ರಾಜಕಾರಣಿಗಳಿಗೆ ಪಾಠ ಕಲಿಸ್ತೀನಿ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 28
ರಾಜಕೀಯ ವ್ಯವಸ್ಥೆಯ ಹೊರಗಡೆ ನಿಂತು ರಾಜಕೀಯವನ್ನು ಟೀಕಿಸುವ ಬದಲು ಅದರ ಭಾಗವಾಗಿಯೇ ಪ್ರಸ್ತುತ ವ್ಯವಸ್ಥೆಗೆ ಅಸಮ್ಮತಿ ವ್ಯಕ್ತಪಡಿಸುವ ದೃಷ್ಟಿಯಿಂದ ರೈತನೋರ್ವ ಧಾರವಾಡ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣಕ್ಕೆ ಇಳಿದ್ದಾನೆ.
ಗೆಲ್ಲುವ ಆಸೆ ಇರದಿದ್ದರೂ ಇದುವರೆಗೆ ಆಯ್ಕೆಯಾದ ವಿವಿಧ ಪಕ್ಷಗಳ ರಾಜಕಾರಣಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವುದನ್ನು ತಾತ್ವಿಕವಾಗಿ ವಿರೋಧಿಸಲು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿರುವ ಧಾರವಾಡ ತಾಲೂಕಿನ ಮಂಡಿಹಾಳ ಗ್ರಾಮದ ಕೃಷಿಕ ಮಂಜುನಾಥ ಮಂಗಳಗಟ್ಟಿ, ವೃತ್ತಿಪರ ರಾಜಕಾರಣಿಗಳಿಗೆ ಸವಾಲು ಎಸೆದಿದ್ದಾರೆ. ಮಾಜಿ ಶಾಸಕ ವಿನಯ ಕುಲಕರ್ಣಿ, ಶಾಸಕಿ ಸೀಮಾ ಮಸೂತಿ, ಜಿಪಂ ಮಾಜಿ ಸದಸ್ಯ ತವನಪ್ಪ ಅಷ್ಟಗಿ ಹಾಗೂ ಜಿಪಂ ಸದಸ್ಯ ಅಮೃತ ದೇಸಾಯಿ ಈ ನಾಲ್ವರು ವೃತ್ತಿಪರ ರಾಜಕಾರಣಿಗಳ ಮಧ್ಯೆ ಮಾತ್ರ ಪೈಪೋಟಿ ಇದೆ ಎನ್ನಲಾಗುತ್ತಿತ್ತು. ಆದರೆ, ವಿಭಿನ್ನ ಉದ್ದೇಶದೊಂದಿಗೆ ಚುನಾವಣಾ ಕಣಕ್ಕೆ ಇಳಿದಿರುವ ಮಂಜುನಾಥ ಮತದಾರರಿಗೆ ಹತ್ತಿರ ಎನಿಸುತ್ತಿದ್ದಾರೆ.
ನಾನು ಚುನಾವಣೆಯಲ್ಲಿ ಗೆಲ್ಲೋದಿಲ್ಲ, ಎಂಎಲ್‌ಎ ಆಗೋದಿಲ್ಲಂತ ಗೊತ್ತು. ಆದರೂ ಪಕ್ಷೇತರ ಸ್ಪರ್ಧಿಯಾಗಿ ಕಣದಲ್ಲಿದ್ದು ಸುಳ್ಳು ಭರವಸೆ ಕೊಟ್ಟು ಜನರ ದಾರಿ ತಪ್ಪಿಸುವ ರಾಜಕಾರಣಿಗಳಿಗೆ ಪಾಠ ಕಲಿಸುತ್ತೇನೆ. ಇದು ಪ್ರಜಾಪ್ರಭುತ್ವ ದೇಶ. ಚುನಾವಣೆ ಯಾರ ಸ್ವತ್ತಲ್ಲ. ಇಷ್ಟು ವರ್ಷಗಳ ಕಾಲ ಹಲವಾರು ಚುನಾವಣೆಗಳು ನಡೆದು ಹೋದವು. ಅನೇಕ ರಾಜಕೀಯ ಪಕ್ಷಗಳ ಮುಖಂಡರು ಗೆದ್ದು ಬಂದರು. ಯಾರೊಬ್ಬರು ಕ್ಷೇತ್ರ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ನಾನೇ ಸ್ವತಃ ಅನೇಕ ಬಾರಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಕುಡಿಯುವ ನೀರು, ಗ್ರಾಮೀಣ ರಸ್ತೆ, ಹೊಲಗಳಿಗೆ ರಸ್ತೆ ಸೇರಿದಂತ ಅನೇಕ ಕಾರಣಗಳಿಗಾಗಿ ಪ್ರತಿಭಟನೆ ಮಾಡಿದ್ದೇನೆ. ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಆದ್ದರಿಂದ ಕ್ಷೇತ್ರದ ರೈತರ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದೇನೆ ಎನ್ನುತ್ತಾರೆ ಮಂಜುನಾಥ. ಕ್ಷೇತ್ರದ ಹಲವು ರೈತ ಹಾಗೂ ಮಹಿಳಾ ಸಂಘಟನೆಗಳು ನನ್ನ ಚುನಾವಣೆಗೆ ನಿಲ್ಲಿಸಿ ಖರ್ಚು ನಿಭಾಯಿಸುತ್ತಿವೆ. ವೃತ್ತಿಪರ ರಾಜಕಾರಣಿಗಳಂತೆ ಹಣ-ಹೆಂಡ ಹಂಚುತ್ತಿಲ್ಲ. ಅವರಂತೆ ದೊಡ್ಡ ರೀತಿಯಲ್ಲಿ ಪ್ರಚಾರ ನಡೆಸುತ್ತಿಲ್ಲ. ಹಣದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಜನ ಸೇವೆಯಿಂದ ಮಾತ್ರ ಸಾಧ್ಯ ಎಂದು ನಂಬಿದವನು ನಾನು ಎಂದರು ಮಂಜುನಾಥ.
ರಾಜಕಾರಣದ ಯಾವುದೇ ವೃತ್ತಿಪರ ತಂತ್ರಗಳನ್ನು ಗೊತ್ತಿರದಿದ್ದರೂ ಜನಸಾಮಾನ್ಯರ ಹಿತದೃಷ್ಟಿಯಿಂದ ಚಿಂತಿಸಿ ಚುನಾವಣಾ ಕಣಕ್ಕೆ ಇಳಿದಿರುವ ಮಂಜುನಾಥ ಧೋರಣೆಯನ್ನು ಮೆಚ್ಚಲೇಬೇಕು.