ಬೆನ್ನುಹುರಿ ಶಸ್ತ್ರಚಿಕಿತ್ಸೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ಯಶಸ್ವಿ
ಹುಬ್ಬಳ್ಳಿ: ಕೆಎಸ್ಆರ್ಟಿಸಿ ಡಿಪೋ ಹಿಂಭಾಗದಲ್ಲಿರುವ ಶ್ರೀ ಬಾಲಾಜಿ ಇನ್ಸ್ಟಿಟ್ಯೂಟ್ ಆಫ್ ನ್ಯೂರೋ ಸಾಯಿನ್ಸ್ ಮತ್ತು ಟ್ರೋಮಾ ಸೆಂಟರ್ನಲ್ಲಿ ಆಯೋಜಿಸಿದ್ದ ಬೆನ್ನುಹುರಿ ಶಸ್ತ್ರ ಚಿಕಿತ್ಸೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿತು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಆಸ್ಪತ್ರೆಯ ಚೇರಮನ್ರು ಆಗಿರುವ ನರರೋಗ ತಜ್ಞ ಡಾ. ಕ್ರಾಂತಿಕಿರಣ, ಪುಣೆ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ತಜ್ಞ ವೈದ್ಯ ಡಾ. ಸುಶೀಲ ಪಾಠಕರ ಕಾರ್ಯಾಗಾರ ಉದ್ಘಾಟಿಸಿದರು ಎಂದಿದ್ದಾರೆ.
ಬೆನ್ನುಹುರಿ ಶಸ್ತ್ರ ಚಿಕಿತ್ಸೆಯಲ್ಲಿ ಆಗಿರುವ ಆವಿಷ್ಕಾರಗಳ ಬಗ್ಗೆ ಎಳೆ-ಎಳೆಯಾಗಿ ವಿವರಿಸಿದ ಡಾ. ಪಾಠಕರ, ಕ್ಲಿಷ್ಟಕರ ಎನ್ನಬಹುದಾದ ಬೆನ್ನುಹುರಿ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದರು ಎಂದು ಡಾ. ಕ್ರಾಂತಿಕಿರಣ ತಿಳಿಸಿದ್ದಾರೆ.
ಶಸ್ತ್ರ ಚಿಕಿತ್ಸೆಯ ನೇರ ಪ್ರಸಾರ ಆಯೋಜಿಸಿದ್ದರಿಂದ ವೃತ್ತಿ ನಿರತ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಕಲ್ಪಿಸಿಕೊಟ್ಟಿತು. ಇದಕ್ಕೂ ಮೊದಲು ಬೆನ್ನುಹುರಿ ಶಸ್ತ್ರ ಚಿಕಿತ್ಸೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಡಾ. ಪಾಠಕರ ಉಪನ್ಯಾಸ ನೀಡಿದರಲ್ಲದೇ, ಶಸ್ತ್ರ ಚಿಕಿತ್ಸೆ ಸಂರ್ಭದಲ್ಲಿ ವೈದ್ಯ ಹಾಗೂ ವಿದ್ಯಾರ್ಥಿಗಳಿಂದ ತೂರಿ ಬಂದ ಪ್ರಶ್ನೆಗಳಿಗೆ ಉತ್ತರಿಸಿದರು ಎಂದೂ ಡಾ. ಕ್ರಾಂತಿಕಿರಣ ವಿವರಿಸಿದ್ದಾರೆ.
ಉತ್ತರ ಕರ್ನಾಟಕ ವಿವಿಧ ಭಾಗಗಳಿಂದ 50ಕ್ಕೂ ಹೆಚ್ಚು ತಜ್ಞ ವೈದ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಡಾ. ಕ್ರಾಂತಿಕಿರಣ, ಡಾ. ಶೋಭಾ ಕ್ರಾಂತಿಕಿರಣ, ಡಾ. ವೀರೇಂದ್ರ ಭಸ್ಮೆ, ಡಾ. ಸುದೀಪ ಮತ್ತಿತರರು ಇದ್ದರು.