ನು ಜನರು ತಮ್ಮ ತಿಳಿವಳಿಕೆಯಿಂದ ತಿರಸ್ಕರಿಸಲಿದ್ದಾರೆಂದು ಜೆಡಿಎಸ್ ಮುಖಂಡ ಮಹೇಂದ್ರಕುಮಾರ್ ಹೇಳಿದ್ದಾರೆ. ನೆಲ್ಲಿಹುದಿಕೇರಿಯಲ್ಲಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮಾತ್ರ ಇಂದು ಜನತೆಯ ಆಶೋತ್ತರಗಳನ್ನು ನೆರವೇರಿಸಲು ಸಾಧ್ಯ ಎಂದರು. ಜೆಡಿಎಸ್ ಜಿಲ್ಲಾ ಅಧ್ಯಕ್ಷ ಶಶಿಧರ್ ಮಾತನಾಡಿದರು.
ಕಣದಿಂದ ಹಿಂದೆ ಸರಿದ ಜೈನಾಪುರ
ಬಿಜಾಪುರ: ತಾಲೂಕಿನ ಬಬಲೇಶ್ವರ ಮತಕ್ಷೇತ್ರದಲ್ಲಿ ಕೆಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣಕುಮಾರ ಜೈನಾಪುರ ಅವರು ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ ಅವರನ್ನು ಬೆಂಬಲಿಸುವ ಮೂಲಕ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ ಅವರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಅವರು ವಿಧಾನಸಭೆಯಲ್ಲಿದ್ದರೆ ಈ ಭಾಗದ ಎಲ್ಲ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ದೊರೆಯಲಿವೆ. ಈ ನಿಟ್ಟಿನಲ್ಲಿ ಅವರನ್ನು ಬೆಂಬಲಿಸಿ ನಾನು ಚುನಾವಣೆ ಕಣದಿಂದ ಹಿಂದೆ ಸರಿದಿದ್ದೇನೆ ಎಂದು ಅರುಣಕುಮಾರ ತಿಳಿಸಿದ್ದಾರೆ.