22ರಂದು ವಿಧಾನಪರಿಷತ್ ಉಪಚುನಾವಣೆ
ಧಾರವಾಡ: ರಾಜ್ಯ ವಿಧಾನಪರಿಷತ್ತಿಗೆ ಧಾರವಾಡ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಚುನಾಯಿತರಾಗಿದ್ದ ಶಿವರಾಜ ಸಜ್ಜನರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಆಗಸ್ಟ್ 22ರಂದು ಉಪಚುನಾವಣೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಧಾರವಾಡ ಜಿಲ್ಲಾಧಿಕಾರಿ ಸಮೀರ ಶುಕ್ಲ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜು. 29ರಂದು ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಸಲು ಆಗಸ್ಟ್ 5 ಕೊನೆ ದಿನ. ಆ. 6ರಂದು ನಾಮಪತ್ರಗಳ ಪರಿಶೀಲನೆ, 8ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆ ದಿನ. ಆ. 22ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಆ. 26ರಂದು ಕೃಷಿ ವಿವಿ ಆವರಣದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಹೇಳಿದರು.
ಧಾರವಾಡ ಜಿಲ್ಲಾಧಿಕಾರಿಗಳೇ ಚುನಾವಣಾಧಿಕಾರಿಗಳಾಗಿದ್ದು, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿರುತ್ತಾರೆ. ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜು. 29ರಿಂದಲೇ ಚುನಾವಣೆ ಸದಾಚಾರ ಸಂಹಿತೆ ಜಾರಿಯಾಗಿದೆ.
ಈ ಚುನಾವಣೆಗೆ ಜಿಪಂ, ತಾಪಂ ಸೇರಿದಂತೆ ಮೂರು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರು ಮತದಾರರಾಗಿದ್ದಾರೆ. ಮೂರು ಜಿಲ್ಲೆ ಸೇರಿ ಒಟ್ಟು 7297 ಮತದಾರರಿದ್ದು, ಧಾರವಾಡ ಜಿಲ್ಲೆಯಲ್ಲಿ 139 ಮತಗಟ್ಟೆಗಳು, ಗದಗ 121, ಹಾವೇರಿಯಲ್ಲಿ 224 ಸೇರಿದಂತೆ ಒಟ್ಟು 484 ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಮತಗಟ್ಟೆಗಳನ್ನು ತೆರೆಯಲಾಗುತ್ತಿದ್ದು, ಗ್ರಾಪಂ ಸದಸ್ಯರು ಅಲ್ಲಿಯೇ ಮತಗಳನ್ನು ಚಲಾವಣೆ ಮಾಡಬೇಕು. ಹಾಗೆಯೇ ಮೂರು ಜಿಲ್ಲೆಗಳ ತಾಲೂಕು ಕೇಂದ್ರದಲ್ಲಿ ಸ್ಥಾಪಿಸುವ ಮತಗಟ್ಟೆಯಲ್ಲಿ ಜಿಪಂ, ತಾಪಂ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯರು ಮತ ಚಲಾಯಿಸಬೇಕು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ಹುಬ್ಬಳ್ಳಿ ತಾಪಂ ಕಚೇರಿಯಲ್ಲಿ ಮತ ಚಲಾವಣೆ ಮಾಡಬೇಕು ಎಂದು ಹೇಳಿದರು.
ಚುನಾವಣಾ ಕ್ಷೇತ್ರದ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳ ಜಾಹೀರಾತು ಫಲಕ, ಪೋಸ್ಟರ್ ಹಾಗೂ ಬ್ಯಾನರ್ಗಳನ್ನು ತೆರವುಗೊಳಿಸಲು ಆದೇಶಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕುರಿತು ಈಗಾಗಲೇ ಎಸ್ಪಿ ಹಾಗೂ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿದ್ದು, ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳ ಬಗ್ಗೆಯೂ ಮಾಹಿತಿ ನೀಡುವಂತೆ ಹಾವೇರಿ ಹಾಗೂ ಗದಗ ಜಿಲ್ಲಾಧಿಕಾರಿಗೆ ಮಾಹಿತಿ ಕೇಳಿದ್ದೇನೆ.
ಮತಗಟ್ಟೆಗಳಲ್ಲಿ ವಿಡಿಯೋಗ್ರಾಫಿ ಮಾಡುವುದಲ್ಲದೇ ಅಲ್ಲಿ ವೀಕ್ಷಕರನ್ನು ನೇಮಿಸಲಾಗುತ್ತಿದೆ. ಚುನಾವಣೆ ನಿಮಿತ್ತ ಹೊಸ ಯೋಜನೆಗಳನ್ನು ಜಾರಿ ಮಾಡುವಂತಿಲ್ಲ. ಆದರೆ, ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳನ್ನು ಮುಂದುವರಿಸಬಹುದು. ಮತಕ್ಷೇತ್ರದಲ್ಲಿ ಕುಡಿಯುವ ನೀರು ಅಥವಾ ರಸ್ತೆಗಳ ನಿರ್ವಹಣೆ ಮಾಡಲು ಅಡ್ಡಿ ಇಲ್ಲ. ಅಲ್ಲದೇ, ಖಾಸಗಿ ಸಮಾರಂಭ ಮಾಡಬಹುದು. ಜನಪ್ರತಿನಿಧಿಗಳನ್ನು ಅತಿಥಿಗಳಾಗಿ ಕರೆಯಬಹುದು. ಆದರೆ, ಅವರು ರಾಜಕೀಯ ಭಾಷಣ ಮಾಡುವಂತಿಲ್ಲ ಎಂದು ಸಮೀರ ಶುಕ್ಲ ಸ್ಪಷ್ಟಪಡಿಸಿದರು. ನಾಮಪತ್ರ ಸಲ್ಲಿಸಲು ಆ. 5 ಕೊನೆ ದಿನವಾಗಿದ್ದು, ಆ. 1ರ ವರೆಗೆ ಒಬ್ಬರೂ ನಾಮಪತ್ರ ಸಲ್ಲಿಸಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪ್ಸಿ, ಪಾಲಿಕೆ ನೂತನ ಆಯುಕ್ತ ರಮಣದೀಪ ಚೌಧರಿ, ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ, ಎಸ್ಪಿ ಲೋಕೇಶಕುಮಾರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಇದ್ದರು.