ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಚೊಕ್ಕ ಚುನಾವಣೆ ಇರಲಿ

Vishwanath S
Updated On : 1 May 2013, 11:27 am

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 30
20 ವರ್ಷಗಳಿಂದೀಚೆ ರಾಜ್ಯ ಹಾಗೂ ದೇಶದೆಲ್ಲೆಡೆ ಪ್ರಜಾಪ್ರಭುತ್ವ ಹಾಳಾಗಿ ದುರಾಡಳಿತ ಶುರುವಾಗಿದೆ. ಅಸಮಾನತೆ ತುಂಬಿ ತುಳುಕಾಡುತ್ತಿದೆ. ಸಂವಿಧಾನ ಬದ್ಧ ಆಡಳಿತ ನಡೆಯುತ್ತಿಲ್ಲ. ಈಗ ನಮಗೆ ಚೊಕ್ಕ ಆಡಳಿತದ ಅಗತ್ಯವಿದೆ. ಅದಕ್ಕೆ ಚೊಕ್ಕ ಚುನಾವಣೆ  ನಡೆಯಬೇಕಿದೆ.
ಈ ಗಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದು 'ಚೊಕ್ಕ ಚುನಾವಣೆ' ಆಂದೋಲನದ ಮುಖ್ಯ ಸಂಯೋಜಕಿ ನಂದನಾ ರೆಡ್ಡಿ.
ಏಳು ವರ್ಷಗಳ ಹಿಂದೆ ಗ್ರಾಮ ಪಂಚಾಯ್ತಿ ಹಕ್ಕೊತ್ತಾಯ ಆಂದೋಲನದಿಂದ ಆರಂಭವಾದ 'ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ' ಜಾಗೃತಿ ಕಾರ್ಯಕ್ರಮವೇ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಹೊಸ ರೂಪ ಪಡೆದುಕೊಂಡು 'ಚೊಕ್ಕ ಚುನಾವಣೆ' ಹೆಸರು ಪಡೆದುಕೊಂಡಿದೆ. ಚುನಾವಣೆ, ಮತದಾನದ ಹಕ್ಕು ಸೇರಿದಂತೆ ಒಂದು ರಾಜ್ಯಕ್ಕೆ ಉತ್ತಮ ಆಡಳಿತ ನೀಡಬಲ್ಲ ಅಭ್ಯರ್ಥಿಗಳನ್ನು ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕು ಎಂಬುದೇ ಈ ಆಂದೋಲನದ ಉದ್ದೇಶ. ಈ ಕುರಿತಾಗಿ ಕನ್ನಡಪ್ರಭಕ್ಕೆ ಇನ್ನಷ್ಟು ಮಾಹಿತಿ ನೀಡಿದ್ದಾರೆ ನಂದನಾ ರೆಡ್ಡಿ.
ಐದೂ ವರ್ಷ ಭಾಗವಹಿಸಿ: ಮತದಾರರು 5 ವರ್ಷಕ್ಕೊಮ್ಮೆ ಮತಗಟ್ಟೆಗೆ ಬಂದು ಮತ ಹಾಕಿದರೆ ಸಾಲೋದಿಲ್ಲ. ಕೆಲವರಂತೂ ಮತದಾನ ಮಾಡದಿರುವುದು ಬೇಸರದ ಸಂಗತಿ. ಮತದಾನ ಮಾಡಿದ ಮಾತ್ರಕ್ಕೆ ಮತದಾರನ ಹಕ್ಕು ಅಥವಾ ಕರ್ತವ್ಯ ಮುಗಿಯಲಿಲ್ಲ. ಮತದಾರರು ಶಾಸಕನ ಬೆನ್ನು ಬಿದ್ದು ಸಮಾಜಕ್ಕೆ ಬೇಕಾದ ಸೌಲಭ್ಯ ಪಡೆದುಕೊಳ್ಳುವಲ್ಲಿ ನಿಷ್ಣಾತನಾಗಬೇಕು. ಐದೂ ವರ್ಷ ಆಡಳಿತದಲ್ಲಿ ಮತದಾರನೂ ಸಹಭಾಗಿತ್ವ ವಹಿಸುವಂತಾಗಬೇಕು. ಪ್ರಜಾಪ್ರಭುತ್ವ ಇಷ್ಟೊಂದು ರೀತಿ ಹಾಳು ಮಾಡಿದ್ದು ಪ್ರಜೆಗಳೇ. ಈಗ ವ್ಯವಸ್ಥೆಯಲ್ಲಿ ಹೊಸ ಅಲೆ ಬರಬೇಕಿದೆ. ರಾಜ್ಯದ ಆಡಳಿತ ಚೊಕ್ಕವಾಗಿ ನಡೆಯಬೇಕಾದರೆ ಚೊಕ್ಕ ಅಭ್ಯರ್ಥಿ ಬೇಕೆ ಬೇಕು. ಆದರೆ, ನಮ್ಮ ಜನರಿಗೆ ಎಂತಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬುದೇ ಗೊಂದಲದ ವಿಷಯ. ಈ ನಿಟ್ಟಿನಲ್ಲಿ ಆಂದೋಲನ ಕೆಲಸ ಮಾಡುತ್ತಿದೆ ಎಂದರು.
ಮಾಫಿಯಾಗೆ ಕಡಿತ ಬೀಳಲಿ: ಖೇದಕರ ಸಂಗತಿ ಎಂದರೆ, ಬೆಂಗಳೂರಿನಲ್ಲಿ ಬಿ-ಪ್ಯಾಕ್ ಹೆಸರಿನ ಕಾರ್ಪೋರೇಟ್ ಸಂಘಟನೆ ಚುನಾವಣಾ ಅಭ್ಯರ್ಥಿಗಳನ್ನು ಹಣಕ್ಕೆ ಖರೀದಿ ಮಾಡುತ್ತಿದೆ. ಈ ರೀತಿಯಾಗಿ ಕಾರ್ಪೋರೆಟ್ ಜಗತ್ತು ಪ್ರಜಾಪ್ರಭುತ್ವವನ್ನು ಕೊಂಡುಕೊಳ್ಳುತ್ತಿದ್ದು, ಮಾಫಿಯಾ ಆಗಿ ಬೆಳೆಯುತ್ತಿದೆ. ಕಾರ್ಪೋರೆಟ್ ಜಗತ್ತಿನ ಮಾಲೀಕರು ಕಂಪನಿಗಳನ್ನು ಮಾತ್ರ ನಡೆಸಬೇಕೆ ಹೊರತು ದೇಶದ ಹಾಗೂ ರಾಜ್ಯದ ಆಡಳಿತವನ್ನಲ್ಲ. ಜನಪ್ರತಿನಿಧಿಗಳು ಪ್ರಜೆಗಳಿಗಿಂತ ಕಂಪನಿ ಮಾಲೀಕರ ಮಾತೇ ಕೇಳಲಾರಂಭಿಸುತ್ತಾರೆ. ಅಸಮಾನತೆ ಗೋಚರಿಸುತ್ತದೆ. ಬಡವರು ತೀರಾ ಬಡವರಾಗುತ್ತಾರೆ. ಈ ಮಾಫಿಯಾಗೆ ಕಡಿತ ಬೀಳಬೇಕು. ಎಲ್ಲರಿಗೂ ಸಂವಿಧಾನ ಬದ್ಧ ಆಡಳಿತ ಸಿಗಬೇಕು. ಎಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸಬೇಕು ಎಂಬುದು ಆಂದೋಲನದ ಉದ್ದೇಶ ಎಂದರು.
ತಮ್ಮನ್ನೇ ಮಾರಿಕೊಂಡಂತೆ: ಪ್ರಜೆಗಳ ಜವಾಬ್ದಾರಿ, ಹಕ್ಕು-ಕರ್ತವ್ಯಗಳೇನು ಎಂಬ ಕುರಿತು ರಾಜ್ಯದೆಲ್ಲೆಡೆ ಸಭೆ-ಸಮಾರಂಭ ಹಾಗೂ ಬೀದಿ ನಾಟಕಗಳ ಮೂಲಕ ತಿಳಿವಳಿಕೆ ನೀಡಲಾಗುತ್ತಿದೆ. ಮಹಿಳಾ ಸಮಾಖ್ಯಾ, ಸಿಕ್ರೆಂ, ಹಂಗರ್ ಪ್ರೊಜೆಕ್ಟ್ ಸೇರಿ 21 ಸಂಘಟನೆಗಳು ಆಂದೋಲನಕ್ಕೆ ಬೆಂಬಲ ನೀಡಿವೆ. ರಾಜ್ಯದ ವಿವಿಧೆಡೆ ಮಹಿಳಾ ಸಂಘಟನೆಗಳೂ ಬೆಂಬಲ ಕೊಡುತ್ತಿವೆ. ನಿವೃತ್ತ ಡಿಐಜಿ ಅಜಯ ಕುಮಾರ ಸಿಂಗ್, ಮಹಿಮಾ ಪಟೇಲ, ಪರಿಸರವಾದಿ ಹಾಗೂ ಚಿತ್ರನಟ ಸುರೇಶ ಹೆಬ್ಳೀಕರ, ಮೀನಾಕ್ಷಿ ಸುಂದರಂ ಅನೇಕ ಸಮಾನ ಮನಸ್ಕರು ಈ ಆಂದೋಲನ ಸಂಯೋಜಕರಾಗಿದ್ದಾರೆ. ಬಳ್ಳಾರಿ, ಬಿಜಾಪುರ, ದಾವಣಗೆರೆ ಮುಂತಾದೆಡೆ ಆಂದೋಲನ ನಡೆಯುತ್ತಿದೆ. ಚುನಾವಣೆಯಲ್ಲಿ ಮತ ಮಾರಿಕೊಂಡರೆ, ತಮ್ಮನ್ನು ಮಾರಿಕೊಂಡಂತೆ ಎಂಬುದರ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಜನರಿಂದ, ಮತದಾರರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎನ್ನುತ್ತಾರೆ ನಂದನಾ ರೆಡ್ಡಿ.
ಒಂದೆಡೆ ಚುನಾವಣಾ ಆಯೋಗ ಈ ಬಾರಿ ಮತದಾರರ ಜಾಗೃತಿಗೆ ಮುಂದಾಗಿದೆ. ಸ್ವಯಂ ಪ್ರೇರಿತವಾಗಿ ಏಳು ವರ್ಷಗಳಿಂದ ಮತದಾರರಿಗೆ ತಿಳಿವಳಿಕೆ ಕೊಡುವ ಪ್ರಯತ್ನದಲ್ಲಿರುವ ಈ ಆಂದೋಲನ ಚೊಕ್ಕ ಚುನಾವಣೆ ಮೂಲಕ ಚೊಕ್ಕ ಆಡಳಿತ ತರಲಿ ಎಂಬುದೇ ಎಲ್ಲರ ಆಶಯ.

-ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement